ಭಾರತದಲ್ಲಿ 200 ರಿಂದ 270 ಮಿಲಿಯನ್ ಬಳಕೆದಾರರನ್ನು ಹೊಂದಿರುವ ‘ಟ್ರೂ ಕಾಲರ್’ ಸಂಸ್ಥೆ ಗಾರ್ಡಿಯನ್ ಹೆಸರಿನ ಹೊಸ ಆ್ಯಪ್ ಪರಿಚಯಿಸಿದೆ. ಮಹಿಳೆಯರ ಭದ್ರತೆಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಈ ನೂತನ ಆ್ಯಪ್ ವಿನ್ಯಾಸಗೊಳಿಸಲಾಗಿದೆ.

ಇದರ ಉಪಯೋಗ ಹೇಗೆ ?

ಗಾರ್ಡಿಯನ್ ಎಂದರೆ ರಕ್ಷಕರು ಎಂದರ್ಥ. ಅಪಾಯದಲ್ಲಿ ಸಿಲುಕಿದ ಸಂದರ್ಭದಲ್ಲಿ ಈ ಆ್ಯಪ್ ನೆರವಿಗೆ ಬರಲಿದೆ. ಅದು ಹೇಗೆ ಎಂಬುದನ್ನು ‘ಟ್ರೂ ಕಾಲರ್’ ಸಿಇಒ ಅಲನ್ ಮಾಮೆಡಿ ವಿವರಿಸಿದ್ದಾರೆ.

ಗಾರ್ಡಿಯನ್ ಆ್ಯಪ್ ನಲ್ಲಿ ನಮ್ಮ ಕುಟುಂಬದವರ, ಸ್ನೇಹಿತರ ಹಾಗೂ ಸ್ಥಳೀಯ ಪೊಲೀಸ್ ಸಹಾಯವಾಣಿ ನಂಬರ್ ಗಳನ್ನು ಗಾರ್ಡಿಯನ್ (ರಕ್ಷಕರು)ಗಳಾಗಿ ಸೇವ್ ಮಾಡಿಕೊಳ್ಳಬಹುದು. ನಿಮಗೆ ಅಪಾಯದ ಮುನ್ಸೂಚನೆ ದೊರೆತ ವೇಳೆ ಗಾರ್ಡಿಯನ್ ಆ್ಯಪ್ ನಲ್ಲಿರುವ ಎಮರ್ಜೆನ್ಸಿ ಬಟನ್ ಒತ್ತಿದರೆ ಸಾಕು, ನಿಮ್ಮ ಲೋಕೆಶನ್ ನಿಮ್ಮ ಗಾರ್ಡಿಯನ್ಸ್ ಗಳಿಗೆ ಕೆಲವೇ ಸೆಕಂಡುಗಳಲ್ಲಿ ತಲುಪುತ್ತದೆ. ನೀವು ಅಪಾಯದಲ್ಲಿರುವುದರ ಕುರಿತು ಅವರಿಗೆ ಅಲರ್ಟ್ ದೊರೆಯುತ್ತದೆ. ನಿಮ್ಮ ಲೋಕೆಶನ್ ಗೆ ಸಮೀಪದಲ್ಲಿರುವವರು ನೆರವಿಗೆ ದೌಡಾಯಿಸಬಹುದು.

ಕೆಲವೇ ಕೆಲವು ನಂಬರ್ ಗಳನ್ನು ನೀವು ಗಾರ್ಡಿಯನ್ ಗಳಾಗಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲವೆ ನಿಮ್ಮ ಫೋನ್ ನಂಬರ್ ಬುಕ್ ನಲ್ಲಿರುವ ಎಲ್ಲರಿಗೂ ನಿಮ್ಮ ಲೋಕೆಶನ್ ಕಳುಹಿಸುವ ಆಯ್ಕೆ ಈ ಆ್ಯಪ್ ನಲ್ಲಿದೆ. ದೊಡ್ಡ ನಗರಗಳಲ್ಲಿ ಹೆಣ್ಣು ಮಕ್ಕಳ ಭದ್ರತೆ ಉದ್ದೇಶವಿಟ್ಟುಕೊಂಡು ಗಾರ್ಡಿಯನ್ ಆ್ಯಪ್ ಸಿದ್ಧಪಡಿಸಿದೆ. ನಮಗೆ ಜನರ ರಕ್ಷಣೆ ಮೊದಲ ಆದ್ಯತೆ, ಹಣ ಗಳಿಸುವುದು ನಮ್ಮ ಉದ್ದೇಶವಲ್ಲ ಎಂದು ಮಾಮೆಡಿ ಹೇಳಿದ್ದಾರೆ.

ಗಾರ್ಡಿಯನ್ ಆ್ಯಪ್ ಬಳಕೆದಾರರ ಗೌಪ್ಯತೆಗೂ ಆದ್ಯತೆ ನೀಡಿದೆ. ಬಳಕೆದಾರರ ಖಾಸಗಿ ಮಾಹಿತಿಗೆ ಧಕ್ಕೆ ತರುವುದಿಲ್ಲ ಎಂದು ಹೇಳಿಕೊಂಡಿದೆ. ಕೇವಲ ಫೋನ್ ನಂಬರ್ ಹಾಗೂ ಲೋಕೆಶನ್ ಪಡೆಯಲು ಬಳಕೆದಾರರ ಅನುಮತಿ ಅಗತ್ಯ ಎಂದಿದೆ.

ಈ ಆ್ಯಪ್ ಮೂಲಕ ನಿಮ್ಮನ್ನು ಹಿಂಬಾಲಿಸುವವರ ಬಗ್ಗೆ ಮುನ್ಸೂಚನೆ ಪಡೆಯಬಹುದು. ರಾತ್ರಿ ವೇಳೆ ಇದು ನಿಮ್ಮ ನೆರವಿಗೆ ಬರಬಹುದು.

ಗಾರ್ಡಿಯನ್ ಗಳಾಗಿ ಸೇವ್ ಮಾಡಿರುವ ನಂಬರ್ ಗಳಿರುವ ಲೋಕೆಶನ್ ಹಾಗೂ ಅವರ ಮೊಬೈಲ್ ನಲ್ಲಿರುವ ಬ್ಯಾಟರಿ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಮೊಬೈಲ್ ಬ್ಯಾಟರಿ ಡೌನ್ ಆಗಿದ್ದಂತಹ ಸಂದರ್ಭದಲ್ಲಿ ನಿಮ್ಮ ಪರಿಚಿತರಿಂದ ಅಲರ್ಟ್ ಬರಬಹುದು. ನೀವು ಕೂಡ ನಿಮ್ಮ ಆತ್ಮೀಯರಿರುವ ಸ್ಥಳ ಹಾಗೂ ಅವರ ಬ್ಯಾಟರಿ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಬಹುದು.

ಇನ್ನು ಗಾರ್ಡಿಯನ್ ಆ್ಯಪ್  ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆ ಮಾಡಲಾಗಿದೆ. ವಿವಿಧ ದೇಶಗಳ ಸರ್ಕಾರಗಳ ಜತೆಗೂ ಟೈಯಪ್ ಮಾಡಿಕೊಳ್ಳುತ್ತಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಒಎಸ್ ನಲ್ಲಿ ಲಭ್ಯವಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More