ನಾಳೆಯಿಂದ ಇಂಡೋ-ಕಿವೀಸ್ ಟಿ20 ಸರಣಿ ಆರಂಭವಾಗಲಿದೆ. ಆದ್ರೆ, ಇದಕ್ಕೂ ಮುನ್ನವೇ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಟೆಸ್ಟ್ ಸ್ಕ್ವಾಡ್ಗೆ, ವಿಶೇಷ ಅಭ್ಯಾಸ ಶಿಬಿರವನ್ನ ಆಯೋಜಿಸುತ್ತಿದ್ದಾರೆ. ಈ ಅಭ್ಯಾಸ ಶಿಬಿರದ ಹಿಂದೆ ದ್ರಾವಿಡ್ರ ಬಾರಿ ಸ್ಕೆಚ್ ಇದೆ.
ಟೀಮ್ ಇಂಡಿಯಾದಲ್ಲಿ ಮತ್ತೆ ರಾಹುಲ್ ದ್ರಾವಿಡ್ ಯುಗಾರಂಭವಾಗಿದೆ. ಆಟಗಾರನಾಗಿ ಸಕ್ಸಸ್ ಕಂಡಿರುವ ದಿ ವಾಲ್, ಈಗ ಆಟಗಾರರ ಬೆನ್ನಲುಬಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಫುಲ್ಟೈಮ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿರುವ ದ್ರಾವಿಡ್ಗೆ, ಮೊದಲ ಅಗ್ಬಿಪರೀಕ್ಷೆ ನಾಳೆಯಿಂದಲೇ ಎದುರಾಗ್ತಿದೆ. ಇದಕ್ಕೆಲ್ಲಾ ಸಜ್ಜಾಗಿ ನಿಂತಿರುವ ದ್ರಾವಿಡ್, ಟಿ20 ಸರಣಿ ಆರಂಭಕ್ಕೂ ಮುನ್ನವೇ, ಟೆಸ್ಟ್ ಸರಣಿಯತ್ತ ದೃಷ್ಟಿ ನೆಟ್ಟಿದ್ದಾರೆ.
ಅಷ್ಟೇ ಅಲ್ಲ.. ಟೆಸ್ಟ್ ತಂಡಕ್ಕೆ ಆಯ್ಕೆ ಆಗಿರುವ ಆಟಗಾರರಿಗೆ ವಿಶೇಷ ಶಿಬಿರವನ್ನೂ ಆಯೋಜಿಸಿದ್ದಾರೆ..
ಕಿವೀಸ್ ವಿರುದ್ಧದ ಟಿ20 ಸರಣಿ, ನಾಳೆಯಿಂದ ಆರಂಭವಾಗಲಿದೆ. ಆದರೆ ಇದಕ್ಕೂ ಮುನ್ನವೇ ಟೆಸ್ಟ್ ತಂಡದ ಆಟಗಾರರಿಗೆ ಬುಲಾವ್ ನೀಡಿರುವ ದ್ರಾವಿಡ್, ವಿಶೇಷ ಅಭ್ಯಾಸ ಶಿಬಿರವನ್ನ ಮುಂಬೈನಲ್ಲಿ ಆಯೋಜಿಸಿದ್ದಾರೆ. ಆ ಮೂಲಕ ಟೆಸ್ಟ್ ಸರಣಿಗೆ ಈಗಲೇ ಕಿಕ್ ಸ್ಟಾರ್ಟ್ ಮಾಡಿದ್ದಾರೆ. ರಾಹುಲ್ ದ್ರಾವಿಡ್ರ ಈ ನಡೆ, ಟೀಮ್ ಇಂಡಿಯಾ ಗೆಲುವಿನ ಹಾದಿ ಮತ್ತಷ್ಟು ಸುಲಭವನ್ನಾಗಿಸಲಿದೆ ಅಂತಾನೇ ಹೇಳಲಾಗ್ತಿದೆ.
ಅಭ್ಯಾಸ ಶಿಬಿರ ಆಯೋಜಿಸಿದ್ಯಾಕೆ ದ್ರಾವಿಡ್..?
- ಕೆಲ ತಿಂಗಳಿಂದ ಹಲವು ಆಟಗಾರರು ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ
- ಹೀಗಾಗಿ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಅಭ್ಯಾಸ ಶಿಬಿರ ಅತಿಮುಖ್ಯ
- ಹೊಸ ಆಟಗಾರರ ಸೇರ್ಪಡೆ ಕಾರಣ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು
- ಮುಂಬೈನಲ್ಲೇ 2ನೇ ಟೆಸ್ಟ್ ನಡೆಯಲಿದ್ದು, ಒಗ್ಗಿಕೊಳ್ಳಲು ಸದಾವಕಾಶ
- ಆಟಗಾರರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯಕಾರಿ
ಈ ಎಲ್ಲಾ ಕಾರಣಗಳಿಂದಲೇ ಅಭ್ಯಾಸ ಶಿಬಿರವನ್ನೂ ದ್ರಾವಿಡ್ ಆಯೋಜನೆ ಮಾಡಿರುವುದು. ಅಷ್ಟೇ ಅಲ್ಲ.. ಟೆಸ್ಟ್ ಸರಣಿಗೆ ಮಾನಸಿಕವಾಗಿ ಆಟಗಾರರನ್ನ ಸನ್ನದ್ಧರಾಗಲು ನೆರವಾಗುತ್ತೆ. ಒಟ್ಟಿನಲ್ಲಿ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಬಲಿಷ್ಠ ನ್ಯೂಜಿಲೆಂಡ್ ಸವಾಲು ಎದುರಿಸಲು ಟೀಮ್ ಇಂಡಿಯಾ ಸನ್ನದ್ಧವಾಗ್ತಿದ್ದು, ಇದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನೂ ಗುರು ದ್ರಾವಿಡ್ ಮಾರ್ಗದರ್ಶನದಲ್ಲಿ, ಈಗಿನಿಂದಲೇ ಟೀಮ್ ಇಂಡಿಯಾ ಆರಂಭಿಸಿದೆ.