ಈತ ಬೆಂಗಳೂರು ಭೂಗತ ಜಗತ್ತಿನ ಹುಲಿಯಾ. ಕತ್ತಲ ಕೋಣೆಯಲ್ಲಿ ಕೂತು ಕರಾಳ ಕೋಟೆ ಕಟ್ಟಿಕೊಂಡು ದಾದಾಗಿರಿ ನಡೆಸಿದವನು. ಬೆಂಗಳೂರು ಭೂಗತ ಜಗತ್ತನ್ನು ಆಳಿ ಹೋದ ಡಾನ್ ಜಯರಾಜ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ. ಆದ್ರೆ ಈ ಬಾರಿ ಸುದ್ದಿಯಲ್ಲಿರೋದು ಡಾನ್ ಜಯರಾಜ್ ಅಲ್ಲಾ ಬದಲಾಗಿದೆ ಡಾನ್ ಕುಟುಂಬ.

ಅಷ್ಟಕ್ಕೂ ಏನಿದು?
ಭೂಗತ ಲೋಕದಲ್ಲಿ ಸಾಕಷ್ಟು ಮಂದಿ ಬೆಂಗಳೂರನ್ನ ಆಳಿ ಹೋದವರಿದ್ದಾರೆ. ಆದ್ರೆ ಎಲ್ಲರಿಗಿಂತ ಮೊದಲು ನೆನಪಿಗೆ ಬರೋದು ಡಾನ್ ಜಯರಾಜ್. ಒಂದು ರೌಡಿಸಂನಲ್ಲಿ ಹೆಸರುವಾಸಿಯಾಗಿದ್ದ ಜಯರಾಜ್, ಹುಲಿಯನ್ನ ಇಟ್ಟುಕೊಂಡು ರಾಜಕೀಯ ಪ್ರಚಾರಕ್ಕಿಳಿದಿದ್ದ ವ್ಯಕ್ತಿ. ಬೆಂಗಳೂರು ಭೂಗತ ಜಗತ್ತಿನ ಹೆಚ್ಚು ಸದ್ದು ಮಾಡಿದ್ದ ಡಾನ್ ಕೂಡ. ಕಟ್ಟು ಮಸ್ತಿನ ಮೈಕಟ್ಟು ಹೊಂದಿದ್ದ ಜಯಜಾನ್ 80ರ ದಶಕದಲ್ಲಿ ಬೆಂಗಳೂರಿನ ಕತ್ತಲ ಲೋಕವನ್ನು ಅಕ್ಷರಶಃ ಆಳಿದ್ದ. ಶತ್ರುಗಳು ಯಾವಾಗಲೂ ಕತ್ತಿ ಮಸಿಯುತ್ತಿರುತ್ತಾರೆಯೇ ಹೊರತು ಹೊಗಳಲು ಹೋಗೋದಿಲ್ಲ. ಆದ್ರೆ ಶತ್ರುಗಳ ಕೈಯಲ್ಲಿಯೂ ಹೊಗಳಿಸಿಕೊಂಡ ಕೆಲವೇ ಕೆಲ ರೌಡಿಗಳ ಪೈಕಿ ಡಾನ್ ಜಯರಾಜ್ ಕೂಡ ಒಬ್ಬ.

ಅಜಿತ್ ಜಯರಾಜ್

ಅನೇಕ ಬಾರಿ ಸಾವಿನ ಮನೆಯಿಂದ ಸಿನಿಮೀಯ ಶೈಲಿಯಲ್ಲಿ ಹೊರ ಬಂದಿದ್ದ ಡಾನ್ ಜಯರಾಜ್ ಕಡೆಗೂ ಬೀದಿ ಹೆಣವಾಗಿದ್ದ. ಅಂದು ಮುತ್ತಪ್ಪ ರೈ ಗನ್​​ನಿಂದ ಶರವೇಗದಲ್ಲಿ ನುಗ್ಗಿ ಬಂದ ಬುಲೆಟ್ ಜಯರಾಜ್ ತಲೆಯನ್ನು ಸೀಳಿತ್ತು. ಡಾನ್ ಜಯರಾಜ್ ಬೆಂಗಳೂರು ಭೂಗತ ಅರಣ್ಯದ ಅಗಾಧ ಕತ್ತಲೆಯಲ್ಲಿ ಕಣ್ಮರೆಯಾಗಿ ಹೋಗಿ ಅದೆಷ್ಟೋ ವರ್ಷಗಳು ಕಳೆದಿವೆ. ಆದ್ರೆ ರಕ್ತದ ಲೋಕದಲ್ಲಿ ಅವನು ಹಾಕಿರುವ ಪಾಪದ ಹೆಜ್ಜೆಗಳು ಇಂದಿಗೂ ಕೂಡ ಜಯರಾಜ್ ನನ್ನು ಮತ್ತೆ ಮತ್ತೆ ನೆನಪಿಸುತ್ತೆ, ಬದುಕಿರೋ ತನಕ ಬೆಂಗಳೂರು ಭೂಗತ ಜತ್ತಿನಲ್ಲಿ ಅನಭಿಶಕ್ತಿ ದೊರೆಯಾಗಿ ಮೆರೆದ ಜಯರಾಜ್ ಮಣ್ಣಲ್ಲಿ ಮಣ್ಣಾಗಿ ಹೋದ್ರೂ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ.

ಮತ್ತೆ ಸುದ್ದಿಯಾದ 80ರ ದಶಕದ ಡಾನ್ ಜಯರಾಜ್
ಡಾನ್ ಬಂಗಲೆಗಾಗಿ ಕುಟುಂಬದಲ್ಲಿಯೇ ಜಂಗಿ ಕುಸ್ತಿ
ಜಯರಾಜ್ ಕುಟುಂಬಸ್ಥರು ಠಾಣೆಯ ಮೆಟ್ಟಿಲೇರಿದ್ದೇಕೆ?

ಜಯರಾಜ್ ಡಾನ್ ಆಗಿ ಮೆರೆಯುತ್ತಿದ್ದ ಜಮಾನದಲ್ಲಿ ಜಯರಾಜ್ ಹವಾ ಹೇಗಿತ್ತು ಎಂಬುದನ್ನು ಇಡೀ ಬೆಂಗಳೂರು ಭೂಗತ ಜಗತ್ತೆ ಕಣ್ಣಾರೆ ಕಂಡಿತ್ತು. ಮಾರ್ವಾಡಿಗಳನ್ನು ಕಂಡ್ರೆ ಪೊರೆಬಿಟ್ಟ ಹಾವಿನಂತೆ ಬುಸುಗುಡುತ್ತಿದ್ದ ಜಯರಾಜ್ ,ಮಾರ್ವಾಡಿಗಳ ಅಧೀನದಲ್ಲಿದ್ದ ಅದೆಷ್ಟೋ ಬಡವರ ತಾಳಿಗಳನ್ನು ಬಿಡಿಸಿಕೊಟ್ಟಿದ್ರು. ಅಂದು ನಗರದಲ್ಲಿ ಆಸ್ತಿ ಕಲಹವೇನಿದ್ರೂ ಇದೇ ಜಯರಾಜ್ ತನ್ನ ಬಂಗಲೆಯಲ್ಲಿ ಕೂತು ರಾಜಿ ಪಂಚಾಯಿತಿ ಮಾಡ್ತಿದ್ದ. ಯಾವ ಬಂಗಲೆಯಲ್ಲಿ ಕೂತು ಜಯರಾಜ್ ಇತರರ ಸಮಸ್ಯೆಗಳನ್ನ ರಾಜಿ ಪಂಜಾಯಿತಿ ಮೂಲಕ ಬಗೆ ಹರಿಸುತ್ತಿದ್ನೋ, ಇಂದು ಅದೇ ಬಂಗಲೆಗಾಗಿ ಜಯರಾಜ್ ಕುಟುಂಬಸ್ಥರು ಪರಸ್ಪರ ಜಂಗಿ ಕುಸ್ತಿ ಶುರುಮಾಡ್ಕೊಂಡಿದ್ದಾರೆ.

ಬಂಗಲೆಗಾಗಿ ಜಿದ್ದಿಗೆ ಬಿದ್ದ ಜಯರಾಜ್ ಕುಟುಂಬಸ್ಥರು
ಚಿಕಪ್ಪನ ವಿರುದ್ಧ ಜಯರಾಜ್ ಪುತ್ರ ದೂರು ಕೊಟ್ಟಿದ್ದೇಕೆ?

ಬೆಂಗಳೂರಿನ ಡಾನ್ ಆಗಿ ಮೆರೆದಿದ್ದ ಜಯರಾಜ್ ಆಸ್ತಿ ವಿಚಾರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತನ್ನ ತಂದೆಯ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟಕ್ಕೆ ಯತ್ನ ನಡೆಸಿದ್ದಾರೆ ಎಂದು ಜಯರಾಜ್ ಪುತ್ರ ಅಜಿತ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಲ್ಸನ್ ಗಾರ್ಡನ್​​ನಲ್ಲಿದ್ದ ನಮ್ಮ ತಂದೆ ಹೆಸರಿನಲ್ಲಿದ್ದ ಮನೆಗೆ ತನ್ನ ಚಿಕ್ಕಪ್ಪ ರಮೇಶ್ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು ಅಜಿತ್ ಜಯರಾಜ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

1980ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿರುವ ಡಾನ್ ಜಯರಾಜ್ ಭವ್ಯ ಬಂಗಲೆಯನ್ನು ಕಟ್ಟಿಸಿದ್ದ. ಇದೀಗ ಇದೇ ಬಂಗಲೆಗಾಗಿ ಜಯರಾನ್ ಕುಟುಂಬಸ್ಥರ ನಡುವೆ ಜಂಗಿ ಕುಸ್ತಿ ಶುರುವಾಗಿದೆ.
ನಾನು ಜಯರಾಜ್ ರ ಒಬ್ಬನೆ ಮಗ . ಜಯರಾಜ್ ನ ಈ ಆಸ್ತಿ ನನಗೆ ಸೇರಬೇಕು. ಆದ್ರೇ ನನ್ನ ತಂದೆ ಹೆಸರಿನಲ್ಲಿದ್ದ ಕೆಲವು ದಾಖಲೆಗಳನ್ನು ಚಿಕ್ಕಪ್ಪ ಬೋಗಸ್ ಮಾಡಿದ್ದಾರೆ. ಹಾಗಾಗಿ ಕಾನೂನು ರೀತಿ ಕ್ರಮ ಕೈಗೊಂಡುನಮಗೆ ಬಂಗಲೆ ಬಿಡಿಸಿಕೊಡಬೇಕು.
-ಅಜಿತ್ ಜಯರಾಜ್, ಜಯರಾಜ್ ಪುತ್ರ

ನಾನು ಜಯರಾಜ್​​ಗೆ ಒಬ್ಬನೇ ಮಗ. ಆದ್ದರಿಂದ ಈ ಬಂಗಲೆ ನನ್ನ ಪಾಲಾಗಬೇಕು. ಆದ್ರೆ ಚಿಕ್ಕಪ್ಪ ಮಾತ್ರ ಬೋಗಸ್ ಮಾಡಿ ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ಕಾನೂನು ಕ್ರಮಕೈಗೊಂಡು ಚಿಕ್ಕಪ್ಪನ ಕಪಿಮುಷ್ಠಿಯಿಂದ ಬಂಗಲೆಯನ್ನು ಬಿಡಿಸಿಕೊಡಬೇಕೆಂದು ಜಯರಾಜ್ ಪುತ್ರ ಇದೀಗ ವಿಲ್ಸನ್ ಗಾರ್ಡನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಅಜಿತ್ ವಿರುದ್ಧ ಸಿಡಿದು ನಿಂತ್ರಾ ಜಯರಾಜ್ ಸಹೋದರಿ?
ಅಣ್ಣನಿಗೂ-ಅಜಿತ್ ಗೂ ಸಂಬಂಧವಿಲ್ಲದೆಂದಿದ್ದೇಕೆ ಹೇಮಾವತಿ?

ನಮ್ಮ ಅಣ್ಣನಿಗೂ ಈ ಅಜೀತ್ಗು ಯಾವುದೆ ಸಂಬಂಧವಿಲ್ಲ. ಅಜಿತ್ ತಾಯಿ ಕಾನೂನಾತ್ಮಕವಾಗಿ ಜಯರಾಜ್ರನ್ನು ಮದುವೆಯಾಗಿಲ್ಲ. ಜಯರಾಜ್ ರವರು 1988 ರಲ್ಲಿ ಗಾಯಿತ್ರಿ ಎಂಬುವವರನ್ನು ಮದುವೆಯಾಗಿದ್ರು. ಇದಕ್ಕೆ ದಾಖಲೆಯಿದೆ. ಆದ್ರೆ ಅವರಿಗೆ ಮಕ್ಕಳಿಲ್ಲದ ಕಾರಣ ಮೈಸೂರಿನಲ್ಲಿದ್ದಾರೆ. ಅಜೀತ್ ಅವರ ಆರೋಪಕ್ಕೂ ನಮಗು ಸಂಬಂಧವಿಲ್ಲ
-ಹೇಮಾವತಿ-ಜಯರಾಜ್ ಸಹೋದರಿ

ಅಜಿತ್ ವಿರುದ್ಧ ಚಿಕ್ಕಪ್ಪ ಕೌಂಟರ್ ದೂರು
ನಮ್ಮ ತಂದೆ ಮನೆಯಲ್ಲಿ ನನಗೆ ಭಾಗ ಕೊಡ್ತಿಲ್ಲ ಅಂತಾ ಜಯರಾಜ್ ಪುತ್ರ ಅಜಿತ್ ಜಯರಾಜ್, ಚಿಕ್ಕಪ್ಪ ರಮೇಶ್ ವಿರುದ್ದ ಆರೋಪ ಮಾಡ್ತಿದ್ರೆ, ಮನೆ ಹತ್ರ ಬಂದು ಗಲಾಟೆ ಮಾಡ್ತಾರೆ ಅಂತಾ ಜಯರಾಜ್ ಸಹೋದರ ರಮೇಶ್ ಆರೋಪಿಸಿದ್ದಾರೆ‌‌. ಹೀಗೆ ಆರೋಪ ಪ್ರತ್ಯಾರೋಪಗಳ ನಡವೆ ಈಗ ಒಂದು ಮನೆಗೋಸ್ಕರ ಇಬ್ಬರ ಜಗಳ ಕೈ ಕೈ ಮಿಲಾಯಿಸೋ ಹಂತಕ್ಕೆ ಬಂದಿದ್ದಲ್ಲದೇ ಈಗ ಪೊಲೀಸ್ ಠಾಣೆ ಮೆಟ್ಟಿಲೂ ಹತ್ತಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ದೂರು ಪ್ರತಿದೂರು
ಅಜಿತ್ ಜಯರಾಜ್ ಹಾಗೂ ರಮೇಶ್ ಇಬ್ಬರು ದೂರು ದಾಖಲು ಮಾಡಿದ್ದಾರೆ. ಜಯರಾಜ್ ಆಸ್ತಿ ವಿಚಾರ ಈಗಾಗಲೇ ಕೋರ್ಟ್ ನಲ್ಲಿ ವಿಚಾರಣೆಯ ಹಂತ್ತದಲ್ಲಿದೆ. ಆದ್ದರಿಂದ ಈ ಆಸ್ತಿ ಸಮಸ್ಯೆಯನ್ನು ಕೋರ್ಟ್ ನಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಇಬ್ಬರಿಗೂ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಯಾರ ಹೆಸರು ಕೇಳಿದ್ರೆ ಇಡೀ ಭೂಗತ ಜಗತ್ತೇ ಅಲ್ಲೋಲ ಕಲ್ಲೋಲಗೊಳ್ತಿತ್ತೋ, ಇಂದು ಅದೇ ಜಯರಾಜ್ ಕುಟುಂಬಸ್ಥರು ಆಸ್ತಿಗಾಗಿ ಠಾಣೆಯ ಮೆಟ್ಟಿಲೇರಿ ಬೀದಿ ರಂಪಾ ಹಾದಿ ರಂಪಾಟ ಮಾಡುತ್ತಿದ್ಧಾರೆ. ಅವರ ಆಸ್ತಿಯ ವಿಚಾರ ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂದೆ ಇದು ಇನ್ಯಾವ ದಿಕ್ಕಿನತ್ತ ಮುಖ ಮಾಡುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.

The post ಡಾನ್ ಜಯರಾಜ್ ಕುಟುಂಬದಲ್ಲಿ ಗಲಾಟೆ; ಠಾಣೆಯ ಮೆಟ್ಟಿಲೇರಿದ ಆಸ್ತಿ ವಿಚಾರ appeared first on News First Kannada.

Source: newsfirstlive.com

Source link