ಡಿಜಿಟಲ್ ಸುದ್ದಿಗಳಿಗೆ ಟೆಕ್ ಕಂಪನಿಗಳಿಂದ ಹಣ ಪಾವತಿ; ಆಸ್ಟ್ರೇಲಿಯಾ ಮಾದರಿ ಕಾನೂನಿಗೆ ಡಿಜಿಟಲ್ ಸುದ್ದಿ ಪ್ರಕಾಶಕರ ಆಗ್ರಹ – Digital News Publishers’ Association urged Indian Government to make Policiy to make payment for Digital news from Big Tech companies like Australian News Media Bargaining Code


ಡಿಜಿಟಲ್ ಪ್ರಕಾಶಕರ ಸುದ್ದಿಗಳಿಗೆ, ಅವುಗಳನ್ನು ತಮ್ಮ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಪ್ರದರ್ಶಿಸುವ ಕಂಪನಿಗಳು ಹಣ ಪಾವತಿಸುವಂತೆ ಮಾಡುವ ‘ನ್ಯೂಸ್ ಮೀಡಿಯಾ ಮ್ಯಾಂಡೆಟರಿ ಬಾರ್ಗೇನಿಂಗ್ ಕೋಡ್’ ಅನ್ನು ಆಸ್ಟ್ರೇಲಿಯಾ ಸರ್ಕಾರ ರೂಪಿಸಿದ್ದು, 2021ರಲ್ಲಿ ಅನುಷ್ಠಾನಗೊಂಡಿತ್ತು. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಕಾನೂನು ರೂಪಿಸಬೇಕು ಎಂದು ಡಿಎನ್​ಪಿಎ ಒತ್ತಾಯಿಸಿದೆ.

ಡಿಜಿಟಲ್ ಸುದ್ದಿಗಳಿಗೆ ಟೆಕ್ ಕಂಪನಿಗಳಿಂದ ಹಣ ಪಾವತಿ; ಆಸ್ಟ್ರೇಲಿಯಾ ಮಾದರಿ ಕಾನೂನಿಗೆ ಡಿಜಿಟಲ್ ಸುದ್ದಿ ಪ್ರಕಾಶಕರ ಆಗ್ರಹ

ಸಾಂದರ್ಭಿಕ ಚಿತ್ರ

ನವದೆಹಲಿ: ಡಿಜಿಟಲ್ ಪ್ರಕಾಶಕರು ಪ್ರಕಟಿಸುವ (Digital News Publishers) ಸುದ್ದಿಗಳಿಗೆ ದೊಡ್ಡ ತಂತ್ರಜ್ಞಾನ ಕಂಪನಿಗಳು (Tech Companies) ಸಮಾನವಾಗಿ ಹಣ ಪಾವತಿ ಮಾಡುವಂತೆ ಆಸ್ಟ್ರೇಲಿಯಾ ಮಾದರಿಯ ಕಾನೂನನ್ನು ಭಾರತದಲ್ಲಿಯೂ ರೂಪಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಈ ಕುರಿತು ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಡಿಜಿಟಲ್ ಸುದ್ದಿ ಪ್ರಕಾಶಕರ ಸಮಿತಿಯ (DNPA) ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದು ಸಮಿತಿಯ ವಕ್ತಾರರು ತಿಳಿಸಿದ್ದಾರೆ. ಸಮಿತಿಯು ದೇಶದ 17 ಪ್ರತಿಷ್ಠಿತ ಸುದ್ದಿ ಪ್ರಕಾಶಕರನ್ನು ಒಳಗೊಂಡಿದೆ.

ಡಿಜಿಟಲ್ ಪ್ರಕಾಶಕರ ಸುದ್ದಿಗಳಿಗೆ, ಅವುಗಳನ್ನು ತಮ್ಮ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಪ್ರದರ್ಶಿಸುವ ಕಂಪನಿಗಳು ಹಣ ಪಾವತಿಸುವಂತೆ ಮಾಡುವ ‘ನ್ಯೂಸ್ ಮೀಡಿಯಾ ಮ್ಯಾಂಡೆಟರಿ ಬಾರ್ಗೇನಿಂಗ್ ಕೋಡ್’ ಅನ್ನು ಆಸ್ಟ್ರೇಲಿಯಾ ಸರ್ಕಾರ 2020ರಲ್ಲಿ ರೂಪಿಸಿತ್ತು. ಇದು 2021ರಿಂದ ಅನುಷ್ಠಾನಕ್ಕೆ ಬಂದಿತ್ತು. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಕಾನೂನು ರೂಪಿಸಬೇಕು ಎಂದು ಡಿಎನ್​ಪಿಎ ಒತ್ತಾಯಿಸಿದೆ. ಡಿಎನ್​ಪಿಎ ಮುಂದಿನ ಸಭೆ ಡಿಸೆಂಬರ್ 9ಕ್ಕೆ ನಡೆಯಲಿದೆ.

ಡಿಎನ್​ಪಿಎ ಸಭೆಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಅರ್ಥಶಾಸ್ತ್ರಜ್ಞ, ‘ನ್ಯೂಸ್ ಮೀಡಿಯಾ ಮ್ಯಾಂಡೆಟರಿ ಬಾರ್ಗೇನಿಂಗ್ ಕೋಡ್’ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಡ್ ಸಿಮ್ಸ್, ಭಾರತವೂ ಆಸ್ಟ್ರೇಲಿಯಾ ಹಾದಿಯನ್ನು ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಮಾತುಕತೆಗಳು ನಿಜಕ್ಕೂ ಅಗತ್ಯ. ಒಂದು ವೇಳೆ ಮಾತುಕತೆಗಳು ಫಲಪ್ರದವಾಗದಿದ್ದಲ್ಲಿ ‘ಬಾರ್ಗೇನಿಂಗ್ ಕೋಡ್’ ಪ್ರಯೋಜನಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಆದಾಯ ಹಂಚಿಕೆ ಮತ್ತು ಪಾರದರ್ಶಕತೆಯ ವಿಷಯಗಳಲ್ಲಿ ಟೆಕ್ ಕಂಪನಿಗಳು ಮತ್ತು ಸುದ್ದಿ ಪ್ರಕಾಶಕರ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಲ್ಲಿ ನಿಯಂತ್ರಕರ ಪಾತ್ರ ಪ್ರಮುಖವಾದದ್ದು ಎಂದು ಸಭೆಯಲ್ಲಿ ಪ್ರತಿಪಾದಿಸಲಾಗಿದೆ.

ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ತಂತ್ರಜ್ಞಾನ ಕಂಪನಿಗಳ ನಡುವಣ ಆದಾಯ ಹಂಚಿಕೆ ಚೌಕಾಸಿಗೆ ಸಂಬಂಧಿಸಿ ಕಾನೂನು ರೂಪಿಸುವಂತೆ ಹಲವು ಸಮಯಗಳಿಂದ ಆಸ್ಟ್ರೇಲಿಯಾದಲ್ಲಿ ಒತ್ತಾಯ ಕೇಳಿಬಂದಿತ್ತು. ಕೊನೆಗೂ ಮಣಿದಿದ್ದ ಅಲ್ಲಿನ ಸರ್ಕಾರ ಫೇಸ್‌ಬುಕ್ ನ್ಯೂಸ್‌ಫೀಡ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ನ್ಯೂಸ್ ಟ್ಯಾಬ್, ಗೂಗಲ್ ಸರ್ಚ್, ಗೂಗಲ್ ನ್ಯೂಸ್ ಮತ್ತು ಗೂಗಲ್ ಡಿಸ್ಕವರ್‌ ಪ್ಲಾಟ್‌ಫಾರಂಗಳಿಗೆ ಅನ್ವಯವಾಗುವಂತೆ ‘ಬಾರ್ಗೇನಿಂಗ್ ಕೋಡ್’ ನಿಯಮ ರೂಪಿಸಿತ್ತು. ಯುರೋಪ್ ಒಕ್ಕೂಟ ಕೂಡ ಈ ನಿಟ್ಟಿನಲ್ಲಿ ಹಿಂದೆಯೇ ಕಾನೂನು ರೂಪಿಸಿತ್ತು.

ಇದೇ ಮೊದಲಲ್ಲ

ಭಾರತದಲ್ಲಿ ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಟೆಕ್ ಕಂಪನಿಗಳ ನಡುವಣ ವರಮಾನ ಹಂಚಿಕೆ ವಿಚಾರವಾಗಿ ಕಾನೂನು ರೂಪಿಸಬೇಕೆಂಬ ಆಗ್ರಹ 2020ರಿಂದಲೂ ವ್ಯಕ್ತವಾಗುತ್ತಿದೆ. ಡಿಜಿಟಲ್ ಸುದ್ದಿ ಪ್ರಕಾಶಕರ ಜತೆ ಕೆಲವು ರಾಜಕೀಯ ಮುಖಂಡರೂ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಟೆಕ್ ಕಂಪನಿಗಳು ಸ್ಥಳೀಯ ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ಹಣ ಪಾವತಿಸುವಂತೆ ಮಾಡಲು ಕಾನೂನು ರೂಪಿಸಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ 2021ರಲ್ಲಿ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *