ವಿಶ್ವದಲ್ಲಿ ಕೊರೊನಾ ತನ್ನ ಆರ್ಭಟ ಮುಂದುವರೆಸ್ತಾನೇ ಇದೆ. ಒಂದು ದೇಶದ ಬಳಿಕ ಇನ್ನೊಂದು ದೇಶ, ಇನ್ನೊಂದು ದೇಶದ ಬಳಿಕ ಮತ್ತೊಂದು ದೇಶ ಅಂತ ಒಂದಾದ ಮೇಲೊಂದು ಕಡೆ ಅಲೆಗಳು ಅಪ್ಪಳಿಸ್ತಾನೇ ಇದ್ದಾವೆ. ಈ ಮಧ್ಯೆ, ಈ ರೂಪಾಂತರಿ ವೈರಸ್ ಆತಂಕ ಬೇರೆ. ಈಗ ಮತ್ತೊಂದು ರೂಪಾಂತರಿ, ಅಷ್ಟೇ ಅಪಾಯಕಾರಿ ವೈರಸ್ ಬಂದಿರೋ ಬಗ್ಗೆ ಮಾಹಿತಿ ಬರ್ತಾ ಇದೆ.

ಕೊರೊನಾ ವೈರಸ್​​​ ಅಬ್ಬರ ಮುಗೀತಾನೇ ಇಲ್ಲ. ಇಲ್ಲಿ ಕಡಿಮೆ ಆಯ್ತು ಅಂದುಕೊಂಡ್ರೆ ಇನ್ನೊಂದು ಕಡೆ ಶುರುವಾಗಿರುತ್ತೆ ಹೊಸ ಅಲೆ. ಈ ಡೆಡ್ಲಿ ಕೊರೊನಾ ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿತ್ತು. ಹೀಗೆ ವಿಶ್ವವ್ಯಾಪಿಯಾದ ಕೊರೊನಾ ಎಲ್ಲಾ ಕಡೆ ತನ್ನ ಆರ್ಭಟವನ್ನು ತೋರಿಸ್ತಾನೇ ಇದೆ. ಈವರೆಗೆ ವಿಶ್ವದಲ್ಲಿ 17 ಕೋಟಿ ಜನರಿಗೆ ಕೊರೊನಾ ತಗುಲಿದೆ. ಇವರಲ್ಲಿ 38 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನ ವಿವಿಧ ದೇಶಗಳ ಲೆಕ್ಕ ತೆಗೆದುಕೊಂಡ್ರೆ ಈಗಲೂ 1 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದಾವೆ. ಹೀಗಾಗಿ ಕೊರೊನಾ ಸದ್ಯಕ್ಕಂತೂ ದೂರವಾಗೋದಿಲ್ಲ ಅನ್ನೋದು ಸ್ಪಷ್ಟವಾಗ್ತಾ ಇದೆ. ಭಾರತದ ಮಟ್ಟಿಗೆ ಹೇಳೋದಾದ್ರೆ ಎರಡನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿ ಈಗ ನಿಧಾನವಾಗಿ ಇಳಿಮುಖವಾಗ್ತಾ ಇದೆ.

ಭಾರತದಲ್ಲಿ ದೈನಂದಿನ ಪ್ರಕರಣಗಳು ಮತ್ತಷ್ಟು ಇಳಿಕೆ
74 ದಿನಗಳ ಬಳಿಕ ಸಕ್ರಿಯ ಪ್ರಕರಣಗಳು ಗಣನೀಯ ಇಳಿಕೆ

ಭಾರತದಲ್ಲಿ ಎರಡನೇ ಅಲೆ ಸಿಕ್ಕಾಪಟ್ಟೆ ಅಬ್ಬರಿಸಿತ್ತು. ದೇಶದಲ್ಲಿ ಎರಡನೇ ಅಲೆ ದೊಡ್ಡ ಆಘಾತವನ್ನೂ ನೀಡಿತ್ತು. ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಪರದಾಡಬೇಕಾದ ಪರಿಸ್ಥಿತಿ ಬಂದಿತ್ತು. ಇದೀಗ ಎರಡನೇ ಅಲೆ ಗಣನೀಯ ಪ್ರಮಾಣದಲ್ಲಿ ತಗ್ತಾ ಇದೆ. ಇವತ್ತಿನ ಪ್ರಕರಣಗಳ ಅಂಕಿ-ಅಂಶಗಳನ್ನು ಗಮನಿಸೋದಾದ್ರೆ ಕಳೆದ 24 ತಾಸುಗಳ ಅವಧಿಯಲ್ಲಿ 58,419 ಹೊಸ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ ,74 ದಿನಗಳ ಬಳಿಕ ಸಕ್ರಿಯ ಪ್ರಕರಣ ಸಂಖ್ಯೆ 8 ಲಕ್ಷಕ್ಕಿಂತ ಕೆಳಗೆ ಇಳಿದಿದೆ. ದೇಶದಲ್ಲಿ ಹಾಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷದ 29 ಸಾವಿರ. ಇದು ಮುಂದಿನ ಒಂದು ವಾರಗಳಲ್ಲಿ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ. ಕಾರಣ ಹೊಸ ಕೇಸ್ ಗಳಿಗಿಂತ ಗುಣಮುಖರಾಗ್ತಾ ಇರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಕಳೆದ 24 ಗಂಟೆಯಲ್ಲಿ 58 ಸಾವಿರ ಹೊಸ ಕೇಸ್ ಗಳು ಬಂದಿದ್ರೆ, 87 ಸಾವಿರ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ಈವರೆಗೆ 27 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ.

ಆದ್ರೆ, ಇಷ್ಟರ ನಡುವೆ ಮೂರನೇ ಅಲೆ ಆತಂಕ ಶುರುವಾಗಿದೆ. ಈಗಾಗಲೇ ತಜ್ಞರು ಹೇಳಿರುವ ಪ್ರಕಾರ ಯಾವುದೇ ಸಂದರ್ಭದಲ್ಲಾದರೂ ಕೊರೊನಾ ಮೂರನೇ ಅಲೆ ಅಪ್ಪಳಿಸಬಹುದು. ಸಾಮಾನ್ಯವಾಗಿ ಮೂರರಿಂದ ಆರು ತಿಂಗಳ ಒಳಗೆ ಮತ್ತೊಂದು ಅಲೆ ಅಪ್ಪಳಿಸುತ್ತೆ ಅಂತ ಹೇಳಲಾಗ್ತಾ ಇದ್ದರೂ ಈ ಬಾರಿ ನಾಲ್ಕೇ ವಾರಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಅಂತ ಎಚ್ಚರಿಸಲಾಗಿದೆ.

ಮೂರನೇ ಅಲೆಗೆ ಮುನ್ನ ಮತ್ತೊಂದಿಷ್ಟು ರೂಪಾಂತರಿ
ಡೆಲ್ಟಾ, ಡೆಲ್ಟಾ ಪ್ಲಸ್ ಜೊತೆಗೆ ಇನ್ನೊಂದು ರೂಪಾಂತರಿ ಪತ್ತೆ
ವಿದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ

ಕೊರೊನಾ ಬಂದಾಗಿನಿಂದ ಮೊದಲ ಅಲೆ ವೇಳೆ ರೂಪಾಂತರಿ ವೈರಸ್ ಅಷ್ಟಾಗಿ ಕಾಡಿರಲಿಲ್ಲ. ಆದ್ರೆ ಇದು ಹೆಚ್ಚೆಚ್ಚು ಹರಡ್ತಾ ಹೋದ ಹಾಗೆ ರೂಪಾಂತರಿಗಳು ಹೆಚ್ಚಾಗಿ ಸೃಷ್ಟಿಯಾಗಲು ಶುರುವಾಗಿವೆ. ಈ ರೂಪಾಂತರಿ ವೈರಸ್ ಈಗಂತೂ ಸಿಕ್ಕಾಪಟ್ಟೆ ಗಂಡಾಂತರ ತರ್ತಿರೋದು ಆತಂಕ ಸೃಷ್ಟಿಸ್ತಿದೆ. ಮೊದಲನೇ ಅಲೆ ಭಾರತದಲ್ಲಿ ಇಷ್ಟೊಂದು ಆಘಾತ ತಂದಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಅದೆಷ್ಟು ರೂಪಾಂತರಿಗಳು ಬಂದವೋ ಏನೋ. ದೊಡ್ಡ ಮಟ್ಟದಲ್ಲೇ ಡ್ಯಾಮೇಜ್ ಮಾಡಿ ಬಿಟ್ಟಿತ್ತು. ಈಗ ನೋಡಿ ದಿನಕ್ಕೊಂದು ರೂಪಾಂತರಿ ವೈರಸ್ ಬೇರೆ ಬೇರೆ ದೇಶಗಳಲ್ಲಿ ಪತ್ತೆಯಾಗ್ತಾ ಇರೋದು ಇದಕ್ಕೆ ನಾಮಕರಣವೂ ಆಗ್ತಾ ಇದೆ.

ಕಪ್ಪಾ, ಆಲ್ಫಾ, ಡೆಲ್ಟಾ ,ಡೆಲ್ಟಾ ಪ್ಲಸ್ , ಝೀಟಾ, ಗಾಮಾ ಆಯ್ತು
ಈಗ ಮತ್ತಷ್ಟು ಅಪಾಯಕಾರಿ ಕೊರೊನಾ ರೂಪಾಂತರಿ ಪತ್ತೆ
ಪೆರುವಿನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿಯೆ ಲಾಂಬ್ಡಾ

ಮೂರನೇ ಅಲೆ ಅಬ್ಬರಿಸೋಕು ಮುನ್ನ ಭಾರತದಲ್ಲಿ ಸದ್ದು ಮಾಡಿದ್ದು ಬ್ರಿಟನ್, ಆಫ್ರಿಕಾ ಹಾಗೂ ಬ್ರೆಜಿಲ್​ನಲ್ಲಿ ಪತ್ತೆಯಾದ ರೂಪಾಂತರಿ ತಳಿಗಳು. ಆದ್ರೆ ಅದಾದ ಬಳಿಕ ಅದೆಷ್ಟೋ ರೂಪಾಂತರಿಗಳು ಬಂದು ಬಿಟ್ಟಿವೆ. ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19 B.1.617.1 ಮತ್ತು B.1.617.2 ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಕ್ರಮವಾಗಿ B.1.617.1ಗೆ ಕಪ್ಪಾ’ಮತ್ತು B.1.617.2 ಗೆ ‘ಡೆಲ್ಟಾ’ ಎಂದು ಹೆಸರಿಸಲಾಗಿದೆ. ಇನ್ನು ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಕೋವಿಡ್ ತಳಿಗೆ ಬೀಟಾ, ಬ್ರಿಟನ್ ನಲ್ಲಿ ಪತ್ತೆಯಾದ ತಳಿಗೆ ಆಲ್ಫಾ, ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಗಾಮಾ ಮತ್ತು ಝೀಟಾ, ಅಮೆರಿಕಾದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನಲ್ಲಿ ಪತ್ತೆಯಾದ ತಳಿಗೆ ಥೀಟಾ ಅಂತ ಹೆಸರಿಡಲಾಗಿತ್ತು. ಮುಂದಿನ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇನ್ನೆಷ್ಟು ರೂಪಾಂತರಿ ತಳಿಗಳಿಗೆ ನಾಮಕರಣ ಮಾಡಬೇಕೋ ಗೊತ್ತಿಲ್ಲ. ಈಗ ಪೆರುವಿನಲ್ಲಿ ಮತ್ತೊಂದು ರೂಪಾಂತರಿ ಅಷ್ಟೇ ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಇದರ ಹೆಸರೇ ಲಾಂಬ್ಡಾ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಹೊಸ ರೂಪಾಂತರಿಯನ್ನು ಈ ಹೆಸರಿನಲ್ಲಿ ಗುರುತಿಸಿದೆ.

ಈಗಾಗಲೇ 29 ದೇಶಗಳಲ್ಲಿ ಲಾಂಬ್ಡಾ ವೈರಸ್ ಆರ್ಭಟ
ವ್ಯಾಪಕವಾಗಿ ಸೋಂಕು ಹರಡ್ತಾ ಇರೋದ್ರಿಂದ ಆತಂಕ

ಪೆರು ದೇಶದಲ್ಲಿ ಮೊದಲು ಪತ್ತೆಯಾಗಿದ್ದು ಈ ಲಾಂಬ್ಡಾ ರೂಪಾಂತರಿ. ಈಗಾಗಲೇ ಈ ಲಾಂಬ್ಡಾ  ವೈರಸ್ ಬರೋಬ್ಬರಿ 29 ದೇಶಗಳಲ್ಲಿ ಕಾಣಿಸಿಕೊಂಡಿದೆ. ಮೊದಲು ಪೆರುವಿನಲ್ಲಿ ಪತ್ತೆಯಾಗಿದ್ದ ಇದು ಬಳಿಕ ಬ್ರೆಜಿಲ್, ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಲ್ಲಿ ಕಾಣಿಸಿಕೊಂಡಿತ್ತು. ಕ್ರಮೇಣ ಈ ಲಾಂಬ್ಡಾ ವೈರಸ್ ಇತರ ದೇಶಗಳಲ್ಲೂ ಪತ್ತೆಯಾಗಿದ್ದು ಇದರ ಆರ್ಭಟ ಜೋರಾಗಿಯೇ ಇದೆ. ಮೊದಲ ಹಂತದ ಅಧ್ಯಯನಗಳ ಪ್ರಕಾರ ಇದು ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹರಡ್ತಾ ಇದೆ. ಅಷ್ಟೇ ಅಲ್ಲ ಇದರ ತೀವ್ರತೆಯೂ ಭಯಂಕರವಾಗಿದೆ ಅಂತ ಮಾಹಿತಿ ಬಂದಿದೆ. ಹೀಗಾಗಿ ಹೆಚ್ಚು ಜನ ಮತ್ತೆ ಕೊರೊನಾ ಸೋಂಕಿತರಾಗಬಹುದು ಅಂತ ಅಂದಾಜು ಮಾಡಲಾಗಿದೆ.

ಪೆರುವಿನಲ್ಲಿ ಮಿತಿ ಮೀರಿರುವ ಲಾಂಬ್ಡಾ ರೂಪಾಂತರಿ ಹಾವಳಿ
ಬ್ರೆಜಿಲ್ ನಲ್ಲಿ ಮೊದಲ ರೂಪಾಂತರಿಗಿಂತ ಲಾಂಬ್ಡಾದ್ದೇ ಅಬ್ಬರ
ಚಿಲಿಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ತಾ ಇದೆ ರೂಪಾಂತರಿ ಲಾಂಬ್ಡಾ

ಈಗ ವರದಿಯಾಗ್ತಾ ಇರುವ ಹೊಸ ಪ್ರಕರಣಗಳಲ್ಲಿ ಬಹುತೇಕ ಸೋಂಕಿತರಲ್ಲಿ ಲಾಂಬ್ಡಾ ದೃಢಪಡ್ತಾ ಇದೆ. ಚಿಲಿ ದೇಶದಲ್ಲೂ ಈ ರೂಪಾಂತರಿಯ ಹಾವಳಿ ಹೆಚ್ಚಾಗ್ತಾ ಇದ್ದು, ಕಳೆದ ಎರಡು ತಿಂಗಳಲ್ಲಿ ಶೇಕಡಾ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಲಾಂಬ್ಡಾ ವೈರಸ್ ಪತ್ತೆಯಾಗಿದೆ. ಇನ್ನು ಬ್ರೆಜಿಲ್​​ನಲ್ಲಂತೂ ಕೊರೊನಾ ಅಬ್ಬರ ತಗ್ತಾನೇ ಇಲ್ಲ. ಮೊದಲಿನಿಂದಲೂ ಬ್ರಿಜಲ್ ಕೊರೊನಾ ಹಾವಳಿಯಿಂದ ನಿರಂತರವಾಗಿ ತತ್ತರಿಸ್ತಾನೇ ಇದೆ. ಈಗ ಲಾಂಬ್ಡಾ ಕೂಡ ಬ್ರೇಜಿಲ್ ಗೆ ಲಗ್ಗೆ ಇಟ್ಟಿದೆ. ಬ್ರೆಜಿಲ್​ನಲ್ಲಿ ಈವರೆಗೆ ಬಂದಿರುವ ರೂಪಾಂತರಿ ವೈರಸ್​ಗಳನ್ನೆಲ್ಲ ಈ ಲಾಂಬ್ಡಾ ರೂಪಾಂತರಿ ಮೀರಿಸಿ ಬಿಟ್ಟಿದೆ.

ಪೆರುನಲ್ಲಿ ಲಾಂಬ್ಡಾ, ಬ್ರಿಟನ್ ನಲ್ಲಿ ಡೆಲ್ಟಾ, ಭಾರತದಲ್ಲಿ ಡೆಲ್ಟಾ ಪ್ಲಸ್
ಇನ್ನಷ್ಟು ರೂಪಾಂತರವಾಗುತ್ತೊ ಈ ಡೆಡ್ಲಿ ಕೊರೊನಾ ವೈರಸ್?

ಬ್ರಿಟನ್​ನಲ್ಲಿ ಕೊರೊನಾ ಸಾಕಷ್ಟು ತಗ್ಗಿತ್ತು. ಇಲ್ಲಿ ಹೆಚ್ಚು ಕಡಿಮೆ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿತ್ತು. ಆದ್ರೆ ಮತ್ತೆ ಬ್ರಿಟನ್ ನಲ್ಲಿ ಕೊರೊನಾ ಆತಂಕ ಹೆಚ್ಚಾಗ್ತಾ ಇದೆ. ಮತ್ತಷ್ಟು ದಿನ ಕಠಿಣ ನಿರ್ಬಂಧಗಳನ್ನು ಮುಂದುವರೆಸಲು ಇಲ್ಲಿನ ಸರ್ಕಾರ ಮುಂದಾಗಿದೆ. ಈಗ ಬ್ರಿಟನ್ ನಲ್ಲಿ ಡೆಲ್ಟಾ ರೂಪಾಂತರಿಯ ಹಾವಳಿ ಹೆಚ್ಚಾಗಿದೆ ಎಂಬ ವರದಿಗಳು ಬರ್ತಾ ಇವೆ. ಕಳೆದ ಕೆಲವೇ ದಿನಗಳಲ್ಲಿ ಬ್ರಿಟನ್ ನಲ್ಲಿ ಮತ್ತೆ 33 ಸಾವಿರ ಹೊಸ ಕೇಸ್ ಗಳಲ್ಲಿ ಡೆಲ್ಟಾ ವೈರಸ್ ಹೆಚ್ಚಿನ ಜನರಲ್ಲಿ ದೃಢಪಟ್ಟಿದೆ ಅಂತ ಹೇಳಲಾಗ್ತಿದೆ. ಇದರ ನಡುವೆ, ಭಾರತದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ಇದರ ಹರಡುವಿಕೆಯ ವೇಗ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಭಾರತದಲ್ಲಿ ಹಾಲಿ ಡೆಲ್ಟಾ ಪ್ಲಸ್​ನ  7ನೇ ಪ್ರಕರಣ ದಾಖಲಾಗಿದ್ದು ಸೋಂಕಿತರನ್ನು ಸೂಕ್ಷ್ಮವಾಗಿ ಗಮನಿಸಲಾಗ್ತಾ ಇದೆ. ಇದು ಎಷ್ಟು ಅಪಾಯಕಾರಿ, ಇದರ ಹರಡುವಿಕೆ ಪ್ರಮಾಣದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ.

ಮೂರನೇ ಅಲೆಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಹಾವಳಿ ಇಡುತ್ತಾ?
ಮೂರನೇ ಅಲೆ ಎರಡನೇ ಅಲೆಗಿಂತ ಭೀಕರತೆ ಸೃಷ್ಟಿ ಮಾಡುತ್ತಾ?

ಹಾಲಿ ದೇಶದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ 7 ಜನರಲ್ಲಿ ಮಾತ್ರವೇ ಕಾಣಿಸಿಕೊಂಡಿದೆ. ಆದ್ರೆ ಡೆಲ್ಟಾ ಪ್ಲಸ್ ದೃಢಪಟ್ಟಿರುವ ಕೊರೊನಾ ಸೋಂಕಿತರು ಗುಣಮುಖರಾಗಿರುವ ವರದಿಗಳು ಬಂದಿವೆ. ಹೀಗಾಗಿ ಇದು ಅಷ್ಟು ಅಪಾಯಕಾರಿಯಲ್ಲ ಅಂತ ಹೇಳಲಾಗ್ತಾ ಇದೆ. ಇದರ ದುಷ್ಪರಿಣಾಮವೂ ಕಡಿಮೆ ಅಂತ ಪ್ರಾಥಮಿಕ ವೈದ್ಯಕೀಯ ವರದಿಗಳಿಂದ ತಿಳಿದು ಬರ್ತಾ ಇದೆ. ಆದ್ರೆ ಯಾವುದೇ ರೂಪಾಂತರಿಯ ಪರಿಣಾಮದ ಬಗ್ಗೆ ಇಷ್ಟು ಬೇಗ ನಿಖರವಾಗಿ ಹೇಳಲು ಆಗಲ್ಲ ಅಂತ ತಜ್ಞರು ತಿಳಿಸಿದ್ದಾರೆ. ಇದು ಇನ್ನಷ್ಟು ಜನರಿಗೆ ಹರಡಿದರೆ ಆಗ ಹೆಚ್ಚಿನ ಸ್ಯಾಂಪಲ್ಸ್ ಪರೀಕ್ಷೆ ನಡೆಸಿದಾಗಲೇ ಇದರ ನಿಜ ಬಣ್ಣ ಬಯಲಾಗಲಿದೆ.

ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ದುಪ್ಪಟ್ಟು ಕೇಸ್ ಬರಲಿದೆ ಅಂತ ಈಗಾಗಲೇ ಕೆಲವು ತಜ್ಞರು ಹೇಳ್ತಾ ಇದ್ದಾರೆ. ಇದಲ್ಲದೆ ಇನ್ನಷ್ಟು ಭೀಕರತೆ ಸೃಷ್ಟಿಯಾಗುವ ಮುನ್ಸೂಚನೆಯೂ ಸಿಗ್ತಾ ಇದೆ. ಹೀಗಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಸರ್ಕಾರಗಳಿಗೆ ಸಲಹೆಯನ್ನೂ ಕೊಡ್ತಾ ಇದಾರೆ ತಜ್ಞರು. ಇನ್ನೂ ಅದೆಷ್ಟು ರೂಪಾಂತರಿ ವೈರಸ್ ಬರುತ್ತೋ, ಅದೆಷ್ಟು ಹರಡುತ್ತೋ, ಅದೆಷ್ಟು ಜನರಿಗೆ ಅಪಾಯ ತರುತ್ತೋ ಗೊತ್ತಿಲ್ಲ. ಆದ್ರೆ ಯಾವುದೇ ರೂಪಾಂತರಿ ಬಂದರೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೇ ಉತ್ತಮ.

The post ಡೆಲ್ಟಾ, ಡೆಲ್ಟಾ ಪ್ಲಸ್ ಬಳಿಕ ಪೆರುನಲ್ಲಿ ಹೊಸ ಕೊರೊನಾ ರೂಪಾಂತರಿ ‘ಲಾಂಬ್ಡಾ’ ಪತ್ತೆ appeared first on News First Kannada.

Source: newsfirstlive.com

Source link