ಕನ್ನಡ ಕಂಠೀರವ ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಇನ್ನು ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ನಡುವೆ ಡಾ.ರಾಜ್ ಕುಟುಂಬಸ್ಥರನ್ನು ಭೇಟಿ ಮಾಡಿ ಹಲವು ಗಣ್ಯರು ತಮ್ಮ ಸಂತಾಪವನ್ನು ಸೂಚಿಸುತ್ತಿದ್ದಾರೆ. ಈ ನಡುವೆ ಇಂದು ತಮಿಳು ಸ್ಟಾರ್ ನಟ ಸೂರ್ಯ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ ಕುಟುಂಬದೊಂದಿಗೆ ಅವರ ಕುಟುಂಬವೊಂದಿದ್ದ ಬಾಂಧವ್ಯದ ಬಗ್ಗೆಯೂ ಅಚ್ಚರಿಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಪುನೀತ್ ಸಮಾಧಿಗೆ ಹೂವಿನ ಮಾಲೆ ಅರ್ಪಿಸಿ ನಮನ ಸಲ್ಲಿಸಿದ ಸೂರ್ಯ, ಭಾವುಕರಾಗಿ ಕಣ್ಣೀರಿಟ್ಟಿದ್ದರು. ನಮ್ಮ ತಂದೆ-ತಾಯಿ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ನೋವಿನಿಂದ ಇನ್ನು ಹೊರ ಬಂದಿಲ್ಲ. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಕುಟುಂಬವು ತುಂಬಾ ಒಡನಾಟವಿತ್ತು. ಅಣ್ಣಾವ್ರು ನನಗೆ ಮಾದರಿಯಾಗಿದ್ರು. ನಾನು ನನ್ನ ತಾಯಿ ಹೊಟ್ಟೆಯಲ್ಲಿ 4 ತಿಂಗಳ ಶಿಶುವಾಗಿದ್ದಾಗ ಅಪ್ಪು ಕೂಡ ಅಮ್ಮನ ಹೊಟ್ಟೆಯಲ್ಲಿ 7 ತಿಂಗಳ ಮಗುವಾಗಿದ್ದರು. ಆ ವೇಳೆ ಮೊದಲ ಬಾರಿಗೆ ಪುನೀತ್ ನನ್ನು ಭೇಟಿ ಮಾಡಿದ್ದೆ, ಅಲ್ಲದೇ ಕೊನೆ ಉಸಿರಿರೋವರೆಗೂ ನಮ್ಮ ಸ್ನೇಹವಿತ್ತು. ಪುನೀತ್ ಅಗಲಿಕೆಯಿಂದ ನಮ್ಮ ಕುಟುಂಬಕ್ಕೂ ನೋವಾಗಿದೆ. ನಮ್ಮ ತಂದೆ ತಾಯಿ ಇನ್ನು ಆ ನೋವಿನಿಂದ ಹೊರಬಂದಿಲ್ಲ. ನಮ್ಮ ಹೃದಯಗಳಲ್ಲಿ ಅಪ್ಪು ಯಾವಾಗಲೂ ನಗುತ್ತಲೇ ಇರ್ತಾರೆ ಎಂದು ಡಾ. ರಾಜ್ಕುಮಾರ್ ಕುಟುಂಬದೊಂದಿಗೆ ಇದ್ದ ಬಾಂಧವ್ಯವನ್ನು ಸೂರ್ಯ ಹಂಚಿಕೊಂಡಿದ್ದಾರೆ.
ಅಂದಹಾಗೇ, ಸೂರ್ಯ ಅವರ ತಂದೆ ಶಿವಕುಮಾರ್ (ಪಳನಿಸ್ವಾಮಿ) ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದರು. ಸುಮಾರು 190ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಪಳನಿಸ್ವಾಮಿ ಎಂದಿದ್ದ ಅವರ ಹೆಸರನ್ನು ಶಿವಕುಮಾರ್ ಎಂದು ಬದಲಿಸಲಾಗಿತ್ತು. ಸಾಕಷ್ಟು ಸಿನಿಮಾಗಳಲ್ಲಿ ಲೀಡ್ ರೋಲ್ಗಳಲ್ಲಿ ನಟಿಸಿದ್ದ ಅವರು ಆ ಬಳಿಕ ಕಿರುತೆರೆಯಲ್ಲೂ ಮಿಂಚಿದ್ದರು. ಇನ್ನು ರಾಜ್ಕುಮಾರ್ ಅವರು ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಸಂದರ್ಭದಲ್ಲಿ ಚೆನ್ನೈನಲ್ಲೇ ವಾಸವಿದ್ದ ಕಾರಣ ರಾಜ್ ಕುಟುಂಬಕ್ಕೆ ತಮಿಳುನಾಡಿನ ಎಲ್ಲಾ ನಟರೊಂದಿಗೂ ಒಡನಾಟವಿತ್ತು.