ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್​​ಗೆ 21 ದಿನಗಳ ಪೆರೋಲ್ ಮಂಜೂರು ಮಾಡಿದ ಹರ್ಯಾಣ ಸರ್ಕಾರ | Haryana government sanctions 21 day parole to Dera Sacha Sauda chief Gurmeet Ram Rahim Singh Insan


ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್​​ಗೆ 21 ದಿನಗಳ ಪೆರೋಲ್ ಮಂಜೂರು ಮಾಡಿದ ಹರ್ಯಾಣ ಸರ್ಕಾರ

ಗುರ್ಮೀತ್ ರಾಮ್ ರಹೀಮ್

ಚಂಡೀಗಢ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಇನ್ಸಾನ್​​ಗೆ (Gurmeet Ram Rahim Singh Insan)  ಹರ್ಯಾಣ (Haryana)ಸರ್ಕಾರ ಸೋಮವಾರ 21 ದಿನಗಳ ಪೆರೋಲ್ ಮಂಜೂರು ಮಾಡಿದೆ. ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಆಗಸ್ಟ್ 2018 ರಿಂದ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಸಾಧ್ವಿಯರ ಮೇಲಿನ ಅತ್ಯಾಚಾರಕ್ಕಾಗಿ ಅವರು ಮೊದಲು ಶಿಕ್ಷೆಗೊಳಗಾದರು. ಕಳೆದ ವರ್ಷ ಇಬ್ಬರು ಡೇರಾ ಅನುಯಾಯಿಗಳ ಹತ್ಯೆ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಪೆರೋಲ್ ಸಮಯದಲ್ಲಿ, ಡೇರಾ ಮುಖ್ಯಸ್ಥ ತನ್ನ ಗುರುಗ್ರಾಮ್ ಫಾರ್ಮ್ ಹೌಸ್‌ನಲ್ಲಿ ನೆಲೆಸುತ್ತಾರೆ ಮತ್ತು ಹರ್ಯಾಣ ಪೊಲೀಸರ ಸಂಪೂರ್ಣ ರಕ್ಷಣೆಯಲ್ಲಿ ಇರಲಿದ್ದಾರೆ. ಅವರು ಸಿರ್ಸಾಗೆ ಭೇಟಿ ನೀಡುವುದನ್ನು ಮತ್ತು ಸಭೆಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಮತ್ತು ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಇನ್ನೂ ಎರಡು ರಾಜ್ಯಗಳು ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮನೋಹರ್ ಲಾಲ್ ಖಟ್ಟರ್-ದುಷ್ಯಂತ್ ಚೌತಾಲಾ ನೇತೃತ್ವದ ಬಿಜೆಪಿ-ಜೆಜೆಪಿ ಸರ್ಕಾರವಿರುವಾಗ ಗುರ್ಮೀತ್ ರಾಮ್ ರಹೀಮ್ ಗೆ ಪೆರೋಲ್ ಸಿಕ್ಕಿದೆ.  ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಡೇರಾ ಸಚ್ಚಾ ಸೌದಾ ಸಾಕಷ್ಟು ಪ್ರಭಾವ ಬೀರಿರುವುದರಿಂದ, ಡೇರಾ ಬಿಡುಗಡೆಯು ಬಹಳ ನಿರ್ಣಾಯಕ ಬೆಳವಣಿಗೆಯಾಗಿದೆ. ಬಹುತೇಕ ರಾಜಕೀಯ ಪಕ್ಷಗಳು, ಮುಖಂಡರು ಮತ್ತು ಅಭ್ಯರ್ಥಿಗಳು ಆಶೀರ್ವಾದ ಪಡೆಯಲು ಸಿರ್ಸಾದ ಡೇರಾ ಆವರಣಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಗುರುಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ಅವರು ಒಂದು ದಿನದ ಪೆರೋಲ್ ಪಡೆದಿದ್ದರು.

ಡೇರಾ ಮುಖ್ಯಸ್ಥನ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹರಿಯಾಣ ಜೈಲು ಸಚಿವ ರಂಜಿತ್ ಸಿಂಗ್ ಚೌಟಾಲಾ, ಪೆರೋಲ್ ಪಡೆಯುವುದು ಪ್ರತಿಯೊಬ್ಬ ಅಪರಾಧಿಯ ಹಕ್ಕು ಎಂದಿದ್ದಾರೆ.

ಡೇರಾ ಮುಖ್ಯಸ್ಥರು ಸಲ್ಲಿಸಿದ ಅರ್ಜಿಯ ದಿನ ಮತ್ತು ದಿನಾಂಕ ಅಥವಾ ಅವರು ಉಲ್ಲೇಖಿಸಿದ ಕಾರಣದಂತಹ ವಿಷಯಗಳ ಬಗ್ಗೆ ಚೌಟಾಲಾ ಪ್ರತಿಕ್ರಿಯಿಸಲಿಲ್ಲ. ಅದೇ ವೇಳೆ ಜೈಲಿನ ಆವರಣದೊಳಗೆ ಅಪರಾಧಿಗಳನ್ನು ನೋಡಿಕೊಳ್ಳುವುದು ಜೈಲು ಇಲಾಖೆಯ ಮೂಲ ಕರ್ತವ್ಯ ಎಂದು ಚೌಟಾಲಾ ಸಮರ್ಥಿಸಿಕೊಂಡರು.
ಆದಾಗ್ಯೂ, ಬಿಡುಗಡೆಗೆ ಅನುಮತಿಗಳು ಅಥವಾ ಔಪಚಾರಿಕತೆಗಳಿಗೆ ಸಂಬಂಧಿಸಿದಂತೆ, ಇದು ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಆಡಳಿತದ ವಿಷಯವಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಸಿಎಂ ಮನೋಹರ್ ಲಾಲ್ ಖಟ್ಟರ್ ಕೂಡ ಪೆರೋಲ್ ವಿಚಾರದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಂಜಾಬ್ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಖಟ್ಟರ್, “ಇದನ್ನು ವ್ಯವಸ್ಥೆಯಲ್ಲಿ ಒದಗಿಸಲಾಗಿದೆ ಮತ್ತು ನಿಯಮದ ಪ್ರಕಾರ ಮಾಡಲಾಗಿದೆ. ಉಳಿದದ್ದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದರು.

ಪೊಲೀಸರ ಹೆಚ್ಚಿನ ಭದ್ರತೆಯ ನಡುವೆ, ಡೇರಾ ಮುಖ್ಯಸ್ಥರು ತಮ್ಮ ಗುರುಗ್ರಾಮ್ ಫಾರ್ಮ್ ಹೌಸ್ ಅನ್ನು ತಲುಪಿದರು, ಅಲ್ಲಿ ಅವರು ತಂಗಲಿದ್ದಾರೆ. ಸಂಬಂಧಿತ ಬೆಳವಣಿಗೆಯಲ್ಲಿ, ಡೇರಾ ಸಚ್ಚಾ ಸೌಧದ ಆಡಳಿತವು ಅನುಯಾಯಿಗಳು ತಮ್ಮ ಮನೆಯೊಳಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಿದೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಅನುಯಾಯಿಗಳಿಗೆ ಎಚ್ಚರಿಕೆ ನೀಡಿರುವ ಡೇರಾ ಮ್ಯಾನೇಜ್‌ಮೆಂಟ್ , ತಮ್ಮ  ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಅಧಿಕೃತ ಮಾಹಿತಿ ಚಾನೆಲ್‌ಗಳನ್ನು ಮಾತ್ರ ನಂಬಲು  ಹೇಳಿದೆ.

TV9 Kannada


Leave a Reply

Your email address will not be published.