ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್​​ವೊಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹುನಗುಂದದಿಂದ ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಚಿತ್ರದುರ್ಗ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ ಬೈಕ್​​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಬೈಕ್ ಸವಾರ ಕೂಡ್ಲೆಪ್ಪ(58) ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ತಂದ ಕೆಲವೇ ಕ್ಷಣದಲ್ಲಿ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.ಸದ್ಯ ಬಾಗಲಕೋಟೆ ಕುಮಾರೇಶ್ವರ ಶವಗಾರಕ್ಕೆ ಮೃತದೇಹವನ್ನ ಸ್ಥಳಾಂತರ ಮಾಡಲಾಗಿದೆ.

ಮೃತ ಕೂಡ್ಲೆಪ್ಪ ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ಗ್ರಾಮದ ನಿವಾಸಿ. ನಿನ್ನೆ ಸಂಜೆ ಹೊಲಕ್ಕೆ ಹೋಗಿ ವಾಪಸ್ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ. ಕೆಎ-22 ಎಂಸಿ 5151 ನಂಬರಿನ ಕಾರು ಬೈಕ್​ಗೆ ಡಿಕ್ಕಿಯಾಗಿದ್ದು, ಚಿದಾನಂದ ಅವರೇ ಕಾರನ್ನ ಚಾಲನೆ ಮಾಡುತ್ತಿದ್ದರು ಎಂದು ಮೃತನ ಸಂಬಂಧಿಕರು ಹೇಳ್ತಿದ್ದಾರೆ.  ಡಿಕ್ಕಿ ಹೊಡೆದ ನಂತರ ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಸವದಿ ಮಗ ತಮ್ಮ ವಾಹನದ ನಂಬರ್ ಜಖಂಗೊಳಿಸಿ ದಾಖಲಾತಿ ಸಮೇತ ಇನ್ನೊಂದು ವಾಹನದಲ್ಲಿ ಹೊರಡಲು ಮುಂದಾದರು ಎಂದು ಆರೋಪಿಸಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಹುನಗುಂದ ಪೊಲೋಸರು, ಚಿದಾನಂದ ಅವರನ್ನ ಅಲ್ಲಿಂದ ಕಳಿಸಿದ್ದಾರೆಂಬ ಮಾಹಿತಿ ಲ ಭ್ಯವಾಗಿದೆ. ಘಟನೆ ಸಂಬಂಧ ಹುನಗುಂದ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿದಾನಂದರನ್ನ ಬಿಟ್ಟು ಚಾಲಕ ಹನುಮಂತ ಸಿಂಗ್ ಎಂಬುವರ ಮೇಲೆ ದೂರು ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ಚಿದಾನಂದ ಸವದಿ ಹಾಗೂ 12 ಜನ ಎರಡು ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದರು. ಹಂಪಿ, ಹೊಸಪೇಟೆ, ಕೊಪ್ಪಳ, ಅಂಜನಾದ್ರಿ ಬೆಟ್ಟ ಸೇರಿದಂತೆ ರಾಜ್ಯದ ವಿವಿಧ ಕಡೆ ಪ್ರವಾಸ ಮುಗಿಸಿ ವಾಪಸ್ಸು ಬರ್ತಿದ್ದರು ಎನ್ನಲಾಗಿದೆ. ಅಪಘಾತವಾದ ವೇಳೆ ಚಿದಾನಂದ ಸವದಿ, ನಾನು ಡಿಸಿಎಂ ಲಕ್ಷ್ಮಣ ಸವದಿ ಮಗ ಎಂದು ಧಮ್ಕಿ ಹಾಕಿದರು ಎಂದು ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ.

 

The post ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರ್ ಡಿಕ್ಕಿಯಾಗಿ ಅಪಘಾತ.. ಬೈಕ್ ಸವಾರ ಸಾವು appeared first on News First Kannada.

Source: newsfirstlive.com

Source link