ಡೆಲ್ಲಿ: ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅವರ ಆಕರ್ಷಕ ಬ್ಯಾಟಿಂಗ್ ನಿಂದಾಗಿ ಮುಂಬೈ 7 ವಿಕೆಟ್‍ಗಳ ಭರ್ಜರಿ ಜಯ ಗಳಿಸಿದೆ.

ರಾಜಸ್ಥಾನ ತಂಡ ನೀಡಿದ 172ರನ್‍ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡ 18.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಇನ್ನೂ 9 ಎಸೆತ ಬಾಕಿ ಇರುವಂತೆ 172 ರನ್ ಸಿಡಿಸುವ ಮೂಲಕ ಜಯ ಗಳಿಸಿತು.

ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಕ್ವಿಂಟನ್ ಡಿಕಾಕ್ 70 ರನ್(50 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ಮುಂಬೈಗೆ ಗೆಲುವು ತಂದುಕೊಟ್ಟರು. ಇವರಿಗೆ ಮಧ್ಯಮಕ್ರಮಾಂಕದಲ್ಲಿ ಉತ್ತಮ ಸಾಥ್ ನೀಡಿದ ಕೃಣಲ್ ಪಾಂಡ್ಯ 39ರನ್ (26 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಕೈರನ್ ಪೊಲಾರ್ಡ್ 16ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಮುಂಬೈಗೆ ಇನ್ನು 9 ಎಸೆತ ಬಾಕಿ ಇರುವಂತೆಯೆ ಜಯ ತಂದುಕೊಟ್ಟರು.

ರಾಜಸ್ಥಾನ್ ಪರ ಕ್ರೀಸ್ ಮೋರಿಸ್ 2 ವಿಕೆಟ್ ಮತ್ತು ಮುಸ್ತುಫಿಜುರ್ ರೆಹಮಾನ್ 1 ವಿಕೆಟ್ ಪಡೆದರು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 66ರನ್(47 ಎಸೆತ)ಗಳ ಭದ್ರ ಬುನಾದಿ ಹಾಕಿಕೊಟ್ಟಿತು. ಜೋಸ್ ಬಟ್ಲರ್ 41ರನ್ (32 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ ಯಶಸ್ವಿ ಜೈಸ್ವಾಲ್ 32ರನ್ (20 ಎಸೆತ, 2ಬೌಂಡರಿ, 2 ಸಿಕ್ಸರ್) ಬಾರಿಸಿ ರಾಹುಲ್ ಚಹರ್‍ ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಪಟಪಟನೆ ಬೌಂಡರಿ ಬಾರಿಸಿ 42ರನ್ ( 27 ಎಸೆತ, 5 ಬೌಂಡರಿ) ಸಿಡಿಸುವ ಮೂಲಕ ಶಿವಂ ದುಬೆ ಜೊತೆ ಮೂರನೇ ವಿಕೆಟ್‍ಗೆ 57ರನ್(49 ಎಸೆತ)ಗಳ ಜೊತೆಯಾಟವಾಡಿ ಮಧ್ಯಮಕ್ರಮಾಂಕದಲ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ 35ರನ್ (31 ಎಸೆತ, 2 ಬೌಂಡರಿ, 2 ಸಿಕ್ಸ್) ಕಾಣಿಕೆ ನೀಡಿದರು. ಅಂತಿಮವಾಗಿ ರಾಜಸ್ಥಾನ ತಂಡ 20 ಓವರ್‍ ಗಳಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಮಾಡಿತು.

ಮುಂಬೈ ಪರ ರಾಹುಲ್ ಚಹರ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.

The post ಡಿಕಾಕ್ ಆಟಕ್ಕೆ ರಾಯಲ್ಸ್ ಶರಣು – ಮುಂಬೈಗೆ 7 ವಿಕೆಟ್ ಭರ್ಜರಿ ಜಯ appeared first on Public TV.

Source: publictv.in

Source link