– ಒಂದೇ ದಿನದಲ್ಲಿ 30 ವೆಂಟಿಲೇಟರ್‌ಗಳ ರವಾನೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ನೀಡಿದ್ದ ಭರವಸೆಯಂತೆ ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರಕಾರ ಹೆಚ್ಚುವರಿಯಾಗಿ 10 ಕೋಟಿ ರೂ.ಗಳನ್ನು ಹಾಸನ ಜಿಲ್ಲೆಗೆ ಬಿಡುಗಡೆ ಮಾಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಶನಿವಾರ ಹಾಸನ ಜಿಲ್ಲೆಗೆ ಭೇಟಿ ನೀಡಿ ಕೋವಿಡ್ ಸ್ಥಿತಿ ಪರಿಶೀಲನೆ ನಡೆಸಿದ ವೇಳೆ ಜಿಲ್ಲಾಧಿಕಾರಿಗಳು ಹೆಚ್ಚುವರಿ ಬೆಡ್, ಔಷಧಿ ಖರೀದಿ ಹಾಗೂ ಖಾಸಗಿ ಲ್ಯಾಬ್‍ಗಳಲ್ಲಿ ಕೋವಿಡ್ ಸ್ಯಾಂಪಲ್ ಪರೀಕ್ಷೆಗೆ ಹಣಕಾಸು ಕೊರತೆ ಇದೆ ಎಂದು ತಿಳಿಸಿದರು. ಸೋಮವಾರ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಸೋಮವಾರ ಮಧ್ಯಾಹ್ನದ ಒಳಗಾಗಿಯೇ 10 ಕೋಟಿ ರೂ.ಗಳನ್ನು ಹಾಸನ ಜಿಲ್ಲೆಗೆ ಮಂಜೂರು ಮಾಡಲಾಗಿದೆ ಎಂದರು.

ಎರಡನೇ ಅಲೆಯನ್ನು ಎದುರಿಸಲು ಮೊದಲ ಹಂತದಲ್ಲೇ ಹಾಸನಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 10 ಕೋಟಿ ರೂ. ನೀಡಲಾಗಿತ್ತು. ಈಗ ಹೆಚ್ಚುವರಿಯಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಂ ಹೇಳಿದರು.

30 ವೆಂಟಿಲೇಟರ್:
ಶನಿವಾರ ಹಾಸನ ಜಿಲ್ಲಾ ಸಭೆಯಲ್ಲಿ 30 ವೆಂಟಿಲೇಟರ್‌ಗಳಿಗೆ ಜಿಲ್ಲಾಡಳಿತ ಮತ್ತು ಚುನಾಯಿತ ಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದ್ದರು. ಅವುಗಳನ್ನು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಹಾಸನಕ್ಕೆ ಕಳಿಸಿಕೊಡಲಾಯಿತು. ಕೋವಿಡ್ ಕೆಲಸದಲ್ಲಿ ರಾಜ್ಯ ಸರಕಾರ ಕ್ಷಿಪ್ರವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಸೋಂಕು ನಿವಾರಣೆ ವಿಷಯದಲ್ಲಿ ಸರಕಾರ ಯಾವುದೇ ಮೀನಾಮೇಷ ಎಣಿಸುವುದಿಲ್ಲ. ಖರ್ಚು ಮಾಡಲು ಹಿಂಜರಿಯುತ್ತಿಲ್ಲ. ಯಾವುದೇ ಸೌಲಭ್ಯ ಬೇಕಿದ್ದರೂ ತಕ್ಷಣವೇ ಒದಗಿಸಲಾಗುತ್ತಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

The post ಡಿಸಿಎಂ ಭರವಸೆಯಂತೆ ಹಾಸನ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ appeared first on Public TV.

Source: publictv.in

Source link