ಡಿ. 10ರ ಬಳಿಕ ಕರ್ನಾಟಕದಲ್ಲಿ ಭಾರೀ ಬದಲಾವಣೆಯಾಗುತ್ತೆ; ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ | Karnataka Cabinet Expansion after December 10 BJP MLA Basanagouda Patil Yatnal said in Bengaluru Airport


ಡಿ. 10ರ ಬಳಿಕ ಕರ್ನಾಟಕದಲ್ಲಿ ಭಾರೀ ಬದಲಾವಣೆಯಾಗುತ್ತೆ; ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್

ಬಸನಗೌಡ ಪಾಟಿಲ್ ಯತ್ನಾಳ್ (ಸಂಗ್ರಹ ಚಿತ್ರ)

ಬೆಂಗಳೂರು: ಡಿಸೆಂಬರ್ 10ರ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆ ಆಗುತ್ತದೆ. ಈಗಿನ ಸಚಿವ ಸಂಪುಟ ಪುನಾರಚನೆ ಆಗುತ್ತದೆ. ಈಗಿರುವ ಸಚಿವರ ಪೈಕಿ 7ರಿಂದ 8 ಮಂತ್ರಿಗಳು ಕೆಲಸವನ್ನೇ ಮಾಡುತ್ತಿಲ್ಲ, ವಿಧಾನಸೌಧಕ್ಕೆ ಬರುವುದಿಲ್ಲ, ಶಾಸಕರಿಗೆ ಅಪಾಯಿಂಟ್​ಮೆಂಟ್ ಕೊಡುವುದಿಲ್ಲ, ಶಾಸಕರ ಪೋನ್ ಎತ್ತುವುದಿಲ್ಲ. ಕೆಲವು ಮಂತ್ರಿಗಳುತಾವು  ಶಾಶ್ವತವಾಗಿ ಮಂತ್ರಿಗಳಾಗಿಯೇ ಇರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಕೆಲವರು ಏನೂ ಕೆಲಸ ಮಾಡ್ತಿಲ್ಲ. ಕೆಲವರು ಬಹಳ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಸಚಿವ ಸಂಪುಟದ ಬಗ್ಗೆ ಹಲವರಿಗೆ ಅಸಮಾಧಾನ ಇದೆ. ಹೀಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ಈಗಿನ ಸಚಿವ ಸಂಪುಟವನ್ನು ಪುನಾರಚಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. 

ಯಡಿಯೂರಪ್ಪನವರ ಬದಲು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ಹಲವು ಶಾಸಕರಿಗೆ ಅಸಮಾಧಾನ ಇದೆ. ಅನುದಾನ ಹಂಚಿಕೆ ಬಿಡುಗಡೆ ವಿಚಾರದಲ್ಲಿ ಶಾಸಕರಿಗೆ ಅಸಮಾಧಾನ ಇದೆ. ಅಧಿವೇಶನ ಬಳಿಕ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಣ ಕೊಡದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರ ಮೇಲೂ ಅಸಮಾಧಾನ ಹೆಚ್ಚಾಗಲಿದೆ ಎಂದು ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೊಸ ಬಾಂಬ್ ಹಾಕಿದ್ದಾರೆ.

ಡಿಸೆಂಬರ್ 10ರ ನಂತರ ಸಚಿವ ಸಂಪುಟ ಪುನಾರಚನೆ ಆಗಲಿದೆ. ಆದರೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಸಚಿವ ಕೆ.ಎಸ್. ಈಶ್ವರಪ್ಪನವರು ಹೇಳಿದ ವ್ಯಕ್ತಿ ಅಂತೂ ಸಿಎಂ ಆಗೋದೆ ಇಲ್ಲ ಎನ್ನುವ ಮೂಲಕ ಹೆಸರು ಹೇಳದೆ ಮುರುಗೇಶ್ ನಿರಾಣಿ ಸಿಎಂ ಆಗಲ್ಲ ಎಂದ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಯ ತೀರ್ಮಾನ ಮಾಡಿಲ್ಲ. ಮಾನ್ಯ ಈಶ್ವರಪ್ಪನವರು ಯಾಕೆ ಆ ರೀತಿ ಹೇಳಿದರೋ ಗೊತ್ತಿಲ್ಲ. ಆ ರೀತಿ ಹೇಳೋದು ಸರಿಯಲ್ಲ. ಕರ್ನಾಟಕ ಸರ್ಕಾರದಲ್ಲಿ ಕೆಲವು ಮಂತ್ರಿಗಳು ಕೆಲಸವನ್ನೇ ಮಾಡುತ್ತಿಲ್ಲ. ವಿಧಾನಸೌಧಕ್ಕೆ ಕೆಲವು ಸಚಿವರು ಬರೋದೇ ಇಲ್ಲ. ಗುಜರಾತ್ ಮಾದರಿಯಲ್ಲಿ ಅಮೂಲಾಗ್ರವಾಗಿ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಕೆಲಸ ಮಾಡದ ಹಾಗೂ ಗಂಭೀರ ಆರೋಪ ಇರುವ ಸಚಿವರನ್ನ ಕೈ ಬಿಡಬೇಕು. ಬಿಜೆಪಿಯಲ್ಲಿ ಬಹಳ ಒಳ್ಳೆ ಕೆಲಸ ಮಾಡೋ ಎರಡನೇ ಜನರೇಷನ್ ಜನ ಇದ್ದಾರೆ. ಸಿಎಂ ಹಾಗೂ ಹೈಕಮಾಂಡ್ ಇದನ್ನ ಗಂಭೀರವಾಗಿ ಪರಿಶೀಲನೆ ಮಾಡಬೇಕು. ಡಿಸೆಂಬರ್ 10ರ ನಂತರ ಕರ್ನಾಟಕದಲ್ಲಿ ಬಹಳ ದೊಡ್ಡ ಬದಲಾವಣೆ ಆಗುತ್ತದೆ ಎಂದು ಬಸನಗೌಡ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟವನ್ನು ಪುನಾರಚನೆ ಮಾಡುವ ಮೊದಲು ಎಲ್ಲಾ ಶಾಸಕರ ಅಭಿಪ್ರಾಯ ತಗೋಬೇಕು. ವಾರ-15 ದಿನಕ್ಕೊಮ್ಮೆ ಮಂತ್ರಿಗಳ ಕಾರ್ಯ ವೈಖರಿ ಪರಿಶೀಲನೆ ಮಾಡಬೇಕು. ಕೆಲವು ಸಚಿವರು ಬೆಳಗಾದರೆ ಸಿಎಂ ಜೊತೆ ಅಡ್ಡಾಡಿಕೊಂಡು ಇರ್ತಾರೆ. ಸಿಎಂ ಅವರ ಕೆಲಸ ಮಾಡಲಿ ಮಂತ್ರಿಗಳು ತಮ್ಮ ಕೆಲಸ ಮಾಡಲಿ. ಸಚಿವರು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಿಲ್ಲ ಅಂದ್ರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್​ ವೈರಸ್​​ ಪತ್ತೆಯಾದ ವಿಚಾರವಾಗಿಯೂ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಾವುದೇ ಸಂದರ್ಭದಲ್ಲೂ ಲಾಕ್​ಡೌನ್ ಮಾಡುವುದು ಬೇಡ. ಲಾಕ್​ಡೌನ್​ ಬೇಡವೇ ಬೇಡ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಏರ್​​ಪೋರ್ಟ್​​​ನಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಆದರೆ ಯಾವುದೇ ಸಂದರ್ಭದಲ್ಲೂ ಲಾಕ್​ಡೌನ್ ಬೇಡ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *