ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, 372ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಜೊತೆಗೆ ಸರಣಿಯನ್ನೂ ಕೈ ವಶಪಡಿಸಿಕೊಂಡಿದೆ. ಆದರೆ ಈ ಸರಣಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದು, ಮಾತ್ರ ಆ ನಾಲ್ವರು. ಹೀಗಾಗಿ ಆ ನಾಲ್ವರು ಹೀರೋಗಳು, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ಸ್ ಎನಿಸಿಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ, ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ 1-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡ್ ಆಟವಾಡಿದ ಭಾರತ, ಎರಡನೇ ಟೆಸ್ಟ್ನಲ್ಲೂ ಪ್ರವಾಸಿ ತಂಡಕ್ಕೆ ಮಣ್ಣು ಮುಕ್ಕಿಸಿದೆ. ಜೊತೆಗೆ ತವರಿನಲ್ಲಿ ಕಿವೀಸ್ ವಿರುದ್ಧ 24 ವರ್ಷಗಳ ಗೆಲುವಿನ ಓಟವನ್ನ, ಭಾರತ ಮುಂದುವರೆಸಿದೆ. ಆದರೆ ಈ ಸರಣಿ ಗೆಲುವಿಗೆ ಕಾರಣವಾಗಿದ್ದು ಮಾತ್ರ, ಈ ನಾಲ್ವರು.
ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಹೀರೋಗಳೆಂದರೆ ಶ್ರೇಯಸ್ ಅಯ್ಯರ್, ಮಯಾಂಕ್ ಅಗರ್ವಾಲ್, ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಜಯಂತ್ ಯಾದವ್.! ಹೌದು..! ಟೆಸ್ಟ್ ಸರಣಿ ಗೆದ್ದಿದ್ದೇ ಇವರಿಂದಲೇ. ಏಕೆಂದರೆ ಹಾಗಿತ್ತು ಅವರ ಬೊಂಬಾಟ್ ಪ್ರದರ್ಶನ. ಹಾಗಂತ ಉಳಿದ ಆಟಗಾರರ ತಂಡಕ್ಕೆ ಕೊಡುಗೆ ನೀಡಲಿಲ್ಲವೆಂದಲ್ಲ. ಆದರೆ ಈ ನಾಲ್ವರ ಪ್ರದರ್ಶನ ಗೆಲುವಿನ ಮೇಲೆ ಅಷ್ಟು ಇಂಪ್ಯಾಕ್ಟ್ ಆಗಿತ್ತು. ಇದರಿಂದಲೇ ಸರಣಿ ಗೆಲ್ಲಲು ಸಾಧ್ಯವಾಗಿದ್ದು.
ಪದಾರ್ಪಣೆ ಪಂದ್ಯದಲ್ಲೇ ಶತಕದ ‘ಶ್ರೇಯಸ್ಸು’
ಮೊದಲ ಪಂದ್ಯ ಡ್ರಾ ಆದ್ರೂ, ಭಾರತದ ಆಟಗಾರರ ಪ್ರದರ್ಶನ ಗಮನ ಸೆಳೆದಿತ್ತು. ಅದರಲ್ಲೂ ಹೆಚ್ಚು ಚರ್ಚೆಯಾಗಿದ್ದು, ಚೊಚ್ಚಲ ಟೆಸ್ಟ್ ಸರಣಿ ಆಡಿದ್ದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೇ ಶತಕ ಸಿಡಿಸಿದ ಅಯ್ಯರ್, ಬಳಿಕ 2ನೇ ಇನ್ನಿಂಗ್ಸ್ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು. ಅಯ್ಯರ್ ಸಿಡಿಸಿದ ಶತಕ ಮತ್ತು ಅರ್ಧಶತಕದ ಬಲದಿಂದ, ಮೊದಲ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಗೆಲುವು ಕೈ ತಪ್ಪಿತ್ತು.
ಮಯಾಂಕ್ ಅಗರ್ವಾಲ್ ಮನಮೋಹಕ ಶತಕ
ಮೊದಲ ಪಂದ್ಯದ ಹೀರೋ ಆಗಿದ್ದು, ಶ್ರೇಯಸ್ ಅಯ್ಯರ್ ಆದರೆ, 2ನೇ ಟೆಸ್ಟ್ ಹೀರೋ ಆಗಿದ್ದು ಮಯಾಂಕ್ ಅಗರ್ವಾಲ್. ಹೌದು.. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಆಸರೆಯಾಗಿದ್ದೇ, ಕನ್ನಡಿಗ ಮಯಾಂಕ್ ಮನಮೋಹಕ ಶತಕ. ಹಾಗಾಗಿ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಭಾರತ, 2ನೇ ಟೆಸ್ಟ್ನಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಮಯಾಂಕ್ ಕೂಡ ಪ್ರಥಮ ಇನ್ನಿಂಗ್ಸ್ನಲ್ಲಿ 150 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿ, ಗೆಲುವಿಗೆ ಪ್ರಮುಖ ರೂವಾರಿಯಾದರು.
ಕಿವೀಸ್ ಬ್ಯಾಟಿಂಗ್ ಮಂತ್ರಕ್ಕೆ ಅಶ್ವಿನ್ ಸ್ಪಿನ್ ಮಂತ್ರ
ಅಯ್ಯರ್, ಮಯಾಂಕ್ ಬ್ಯಾಟಿಂಗ್ನಲ್ಲಿ ಸದ್ದು ಮಾಡಿದ್ರೆ, ಆರ್.ಅಶ್ವಿನ್ ತಮ್ಮ ಕೈಚಳಕದ ಮೂಲಕ ಹೀರೋ ಆಗಿದ್ದಾರೆ. ಭಾರತದ ಪಾಲಿಗೆ ಅಶ್ವಿನ್ ಹೀರೋ. ಅದರಲ್ಲೂ ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿದ ಪ್ರವಾಸಿ ತಂಡದ ಎದುರು ಉತ್ತರ ನೀಡೋದಕ್ಕೆ ಹೆಣಗಾಡಿತು. ಹೀಗಾಗಿ ಅಶ್ವಿನ್, ಎರಡೂ ಪಂದ್ಯಗಳಲ್ಲಿ ಒಟ್ಟು 14 ವಿಕೆಟ್ ಕಬಳಿಸಿ ಮಿಂಚಿದರು. ಅಲ್ಲದೆ, ಹಲವು ದಾಖಲೆಗಳನ್ನೂ ಬರೆದಿರುವ ಕೇರಂ ಸ್ಪಿನ್ನರ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು.
ಬ್ಯಾಟಿಂಗ್, ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಅಕ್ಷರ್..!
ಟೀಮ್ ಇಂಡಿಯಾದ ಮತ್ತೊಬ್ಬ ಹೀರೋ, ಅಕ್ಷರ್ ಪಟೇಲ್. ಅತ್ತ ಬ್ಯಾಟಿಂಗ್ನಲ್ಲಿ, ಇತ್ತ ಬೌಲಿಂಗ್ನಲ್ಲಿ ಕಿವೀಸ್ ತಂಡವನ್ನ ಇನ್ನಿಲ್ಲದಂತೆ ಕಾಡಿದ್ದಾರೆ. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದ ಅಕ್ಷರ್, ಎರಡನೇ ಇನ್ನಿಂಗ್ಸ್ನಲ್ಲಿ ಸ್ಫೋಟಕ 41ರನ್ ಗಳಿಸಿದ್ದರು. ಇನ್ನು 2 ಪಂದ್ಯಗಳಿಂದ ಬ್ಯಾಟಿಂಗ್ನಲ್ಲಿ 124ರನ್ ಗಳಿಸಿದ್ದರೆ, ಬೌಲಿಂಗ್ನಲ್ಲಿ 9 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ರು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇವರಷ್ಟೆ ಅಲ್ಲದೆ, ಜಯಂತ್ ಯಾದವ್, ಶುಭ್ಮನ್ ಗಿಲ್ ಕೂಡ, ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಹೀಗಾಗಿಯೇ ಕಿವೀಸ್ ಸರಣಿಯಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸೋಕೆ ಕಾರಣವಾಗಿದೆ. ಒಟ್ನಲ್ಲಿ… ಈ ನಾಲ್ವರು ಆಟಗಾರರು ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ತಂಡಕ್ಕೆ ಯಶಸ್ಸು ತಂದುಕೊಡಲಿ ಅನ್ನೋದೆ, ಕ್ರಿಕೆಟ್ ಅಭಿಮಾಣಿಗಳ ಆಶಯ.