ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್​​ ಕಾರ್​​​ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ರೈತ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಪ್ರತ್ಯಕ್ಷದರ್ಶಿ ಹನುಮಂತ ದೊಡ್ಡಮನಿ, ಅಪಘಾತದ ಕಾರಿನಲ್ಲಿ ಇದ್ದದ್ದು ಲಕ್ಷ್ಮಣ ಸವದಿ ಮಗ ಚಿದಾನಂದ್ ಅವರೇ ಎಂದು ಸ್ಪಷ್ಟಪಡಿಸಿದರು.

ನಾನು ಅಪಘಾತ ಸಂಭವಿಸಿದ ರಸ್ತೆ ಬಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಆ್ಯಕ್ಸಿಡೆಂಟ್​​ ಆದ ಕಾರಿನಲ್ಲಿ ಕುಳಿತಿದ್ದವರು ಲಕ್ಷ್ಮಣ ಸವದಿ ಮಗ ಚಿದಾನಂದ್​ ಅವರೇ. ಚಿಂದಾನಂದ್​​​​ ಡ್ರೈವಿಂಗ್​​ ಸೀಟಿನಲ್ಲಿ ಕುಳಿತಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹನುಮಂತ ದೊಡ್ಡಮನಿ ಪುನರುಚ್ಚರಿಸಿದರು.

 

ನಾನು ಸವದಿ ಮಗ ಎಂದ ಚಿಂದಾನಂದ್​​​:

ನನಗೆ ಮೊದಲಿಗೆ ಚಿಂದಾನಂದ್​​ ಲಕ್ಷ್ಮಣ ಸವದಿ ಪುತ್ರ ಎಂದು ಗೊತ್ತಿರಲಿಲ್ಲ. ಅವರೇ ನಾನು ಲಕ್ಷ್ಮಣ ಸವದಿ ಮಗ ಎಂದು ರೇಗಾಡಿದರು. ನಮ್ಮವರು ವಿಡಿಯೋ ಮಾಡಲು ಮುಂದಾದಾಗ ಮೊಬೈಲ್​​ ಕಸಿದುಕೊಂಡು ಡಿಲೀಟ್​​ ಮಾಡಿದರು. ಆಗ ನಾವೇ ಆ್ಯಂಬುಲೆನ್ಸ್​ಗೆ ಕರೆ ಮಾಡಿದೆವು ಎಂದು ವಿವರಿಸಿದರು.

ಇನ್ನು, ಆ್ಯಕ್ಸಿಡೆಂಟ್​​ ಬಳಿಕ ತಮ್ಮ ಕಾರಿನ ನಂಬರ್​​​ ಚಿಂದಾನಂದ್​ ಕೀಳುತ್ತಿದ್ದರು. ನಾನು ಡಿಸಿಎಂ ಸವದಿ ಮಗ, ನಿಮ್ಮಿಂದ ಏನಾಗುತ್ತೋ ಮಾಡಿಕೊಳ್ಳಿ ಎಂದರು. ಬಳಿಕ ನಮ್ಮನ್ನು ಸುಖಾಸುಮ್ಮನೇ ಬೈಯೋಕೆ ಶುರು ಮಾಡಿದರು, ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಮಾಧ್ಯಮಕ್ಕೆ ಹನುಮಂತ ದೊಡ್ಡಮನಿ ತಿಳಿಸಿದರು.

ಇದನ್ನೂ ಓದಿ: ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರ್ ಡಿಕ್ಕಿಯಾಗಿ ಅಪಘಾತ.. ಬೈಕ್ ಸವಾರ ಸಾವು

ಏನಿದು ಪ್ರಕರಣ?:

ಸೋಮವಾರ ಜುಲೈ 5ರಂದು ಸಂಜೆ ಬಾಗಲಕೋಟೆಯ ಹುನಗುಂದ ಪಟ್ಟಣ ಸಮೀಪದ ಕೂಡಲ ಸಂಗಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್​​ ಅಪಘಾತ ನಡೆದಿತ್ತು. ಡಿಸಿಎಂ ಸವದಿ ಹಿರಿಯ ಮಗ ಚಿದಾನಂದ ಮತ್ತವರ ಸ್ನೇಹಿತರು ಎರಡು ಕಾರುಗಳಲ್ಲಿ ವಿಜಯಪುರ ಮೂಲಕ ಅಥಣಿಗೆ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಈ ರೈತ ತನ್ನ ಹೊಲದಲ್ಲಿ ಕೆಲಸ ಮಾಡಿ ಬೈಕ್​​ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ರೈತ ಸಾವನಪ್ಪಿದ್ದಾರೆ. ಈ ಪ್ರಕರಣದಲ್ಲಿ ಸವದಿ ಪುತ್ರನಿಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಕ್ಲೀನ್ ಚಿಟ್ ನೀಡಿದ್ದಾರೆ.

ನನ್ನ ಮಗ ಚಾಲಕ ಸೀಟಿನಲ್ಲಿರಲಿಲ್ಲ ಎಂದ ಸವದಿ

ತಮ್ಮ ಮಗನ ಕಾರು ಅಪಘಾತದ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಕಿಟ್ ಹಂಚಿಕೆ ಮಾಡುವ ಸಲುವಾಗಿ ತನ್ನ ಸ್ನೇಹಿತರೊಂದಿಗೆ ಕೊಪ್ಪಳದ ಆಂಜನೇಯ ದೇಗುಲಕ್ಕೆ ತೆರಳಿದ್ದರು. ವಾಪಸಾಗುವಾಗ ಚಿದಾನಂದ ಮುಂದಿನ ಗಾಡಿಯಲ್ಲಿದ್ದ. ಆತ ಇದ್ದ ಕಾರು ಅಪಘಾತವಾಗಿಲ್ಲ ಎಂದಿದ್ದಾರೆ.

The post ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಅಪಘಾತ ಪ್ರಕರಣ – ಪ್ರತ್ಯಕ್ಷದರ್ಶಿ ಹೇಳಿದ್ದೇನು? appeared first on News First Kannada.

Source: newsfirstlive.com

Source link