ಟ್ವಿಟರ್​ನಿಂದ ವಜಾಗೊಂಡ 25 ವರ್ಷದ ಉದ್ಯೋಗಿಯ ಈ ಸಕಾರಾತ್ಮಕ ಟ್ವೀಟ್​ಗೆ ನೆಟ್ಟಿಗರ ಮೆಚ್ಚುಗೆ – 25 Year Old Mans Post After Getting Fired From Twitter Wins Internet


Twitter Layoff :  ‘ಈತನಕ ನೀವು ಅದ್ಭುತ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದೀರಿ, ಫ್ಯಾಸಿಸ್ಟ್​ ಜೊತೆಗಲ್ಲ. ಇನ್ನೂ ಎತ್ತರಕ್ಕೇರಿ’ ಎಂದು ಒಬ್ಬರು, ‘ಟ್ವಿಟರ್​ನಂತೆಯೇ ಮತ್ತೊಂದು ಯೋಜನೆ ಸಿದ್ಧವಿದೆ, ಕೈಜೋಡಿಸುತ್ತೀರಾ’ ಎಂದು ಇನ್ನೊಬ್ಬರು.

Viral : ಬಿಲಿಯನೇರ್ ಎಲನ್ ಮಸ್ಕ್ ಟ್ವಿಟರ್​ನ ಅಧಿಪತ್ಯ ವಹಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಿದೆ. ವರದಿಯೊಂದರ ಪ್ರಕಾರ ಒಟ್ಟು 7,500 ಉದ್ಯೋಗಿಗಳಲ್ಲಿ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗುವ ಉದ್ದೇಶ ಈ ಕಂಪೆನಿಗಿದೆ. ಕೆಲ ಉದ್ಯೋಗಿಗಳಿಗೆ ಇ-ಮೇಲ್​ ಮೂಲಕ ಈಗಾಗಲೇ ವಜಾಗೊಳಿಸಿದ ಬಗ್ಗೆ ತಿಳಿಸಲಾಗುತ್ತಿದೆ. ಅವರುಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಈ ಪ್ರಕ್ರಿಯೆಯ ಬಗ್ಗೆ ಕುಪಿತರಾಗಿದ್ದಾರೆ ಮತ್ತು ಹತಾಶೆಗೊಳಗಾಗಿದ್ದಾರೆ. ಆದರೆ ವಜಾ ಪ್ರಕ್ರಿಯೆಗೆ ಒಳಗಾದ 25 ವರ್ಷದ ವ್ಯಕ್ತಿಯೊಬ್ಬನ ನಿಲುವು ಮಾತ್ರ ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿದೆ.

ಎಲ್ಲ ಉದ್ಯೋಗಿಗಳು ಕಳವಳಕ್ಕೀಡಾಗಿರುವ ಈ ಹೊತ್ತಿನಲ್ಲಿ ಈ ವ್ಯಕ್ತಿ ಮಾತ್ರ ಸಂತೋಷದಿಂದ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಭರವಸೆ ಮತ್ತು ಆಶಾಭಾವನೆಯಿಂದ ಬದುಕನ್ನು ನೋಡುವ ಇವರ ಕ್ರಮ ಇಷ್ಟವಾಯಿತು ಎಂದು ನೆಟ್ಟಿಗರು ಬೆನ್ನು ತಟ್ಟಿದ್ದಾರೆ.

‘ಈಗಷ್ಟೇ ನನ್ನನ್ನು ವಜಾಗೊಳಿಸಿದ್ದಾರೆ. ಬರ್ಡ್​ ಆ್ಯಪ್​! ಇಷ್ಟು ದಿನ ಈ ಕಂಪೆನಿಯ ಭಾಗವಾಗಿದ್ದು ಸೌಭಾಗ್ಯ ಮತ್ತು ಗೌರವ’ ಎಂದು ಟ್ವೀಟ್ ಮಾಡಿದ್ದಾರೆ ಯಶ್. ಇವರು ಪಬ್ಲಿಕ್ ಪಾಲಿಸಿ ಟೀಮ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಶುಕ್ರವಾರ ರಾತ್ರಿ 11ರ ಸುಮಾರಿಗೆ ಯಶ್​ ಈ ಟ್ವೀಟ್​ ಮಾಡಿದ್ದಾರೆ. 3,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. 44,900 ಜನರು ಇಷ್ಟಪಟ್ಟಿದ್ದಾರೆ. ಮುಂದಿನ ಪ್ರಯಾಣಕ್ಕೆ ಶುಭವಾಗಲಿ ಎಂದು ಸಾಕಷ್ಟು ಜನ ಹಾರೈಸಿದ್ದಾರೆ. ‘ನೀವು ಇನ್ನಷ್ಟು ಅದ್ಭುತವಾದ ಕೆಲಸಗಳನ್ನು ಮಾಡುತ್ತೀರಿ ಎನ್ನುವ ಬಗ್ಗೆ ಖಚಿತತೆ ಇದೆ. ಒಳ್ಳೆಯದಾಗಲಿ’ ಎಂದಿದ್ದಾರೆ ಒಬ್ಬರು.

‘ಹೀಗೆ ಬದುಕನ್ನು ಭರವಸೆಯ ದೃಷ್ಟಿಕೋನದಿಂದ ನೋಡುವುದು ಅಪರೂಪ. ಮುಂದಿನ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ’ ಎಂದಿದ್ದಾರೆ ಇನ್ನೂ ಒಬ್ಬರು. ‘ಉದ್ಯೋಗದಿಂದ ವಜಾಗೊಂಡ ಮೇಲೆ ಇಷ್ಟೊಂದು ಸಕಾರಾತ್ಮಕವಾಗಿ ಯೋಚಿಸಿದ ವ್ಯಕ್ತಿಯನ್ನು ಎಲ್ಲಿಯೂ ನೋಡಿಲ್ಲ. ನಿಮಗೆ ಒಳ್ಳೆಯ ಅವಕಾಶಗಳು ಸಿಕ್ಕೇ ಸಿಗುತ್ತವೆ ಶುಭವಾಗಲಿ’ ಎಂದಿದ್ದಾರೆ ಮತ್ತೊಬ್ಬರು. ‘ಈತನಕ ನೀವು ಅದ್ಭುತ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದೀರಿ, ಫ್ಯಾಸಿಸ್ಟ್​ ಜೊತೆಗಲ್ಲ. ಇನ್ನೂ ಎತ್ತರಕ್ಕೇರಿ’ ಎಂದಿದ್ದಾರೆ ಮಗದೊಬ್ಬರು.

‘ಅಣ್ಣಾ, ನಿಮ್ಮೊಂದಿಗೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಆದಷ್ಟು ಬೇಗ ಮತ್ತೆ ಸಿಗೋಣ’ ಎಂದು ಮಾಜಿ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಟ್ವಿಟರ್​ನಂತೆಯೇ ಮತ್ತೊಂದು ಕಂಪೆನಿ ಆರಂಭಿಸೋಣ, ಈ ವಿಷಯವಾಗಿ ನನ್ನದೊಂದು ಯೋಜನೆ ಇದೆ, ಬರುತ್ತೀರಾ? ಎಂದಿದ್ದಾರೆ ಇನ್ನೂ ಒಬ್ಬರು.

ಒಂದು ಬಾಗಿಲು ಮುಚ್ಚಿದರೆ ಅನೇಕ ಬಾಗಿಲುಗಳು ತೆರೆಯುತ್ತವೆ ಕೆಲಸದಲ್ಲಿ ಶ್ರದ್ಧೆ ಇದ್ದವರಿಗೆ ಎನ್ನುವುದಕ್ಕೆ ಈ ಟ್ವೀಟ್ ಸಾಕ್ಷಿ.

ಅಂತೂ ಎಲನ್​ ಅಧಿಪತ್ಯದಿಂದಾಗಿ ಇನ್ನೂ ಏನೇನು ಬದಲಾವಣೆಗಳ ಬಿರುಗಾಳಿ ಏಳುತ್ತದೆಯೋ ಎಂದು ನೆಟ್ಟಿಗರು ಕಾಯ್ದು ಕುಳಿತಿದ್ದಾರೆ.

TV9 Kannada


Leave a Reply

Your email address will not be published.