
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ
ಡಿ.ರೂಪಾ ನನ್ನ ವೈಯಕ್ತಿಯ ತೇಜೋವಧೆ ಮಾಡ್ತಿದ್ದಾರೆ. ಕಚೇರಿಗೆ ಎರಡು ದಿನ ಬಂದು ಎರಡು ಗಂಟೆ ಡ್ಯೂಟಿ ಮಾಡಿದ್ದಾರೆ. ನಿಗಮದ ತಿಳಿದುಕೊಳ್ಳದೇ ಈ ರೀತಿ ವರ್ತಿಸ್ತಿದ್ದಾರೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನಿಗಮದ ಎಂಡಿ ಡಿ.ರೂಪಾ ವಿರುದ್ಧ ಪ್ರತ್ಯಾರೋಪಗಳನ್ನು ಮಾಡಿದ್ದಾರೆ.
ಬೆಂಗಳೂರು: ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ(Belur Raghavendra Shetty) ವಿರುದ್ಧ ನಿಗಮದ ಎಂಡಿ ಡಿ.ರೂಪಾ(D Roopa Moudgil) ಅವರು ಆರೋಪಗಳ ಸುರಿಮಳೆ ಗೈದಿದ್ದಾರೆ. ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದಾರೆ. ಸದ್ಯ ಈ ಬಗ್ಗೆ ಬೇಳೂರು ರಾಘವೇಂದ್ರ ಶೆಟ್ಟಿ ಟಿವಿ9ಗೆ ಸ್ಪಷ್ಟನೆ ನೀಡಿದ್ದು ಕರಕುಶಲ ಅಭಿವೃದ್ದಿ ನಿಗಮದ ನಿರ್ದೇಶಕಿ ಡಿ.ರೂಪ ಮೌದ್ಗಿಲ್ ವಿರುದ್ಧವೇ ಆರೋಪ ಮಾಡಿದ್ದಾರೆ.
ಡಿ.ರೂಪಾ ಪ್ರತಿದಿನ ಕಚೇರಿಗೆ ಬರ್ತಿರಲಿಲ್ಲ, ಎಕ್ಸಿಕ್ಯೂಟಿವ್ ಅಧಿಕಾರಿಯಾಗಿದ್ದು ಕಚೇರಿಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದೆ. ನಮ್ಮ ನೋಟಿಸ್ಗೆ ಡಿ.ರೂಪ ಉತ್ತರ ನೀಡಲಿಲ್ಲ. ಡಿ.ರೂಪಾ ಮೌದ್ಗಿಲ್ ಕಚೇರಿಗೆ ಬರದೆ ಮನೆಗೆ ಕಡತ ತರಿಸಿಕೊಳ್ತಾರೆ. ಸದ್ಯ ಅವರು ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ವಿರೂಪಗೊಳಿಸಿದ್ದಾಗಿ ಆರೋಪಿಸಿದ್ದಾರೆ. ಓರ್ವ ಐಪಿಎಸ್ ಅಧಿಕಾರಿ ಇಂತಹ ಮಟ್ಟಕ್ಕೆ ಇಳಿದಿದ್ದಾರೆ. ದಾಖಲೆ ಇಲ್ಲದೇ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನ ಮಾಡ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಬಳಿಕ ಇವತ್ತು ಇಡೀ ದಿನ ಕೆಲಸ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಅನುಮಾನ ನನಗೆ ಇದೆ.