ಟೀಮ್ ಇಂಡಿಯಾಕ್ಕೆ ಆತನೇ ಮೇನ್ ಪಿಲ್ಲರ್.. ನಾಯಕನಾಗಿ ತಂಡವನ್ನ ಮುನ್ನಡೆಸೋ ಆತ, ಬ್ಯಾಟ್ಸ್​ಮನ್ ಆಗಿ​ ರನ್​ ಹೊಳೆ ಸುರಿಸುತ್ತಾನೆ. ಎಂಥಹ ಪರಿಸ್ಥಿತಿಯಲ್ಲಿ ಎದೆಗುಂದದ ಆತನ ವ್ಯಕ್ತಿತ್ವ, ಆತನ ಬ್ಯಾಟ್​ನಲ್ಲೂ ಕಾಣಬಹುದು.. ಆದ್ರೆ, ಇತ್ತೀಚಿಗೆ ಆತನ ಟೆಸ್ಟ್​ ಕ್ರಿಕೆಟ್​ನ ಪರ್ಫಾಮೆನ್ಸ್ ಕೂಡ, ಇಳಿ ಮುಖದತ್ತಾ ಜಾರುತ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಸಕ್ಸಸ್​ಫುಲ್ ಕ್ಯಾಪ್ಟನ್ ಮಾತ್ರವಲ್ಲ, ಟೀಮ್ ಇಂಡಿಯಾದ ಆಪ್ತ ರಕ್ಷಕ ಕೂಡ ಹೌದು..! ಫಾರ್ಮೆಟ್​ ಯಾವುದೇ ಇರಲಿ, ಪಿಚ್​ ಯಾವುದೇ ಆಗಲಿ, ದೇಶ, ವಿದೇಶವೇ ಆಗಲಿ ಬ್ಯಾಟ್​​​​​​​​​ನಿಂದಲೇ ಉತ್ತರಿಸುವುದು ವಿರಾಟ್​​ ಸ್ಪೆಷಾಲಿಟಿ. ಸವಾಲಿಗೆ ಪ್ರತಿ ಸವಾಲ್ ಎಸೆಯೋದು ಆತನ ಹುಟ್ಟುಗುಣ.. ಇದಕ್ಕೆ ತಕ್ಕಂತೆ ಮೈದಾನದಲ್ಲಿ ಬೌಲರ್​​ಗಳ ಚೆಂಡಾಡೋ ವೀರಾವೇಶ ಎಂಥದ್ದು ಅನ್ನೋದು, ಬಿಡಿಸಿ ಹೇಳಬೇಕಿಲ್ಲ.

ಆದ್ರೀಗ ಇದೇ ಕೊಹ್ಲಿಯ ವಿರಾಟ ಬ್ಯಾಟಿಂಗ್, ಟೆಸ್ಟ್​ ಕ್ರಿಕೆಟ್​ನಲ್ಲಿ ಕಾಣುತ್ತಿಲ್ಲ ಎಂಬ ಚರ್ಚೆಗೆ ನಾಂದಿ ಹಾಡಿದೆ. ಇದಕ್ಕೆ ಕಾರಣ ಆಗಿರೋದು 2019ರ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿಯ, ಬ್ಯಾಟಿಂಗ್ ಖದರ್ ಕಡಿಮೆ ಆಗಿರೋದು.

2016-18ರಲ್ಲಿ ರೆಡ್​ ಹಾಟ್​ ಫಾರ್ಮ್​ನಲ್ಲಿದ್ದ ಕೊಹ್ಲಿ..!
ಹೌದು..! 2016-18ರ ಅವಧಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ​ ಪಾಲಿಗೆ, ಸುವರ್ಣಯುಗ.. ಈ ಅವಧಿಯಲ್ಲಿ ಅಕ್ಷರಶಃ ನಡೆದಿದ್ದು, ಕಿಂಗ್ ವಿರಾಟ್​​ ಕೊಹ್ಲಿಯ ದರ್ಬಾರ್​.. ಏಕದಿನ, ಟಿ20, ಟೆಸ್ಟ್ ಕ್ರಿಕೆಟ್​ ಎನ್ನದೇ, ರನ್​​ಮಳೆಯನ್ನೇ ಸೃಷ್ಟಿಸಿದ್ದರು. ಅದರಲ್ಲೂ ಟೆಸ್ಟ್​ ಕ್ರಿಕೆಟ್​​ನಲ್ಲಿ ರೆಡ್​ ಹಾಟ್​ ಫಾರ್ಮ್​ನಲ್ಲಿದ್ದ ಕೊಹ್ಲಿ, ಶತಕದ ಮೇಲೆ ಶತಕ ಸಿಡಿಸುತ್ತಾ, ರನ್​ ಶಿಖರವನ್ನೇ ಕಟ್ಟಿದ್ದರು.. 2016 ಹಾಗೂ 2017ರ ಟೆಸ್ಟ್ ಕ್ರಿಕೆಟ್​ ಕ್ಯಾಲೆಂಡರ್​ನಲ್ಲಿ 75ರ ಸರಾರಿಯಲ್ಲಿ ಬ್ಯಾಟ್​ ಬೀಸಿದ್ದ ವಿರಾಟ್, 2018ರಲ್ಲಿ ಟೆಸ್ಟ್​ ಕ್ರಿಕೆಟ್​ನ ಗರಿಷ್ಠ ರನ್ ಸ್ಕೋರರ್​​ ಕೂಡ ಆಗಿದ್ದರು..! ಅಷ್ಟೇ ಅಲ್ಲ..! ಈ ಅವಧಿಯ ಟೀಮ್ ಇಂಡಿಯಾ ಗೆಲುವಿನಲ್ಲಿ ಶೇ.17.96ರಷ್ಟು ವಿರಾಟ್​ ಕೊಡುಗೆ ಇದೆ.

2016-18ರ ಅವಧಿಯಲ್ಲಿ ವಿರಾಟ್
2016-18ರ ಅವಧಿಯಲ್ಲಿ 35 ಟೆಸ್ಟ್​ ಪಂದ್ಯಗಳನ್ನಾಡಿದ್ದ ವಿರಾಟ್, 66.59ರ ಸರಾಸರಿಯಲ್ಲಿ 3596 ರನ್​ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ 14 ಶತಕ, 8 ಅರ್ಧಶತಕ ಸಿಡಿಸಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಈ ಅವಧಿಯಲ್ಲಿ ವಿರಾಟ್​ ವಿಕೆಟ್​​​ ಪಡೆಯೋಕೆ ಬೌಲರ್​ಗಳು ಪರದಾಟವೇ ನಡೆಸಿದ್ದರು. ಹೀಗೆ ಬೌಲರ್​​ಗಳ ಮೇಲೆ ದಂಡೆಯಾತ್ರೆ ನಡೆಸ್ತಿದ್ದ ವಿರಾಟ್, ಟೆಸ್ಟ್​ ಕ್ರಿಕೆಟ್​​ನಲ್ಲಿ ನಾಯಕನಾಗಿ ಯಾರು ಮಾಡದಂತಹ, ಸಾಧನೆಯನ್ನೂ ಮಾಡಿದರು.

2019ರಿಂದ ಇಳಿಮುಖದತ್ತ ಕೊಹ್ಲಿ ಫಾರ್ಮ್ ಗ್ರಾಫ್​..!
2019ರ ತನಕ ಸಾವಿರಕ್ಕೂ ಕಡಿಮೆ ರನ್ ಪೇರಿಸದ ವಿರಾಟ್​, 2019ರ ಟೆಸ್ಟ್​ ಕ್ಯಾಲೆಂಡರ್​ ಇಯರ್​​ನಲ್ಲಿ ಗಳಿಸಿದ್ದು, ಕೇವಲ 612 ರನ್ ಮಾತ್ರ..! ನಂತರದ 2020ರಲ್ಲಿ 116 ರನ್ ಕಲೆಹಾಕಿದ ಕೊಹ್ಲಿ, ಪ್ರಸಕ್ತ ವರ್ಷ 172 ರನ್ ಮಾತ್ರವೇ ಗಳಿಸಿದ್ದಾರೆ. ಅಷ್ಟೇ ಅಲ್ಲ..! ಸತತ ಮೂರು ವರ್ಷ ಕೊಹ್ಲಿ, ಸಾವಿರ ರನ್ ಗಡಿ ದಾಟಲೂ ವಿಫಲರಾಗಿದ್ದಾರೆ. 2019ರ ನವೆಂಬರ್​​ ಬಳಿಕ ಶತಕದ ಬರವನ್ನೂ ಎದುರಿಸ್ತಿರುವ ಕೊಹ್ಲಿಗೆ, ಇದು ವೃತ್ತಿ ಜೀವನದ ಅತಿ ದೊಡ್ಡ ವೈಫಲ್ಯವೂ ಆಗಿದೆ.

2019-21ರ ಅವಧಿಯಲ್ಲಿ ವಿರಾಟ್
2019-21ರ ಅವಧಿಯಲ್ಲಿ 15 ಟೆಸ್ಟ್​ ಪಂದ್ಯಗಳನ್ನಾಡಿದ ವಿರಾಟ್, 42.85ರ ಸರಸಾರಿಯಲ್ಲಿ 900 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಕೇವಲ 2 ಶತಕ ದಾಖಲಿಸಿದ್ದಾರೆ.

ಇನ್ನು ಈ ಅವಧಿಯಲ್ಲಿ ವಿರಾಟ್​ ಕೊಹ್ಲಿ, 50 TO 100 CONVERSION ರೇಟ್​ ಕೂಡ, ಕುಸಿದಿದೆ. ಶೇಕಡ 63.64 CONVERSION ರೇಟ್​, 28.57ಕ್ಕೆ ಇಳಿದೆ. ಅಷ್ಟೇ ಅಲ್ಲ..! 108 ಎಸೆತಗಳಿಗೊಮ್ಮೆ ವಿಕೆಟ್ ಒಪ್ಪಿಸುತ್ತಿದ್ದ ವಿರಾಟ್, 2019ರ ಬಳಿಕ 77 ಎಸೆತಗಳಿಗೆ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಇನ್ನು ತಂಡ ಒಂದೆಡೆ ಗೆಲ್ಲುತ್ತಿದ್ದರೂ, ವಿರಾಟ್ ಕೊಹ್ಲಿ ಗೆಲುವಿನ ಕೊಡುಗೆ ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ.
ಅದ್ರಲ್ಲೂ ವಿದೇಶದಲ್ಲಿ ಟೀಮ್ ಇಂಡಿಯಾದ ಮೆನ್ ವೆಪನ್ ಆಗಿದ್ದ ವಿರಾಟ್, 2020ರಿಂದ ಸಂಪೂರ್ಣ ವೈಫಲ್ಯದ ಹಾದಿಯಲ್ಲೇ ಸಾಗ್ತಿದ್ದಾರೆ.

2020ರಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್
2020ರಿಂದ ಸ್ವದೇಶದಲ್ಲಿ 4 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್​ ಬೀಸಿರುವ ವಿರಾಟ್, 28.66ರ ಸರಾಸರಿಯಲ್ಲಿ 172 ರನ್ ಗಳಿಸಿದ್ದಾರೆ. ಈ ಪೈಕಿ 2 ಅರ್ಧಶತಕ ದಾಖಲಿಸಿದ್ದಾರೆ. ವಿದೇಶದಲ್ಲಿ ಆಡಿರುವ 3 ಟೆಸ್ಟ್​ ಪಂದ್ಯಗಳಿಂದ 19.33ರ ಸರಾಸರಿಯಲ್ಲಿ 116 ರನ್ ಗಳಿಸಿರುವ ವಿರಾಟ್, 1 ಅರ್ಧಶತಕ ಮಾತ್ರವೇ ದಾಖಲಿಸಿದ್ದಾರೆ. ಹೀಗೆ ದೇಶ, ವಿದೇಶದಲ್ಲಿ ರನ್​​ ಬರ ಎದುರಿಸುತ್ತಿರುವ ವಿರಾಟ್​, ಟೆಸ್ಟ್ ಕ್ರಿಕೆಟ್​ನಲ್ಲಿ ಫಾರ್ಮ್​ ಕಳೆದುಕೊಂಡಾರಾ..? ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.

ಕ್ಯಾಪ್ಟನ್​​ ವಿರಾಟ್​ಗೆ ಇಂಗ್ಲೆಂಡ್ ಸರಣಿ ಸವಾಲ್..!
ಕೊಹ್ಲಿಯಿಂದ ಬರಬೇಕಿದೆ 2018ರ ಪ್ರದರ್ಶನ..!

2020ರ ಅವಧಿಯಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ಕಂಡಿದ್ದ ವಿರಾಟ್, ಈಗ ಪ್ರತಿಷ್ಠಿತ ಇಂಗ್ಲೆಂಡ್ ಪ್ರವಾಸಕ್ಕೆ ಆಗಮಿಸಿದ್ದಾರೆ. ಇದು ನಿಜಕ್ಕೂ ವಿರಾಟ್​ಗೆ ಚಾಲೆಂಜಿಂಗ್​ ಆಗಿದೆ. 2018ರ ಇಂಗ್ಲೆಂಡ್​ ಸರಣಿಯಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿದ್ದ ವಿರಾಟ್​​, ಸರಣಿಯಲ್ಲಿ 593 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಆದ್ರೀಗ ಕೆಟ್ಟ ಫಾರ್ಮ್​ಗೆ ಸುಲುಕಿ ರನ್​ಗಳಿಸಲು ಪರದಾಡ್ತಿರುವ ವಿರಾಟ್, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.
ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕಮಾಲ್ ಮಾಡದ ವಿರಾಟ್, ಟೆಸ್ಟ್ ಕ್ರಿಕೆಟ್​ನಲ್ಲಿ ಫಾರ್ಮ್​ ಕಳೆದುಕೊಳ್ಳುತ್ತಿದ್ದಾರಾ ಅನ್ನೋ ಅನುಮಾನ ಹುಟ್ಟುಹಾಕಿರೋದು, ಸುಳ್ಳಲ್ಲ. ಅದೆಲ್ಲಾ ಏನೇ ಇರಲಿ… ಕೊಹ್ಲಿ ಆದಷ್ಟು ಬೇಗ ಫಾರ್ಮ್​ಗೆ ಮರಳಿ ಶತಕದ ದಾಹ ನೀಗಿಸಿಕೊಳ್ಳಲಿ. ರನ್​ ಮಳೆ ಸುರಿಸಿ, ತಂಡಕ್ಕೆ ಗೆಲುವು ತಂದುಕೊಡಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

The post ಟೆಸ್ಟ್ ಕ್ರಿಕೆಟ್​​ನಲ್ಲಿ ಫಾರ್ಮ್​ ಕಳೆದುಕೊಂಡ್ರಾ ಕೊಹ್ಲಿ? -ದಿನೇ ದಿನೇ ಇಳಿಯುತ್ತಿದೆ ವಿರಾಟ್ ಗ್ರಾಫ್​ appeared first on News First Kannada.

Source: newsfirstlive.com

Source link