ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​​​ ಫೈಟ್​​ಗೆ, ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ಚಾಂಪಿಯನ್​ಶಿಪ್​​ ಮೇಲೆ ಕಣ್ಣಿರುವ ಟೀಮ್ ನ್ಯೂಜಿಲೆಂಡ್, ಶತಾಯ ಗತಾಯ ಫೈನಲ್​​ ಫೈಟ್​ ಗೆಲ್ಲೋ, ವಿಶ್ವಾಸದಲ್ಲಿದೆ. ಇದಕ್ಕೆ ಕಾರಣ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ..!

ಹೌದು..! ಲಾರ್ಡ್ಸ್​​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ, ಡ್ರಾನಲ್ಲಿ ಅಂತ್ಯ ಕಂಡಿದೆ. ಆದ್ರೂ ಈ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ, ಇನ್ನಿಂಗ್ಸ್​ ಮುನ್ನಡೆ ಪಡೆದು ಮೇಲುಗೈ ಸಾಧಿಸಿತು. ಅದ್ರಲ್ಲೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​​ಗೂ ಮುನ್ನ ಕಿವೀಸ್​​ ಸಂಘಟಿತ ಪ್ರದರ್ಶನ, ಮಾಜಿ ಕ್ರಿಕೆಟ್​​​ಗಳ ಭವಿಷ್ಯ ನಿಜವಾಗಿಸುವಂತೆಯೇ ಇದೆ. ಈ ಪಂದ್ಯದಲ್ಲಿ ಕಂಡು ಬಂದ ಕೆಲ ಪಾಸಿಟಿವ್ ಅಂಶಗಳೇ, ಈಗ ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ಸಂದೇಶವಾಗಿದೆ.

ಸಾಲಿಡ್ ಫಾರ್ಮ್​ನಲ್ಲಿ ನ್ಯೂಜಿಲೆಂಡ್​ ಬ್ಯಾಟ್ಸ್​ಮನ್​​ 

ನ್ಯೂಜಿಲೆಂಡ್​ ನಿರಾತಂಕಕ್ಕೆ ಕಾರಣ, ಬ್ಯಾಟ್ಸ್​ಮನ್​​ಗಳ ಸಾಲಿಡ್ ಫಾರ್ಮ್​.. ಯೆಸ್​..! ಐತಿಹಾಸಿಕ ಲಾರ್ಡ್ಸ್ ಪಿಚ್​​​ನಲ್ಲಿ, ಕೆಲ ಆಟಗಾರರು ವೈಫಲ್ಯ ಅನುಭವಿಸಿದರು. ಸವಾಲಿನ ಪಿಚ್​​ನಲ್ಲಿ ಟಾಮ್ ಲಾಥಮ್, ಡೆವೊನ್ ಕಾನ್ವೆ ದ್ವಿಶತಕ ಸಿಡಿಸಿ ಅಬ್ಬರಿಸಿದರು. ಇಷ್ಟೇ ಅಲ್ಲ..! ಮಧ್ಯಮ ಕ್ರಮಾಂಕದಲ್ಲಿ ಹೆನ್ರಿ ನಿಕೋಲಸ್, ಅನುಭವಿ ರಾಸ್​ ಟೇಲರ್​​ ಫಾರ್ಮ್​ನಲ್ಲಿರೋದು ಸಹ, ನ್ಯೂಜಿಲೆಂಡ್​ ತಂಡಕ್ಕೆ ಬಿಗ್ ಪ್ಲಸ್ ಪಾಯಿಂಟ್..!

ಇಂಗ್ಲೆಂಡ್​ ಪಿಚ್​​ನಲ್ಲಿ ಕಿವೀಸ್​​ ಬೌಲರ್​ಗಳ ಆರ್ಭಟ

ಲಾರ್ಡ್ಸ್​ನಲ್ಲಿ ಆಂಗ್ಲ ಬೌಲರ್​​ಗಳೇ ವಿಕೆಟ್ ಪಡೆಯಲು ಪರದಾಡಿದ್ರು. ಆದ್ರೆ ಕಿವೀಸ್​​ ವೇಗಿಗಳು ಸೂಪರ್ ಸ್ಪೆಲ್ ಹಾಕೋ ಮೂಲಕ, ಅತಿಥೇಯ ಬ್ಯಾಟ್ಸ್​ಮನ್​ಗಳ ವಿಕೆಟ್ ಪಡೆಯಲು ಯಶಸ್ವಿಯಾದ್ರು. ಅದ್ರಲ್ಲೂ ಟಿಮ್ ಸೌಥಿ, ಕೈಲ್ ಜೆಮಿಸನ್, ನೇಲ್ ವ್ಯಾಗ್ನರ್ ಪರಾಕ್ರಮಕ್ಕೆ ತತ್ತರಿಸಿದ್ದ ಇಂಗ್ಲೆಂಡ್, ಮೊದಲ​ ಇನ್ನಿಂಗ್ಸ್​ನಲ್ಲಿ 275 ರನ್​​​ಗಳಿಗೆ ಆಲೌಟ್​ ಆಗಿತ್ತು. ನಿಜಕ್ಕೂ ಕಿವೀಸ್​ ಬೌಲರ್​ಗಳ ಆಬ್ಬರ ಹೇಗಿತ್ತೆಂದರೆ, ಅತೀಥೇಯ ತಂಡದಲ್ಲಿ ನಾವೇ ಬಾಸ್​​ಗಳು ಎನ್ನುತ್ತಿದ್ದ ಆ್ಯಂಡರ್ಸನ್, ಸ್ಟುವರ್ಟ್​ ಬ್ರಾಡ್​​​​​ಗೆ, ಕಿವೀಸ್ ಬೌಲರ್​ಗಳು ಬೌಲಿಂಗ್ ಪಾಠ, ಹೇಳಿಕೊಡುವಂತಿತ್ತು…

ಲಾರ್ಡ್ಸ್​​ನಲ್ಲಿ ವಿಲಿಯಮ್ಸನ್ ಪಡೆಯ ಫೈಟಿಂಗ್ ಸ್ಪಿರಿಟ್ 

ನಿಜಕ್ಕೂ ಲಾರ್ಡ್ಸ್​​ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ತಂಡದ ಹೋರಾಟದ ಮನೋಭಾವ, ಮೆಚ್ಚುವಂಥದ್ದಾಗಿತ್ತು. ಖ್ಯಾತ ನಾಮ ಆಟಗಾರರ ಹೊರತಾಗಿ, ಯುವ ಆಟಗಾರರು ಕೆಚ್ಚೆದೆಯ ಹೋರಾಟ ಕೂಡ, ಗಮನ ಸೆಳೆಯಿತು. ಅದ್ರಲ್ಲೂ ಆರಂಭದಲ್ಲಿ ಪ್ರಮುಖ ವಿಕೆಟ್ ಪತನದ ಬಳಿಕ ಕಾನ್ವೆ-ನಿಕೋಲಸ್ ಜೊತೆಯಾಟ ನಿಜಕ್ಕೂ, ಅಮೋಘ. ಅಗ್ರಗಣ್ಯ ಇಂಗ್ಲೆಂಡ್ ಬೌಲರ್​ಗಳನ್ನ ಬೆಂಡೆತ್ತಿದ್ದ ಈ ಯುವ ಬ್ಯಾಟ್ಸ್​ಮನ್​ಗಳ ಫೈಟಿಂಗ್ ಸ್ಪಿರಿಟ್ ಮುಂದೆ, ಅನುಭವಿಗಳೇ ನೆಲಕಚ್ಚಿದ್ದರು..!

ಆತ್ಮವಿಶ್ವಾಸದಲ್ಲಿ ಕೇನ್ ವಿಲಿಯಮ್ಸನ್ ಪಡೆ 

ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡರೂ, ವಿಲಿಯಮ್ಸನ್ ಪಡೆಯ ಆತ್ಮವಿಶ್ವಾಸಕ್ಕೆ ಕಾರಣ, ಮೊದಲ ಇನ್ನಿಂಗ್ಸ್​ನಲ್ಲಿ 103 ರನ್​​ಗಳ ಮುನ್ನಡೆ.. ಹೌದು..! ಲಾರ್ಡ್ಸ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, 378 ರನ್​​ಗಳ ಸವಾಲಿನ ಟಾರ್ಗೆಟ್​ ಮುಂದಿಟ್ಟಿತ್ತು. ಈ ಮೊತ್ತ ಅತಿಥೇಯ ಇಂಗ್ಲೆಂಡ್​ಗೆ, ಚಾಲೆಂಜ್ ಅಲ್ಲ ಎನ್ನಲಾಗಿತ್ತು. ಆದ್ರೆ ನ್ಯೂಜಿಲೆಂಡ್ ಬೌಲರ್​ಗಳು, ರೂಟ್ ಪಡೆಯನ್ನ 275 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶ್ವಿಯಾಯ್ತು. ಈ ಪಂದ್ಯ ಗೆಲ್ಲದಿದ್ರೂ, ಇಂಗ್ಲೆಂಡ್​ಗೆ ಸೋಲಿನ ಭಯ ಹುಟ್ಟುಹಾಕಿತ್ತು. ಇದೇ ಕಾರಣ ಟೀಮ್ ಇಂಡಿಯಾವನ್ನ ನಿಯಂತ್ರಿಸುವ ಆತ್ಮವಿಶ್ವಾಸ, ಕೇನ್​​ ಪಡೆಯಲ್ಲಿ ಮಾಡಿಸಿದೆ.

ಕಿವೀಸ್​ಗೆ ಟೆಸ್ಟ್​ ಚಾಂಪಿಯನ್​ಶಿಪ್​​ ಗೆಲ್ಲೋ ತವಕ  

ಪ್ರವಾಸಿ ನ್ಯೂಜಿಲೆಂಡ್​ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್​ ಪಿಚ್,​​ ನಿಜಕ್ಕೂ ಚಾಲೆಂಜ್ ಆಗಿತ್ತು. ಲಾರ್ಡ್ಸ್​​ ಪಿಚ್​​ನಲ್ಲಿ ಹೆಚ್ಚು ಸ್ವಿಂಗ್ ಮತ್ತು ಬೌನ್ಸ್​ ಇರದಿದ್ದರೂ, ನ್ಯೂಜಿಲೆಂಡ್​ ತಂಡಕ್ಕೆ ಡಿಸ್-​ಅಡ್ವಾಂಟೇಜ್​​​ ಆಗಿತ್ತು.. ಆದ್ರೆ ನ್ಯೂಜಿಲೆಂಡ್​​ನ ಹೋರಾಟದ ಮನೋಭವ, ಗೆಲ್ಲುವ ಹಂಬಲ, ಇಂಗ್ಲೆಂಡ್​ ವಿರುದ್ಧ ಮೇಲುಗೈ ಸಾಧಿಸುವಂತೆ ಮಾಡಿತ್ತು. ಒಂದು ವೇಳೆ 3ನೇ ದಿನದಾಟ ಮಳೆಗೆ ಆಹುತಿಯಾಗದಿದ್ದರೇ, ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲುವ ಚಾನ್ಸ್​ ಇತ್ತು. ಆದ್ರೆ ಲಾರ್ಡ್ಸ್​ ಅಂಗಳಕ್ಕೆ ಹೋಲಿಸಿದ್ರೆ, ಸೌತ್​​ಹ್ಯಾಂಪ್ಟನ್ ಪಿಚ್, ಫುಲ್ ಡಿಫರೆಂಟ್ ಆಗಿದೆ. ಅದ್ರಲ್ಲೂ ನ್ಯೂಜಿಲೆಂಡ್​ ತಂಡಕ್ಕೆ, ಹೇಳಿ ಮಾಡಿಸಿದ ಪಿಚ್ ಸೌತ್​ಹ್ಯಾಂಪ್ಟನ್.. ಇಲ್ಲಿ ಸ್ವಿಂಗ್ ಜೊತೆಗೆ ಬೌನ್ಸ್​ ಕೂಡ ಹೆಚ್ಚಾಗಿರುತ್ತೆ. ಹಾಗಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಗೆಲ್ಲೋ ಹಂಬಲದಲ್ಲಿರೋ ನ್ಯೂಜಿಲೆಂಡ್​ಗೆ, ಅಡ್ವಾಂಟೇಜ್ ಆಗಿದೆ.

ಒಟ್ನಲ್ಲಿ.. ಇಂಗ್ಲೆಂಡ್ ವಿರುದ್ಧದ ನೀಡಿರುವ ಪ್ರದರ್ಶನ, ಬ್ಲಾಕ್ ಕ್ಯಾಪ್ಸ್​​ ಪಾಳಯದಲ್ಲಿ ಆತ್ಮವಿಶ್ವಾಸ ಹುಟ್ಟಾಕಿದೆ. ಎಡ್ಜ್​ಬಸ್ಟನ್​ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯದಲ್ಲೂ ಇದೇ ಪ್ರದರ್ಶನ ನೀಡಿದರೆ, ಚಾಂಪಿಯನ್​ಶಿಪ್​ ಫೈನಲ್​ ಫೈಟ್​ ಇನ್ನಷ್ಟು ರೋಚಕತೆ ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

The post ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಗೆಲ್ಲಲು ಟೀಮ್ ಇಂಡಿಯಾಕ್ಕೆ ಸುಲಭವಲ್ಲ..! appeared first on News First Kannada.

Source: newsfirstlive.com

Source link