ಮೈಸೂರು: ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ನಿರ್ಗಮಿಸಿ ಮೂರು ದಿನವಾದರೂ ಇನ್ನೂ ಆರೋಪ – ಪ್ರತ್ಯರೋಪ ನಿಂತಿಲ್ಲ. ಇಂದು ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಸುದ್ದಿಗೋಷ್ಠಿ ನಡೆಸಿ, ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದರು.

ನಿರ್ಗಮಿತ ಡಿಸಿ ಆರೋಪಿಸಿರುವಂತೆ ಮೈಸೂರಿನಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಅದಕ್ಕಾಗಿ ತನಿಖಾ ಸಮಿತಿ ರಚಿಸಿ. ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ ಸಂವೇದನಶೀಲತೆಯಿಲ್ಲದ ಅಧಿಕಾರಿ. ಒಬ್ಬ ಸಚಿವನಿಗೆ ಮನೆ ನವೀಕರಣಕ್ಕೆ 2 ಲಕ್ಷ ನೀಡಲಾಗುತ್ತದೆ. ಆದರೆ ಇವರು ಅಂದಾಜು 65 ಲಕ್ಷ ಖರ್ಚು ಮಾಡಿ ಡಿಸಿ ಸರ್ಕಾರಿ ನಿವಾಸ ನವೀಕರಣ ಮಾಡಿಸಿದ್ದಾರೆ. ಇದಕ್ಕೆ ಯಾರು ಅನುಮತಿ ನೀಡಿದರು ಎಂದು ಪ್ರಶ್ನಿಸಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದು. ಇವರು ಸೇವೆ ಮಾಡಲು ಅಲ್ಲ ಮೈಸೂರಿಗೆ ಬಂದಿದ್ದು ಎಂದರು.

ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಮೂರು ಕೆಇಬಿ ಮೀಟರ್ ಇವೆ. ಹಿಂದೆ ಇದರ ಒಟ್ಟಾರೆ ಬಿಲ್ ಐದಾರು ಸಾವಿರ ಬರುತ್ತಿತ್ತು. ರೋಹಿಣಿ ಸಿಂಧೂರಿ ಬಂದ ನಂತರ ಒಂದು ತಿಂಗಳಿಗೆ 50 ಸಾವಿರ ಕರೆಂಟ್ ಬಿಲ್ ಬಂದಿದೆ. ಗಾರ್ಡನ್ ಲೈಟಿಂಗ್ಸ್, ಜಿಮ್, ಸ್ವೀಮಿಂಗ್ ಫೂಲ್, ಮನೆಯೊಳಗಿನ ದೀಪಾಲಕದಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಆರೋಪಿಸಿದರು. ಅಲ್ಲದೆ ಮೈಸೂರು ಭಾಗದಲ್ಲಿ ಜನರಿಗೆ ಕುಡಿಯುವ ನೀರಿಲ್ಲ. ಆದರೆ ಡಿಸಿ ಮನೆಯಲ್ಲಿನ ಈಜುಕೊಳಕ್ಕೆ ಬಳಸುತ್ತಿದ್ದದ್ದು ಕುಡಿಯುವ ನೀರು ಇಂತವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಸಿಂಗಂ ಅದೇನೋ ಸಿಂಗಳಿಕಾನೋ ಏನೋ ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಾ.ರಾ. ಮಹೇಶ್ ಕಾರಣ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಾ ರಾ ಸ್ಪಷ್ಟನೆ ನೀಡಿ, ನಾನು ರೋಹಿಣಿ ಸಿಂಧೂರಿ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ ವರ್ಗಾವಣೆಗಾಗಿ ಹೋರಾಟ ಮಾಡಿಲ್ಲ. ಜಿಲ್ಲೆಯಲ್ಲಿ ಕೋವಿಡ್ ನಿಂದ 5 ಸಾವಿರ ಜನರು ಸಾವನಪ್ಪಿದ್ದಾರೆ. ಇದನ್ನು ಮುಚ್ಚಿಡಲಾಗಿದೆ. ನೀವು ವಿರೋಧ ಪಕ್ಷದ ನಾಯಕರು ನಮ್ಮ ಮಾರ್ಗದರ್ಶಕರು. ಈ ಬಗ್ಗೆ ನೀವೇ ಧ್ವನಿ ಎತ್ತಬಹುದಾಗಿತ್ತು. ಚಾಮರಾಜನಗರ ದುರಂತದ ಉಲ್ಲೇಖಿಸಿ, ಇಲ್ಲಿನವರದ್ದು ಏನು ತಪ್ಪಿಲ್ಲ ಅಂತಾ ವರದಿ ಇತ್ತು. ಈಗ ಆಡಿಯೋ ಬಿಡುಗಡೆಯಾಗಿದೆ. ಅದರಲ್ಲಿ ಅಧಿಕಾರಿಗೆ ಡಿಸ್‍ಮಿಸ್ ಮಾಡುವ ಬೆದರಿಕೆ ಹಾಕಲಾಗಿದೆ. ಇದಕ್ಕೆ ಏನೂ ಹೇಳುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚಾಮರಾಜನಗರ ಆಮ್ಲಜನಕ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣನಾ?

ಭೂ ಒತ್ತುವರಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ, ನೀವು 5 ವರ್ಷ ಸಿಎಂ ಆಗಿದ್ದಿರಿ. ಆಗ ಭ್ರಷ್ಟರು ದಕ್ಷತೆ ಇಲ್ಲದವರನ್ನು ಅಧಿಕಾರಿ ಮಾಡಿದ್ರಾ ಎಂದು ಪ್ರಶ್ನಿಸಿದ ಅವರು, ಸಿಎಂ ಬಿ ಎಸ್ ಯಡಿಯೂರಪ್ಪಗೆ ನಾನೇ ಪತ್ರ ಬರೆದಿದ್ದೇನೆ. ರೋಹಿಣಿ ಸಿಂಧೂರಿ ಬಳಿ ಇರುವ ಮಾಹಿತಿ ಪಡೆದು ತನಿಖೆ ಮಾಡಿ ಎಂದು ಆಗ್ರಹಿಸಿದರು.

The post ಡಿಸಿ ಮನೆ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂ.: ಸಾರಾ ಮಹೇಶ್ ಆರೋಪ appeared first on Public TV.

Source: publictv.in

Source link