ಟ್ವೀಟ್ ಡಿಲೀಟ್ ಮಾಡಿ, ಕ್ಷಮೆ ಕೇಳಿ; ನವಾಬ್​ ಮಲಿಕ್​ಗೆ ಲೀಗಲ್ ನೋಟಿಸ್ ನೀಡಿದ ಅಮೃತಾ ಫಡ್ನವಿಸ್ | Amruta Fadnavis Sends Defamation Notice To Maharashtra Minister Nawab Malik For Posting Defamatory Tweets


ಟ್ವೀಟ್ ಡಿಲೀಟ್ ಮಾಡಿ, ಕ್ಷಮೆ ಕೇಳಿ; ನವಾಬ್​ ಮಲಿಕ್​ಗೆ ಲೀಗಲ್ ನೋಟಿಸ್ ನೀಡಿದ ಅಮೃತಾ ಫಡ್ನವಿಸ್

ದೇವೇಂದ್ರ ಫಡ್ನವಿಸ್- ಅಮೃತಾ ಫಡ್ನವಿಸ್

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amrutha Fadnavis) ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ನವಾಬ್ ಮಲಿಕ್ (Nawab Malik) ಮಾನಹಾನಿಕರ ಟ್ವೀಟ್‌ಗಳ ಮೂಲಕ ತನ್ನ ಕುಟುಂಬದ ಇಮೇಜ್‌ಗೆ ಕಳಂಕ ತಂದಿದ್ದಕ್ಕಾಗಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲೀಗಲ್ ನೋಟಿಸ್‌ನ ಪ್ರತಿಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅಮೃತಾ ಫಡ್ನವಿಸ್, ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವುದಕ್ಕೆ ಬೇಷರತ್ತಾದ ಕ್ಷಮೆ ಯಾಚಿಸುವುದರೊಂದಿಗೆ 48 ಗಂಟೆಗಳಲ್ಲಿ ಟ್ವೀಟ್‌ಗಳನ್ನು ಅಳಿಸಿ ಎಂದು ನವಾಬ್ ಮಲಿಕ್‌ಗೆ ಎಚ್ಚರಿಕೆ ನೀಡಿದ್ದಾರೆ.

ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಸಚಿವರಾಗಿರುವ ಎನ್​ಸಿಪಿ ನಾಯಕ ನವಾಬ್ ಮಲಿಕ್, ದೇವೇಂದ್ರ ಫಡ್ನವಿಸ್ ಮತ್ತು ಅವರ ಪತ್ನಿ ಆಪಾದಿತ ಡ್ರಗ್ ಡೀಲರ್ ಜಯದೀಪ್ ರಾಣಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಕಾರ್ಯಕ್ರಮವೊಂದರಲ್ಲಿ ನವಾಬ್ ಮಲಿಕ್ ಅವರು ಅಮೃತಾ ಮತ್ತು ರಾಣಾ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಅವರ ವಿರುದ್ಧ ಆರೋಪಿಸಿದ್ದರು. ಮುಂಬೈನಲ್ಲಿ ನದಿಗಳ ಸಂರಕ್ಷಣೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಕ್ಲಿಕ್ಕಿಸಿದ ಫೋಟೋಗಳಿವು ಎಂದು ಅಮೃತಾ ಆ ಫೋಟೋಗಳನ್ನು ಸಮರ್ಥಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಪೋಸ್ಟ್ ಮಾಡಿರುವ ಫೋಟೋಗಳಿರುವ ಟ್ವೀಟ್ ಅನ್ನು ಡಿಲೀಟ್ ಮಾಡಿ, ಕ್ಷಮೆ ಯಾಚಿಸಬೇಕೆಂದು ಅಮೃತಾ ಫಡ್ನವಿಸ್ ಲೀಗಲ್ ನೋಟಿಸ್ ನೀಡಿದ್ದಾರೆ. ದೇವೇಂದ್ರ ಫಡ್ನವಿಸ್ ನನ್ನ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನವಾಬ್ ಮಲಿಕ್ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಅಮೃತಾ ಫಡ್ನವಿಸ್ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್​ಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್​ಗೆ ಭೂಗತಲೋಕದ ನಂಟಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವಿಸ್​ ವಿರುದ್ಧವೂ ಗಂಭೀರ ಆರೋಪ ಮಾಡಿದ್ದ ನವಾಬ್ ಮಲಿಕ್, ದೇವೇಂದ್ರ ಫಡ್ನವಿಸ್​ ಅವರಿಗೆ ದಾವೂದ್ ಇಬ್ರಾಹಿಂನ ಸಹಾಯಕ ರಿಯಾಜ್ ಭಾಟಿಯೊಂದಿಗೆ ಸಂಬಂಧವಿತ್ತು ಎಂದಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ನವಾಬ್ ಮಲಿಕ್ ತಮ್ಮ ಮನೆಯಲ್ಲಿ ಡ್ರಗ್ಸ್​ ಪತ್ತೆಯಾಗಿದೆ ಎಂಬ ದೇವೇಂದ್ರ ಫಡ್ನವಿಸ್​ ಹೇಳಿಕೆಗೆ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.

ದೇವೇಂದ್ರ ಫಡ್ನವಿಸ್ 2 ದಿನಗಳ ಹಿಂದೆ ತಮ್ಮ ಮಾಧ್ಯಮ ಸಂವಾದದಲ್ಲಿ ಮಲಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದೆಯೋ ಆ ಪಕ್ಷದ ಸ್ಥಿತಿಯನ್ನು ನೀವು ಊಹಿಸಬಹುದು ಎಂದಿದ್ದರು. ಇದರ ಬೆನ್ನಲ್ಲೇ, ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರು ಫಡ್ನವಿಸ್ ಅವರ ಹೇಳಿಕೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಸಮೀರ್ ಖಾನ್ ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಬಂಧಿತನಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ನಮ್ಮ ಮನೆಯಲ್ಲಿ ಯಾವುದೇ ಡ್ರಗ್ಸ್​ ಪತ್ತೆಯಾಗಿಲ್ಲ. ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರಿಂದ 5 ಕೋಟಿ ರೂ. ಹಾನಿಯಾಗಿದೆ ಎಂದು ಸಮೀರ್ ಖಾನ್ ಅವರು ತಮ್ಮ ವಕೀಲರ ಮೂಲಕ ಹೇಳಿದ್ದರು.

ನವಾಬ್ ಮಲಿಕ್ ಮತ್ತು ದೇವೇಂದ್ರ ಫಡ್ನವೀಸ್ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಂದರ್ಭದಲ್ಲಿ ಮಲಿಕ್ ಫಡ್ನವಿಸ್ ವಿರುದ್ಧ ಆರೋಪಗಳನ್ನು ಮಾಡಲು ಪ್ರಾರಂಭಿಸಿದರು. ಅದಕ್ಕೆ ದೇವೇಂದ್ರ ಫಡ್ನವೀಸ್ ನವಾಬ್ ಮಲಿಕ್ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದರು.

ನವೆಂಬರ್ 1 ರಂದು ಮಲಿಕ್ ಅವರು ಫಡ್ನವಿಸ್ ಮಾದಕವಸ್ತು ವ್ಯಾಪಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಅವರೊಂದಿಗೆ ಜೈದೀಪ್ ರಾಣಾ ಅವರಿರುವ ಫೋಟೋವನ್ನು ಅವರು ಬಿಡುಗಡೆ ಮಾಡಿದ್ದರು. ನವೆಂಬರ್ 9ರಂದು ಅದಕ್ಕೆ ಪ್ರತಿಯಾಗಿ, ನವಾಬ್ ಮಲಿಕ್ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಫಡ್ನವಿಸ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮಲಿಕ್, ದೇವೇಂದ್ರ ಫಡ್ನವೀಸ್ ಅವರು ಶಂಕಿತ ದಾವೂದ್ ಸಹಾಯಕ ರಿಯಾಜ್ ಭಾಟಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ಅಲ್ಲಗಳೆದ ಫಡ್ನವಿಸ್, ‘ಹಂದಿಯೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ, ಅದರಿಂದ ನೀವೇ ಕೊಳಕಾಗುತ್ತೀರಿ’ ಎಂದಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಕೊವಿಡ್ ನಿಯಮಾವಳಿಗಳು ಇಲ್ಲಿವೆ

ದೇವೇಂದ್ರ ಫಡ್ನವಿಸ್​ ಕ್ಷಮೆ ಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ; ನವಾಬ್ ಮಲಿಕ್ ಎಚ್ಚರಿಕೆ

TV9 Kannada


Leave a Reply

Your email address will not be published. Required fields are marked *