ಬೆಂಗಳೂರು: ಟ್ವಿಟರ್​ ಇಂಡಿಯಾ ಮತ್ತು ಭಾರತ ಸರ್ಕಾರದ ನಡುವಿನ ಫೈಟ್​ ಮುಂದುವರಿದಿದೆ. ಈ ದೇಶದ ಕಾನೂನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಟ್ವಿಟರ್​​ ಸಂಸ್ಥೆಗೆ ನಿನ್ನೆ ಶಶಿ ತರೂರ್​ ನೇತೃತ್ವದ ಪಾರ್ಲಿಮೆಂಟರಿ ಪ್ಯಾನಲ್​ ತಪರಾಕಿ ಹಾಕಿದೆ.

ಪಾರ್ಲಿಮೆಂಟರ್​ ಪ್ಯಾನಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ವಿಟರ್​ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು, ‘ನಾವು ನಮ್ಮದೇ ಆದ ಪಾಲಿಸಿಯನ್ನ ಮುಂದುವರಿಸಿದ್ದೇವೆ’ ಎಂದಿದ್ದರು. ಟ್ವಿಟರ್ ಸಂಸ್ಥೆಯ ಈ ಉದ್ದಟತನ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ಯಾನಲ್.. ‘ಭಾರತದಲ್ಲಿ ಭಾರತದ ಕಾನೂನೇ ಸರ್ವೋಚ್ಛ.. ನಿಮ್ಮ ನಿಯಮಗಳಲ್ಲ’ ಎಂದು ಖಡಕ್​ ಆಗಿ ವಾರ್ನಿಂಗ್ ನೀಡಿತ್ತು.

ಟ್ವಿಟರ್​ಗೆ ಶಾಕ್ ಕೊಟ್ಟ ಭಾರತ
ಹೀಗೆ ದಿನಕ್ಕೊಂದು ಸಬೂಬು ಹೇಳುತ್ತಿರುವ ಟ್ವಿಟರ್​ ಸಂಸ್ಥೆ ಮೇಲೆ ಭಾರತ ಸರ್ಕಾರ ಕ್ರಮವನ್ನ ತೆಗೆದುಕೊಂಡಿದೆ. ಐಟಿ ಆ್ಯಕ್ಟ್ ಸೆಕ್ಷನ್ 79 ಅಡಿ, ಹೊಸ ಐಟಿ ನಿಯಮ ಪಾಲಿಸದ ಕಾರಣವನ್ನ ನೀಡಿ ಟ್ವಿಟರ್​ನ ಮಧ್ಯವರ್ತಿ ವೇದಿಕೆ ಸ್ಥಾನಮಾನ(ಇಂಟರ್​ಮೀಡಿಯರಿ ಸ್ಟೇಟಸ್​) ತೆಗೆದಿದೆ. ದೇಶದ ಹೊಸ ಕಾನೂನು ಒಪ್ಪಿಕೊಳ್ಳದಿರೋದು ಈ ದೇಶದ ಗೈಡ್​ಲೈನ್ಸ್​ ಉಲ್ಲಂಘನೆ ಮಾಡಿದಂತೆ ಎಂದು ಹೇಳಲಾಗಿದೆ.

ಅಪರಾಧಗಳಿಗೆ ಟ್ವಿಟರ್​ ಅಧಿಕಾರಿಗಳೇ ಹೊಣೆ
ಮಧ್ಯವರ್ತಿ ವೇದಿಕೆ ಸ್ಥಾನಮಾನವನ್ನ ಕಳೆದುಕೊಂಡ ಹಿನ್ನೆಲೆ ಟ್ವಿಟರ್ ಭಾರತದಲ್ಲಿ ತನಗಿರುವ  ಕಾನೂನು ರಕ್ಷಣೆಯನ್ನ ಕಳೆದುಕೊಂಡಿದೆ. ಮಧ್ಯವರ್ತಿ ಸ್ಥಾನಮಾನ ಹೊಂದಿರುವವರೆಗೂ ಯಾವುದೇ ಸೋಷಿಯಲ್ ಮೀಡಿಯಾ ತನ್ನ ವೇದಿಕೆಯಲ್ಲಿ ಪ್ರಕಟವಾಗುವ ಕಂಟೆಂಟ್​ಗಳ ಹೊಣೆಗಾರಿಕೆಯಿಂದ ದೂರ ಉಳಿದಿರುತ್ತವೆ. ಆದ್ರೆ ಈ ಸ್ಥಾನಮಾನವನ್ನ ಕಳೆದುಕೊಂಡ ಸೋಷಿಯಲ್ ಮೀಡಿಯಾಗಳು ಮುಂದೆ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಬಳಕೆದಾರರಿಂದ ಪ್ರಕಟವಾಗುವ ಎಲ್ಲಾ ಕಂಟೆಂಟ್​ಗಳಿಗೆ ತಾನೇ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಹಾಗೂ ಕ್ರಿಮಿನಲ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಟ್ವಿಟ್ಟರ್ ಬಳಸಿ ಯಾವುದೇ ವ್ಯಕ್ತಿ ಅಪರಾಧ ಮಾಡಿದ್ರೆ ಸಂಸ್ಥೆ ಸಂಕಷ್ಟವನ್ನ ಅನುಭವಿಸಬೇಕಾಗುತ್ತದೆ. ಕೃತ್ಯ ಎಸಗಿದ ವ್ಯಕ್ತಿಗೆ ಈ ಸಂಸ್ಥೆ ಕೃತ್ಯಕ್ಕೆ ಪ್ಲಾಟ್​ಫಾರಂ ಕೊಟ್ಟಂತೆ ಆಗಲಿದೆ. ಈ ಮೂಲಕ ಟ್ವಿಟ್ಟರ್ ಬಳಸಿ ಅಪರಾಧ ಮಾಡಿದ ವ್ಯಕ್ತಿ ಜೊತೆ ಜಾಲತಾಣವೂ ಆರೋಪಿಯಾಗುತ್ತದೆ. ಅಂದರೆ ಭಾರತದಲ್ಲಿ ಟ್ವಿಟರ್​ನ ಇನ್ಚಾರ್ಜ್ ಇರುವ ಅಧಿಕಾರಿ ಆರೋಪಿ ಸ್ಥಾನದಲ್ಲಿ‌ ನಿಲ್ಲುತ್ತಾರೆ.

ಮಧ್ಯವರ್ತಿ ವೇದಿಕೆ ಸ್ಥಾನ ಕಳ್ಕೊಂಡ ಮೇಲೆ ಏನಾಗುತ್ತೆ?
ಈ ಸ್ಥಾನವನ್ನ ಕಳೆದುಕೊಂಡ ಬೆನ್ನಲ್ಲೇ ಟ್ವಿಟ್ಟರ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ಅವಕಾಶ ಇದೆ. ಪ್ರಮುಖವಾಗಿ ಈ ವೇಳೆ 3 ಸೆಕ್ಷನ್ ಪ್ರಮುಖ ಪಾತ್ರ ವಹಿಸುತ್ತವೆ. ಐಟಿ ಆ್ಯಕ್ಟ್ ಸೆಕ್ಷನ್ 67, 67A ಮತ್ತು 67B . ಐಟಿ ಆ್ಯಕ್ಟ್ 67 ಪ್ರಕಾರ ಯಾವುದೇ ಅಶ್ಲೀಲ ಹೇಳಿಕೆ ಪೋಸ್ಟ್ ಮಾಡುವಂತಿಲ್ಲ. ಐಟಿ‌ ಆ್ಯಕ್ಟ್ 67Aರ ಪ್ರಕಾರ ಯಾವುದೇ ಪ್ರಕಾರದ ಅಶ್ಲೀಲ ಪೋಸ್ಟ್ ಮಾಡುವಂತಿಲ್ಲ. ಅದು ಫೋಟೋ, ವಿಡಿಯೋ, ಆಡಿಯೋ ಆಗಿದ್ದರೂ ಅಪ್ಲೈ ಆಗಲಿದೆ. ಐಟಿ‌ ಆ್ಯಕ್ಟ್ 67B ಪ್ರಕಾರ ಮಕ್ಕಳ ಅಶ್ಲೀಲ ಕಂಟೆಂಟ್ ಪೋಸ್ಟ್ ಮಾಡೋದು ದೊಡ್ಡ ಅಪರಾಧ. ಟ್ವಿಟ್ಟರ್ ಈ ಬಗ್ಗೆ ಇಲ್ಲಿಯತನಕ ಯಾವುದೇ ಕ್ರಮ ತಗೊಂಡಿಲ್ಲ.

ಸುಮೊಟೊ ಕೇಸ್​ಗೆ ಅವಕಾಶ
ಇಂತಹ ಪೋಸ್ಟ್ ಮಾಡುವ ಸಾವಿರಾರು ಅಕೌಂಟ್​ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಇಲ್ಲಿ ಇಂಟರ್​ಮಿಡಿಯರಿ ಸ್ಥಾನ ಇಲ್ಲದಿರುವುದಕ್ಕೆ ಟ್ವಿಟ್ಟರ್​ ಮೇಲೆ ಪರಿಣಾಮ ಬೀರಲಿದೆ. ಅಪರಾಧಕ್ಕೆ ಪ್ಲಾಟ್ಫಾರಂ ಕೊಟ್ಟು ತಾನು ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತೆ. ಈ ಮೂಲಕ ಟ್ವಿಟರ್​ ಸಂಸ್ಥೆ ಅಪರಾಧದಲ್ಲಿ ಭಾಗಿಯಾದಂತೆ ಆಗುತ್ತದೆ. ಅಲ್ಲದೇ ಈ ಬಗ್ಗೆ ಸರ್ಕಾರ ಸುಮೊಟೊ ಕೇಸ್ ಕೂಡ ದಾಖಲಿಸಬಹುದು. ಟ್ವಿಟ್ಟರ್ ಸಂಸ್ಥೆಯ ವ್ಯಕ್ತಿಗಳನ್ನು ಇಲ್ಲಿ ಬಂಧಿಸಲು ಅವಕಾಶ ಇದೆ.

ಬಂಧನಕ್ಕೂ ಅವಕಾಶ ಇದೆ
ಸೋಷಿಯಲ್ ಮಿಡಿಯಾ ಪೋಸ್ಟ್ ಅಂದ್ರೆ ಬಹಿರಂಗವಾಗಿ ಹೇಳಿಕೆ ನೀಡುವುದು. ಇಲ್ಲಿ ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿದ್ದು ಅಪರಾಧವಾಗಲಿದೆ. ಈ ಅಪರಾಧಕ್ಕೆ ಐಪಿಸಿ ಸೆಕ್ಷನ್ 292 ಸಹ ಅನ್ವಯ ಆಗಲಿದೆ. ಇದರಲ್ಲೂ ಸಹ ಆರೋಪಿಯನ್ನ ಬಂಧಿಸಿ ಕಂಬಿ ಹಿಂದೆ ಕಳುಹಿಸುವ ಅವಕಾಶ ಇದೆ. ಟ್ವಿಟ್ಟರ್ ತನ್ನ ಪ್ಲಾಟ್ಫಾರಂ ಬಳಸಿ ಅಪರಾಧಕ್ಕೆ ಅವಕಾಶ ನೀಡುತ್ತಿದೆ. ಇಂತಹ ಘಟನೆಗಳು ನಡೆದಾಗ ಪೊಲೀಸರಿಗೆ ತಕ್ಷಣ ಮಾಹಿತಿ ‌ನೀಡಬೇಕು. ಈ ಕ್ರಮ ತೆಗೆದುಕೊಳ್ಳದಿದ್ರೆ ಐಪಿಸಿ ಸೆಕ್ಷನ್ 202 ಅನ್ವಯ ಆಗುತ್ತದೆ. ಈ ಆಧಾರದ ಮೇಲೂ ಟ್ವಿಟ್ಟರ್ ಸಂಸ್ಥೆ ಸಿಬ್ಬಂದಿ ಬಂಧನಕ್ಕೆ ಅವಕಾಶ ಮಾಡಿಕೊಡುತ್ತದೆ.

ಟ್ವಿಟರ್​ಗೆ ಇರುವ ಮುಂದಿನ ದಾರಿ
ಈಗ ಟ್ವಿಟ್ಟರ್​​ಗೆ ಕಾನೂನಿನಲ್ಲಿ ಇರುವ ಅವಕಾಶಗಳೇನು ಅಂತಾ ನೋಡೋದಾದ್ರೆ,

  • ಟ್ವಿಟ್ಟರ್ ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಚಾಲೆಂಜ್ ಮಾಡಬಹುದು.
  • ಆದರೆ ಸೆಕ್ಷನ್ 79 ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಮೊದಲು ದೇಶದ ಕಾನೂನು ಪಾಲನೆಗೆ ಸೂಚಿಸಬಹುದು.
  • ಸೆಕ್ಷನ್ 79 ಬಿಟ್ಟು ಉಳಿದ ಸೆಕ್ಷನ್ ಚಾಲೆಂಜ್ ಮಾಡಲು ದೇಶದ ಕಾನೂನು ಪಾಲಿಸಬೇಕು.

ಅಂತಾರಾಷ್ಟ್ರೀಯ ಕೋರ್ಟ್​ಗೆ ಹೋಗಲು ಸಾಧ್ಯವೇ?
ಅಂತಾರಾಷ್ಟ್ರೀಯ ಕೋರ್ಟ್​ ಮೊರೆ ಹೋಗೋದು ಸಾಮಾನ್ಯವಾಗಿ ಎರಡು ದೇಶಗಳ ಮಧ್ಯೆ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾದಾಗ ಮಾತ್ರ. ಇಲ್ಲಿ ಒಂದು ಸಂಸ್ಥೆ & ದೇಶದ ಬಗ್ಗೆ ಚಾಲೆಂಜ್ ಮಾಡಲು ಅಸಾಧ್ಯ. ಈ ಮೂಲಕ ಟ್ವಿಟ್ಟರ್​ಗೆ ಸದ್ಯ ಸಂಧಾನ ಹಾಗೂ ದೇಶದ ಕಾನೂನು ಪಾಲನೆಯೇ ದಾರಿಯಾಗಿದೆ. ಇಲ್ಲವಾದಲ್ಲಿ ಭಾರತದಿಂದ ತನ್ನ ಸಂಸ್ಥೆ ಸಮೇತ ಹೊರ ಹೋಗಬೇಕಷ್ಟೇ.

ಇದನ್ನೂ ಓದಿ: ಭಾರತದಲ್ಲಿ ಭಾರತದ ಕಾನೂನೇ ಸುಪ್ರೀಂ.. ಟ್ವಿಟರ್​ಗೆ ಶಶಿ ತರೂರ್​​ ನೇತೃತ್ವದ ಪ್ಯಾನೆಲ್ ವಾರ್ನಿಂಗ್

The post ಟ್ವಿಟರ್​ಗೆ ಶಾಕ್: ಮಧ್ಯವರ್ತಿ ವೇದಿಕೆ ಸ್ಥಾನ ಕಳೆದುಕೊಂಡ ಮೇಲೆ ಏನಾಗುತ್ತೆ..? appeared first on News First Kannada.

Source: newsfirstlive.com

Source link