ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ‘ಮುಂದಿನ ಸಿಎಂ’ ವಿಚಾರದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್​ನ ಶಿಸ್ತುಪಾಲನಾ ಸಮಿತಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಈ ಬಗ್ಗೆ ಆಗಾಗ ಎಚ್ಚರಿಕೆಯನ್ನ ನೀಡುತ್ತಿದ್ದರೂ, ಕೆಲವ್ರ ಬಾಯಲ್ಲಿ ಮುಂದಿನ ‘ಸಿಎಂ ಸಿದ್ದರಾಮಯ್ಯ’, ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಅನ್ನೋ ಘೋಷಣೆಗಳು ಕೇಳಿ ಬರುತ್ತಲೇ ಇವೆ.

ಯಾಕೆ ಜಮೀರ್ ವಿರುದ್ಧ ಕ್ರಮವಿಲ್ಲ..?
ಶಾಸಕ ಜಮೀರ್ ಅಹಮ್ಮದ್ ಖಾನ್, ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಹೋದಲೆಲ್ಲಾ ಘೋಷಣೆ ಕೂಗುತ್ತಿದ್ದಾರೆ. ಜಮೀರ್​ ಅವರ ಈ ಘೋಷಣೆ, ಡಿಕೆ ಶಿವಕುಮಾರ್​ ಬೆಂಬಲಿಗರಲ್ಲಿ ತೀವ್ರ ತಳಮಳ ಉಂಟುಮಾಡಿದೆ. ಹೀಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಿ ಅನ್ನೋ ಒತ್ತಾಯಗಳು ಕೇಳಿಬಂದರೂ, ಜಮೀರ್ ಅಹಮ್ಮದ್ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಇದು ಯಾಕೆ ಅನ್ನೋದು ಕಾಂಗ್ರೆಸ್​ ವಲಯದಲ್ಲಿ ಕೇಳಿ ಬರುತ್ತಿರುವ ಸದ್ಯದ ಪ್ರಶ್ನೆ.

ಎಚ್ಚರಿಕೆಗೆ ಕ್ಯಾರೆ ಎನ್ನದ ಜಮೀರ್
ಕಾಂಗ್ರೆಸ್​ನಲ್ಲಿ ಜಮೀರ್ ಅಹಮ್ಮದ್ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದಾದ್ರೂ ಯಾಕೆ ಎಂಬ ಚರ್ಚೆ ಶುರುವಾಗಿದೆ. ಜಮೀರ್ ಹಲವು ತಿಂಗಳುಗಳಿಂದ ಪದೇ ಪದೇ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೇ ಹೇಳಿಕೆ ಕೊಡುತ್ತಿದ್ದಾರೆ.

ಆದರೆ ಜಮೀರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ತಿಲ್ಲ. ಅವರ ಜಾಗದಲ್ಲಿ ಬೇರೆ ಯಾರೇ ಇದ್ದಿದ್ರೂ ತಕ್ಷಣವೇ ಕ್ರಮ ಜರುಗಿಸುತ್ತಿದ್ದರು. ‌ಜಮೀರ್ ವಿಚಾರದಲ್ಲಿ ಮಾತ್ರ ಕ್ರಮಕ್ಕೆ ಹಿಂದೇಟು ಯಾಕೆ? ಅನ್ನೋ ಚರ್ಚೆಗಳು ಶುರುವಾಗಿವೆ. ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಎಂಬ ಕಾರಣಕ್ಕೆ ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರಾ? ಇಲ್ಲವೇ ಶಿಸ್ತುಸಮಿತಿ ಸಭೆ ಸೇರದ ಕಾರಣ ಕ್ರಮ ಸಾಧ್ಯವಾಗಿಲ್ಲವಾ? ಎಂಬ ಪ್ರಶ್ನೆಯನ್ನ ಕೆಲವು ನಾಯಕರು ಮಾಡಿದ್ದಾರೆ.

ಯಾಕೆ ನೋಟಿಸ್ ನೀಡಿಲ್ಲ?
ಸದ್ಯ ಶಿಸ್ತು ಸಮಿತಿಗೆ ರೆಹಮಾನ್ ಖಾನ್ ಅಧ್ಯಕ್ಷರಾಗಿದ್ದಾರೆ. ಕೊರೊನಾ ಕಾರಣ ಹಲವು ತಿಂಗಳಾದ್ರೂ ಇನ್ನೂ ಸಭೆ ಸೇರಲು ಆಗಲಿಲ್ಲ. ಹೀಗಾಗಿಯೇ ಜಮೀರ್​ಗೆ ನೋಟಿಸ್ ನೀಡಲು ಅಸಾಧ್ಯವಾಗುತ್ತಿದೆಯಾ? ಈ ಹಿಂದೆ ಪಕ್ಷ ವಿರೋಧಿ‌ ಚಟುವಟಿಕೆ ಆರೋಪದ ಮೇಲೆ‌ ಹಲವರಿಗೆ ನೋಟಿಸ್ ನೀಡಲಾಗಿತ್ತು. ಮಾಜಿ ಶಾಸಕ ರಾಜಣ್ಣಗೆ ನೋಟಿಸ್‌ ನೀಡುವಂತೆ ರಾಜ್ಯ ಶಿಸ್ತುಸಮಿತಿ ಶಿಫಾರಸು ಮಾಡಿತ್ತು. ಅಷ್ಟೇ ಏಕೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿರುದ್ಧ ಕ್ರಮಕ್ಕೂ ಶಿಫಾರಸು ಮಾಡಲಾಗಿತ್ತು. ಅದರಂತೆ ಏಳು ದಿನಗಳೊಳಗೆ ಉತ್ತರಿಸುವಂತೆ‌ ನೋಟಿಸ್ ನೀಡಲಾಗಿತ್ತು. ಆದರೆ, ಜಮೀರ್‌ ಅಹಮ್ಮದ್ ವಿಚಾರದಲ್ಲಿ ಮಾತ್ರ ನಾಯಕರು ನೋಟಿಸ್ ನೀಡದಿರೋದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

The post ಡಿಕೆಎಸ್​ ಬೆಂಬಲಿಗರ ಪಾಲಿಗೆ ವಿಲನ್ ಆದ ಜಮೀರ್.. ಆದರೂ ಕ್ರಮವಿಲ್ಲ ಯಾಕೆ? appeared first on News First Kannada.

Source: newsfirstlive.com

Source link