ಮೈಸೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ಉಸ್ತುವಾರಿ ಸಚಿವ ಎಸ್.​​ಟಿ ಸೋಮಶೇಖರ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಕ್ಸಿಜನ್ ಕಿತ್ತಾಟ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

ಉಸ್ತುವಾರಿ ಸಭೆಯಲ್ಲಿ ಸಚಿವರೊಂದಿಗೆ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾಜಿ ಜಿಲ್ಲಾಧಿಕಾರಿ ಡಿಕೆ ರವಿ ಅವರ ಹೆಸರು ತೆಗೆದ ಶಾಸಕ ಸಾ.ರಾ. ಮಹೇಶ್​​, ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ಸಾರಾ ಮಹೇಶ್ ಮತ್ತು ಜಿ.ಟಿ ದೇವೇಗೌಡರ ನಡುವೆಯೂ ಮಾತಿನ ಜಟಾಪಟಿ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ನಡೆದಿದ್ದೇನು ಎಂಬ ಮಾಹಿತಿ ನ್ಯೂಸ್​ಫಸ್ಟ್​​​​ಗೆ ಲಭಿಸಿದೆ.

ಸಭೆಯಲ್ಲಿ ನಡೆದಿದ್ದೇನು..?
ಸಾ.ರಾ.ಮಹೇಶ್ – ರೋಹಿಣಿ ಸಿಂಧೂರಿ DC ಆಗಿ ಇಲ್ಲಿ ಮುಂದುವರಿದರೆ ಡಿ.ಕೆ.ರವಿಗೆ ಆದ ಕಥೆನೇ ಮೈಸೂರಿನ ಜನರಿಗೆ ಆಗಲಿದೆ. ಚಾಮರಾಜ ನಗರ ದುರಂತದ ಹಿನ್ನಲೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಡಿ ಸಿ ರೋಹಿಣಿ ಸಿಂಧೂರಿಯೇ ಕಾರಣ. ಇವರನ್ನು ಒಂದೋ ಅಮಾನತು ಮಾಡಬೇಕು ಇಲ್ಲ ಒಂದೋ ಕೆಲಸದಿಂದ ವಜಾ ಮಾಡಬೇಕು.

ಜಿ.ಟಿ ದೇವೇಗೌಡ – ರ್ರೀ ಏನ್ರಿ ಮಾತಾಡ್ತಾ ಇದ್ದೀರಾ ? ಒಬ್ಬ ಸರ್ಕಾರಿ ಅಧಿಕಾರಿ ಮೇಲೆ ಹೀಗೆಲ್ಲ ಅವಹೇಳನ ಮಾಡೋದು ಸರಿಯಲ್ಲ. ಏನ್ ಮಾತಾಡ್ತಾ ಇದ್ದೀರಾ ನೀವು?

ಸಂಸದ ಶ್ರೀನಿವಾಸ್ ಪ್ರಸಾದ್, ಚಾಮರಾಜನಗರ – ಈ ಡಿಸಿಗೆ ಕೊಡು ಕೊಳ್ಳುವಿಕೆ ಏನೂ ಗೊತ್ತಿಲ್ಲ. ಪಕ್ಕದ ಜಿಲ್ಲೆಯ ಜನ ಸಾಯ್ತಾ ಇದ್ರೂ ಸಹಾಯ ಮಾಡಿಲ್ಲ. ಆಕ್ಸಿಜನ್ ತಗೋಳ್ಳೋಕೆ ಬೆಳಗ್ಗೆ 9:30 ಗೆ ಲಾರಿ ಚಾಮರಾಜನಗರದಿಂದ ಬಂದಿದೆ. ಮೈಸೂರಿನಿಂದ ರಾತ್ರಿ 12:30ಗೆ ಆಕ್ಸಿಜನ್ ಪೂರೈಸಲಾಗಿದೆ.

ಪ್ರತಾಪ್ ಸಿಂಹ– ಇಲ್ಲ. ಇದು ಸುಳ್ಳು. ಮೈಸೂರು ಡಿಸಿ ಗೆ ಯಾವುದೇ ಈ ತರದ ರಿಕ್ವೆಸ್ಟ್​ ಬಂದಿಲ್ಲ.

ಸಾ ರಾ ಮಹೇಶ್ – ರ್ರೀ ನಿವ್ಯಾಕೆ ಮಾತಾಡ್ತೀರಿ ಡಿ ಸಿ ಪರವಾಗಿ. ನಿವ್ಯಾಕೆ ಉತ್ತರ ಕೊಡ್ತೀರಿ. ಅವರೇ ಕೊಡಲಿ. ನಿವ್ಯಾಕೆ ಮಾತಾಡ್ತೀರಿ..

ರೋಹಿಣಿ ಸಿಂಧೂರಿ– ಸರಿ ನನಗೆ ಚಾಮರಾಜ ನಗರದಿಂದ ಆಕ್ಸಿಜನ್​ ರಿಕ್ವೆಸ್ಟ್​ ಬಂದಿಲ್ಲ. ಚಾಮರಾಜನಗರ ಡಿಸಿ ಅವರು ಮೈಸೂರಿನ ಖಾಸಗಿಯವರಿಂದ ತೋರಿಸಿಕೊಳ್ಳುತ್ತಿದ್ದರು. ನಾನು ಎಂದೂ ಮಧ್ಯ ಪ್ರವೇಶನೇ ಮಾಡಿಲ್ಲ. ಅವರಿಗೆ ಯಾವಾಗ್ ಯಾವಾಗ ಬೇಕೋ ಆವಾಗ ಆಕ್ಸಿಜನ್ ತರಿಸಿಕೊಂಡಿದ್ದಾರೆ. ನನ್ನ ಯಾವ ರೋಲ್ ಸಹ ಇಲ್ಲ ಸರ್.

ಎಸ್​​.ಟಿ ಸೋಮಶೇಖರ್​​ – ನೋಡಿ ಪ್ರಕರಣ ವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ಯಾರೇ ತಪ್ಪಿತಸ್ತರಿದ್ದರೂ ಕ್ರಮ ಕೈಗೊಳ್ತೇವೆ. ಈ ಪ್ರಕರಣದಲ್ಲಿ ನಿರ್ಲಕ್ಷಿಸಿ ನಿರ್ಲಕ್ಷವಹಿಸಿದವರನ್ನು ಸುಮ್ಮನೆ ಬಿಡೋ ಪ್ರಶ್ನೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದರು.

The post ಡಿಕೆ ರವಿಗೆ ಆದ ಗತಿಯೇ ಮೈಸೂರಿಗೂ ಆಗುತ್ತೆ ಎಂದ ಸಾರಾ ಮಹೇಶ್​ appeared first on News First Kannada.

Source: newsfirstlive.com

Source link