ಟೋಕಿಯೋ: 2021ರ ಟೋಕಿಯೋ ಒಲಿಂಪಿಕ್ಸ್‍ಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕೇವಲ ಕೆಲವೇ ಗಂಟೆಗಳು ಮಾತ್ರ ಭಾಗಿ ಉಳಿದುಕೊಂಡಿರುವಂತೆ, ಭಾರತ ಹಲವು ಕ್ರೀಡಾಪಟುಗಳು ಪದಕ ಬೇಟೆಯಾಡುವ ತವಕದಲ್ಲಿದ್ದಾರೆ.

2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೊರೊನಾದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಈ ವರ್ಷ ಜುಲೈ 23ರಿಂದ ಆಗಸ್ಟ್ 8 ರವರೆಗೆ ಜಪಾನ್‍ನ ಟೋಕಿಯೋದಲ್ಲಿ ನಡೆಯುತ್ತಿದೆ.

ಈಗಾಗಲೇ ಭಾರತದ 120 ಕ್ರೀಡಾಪಟುಗಳು ಟೋಕಿಯೋ ತಲುಪಿದ್ದಾರೆ. 120 ಕ್ರೀಡಾಪಟುಗಳ ಪೈಕಿ 5 ಮಂದಿ ಕನ್ನಡಿಗರು ಸೇರಿದ್ದಾರೆ. ಈ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಬಾರಿ ಅತೀ ಹೆಚ್ಚಿನ ಕ್ರೀಡಾಪಟುಗಳನ್ನು ಕಳುಹಿಸಿದೆ. ಈ ಬಾರಿ 68 ಪುರುಷ ಸ್ಪರ್ಧಿಗಳು ಮತ್ತು 52 ಮಹಿಳಾ ಸ್ಪರ್ಧಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ ಈ ಬಾರಿ ವಿಶೇಷವೆಂಬಂತೆ ಯುವ ಪಡೆ ಟೋಕಿಯೋಗೆ ತೆರಳಿದೆ. 120 ಕ್ರೀಡಾಪಟುಗಳ ಪೈಕಿ 10ಕ್ಕೂ ಹೆಚ್ಚು ಕ್ರೀಡಾಪಟುಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಭಾರತ ಭವಿಷ್ಯದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾದಿಂದಾಗಿ ಬಹಳ ವಿಭಿನ್ನವಾಗಿ ಈ ಬಾರಿಯ ಒಲಿಂಪಿಕ್ಸ್ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

ಈಗಾಗಲೇ ಭಾರತದ ಸ್ಟಾರ್ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಈ ಕ್ರೀಡಾಪಟುಗಳಿಂದ ಪದಕ ನಿರೀಕ್ಷೆಗಳನ್ನು ಕ್ರೀಡಾ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ವರ್ಷ ಎಲ್ಲ ಕ್ರೀಡಾಪಟುಗಳಿಗೆ ಅಭ್ಯಾಸಕ್ಕಾಗಿ ಸಾಕಷ್ಟು ಸಮಯವಕಾಶ ಸಿಕ್ಕಿರುವುದರಿಂದಾಗಿ ಪದಕ ಮುಡಿಗೇರಿಸಿಕೊಳ್ಳುವ ಅವಕಾಶವಿದೆ.

ಭಾರತ ಸ್ಟಾರ್ ಅಥ್ಲೀಟ್‍ಗಳ ಪೈಕಿ ಪಿ.ವಿ ಸಿಂಧು ಬ್ಯಾಡ್ಮಿಂಟನ್, ಮೇರಿ ಕೋಮ್ ಬಾಕ್ಸಿಂಗ್, ಅಮಿತ್ ಫಂಗಲ್ ಬಾಕ್ಸಿಂಗ್, ಸಾಕ್ಷಿ ಮಲಿಕ್ ಕುಸ್ತಿ, ವಿನೇಶ್ ಪೊಗಾಟ್ ಕುಸ್ತಿ, ಭಜರಂಗ್ ಪೊನಿಯಾ ಕುಸ್ತಿ, ಮನು ಭಾಕರ್ ಶೂಟಿಂಗ್, ದೀಪಿಕಾ ಕುಮಾರಿ ಆರ್ಚರಿ, ಮೀರಾಬಾಯಿ ಚಾನು ವೇಟ್‍ಲಿಪ್ಟಿಂಗ್‍ನಲ್ಲಿ ಸ್ಪರ್ಧಿಸುತ್ತಿದ್ದು ಇವರೆಲ್ಲರ ಮೇಲೆ ಪದಕದ ನಿರೀಕ್ಷೆ ಇದೆ. ಇವರೊಂದಿಗೆ ಇನ್ನಿತರ ಯುವ ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. ಆಲ್ ದಿ ಬೇಸ್ಟ್ ಇಂಡಿಯಾ.

The post ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು appeared first on Public TV.

Source: publictv.in

Source link