ಪ್ರಯಾಗ್​ರಾಜ್​:  ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ ವರನ ಅವತಾರ ಕಂಡು, ವಧು ಕೊನೇ ಘಳಿಗೆಯಲ್ಲಿ ಮದುವೆಯನ್ನ ಕ್ಯಾನ್ಸಲ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಪ್ರಯಾಗ್​ರಾಜ್​ನ ಟಿಕ್ರಿ ಗ್ರಾಮದಲ್ಲಿ ರೈತರೊಬ್ಬರ 22 ವರ್ಷದ ಮಗಳ ಜೊತೆ ರವೀಂದ್ರ ಪಟೇಲ್ ಎಂಬ ಯುವಕನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದ್ರೆ ಮದುವೆ ಮಂಟಪಕ್ಕೆ ಬಂದ ವರ ಹಾಗೂ ಆತನ ಸ್ನೇಹಿತರು ಕಂಠಪೂರ್ತಿ ಕುಡಿದಿದ್ದರು ಎನ್ನಲಾಗಿದೆ.

ಮಾಲೆ ಹಾಕುವ ಶಾಸ್ತ್ರಕ್ಕೂ ಮುನ್ನ ವರ ಹಾಗೂ ಅವನ ಸ್ನೇಹಿತರು ಭರ್ಜರಿ ಡ್ಯಾನ್ಸ್​ ಮಾಡ್ತಿದ್ದರು. ಇದನ್ನ ಕಂಡು ವಧು ಹಾಗೂ ಆಕೆಯ ಪೋಷಕರು ಬೇರೆ ವಿಧಿಯಿಲ್ಲದೆ ಸುಮ್ಮನಿದ್ರು. ಆದ್ರೆ ಯಾವಾಗ ವರ ವಧುವಿಗೂ ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದನೋ ಆಕೆ ಸಿಟ್ಟಾಗಿದ್ದಳು. ತನ್ನೊಂದಿಗೆ ಕುಣಿಯಲಿಲ್ಲ ಅಂತ ವರ ಸ್ಥಳದಲ್ಲೇ ದೊಡ್ಡ ಸೀನ್ ಕ್ರಿಯೇಟ್​ ಮಾಡಿದ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಯುವತಿ ನನಗೆ ಈ ಮದುವೆನೇ ಬೇಡ ಅಂತ ಕ್ಯಾನ್ಸಲ್ ಮಾಡಿದ್ದಾಳೆ.

ಬಳಿಕ ವಧುವಿನ ಕುಟುಂಬಸ್ಥರು ವರನ ಕಡೆಯವರನ್ನ ಬಂಧನದಲ್ಲಿ ಇಟ್ಟು, ಮದುವೆ ಫಿಕ್ಸ್​ ಆದಾಗ ನಾವು ಕೊಟ್ಟಿದ್ದ ಉಡುಗೊರೆಗಳನ್ನ ವಾಪಸ್​ ಕೊಡಿ ಅಂತ ಪಟ್ಟು ಹಿಡಿದಿದ್ರು. ಅತ್ತ ವಧುವಿನ ಮನವೊಲಿಸಲು ಸಾಧ್ಯವಾಗದಿದ್ದಾಗ ವರನ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದರು ಅಂತ ವರದಿಯಾಗಿದೆ.

ಪೊಲೀಸರು ಸ್ಥಳಕ್ಕೆ ಬಂದು ಮಾತುಕತೆ ನಡೆಸಿದ್ದು, ಯುವತಿ ರವೀಂದ್ರನನ್ನು ಮದುವೆಯಾಗಲು ಬಿಲ್​ಕುಲ್ ಇಷ್ಟವಿಲ್ಲ ಎಂದಿದ್ದಾಳೆ. ಬಳಿಕ ರವೀಂದ್ರನ ಕುಟುಂಬಸ್ಥರು, ವಧುವಿನ ಮನೆಯವರಿಂದ ಪಡೆದಿದ್ದ ಹಣ ಹಾಗೂ ಇತರೆ ವಸ್ತುಗಳನ್ನ ವಾಪಸ್​ ಕೊಡಲು ಒಪ್ಪಿದ್ದು, ಇಬ್ಬರ ನಡುವೆ ಪೊಲೀಸರು ರಾಜಿ ಮಾಡಿಸಿದ್ದಾರೆ.

 

The post ಟೈಟಾಗಿ ಬಂದ ವರ, ಮದ್ವೆ ಕ್ಯಾನ್ಸಲ್ ಮಾಡಿದ ಯುವತಿ.. ಉಡುಗೊರೆ ವಾಪಸ್​​ಗೆ ಏನ್ ಮಾಡಿದ್ರು ಗೊತ್ತಾ? appeared first on News First Kannada.

Source: newsfirstlive.com

Source link