ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ, ಟೀಮ್ ಇಂಡಿಯಾ ಸಜ್ಜಾಗಿದೆ. 4 ತಿಂಗಳ ಸುದೀರ್ಘ ಪ್ರವಾಸಕ್ಕೆ ಬಲಿಷ್ಠ ತಂಡವೇ ತೆರಳಲಿದೆ. ಇನ್ನು ಕೆಲ ದಿಗ್ಗಜ ಕ್ರಿಕೆಟಿಗರೂ, ಟೀಮ್ ಇಂಡಿಯಾ ಸರಣಿ ಗೆಲ್ಲುವಷ್ಟು ಬಲಿಷ್ಠವಾಗಿದೆ ಅಂ ಭವಿಷ್ಯ ನುಡಿದಿದ್ದಾರೆ. ಆದ್ರೆ ಈ ನಡುವೆ ಟೀಮ್ ಇಂಡಿಯಾಕ್ಕೆ ಒಂದು ಸ್ಲಾಟ್​ ತಲೆಬಿಸಿ ಹೆಚ್ಚಿಸಿದೆ. ಅದು ಓಪನಿಂಗ್ ಸ್ಲಾಟ್​..!

ಹೌದು..! ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಿರುವ ಭಾರತ ತಂಡದಲ್ಲಿ, ಹಿಟ್​​ಮ್ಯಾನ್ ರೋಹಿತ್ ಶರ್ಮಾ, ಶುಭ್​​ಮನ್​ ಗಿಲ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್​ ಸ್ಥಾನ ಪಡೆದಿದ್ದಾರೆ. ಆದ್ರೆ ಇವರಲ್ಲಿ ಹಿಟ್​​ಮ್ಯಾನ್ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸೋದು ಯಾರು ಅನ್ನೋ ಟೆನ್ಶನ್, ಟೀಮ್ ಮ್ಯಾನೇಜ್​ಮೆಂಟ್​​ಗೆ ಕಾಡ್ತಿದೆ.

ರೋಹಿತ್ ಜೊತೆ ಕಣಕ್ಕಿಳಿಯಲ್ವಾ ಶುಭ್​​ಮನ್..?
ಆಸ್ಟ್ರೇಲಿಯಾ ಸರಣಿ ವೇಳೆ ಸಿಕ್ಕ ಅವಕಾಶ ಬಳಸಿಕೊಂಡಿದ್ದ ಶುಭ್​ಮನ್​ ಗಿಲ್​, ಟೀಮ್ ಇಂಡಿಯಾ ಸಂಕಷ್ಟದ ವೇಳೆ ದಿಟ್ಟ ಹೋರಾಟ ನಡೆಸಿದ್ದರು. ಅಲ್ಲದೇ ಟೀಮ್ ಇಂಡಿಯಾ ಬಾರ್ಡರ್​-ಗವಾಸ್ಕರ್ ಟ್ರೋಫಿ ಗೆಲುವಿನಲ್ಲೂ ಮಹತ್ವದ ಪಾತ್ರ ನಿಭಾಯಿಸಿದರು. 51.80ರ ಸರಾಸರಿಯಲ್ಲಿ 259 ರನ್ ಕಲೆಹಾಕಿದ್ದ ಶುಭ್​ಮನ್​, ನಂತರ ಇಂಗ್ಲೆಂಡ್ ಸರಣಿಯಲ್ಲೂ ಆರಂಭಿಕನ ಸ್ಥಾನಕ್ಕೆ ಮೊದಲ ಆಯ್ಕೆಯೇ ಆಗಿದ್ದರು. ಆದ್ರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯದ ಹಾದಿ ತುಳಿದಿದ್ದ ಶುಭ್​ಮನ್, 7 ಇನ್ನಿಂಗ್ಸ್​ಗಳಿಂದ 119 ರನ್ ಮಾತ್ರವೇ ಕಲೆಹಾಕಿದ್ದರು.

ಐಪಿಎಲ್​​ನಲ್ಲೂ ಸಿಡಿಯದ ಶುಭ್​ಮನ್..!
ಇಂಗ್ಲೆಂಡ್ ಸರಣಿ ಮುಗಿದ ಬೆನ್ನಲ್ಲೇ ಐಪಿಎಲ್​​ ಟೂರ್ನಿಗೆ ಹೊರಟ ಗಿಲ್​​, ಕಮಾಲ್ ಮಾಡಲೇ ಇಲ್ಲ..! ಆಡಿದ 7 ಇನ್ನಿಂಗ್ಸ್​ಗಳಿಂದ ಔಟ್​ಆಫ್ ಫಾರ್ಮ್​ ಗಿಲ್, ಕೇವಲ 132 ರನ್ ಕಲೆಹಾಕಿದರು. ಹೀಗಾಗಿಯೇ ಇಂಗ್ಲೆಂಡ್ ಪ್ರವಾಸದಲ್ಲಿ ಹಿಟ್​ಮ್ಯಾನ್ ರೋಹಿತ್ ಜೊತೆ ಮಯಾಂಕ್ ಅಗರ್ವಾಲ್​​ ಇನ್ನಿಂಗ್ಸ್​ ಆರಂಭಿಸ್ತಾರೆ ಎನ್ನಲಾಗ್ತಿದೆ.

ಕಿವೀಸ್, ಆಸಿಸ್ ಸರಣಿಯಲ್ಲಿ ಮಯಾಂಕ್ ಫ್ಲಾಪ್​
ಭಾರತದಲ್ಲಿ ನಡೆದ ಬಾಂಗ್ಲಾ ಹಾಗೂ ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಮಯಾಂಕ್, ನಂತರ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಅದರಲ್ಲೂ ಆಸ್ಟ್ರೇಲಿಯಾ ಸರಣಿಯಲ್ಲಿ ಮಯಾಂಕ್, ಬ್ಯಾಟಿಂಗ್​​ ವೇಳೆ ಪಾದದ ಚಲನೆಯಲ್ಲಿನ ಬದಲಾವಣೆ ಹಿನ್ನಡೆಗೆ ಕಾರಣ ಅಂತಾನೇ ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದರು. ಬ್ಯಾಟಿಂಗ್​​​ನಲ್ಲಿ ತಾಂತ್ರಿಕ ದೋಷದಿಂದ ಆಡುವ ಹನ್ನೊಂದರಲ್ಲಿ ಸ್ಥಾನ ಕಳೆದುಕೊಂಡಿದ್ದರು.

ಐಪಿಎಲ್​​ ಟೂರ್ನಿಯಲ್ಲಿ ಮಯಾಂಕ್ ಮಿಂಚು..!
ಒಂದೆಡೆ ಐಪಿಎಲ್​ ಟೂರ್ನಿಯಲ್ಲಿ ಶುಭ್​​ಮನ್​ ಗಿಲ್ ವೈಫಲ್ಯ ಅನುಭವಿಸಿದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಸಾಲಿಡ್ ಪರ್ಫಾಮೆನ್ಸ್​ ನೀಡಿದ್ದಾರೆ. 7 ಇನ್ನಿಂಗ್ಸ್​ಗಳಿಂದ 43.33ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಅಗರ್ವಾಲ್, ಎರಡು ಅರ್ಧಶತಕ ಒಳಗೊಂಡ 260 ರನ್ ಕಲೆಹಾಕಿದ್ದಾರೆ. ಇದೇ ಪ್ರದರ್ಶನವೇ ಈಗ ಮಯಾಂಕ್ ಅಗರ್ವಾಲ್ ಕೈಹಿಡಿಯುವ ಸಾಧ್ಯತೆಯೂ ಇದೆ.

ಟೀಮ್ ಮ್ಯಾನೇಜ್​​ಮೆಂಟ್​​ ಒಲವು ಯಾರ ಮೇಲೆ..?

ಆಟದ ವಿಚಾರದಲ್ಲಿ ಇಬ್ಬರು ಪ್ರತಿಭಾನ್ವಿತರೇ ಆಗಿದ್ದಾರೆ. ಆದ್ರೆ ತಾಂತ್ರಿಕವಾಗಿ ವೈಫಲ್ಯ ಅನುಭವಿಸಿದ್ದ ಮಯಾಂಕ್, ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನ ನೆಟ್ಸ್​ನಲ್ಲಿ ತಾಂತ್ರಿಕವಾಗಿ ತಾನೇಷ್ಟು ಪ್ರಬುದ್ಧನಾಗಿದ್ದೇನೆ ಅನ್ನೋದನ್ನ ಸಾಬೀತು ಮಾಡಿ, ಮ್ಯಾನೇಜ್​ಮೆಂಟ್ ಮನ ಗೆಲ್ಲಬೇಕಿದೆ. ಮಯಾಂಕ್​​ಗೆ ಹೋಲಿಸಿದರೆ, ಶುಭ್​​ಮನ್​ ಗಿಲ್ ರನ್​ ಗಳಿಸದಿದ್ದರೂ​ ತಾಂತ್ರಿಕವಾಗಿ ಬಲಿಷ್ಠವಾಗೇ ಇದ್ದಾರೆ. ಹಾಗಾಗಿ ಈಗ ಈ ಇಬ್ಬರ ಆಟದ ಮೇಲೆಯೇ ಟೀಮ್ ಮ್ಯಾನೇಜ್​ಮೆಂಟ್​ನ ಒಲವು, ಹಾಗೂ ಆರಂಭಿಕರು ಯಾರು ಅನ್ನೋದು ನಿರ್ಧಾರವಾಗಲಿದೆ.

ಒಟ್ನಲ್ಲಿ… ಟೀಮ್ ಇಂಡಿಯಾದಲ್ಲಿ ಪದೇ ಪದೇ ಓಪನಿಂಗ್ ಸ್ಲಾಟ್​​ಗಾಗಿ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಹಿಟ್​ಮ್ಯಾನ್ ಜೋಡಿಯಾಗಿ ಯಾರು ಕಣಕ್ಕಿಳಿತಾರೆ ಅನ್ನೋದು, ಕಾದುನೋಡಬೇಕಿದೆ……

The post ಟೆಸ್ಟ್​ನಲ್ಲಿ ರೋಹಿತ್​​ಗೆ ಬೆಸ್ಟ್ ಪಾರ್ಟ್ನರ್ ಆಗ್ತಾರಾ ಕನ್ನಡಿಗ ಮಯಾಂಕ್ ಅಗರ್​ವಾಲ್..? appeared first on News First Kannada.

Source: newsfirstlive.com

Source link