ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜಗ್ಗೇಶ್ ಸ್ಪಷ್ಟನೆ

ಬೆಂಗಳೂರು: ಮಗನ ಕಾರ್ ಅಪಘಾತದ ಕುರಿತು ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ಬಳಿಕ ಡಿಲೀಟ್ ಮಾಡಿದ್ದರು. ಇದರಿಂದಾಗಿ ಹಲವು ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಇದೀಗ ಜಗ್ಗೇಶ್ ಟ್ವೀಟ್ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.

ಮಗನ ಕಾರ್ ಅಪಘಾತದ ಚಿತ್ರ ನೋಡಿದರೆ ನನಗೆ ಹೃದಯ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಗ್ಗೆಯಿಂದ ಏನೂ ತಿನ್ನಲಾಗದೆ, ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿವೆ. ಮನೆಯವರು ಅದನ್ನು ನೋಡದಂತೆ ವಿನಂತಿ ಮಾಡಿದರು. ಹೀಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ, ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಯತಿರಾಜ್ ಮನೆಯಿಂದ ಹೋರ ಹೋಗಿದ್ದನು. ಪ್ರತಿಬಾರಿ ಅವನ ಇಷ್ಟದ ಬೆಂಗಳೂರು-ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಕಾರ್ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ.

ರಾಯರು ನನ್ನ ಜೊತೆ ಸದಾ ಇರುತ್ತಾರೆ, ಇದ್ದಾರೆ. ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಲ್ಲಿ ನಡೆಯುವುದೇ ನಾನಿದ್ದೀನೋ, ಇರುತ್ತೀನೋ ನಿನ್ನ ಜೊತೆ ಯಾವಾಗಲು ಎಂದು ರಾಯರು ಅವರ ಪವಾಡ ನಿರೂಪಿಸಲು. ನಿನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ. ಸದಾ ಅವರ ಸ್ಮರಣೆಯಲ್ಲೇ ಬದುಕುವ ನನಗೆ ಇದು ಮತ್ತೊಂದು ಪವಾಡ. ನಂಬಿ ಕೆಟ್ಟವರಿಲ್ಲಾ ಗುರುರಾಯರ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಅಪಘಾತ ಆಗಿದ್ದೇಗೆ?: ಚಿಕ್ಕಬಳ್ಳಾಪುರ ನಗರ ಹೊರವಲಯದ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಗಲಗುರ್ಕಿ ಸೇತುವೆ ಬಳಿ ನಟ ಜಗ್ಗೇಶ್ ಪುತ್ರ ಯತಿರಾಜ್ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಯತಿರಾಜ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಬರ್ತಿದ್ದ ವೇಳೆ ಅಗಲಗುರ್ಕಿ ಸೇತುವೆ ಅಂತ್ಯಕ್ಕೆ ಯೂ ಟರ್ನ್ ಇದೆ. ಅಡ್ಡ ಬಂದ ನಾಯಿ/ಬೈಕ್ ತಪ್ಪಿಸಲು ಹೋಗಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಚಲಿಸುತ್ತಿದ್ದ ವಿರುದ್ಧ ದಿಕ್ಕಿನ ರಸ್ತೆಗೆ ಜಂಪ್ ಮಾಡಿದೆ. ತದನಂತರ ರಸ್ತೆ ಬದಿ 200-300 ಮೀಟರ್ ದೂರ ಕಾರು ರಭಸವಾಗಿ ನುಗ್ಗಿದ್ದು, ಕೊನೆಯಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ.

ಅಪಘಾತದ ರಭಸಕ್ಕೆ ಮರದ ಕೊಂಬೆ ಸಹ ಮುರಿದಿದ್ದು, ಮರಕ್ಕೆ ಡಿಕ್ಕಿ ಹೊಡೆದು ಮತ್ತೆ ರಸ್ತೆ ಬದಿಗೆ ಉಲ್ಟಾ ತಿರುಗಿ ನಿಂತಿದೆ. ಪರಿಣಾಮ ಕಾರಿನಲ್ಲಿದ್ದ 4 ಏರ್ ಬ್ಯಾಗ್ ಗಳು ಬಿಚ್ಚಿಕೊಂಡಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಯತಿರಾಜ್ ಕೆಳಗಿಳಿದಿದ್ದು ಅಷ್ಟರಲ್ಲೇ ಅಲ್ಲೇ ರಸ್ತೆ ಬದಿ ಜಮೀನಿನಲ್ಲಿ ವಿದ್ಯುತ್ ಕಂಬ ಆಳವಡಿಸುತ್ತಿದ್ದ ಕಾರ್ಮಿಕರು ಯತಿರಾಜ್ ರಕ್ಷಣೆಗೆ ಧಾವಿಸಿದ್ದಾರೆ. ತತ್ ಕ್ಷಣ ನೀರು ಕುಡಿಸಿ ಗಾಬರಿಯಾಗಿದ್ದ ಯತಿರಾಜ್ ರನ್ನ ಸಮಾಧಾನ ಮಾಡಿ ಆಟೋ ಮೂಲಕ ಕರೆದುಕೊಂಡು ಆಸ್ಪತ್ರೆಯತ್ತ ಹೋಗಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋದ್ರಾ ಇಲ್ಲ ಎಂಬುದು ತಿಳಿದುಬಂದಿಲ್ಲ. ವಿಷಯ ತಿಳಿದು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಘಟನಾ ಸ್ಥಳದಲ್ಲಿದ್ದ ಕಾರನ್ನ ಪೊಲೀಸ್ ಠಾಣಾ ಆವರಣಕ್ಕೆ ಶಿಫ್ಟ್ ಮಾಡಿದ್ದಾರೆ.

The post ಟ್ವೀಟ್ ಡಿಲೀಟ್ ಮಾಡಿದ್ದಕ್ಕೆ ಜಗ್ಗೇಶ್ ಸ್ಪಷ್ಟನೆ appeared first on Public TV.

Source: publictv.in

Source link