ಯುಜುವೇಂದ್ರ ಚಹಲ್.. ಟೀಮ್ ಇಂಡಿಯಾದ ಅತ್ಯಂತ ನಂಬಿಕಸ್ಥ ಬೌಲರ್. 2016ರಲ್ಲೇ ತಂಡಕ್ಕೆ ಕಾಲಿಟ್ಟ ಚಹಲ್, ಇಲ್ಲಿಯವರೆಗೂ ತನ್ನದೇ ಹವಾ ಸೃಷ್ಟಿಸಿದ್ದಾರೆ. ತನ್ನ ಡಿಫ್ರೆಂಟ್ ಲೆಗ್​ ಬ್ರೇಕ್​, ಗೂಗ್ಲಿ ಬೌಲಿಂಗ್​ನಿಂದಲೇ, ಬ್ಯಾಟ್ಸ್​​ಮ್ಯಾನ್​ಗಳ ಕಾಡ್ತಿದ್ದ ಯುಜಿ, ಮಿಡಲ್ ಆರ್ಡರ್ ಓವರ್​ಗಳಲ್ಲಿ ಎದುರಾಳಿ ತಂಡದ ಓಟಕ್ಕೆ ಬ್ರೇಕ್ ನೀಡಿ, ಮ್ಯಾಚ್​ಗಳನ್ನ ಗೆಲ್ಲಿಸಿಕೊಟ್ಟ ಆಪತ್ಭಾಂದವ.

IPLನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಈ ಸ್ಪಿನ್ನರ್, ವಿಕೆಟ್​ಗಳ ಬೇಟೆಯಾಡಿ ಗಮನ ಸೆಳೆದ್ರು. ಈ ಅದ್ಭುತ ಪ್ರದರ್ಶನವೇ ಟೀಮ್ ಇಂಡಿಯಾಕ್ಕೆ ಕಾಲಿಡುವಂತೆ ಮಾಡಿದ್ದು. ಪಂದ್ಯದಿಂದ ಪಂದ್ಯಕ್ಕೆ ತಾನೆಂತ ಅಪಾಯಕಾರಿ ಬೌಲರ್ ಅನ್ನೋದನ್ನ ಪ್ರೂವ್ ಮಾಡ್ತಾ ಇರೋ ಚಹಲ್, ಕೊನೆಗೆ ತಂಡದ ಖಾಯಂ ಸದಸ್ಯರಾದ್ರು. ಟೀಮ್ ಇಂಡಿಯಾಕ್ಕೆ ಆಯ್ಕೆ ಕುರಿತಂತೆ ಎಂದೂ ತುಟಿ-ಪಿಟಕ್ ಅನ್ನದ ಚಹಲ್, ಇದೀಗ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರೋದೇ ಚಹಲ್ ಕೋಪಕ್ಕೆ ಕಾರಣ
IPL ಅರ್ಧಕ್ಕೆ ಮೊಟುಕುಗೊಂಡ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟಗೊಳ್ತು. ಆದರೆ ಆ ತಂಡದಲ್ಲಿ ಚಹಲ್ ಹೆಸರು ಇರಲಿಲ್ಲ. ಮೂರ್ನಾಲ್ಕು ವರ್ಷಗಳಿಂದ 50 ವಿಕೆಟ್ ಕಬಳಿಸಿರುವ ಚಹಲ್, ಟೆಸ್ಟ್ ತಂಡಕ್ಕೆ ಆಯ್ಕೆಯಾಗೋ ರೇಸ್​​ನಲ್ಲಿದ್ದರು. ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಅಬ್ಬರಿಸಿದ್ದ ಪ್ರತಿಭೆಗಳಿಗೇ ಮಣೆ ಹಾಕಲಾಯ್ತು. ಇದು ಚಹಲ್ ಕೆಂಗಣ್ಣಿಗೆ ಗುರಿಯಾಯ್ತು. ಕಳೆದ ಒಂದು ವರ್ಷದಿಂದ ಟೆಸ್ಟ್​ಗೆ ಆಯ್ಕೆ ಮಾಡುವ ಚಾನ್ಸ್ ಇದ್ದರೂ ಪರಿಗಣಿಸದಿರೋದು ಚಹಲ್ ಬೇಸರಕ್ಕೆ ಕಾರಣವಾಗಿದೆ.

ಈ ಬಗ್ಗೆ ಓಪನ್ ಆಗಿ ಮಾತನಾಡಿರೋ ಈ ಲೆಗ್ ಬ್ರೇಕ್ ಸ್ಪಿನ್ನರ್, ಟೆಸ್ಟ್ ಆಡುವ ಸಾಮರ್ಥ್ಯ ನನ್ನಲ್ಲೂ ಇದೆ ಅಂತಾ ಕಿಡಿಕಾರಿದ್ದಾರೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಇಂಜುರಿಗೆ ಒಳಗಾದಾಗ, ಚೊಚ್ಚಲ ಟೆಸ್ಟ್ ಕರೆಯಲ್ಲಿದ್ದ ಚಹಲ್ ಬದಲಿಗೆ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್​ಗೆ ಮಣೆ ಹಾಕೋ ಮೂಲಕ ಶಾಕ್ ನೀಡ್ತು. ಜೊತೆಗೆ ಫೆಬ್ರವರಿ-ಮಾರ್ಚ್​​ನಲ್ಲಿ ನಡೆದ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಸೆಲೆಕ್ಟ್ ಆಗೋ ನಿರೀಕ್ಷೆ ಇಟ್ಟಿಕೊಂಡಿದ್ದ ಚಹಲ್​ಗೆ ಮತ್ತೆ ನಿರಾಸೆ ಮೂಡ್ತು. ಆದರೆ ಇವತ್ತಲ್ಲ ನಾಳೆ ಟೆಸ್ಟ್ ತಂಡಕ್ಕೆ ಎಂಟ್ರಿ ಪಡೆದೇ ಪಡೆಯುತ್ತೇನೆ ಅಂತ ಭರವಸೆ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ನುಂಗಿಕೊಂಡಿದ್ದ ನೋವನ್ನು ಇದೀಗ ಹೊರ ಹಾಕಿದ್ದಾರೆ.

‘ಭರವಸೆ ಕಳೆದುಕೊಳ್ಳೋದಿಲ್ಲ’
‘ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಹಲವು ಸ್ಪಿನ್ನರ್​​ಗಳು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ನನಗೆ ಅವಕಾಶ ನೀಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ. ನನಗೂ ವೈಟ್ ಜರ್ಸಿ ತೊಡುವ ಆಸೆ ತುಂಬಾ ಇದೆ. ಟೆಸ್ಟ್ ಬೌಲರ್ ಎನಿಸಿಕೊಳ್ಳುವುದಕ್ಕಿಂತ ಬೇರೇನೂ ಬೇಕಾಗಿಲ್ಲ. ನಾನೂ ಕೂಡ 10 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 50 ವಿಕೆಟ್ ಕಬಳಿಸಿದ್ದೇನೆ. ನನ್ನಲ್ಲೂ ಕೂಡ ಟೆಸ್ಟ್ ಆಡುವ ಎಲ್ಲಾ ಸಾಮರ್ಥ್ಯ ಇದೆ. ಹೀಗಾಗಿ ಮೂರ್ನಾಲ್ಕು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ವೈಟ್ ಜೆರ್ಸಿ ತೊಡಲು ಕಾತುರದಿಂದ ಕಾಯ್ತಿದ್ದೇನೆ. ಇಂದು ನನಗೆ ಅವಕಾಶ ಸಿಗದಿರಬಹುದು. ಆದರೆ ಎಂದಿಗೂ ಭರವಸೆ ಕಳೆದುಕೊಳ್ಳುವುದಿಲ್ಲ’
-ಯಜುವೇಂದ್ರ ಚಹಲ್, ಸ್ಪಿನ್ನರ್

ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಮಿಂಚಿರುವ ಚಹಲ್
ಟೆಸ್ಟ್​​ಗೆ ಆಯ್ಕೆಯಾಗಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಚಹಲ್, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸೂಪರ್ಬ್ ಪರ್ಫಾರ್ಮೆನ್ಸ್ ನೀಡಿ ಅಟ್ರ್ಯಾಕ್ಷನ್ ಆಗಿದ್ದಾರೆ. 2010ರಲ್ಲಿ ಹರಿಯಾಣದ ತಂಡದ ಪರ ಕಣಕ್ಕಿಳಿದಿದ್ದ ಲೆಗ್​​ ಬ್ರೇಕ್ ಗೂಗ್ಲಿ ಸ್ಪಿನ್ನರ್, ತಾನೊಬ್ಬ ಬೆಸ್ಟ್ ಟೆಸ್ಟ್ ಸ್ಪಿನ್ನರ್ ಅನ್ನೋದಕ್ಕೆ ಸಾಕ್ಷಿ ಪ್ರಥಮ ದರ್ಜೆಯಲ್ಲಿ ಪಡೆದ ವಿಕೆಟ್​ಗಳು. ಒಟ್ಟು 31 ಪ್ರಥಮ ದರ್ಜೆ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಯುಜಿ, 3.06ರ ಎಕಾನಮಿಯಲ್ಲಿ 84 ವಿಕೆಟ್ ಕಬಳಿಸಿ, ಅದ್ಭುತ ಪ್ರದರ್ಶನ ತೋರಿದ್ದಾರೆ.

ಚಹಲ್​ಗೆ ಚಾನ್ಸ್ ನೀಡದಿರೋಕೆ ಕಾರಣ ಏನ್ ಗೊತ್ತಾ..?
ಅದ್ಯಾಕೋ 2019ರ ನಂತರ ಚಹಲ್ ನಸೀಬು ಸರಿಯಿಲ್ಲ ಅಂತ ಕಾಣ್ಸುತ್ತೆ. 2019ಕ್ಕೂ ಮುನ್ನ ಟಾಪ್ ವಿಕೆಟ್ ಟೇಕರ್ ಆಗಿದ್ದ ಚಹಲ್, ಅದೇ ವರ್ಷ ಏಕದಿನ ವಿಶ್ವಕಪ್ ನಂತರ ವಿಕೆಟ್ ಕಬಳಿಸೋಕೆ ಪರದಾಡ್ತಿದ್ದಾರೆ. ವಿಶ್ವಕಪ್ ಬಳಿಕ 17 ಟಿ20 ಪಂದ್ಯಗಳನ್ನಾಡಿರುವ ಚಹಲ್ 17 ವಿಕೆಟ್ ಪಡೆದಿದ್ರೆ, 37.68ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. 5 ಏಕದಿನ ಪಂದ್ಯಗಳನ್ನಾಡಿದ್ದು, 8 ವಿಕೆಟ್​ಗಳನ್ನಷ್ಟೇ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಆಸಿಸ್-ಇಂಗ್ಲೆಂಡ್ ಸೀಮಿತ ಓವರ್​ಗಳ ಸರಣಿಯಲ್ಲೂ ಚಹಲ್ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡ್ರು. ಹೀಗಾಗಿಯೇ ಆಯ್ಕೆ ಸಮಿತಿ ಗಮನ ನೀಡಲಿಲ್ಲ ಎಂದು ಹೇಳಲಾಗ್ತಿದೆ.

ತಾನಾಡಿದ 54 ಏಕದಿನ ಪಂದ್ಯಗಳಲ್ಲಿ 92 ವಿಕೆಟ್, 48 ಟಿ20 ಇನ್ನಿಂಗ್ಸ್​ನಲ್ಲಿ 62 ಬಲಿ ಪಡೆದಿರುವ ಈ ಗೂಗ್ಲಿ ಸ್ಪಿನ್ನರ್, ಟೆಸ್ಟ್ ತಂಡಕ್ಕೆ ಆಯ್ಕೆಯಾಗೋದಕ್ಕೆ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಆದರೆ ತಂಡದಲ್ಲಿ ಯುವ ಪ್ರತಿಭೆಗಳು ಭರ್ಜರಿ ಪ್ರದರ್ಶನ ನೀಡ್ತಿರೋದ್ರಿಂದ, ಚಹಲ್​ಗೆ ಮುಂದಿನ ದಿನಗಳಲ್ಲಿ ರೆಡ್​ ಬಾಲ್​ನಲ್ಲಿ ಆಡೋ ಚಾನ್ಸ್ ಸಿಗುತ್ತೋ ಇಲ್ವೋ ಅನ್ನೋದನ್ನ ಕಾದುನೋಡಬೇಕಷ್ಟೆ.

ಪ್ರಸನ್ನಕುಮಾರ್ ಪಿಎನ್, ಸ್ಪೋರ್ಟ್ಸ್ ಬ್ಯೂರೋ, ನ್ಯೂಸ್​​ಫಸ್ಟ್​

The post ಟೆಸ್ಟ್ ತಂಡದಲ್ಲಿ ಚಹಲ್​​ಗೆ ಚಾನ್ಸ್ ನೀಡದಿರೋಕೆ ಕಾರಣ ಏನ್ ಗೊತ್ತಾ..? appeared first on News First Kannada.

Source: newsfirstlive.com

Source link