ಬೆಂಗಳೂರು: ಕೊರೊನಾ ಭಯಾನಕ ರೂಪಾಂತರಿ ತಳಿ B.1.1529 ಪತ್ತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾಗೃತವಾಗಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ಬೋಟ್ಸ್ವಾನನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6, ಹಾಂಕಾಂಗ್ನಲ್ಲಿ 1 ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆ ಆಗಿದೆ. B.1.1529 ಹೊಸ ತಳಿಯಾಗಿದ್ದು ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಕೇಂದ್ರದಿಂದಲೂ ಅಲರ್ಟ್ ಬಂದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ತನ್ನ ಅಧಿಕಾರಿಗಳಿಗೆ ಜಾಗೃತಿ ವಹಿಸುವಂತೆ ಸೂಚನೆ ನೀಡಿದೆ.
ಈ ಮೂರು ದೇಶಗಳಿಂದ ಬರುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡಿ ಅಲ್ಲದೇ ಈಗಾಗಲೇ ರಾಜ್ಯಕ್ಕೆ ಎಂಟ್ರಿ ನೀಡಿದ್ದರೆ ಅವರನ್ನ ಟ್ರಾಕಿಂಗ್ ಮಾಡಿ ಎಂದು ಸೂಚನೆ ನೀಡಲಾಗಿದೆ. ಜೊತೆಗೆ ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಂಡುಬಂದರೆ ಸ್ಯಾಂಪಲ್ಸ್ ಅನ್ನ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.