ಮುಂಬೈ: ಇನ್ನೇನು ಕೈತಪ್ಪಿ ಹೋಗಲಿದೆ ಎಂಬ ಪಂದ್ಯಕ್ಕೆ ಗೆಲುವಿನ ಭರವಸೆ ತಂದುಕೊಟ್ಟವರು ಕ್ರಿಸ್‌ ಮೋರಿಸ್‌…! 18 ಎಸೆತಗಳಲ್ಲಿ 4 ಸಿಕ್ಸರ್‌ ಗಳನ್ನು ಬಾರಿಸಿದ ಮೋರಿಸ್‌ ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಈ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ರಾಜಸ್ಥಾನಕ್ಕೆ ಮೊದಲ ಗೆಲುವು ದಾಖಲಾಯಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 147 ರನ್‌ ಗಳಿಸಿ ರಾಜಸ್ಥಾನಕ್ಕೆ 148 ರನ್‌ ಗಳ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ರಾಜಸ್ಥಾನ ಡೇವಿಡ್‌ ಮಿಲ್ಲರ್‌ ಅವರ 43 ಎಸೆತಗಳಲ್ಲಿ 62 ರನ್‌ ಮತ್ತು ಕ್ರಿಸ್‌ ಮೋರಿಸ್‌ ಅವರ 18 ಎಸೆತಗಳಲ್ಲಿ 36 ರನ್‌ಗಳ ನೆರವಿನಿಂದ 19.4 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 150 ರನ್‌ ಗಳಿಸಿ 3 ವಿಕೆಟ್‌ ಗಳ ಗೆಲುವು ಸಾಧಿಸಿತು. ಆರಂಭಿಕ ಆಟಗಾರರು ಸಂಪೂರ್ಣವಾಗಿ ನೆಲಕಚ್ಚಿದರೂ ಗಟ್ಟಿಯಾಗಿ ನಿಂತ ಮಿಲ್ಲರ್‌ ಹಾಗೂ ಕಡೇ ಕ್ಷಣದಲ್ಲಿ ಬಂದು 4 ಸಿಕ್ಸರ್‌ ಬಾರಿಸಿದ ಮೋರಿಸ್‌ ರಾಜಸ್ಥಾನದ ಗೆಲುವಿನ ರೂವಾರಿಗಳಾದರು.

ಆರಂಭಿಕರಾಗಿ ಕಣಕ್ಕಿಳಿದ ಜೋಸ್‌ ಬಟ್ಲರ್‌ ಮತ್ತು ಮನನ್‌ ವೋಹ್ರಾ ಕಡಿಮೆ ಮೊತ್ತಕ್ಕೆ ಔಟಾದರು. ನಂತರ ಬಂದ ಕಳೆದ ಪಂದ್ಯದ ಶತಕವೀರ ಹಾಗೂ ನಾಯಕ ಸಂಜು ಸ್ಯಾಮ್ಸನ್‌ ಮತ್ತು ಶಿವಮ್‌ ದುಬೆ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಡೇವಿಡ್‌ ಮಿಲ್ಲರ್‌ 2 ಸಿಕ್ಸರ್‌, 7 ಫೋರ್‌ ಗಳ ಮೂಲಕ 43 ಎಸೆತಗಳಲ್ಲಿ 62 ರನ್‌ ಗಳಿಸಿ ಆವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಡೆಲ್ಲಿ ಪರ ಆವೇಶ್‌ ಖಾನ್‌ಗೆ 3 ವಿಕೆಟ್‌, ವೋಕ್ಸ್‌ ಮತ್ತು ಕಾಗಿಸೋ ರಬಾಡಾಗೆ ತಲಾ 2 ವಿಕೆಟ್‌ ಬಿದ್ದವು.

ಡೆಲ್ಲಿ ಸಾಧಾರಣ ಮೊತ್ತ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಜೈದೇವ್‌ ಉನಾದ್ಕತ್‌ ಅವರ ಮಾರಕ ಬೌಲಿಂಗ್‌ಗೆ ತತ್ತರಿಸಿ 8 ವಿಕೆಟ್‌ಗೆ 147 ರನ್‌ ಗಳಿಸಿತ್ತು. ನಾಯಕ ರಿಷಭ್‌ ಪಂತ್‌ ಅವರ ಅರ್ಧ ಶತಕವೊಂದೇ ಡೆಲ್ಲಿ ಸರದಿಯ ದೊಡ್ಡ ಮೊತ್ತವಾಗಿತ್ತು. ಕಪ್ತಾನನ ಆಟವಾಡಿದ ಪಂತ್‌ 32 ಎಸೆತಗಳಿಂದ 51 ರನ್‌ ಹೊಡೆದರು (9 ಬೌಂಡರಿ). ರಾಜಸ್ಥಾನ್‌ ಪರ ಜೈದೇವ್‌ ಉನಾದ್ಕತ್‌ ಕೇವಲ 15 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತು ಮಿಂಚಿದರು.

ಚೆನ್ನೈ ವಿರುದ್ಧ 138 ರನ್‌ ಜತೆಯಾಟ ದಾಖಲಿಸಿ ಮೆರೆದ ಶಿಖರ್‌ ಧವನ್‌-ಪೃಥ್ವಿ ಶಾ ಇಲ್ಲಿ ಅಗ್ಗಕ್ಕೆ ಔಟಾಗುವುದರೊಂದಿಗೆ ಡೆಲ್ಲಿ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಸಿಲುಕಿತು. ಜೈದೇವ್‌ ಉನಾದ್ಕತ್‌ ಸತತ ಓವರ್‌ಗಳ ಸತತ ಎಸೆತಗಳಲ್ಲಿ ಇವರಿಬ್ಬನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಡೆಲ್ಲಿ ಸ್ಕೋರ್‌ ಕೇವಲ 16 ರನ್‌ ಆಗಿತ್ತು. ಮೊದಲು ಶಾ (2), ಬಳಿಕ ಧವನ್‌ (9) ಆಟ ಮುಗಿಸಿದರು.

ಉನಾದ್ಕತ್‌ ತಮ್ಮ ಮುಂದಿನ ಓವರಿನಲ್ಲೇ ಮತ್ತೂಂದು ವಿಕೆಟ್‌ ಉಡಾಯಿಸಿದರು. ಈ ಎಡಗೈ ವೇಗಿಯ ಮೋಡಿಗೆ ಸಿಲುಕಿದವರು ಅಜಿಂಕ್ಯ ರಹಾನೆ. ರಿಟರ್ನ್ ಕ್ಯಾಚ್‌ ನೀಡಿದ ರಹಾನೆ ಕೂಡ ಎರಡಂಕೆಯ ಗಡಿ ಮುಟ್ಟಲಿಲ್ಲ (8). ಪವರ್‌ ಪ್ಲೇ ಅವಧಿಯೊಳಗಾಗಿ ಡೆಲ್ಲಿಯ 3 ವಿಕೆಟ್‌ ಹಾರಿ ಹೋಯಿತು. ಸ್ಕೋರ್‌ಬೋರ್ಡ್‌ 3 ವಿಕೆಟಿಗೆ ಕೇವಲ 36 ರನ್‌ ತೋರಿಸುತ್ತಿತ್ತು.

ಮುಸ್ತಫಿಜುರ್‌ ರೆಹಮಾನ್‌ ಕೂಡ ಘಾತಕವಾಗಿ ಪರಿಣಮಿಸಿದರು. ಮೊದಲ ಓವರಿನಲ್ಲೇ ಅಪಾಯಕಾರಿ ಮಾರ್ಕಸ್‌ ಸ್ಟೋಯಿನಿಸ್‌ ಅವರನ್ನು ಶೂನ್ಯಕ್ಕೆ ವಾಪಸ್‌ ಅಟ್ಟಿದರು.

5ನೇ ವಿಕೆಟಿಗೆ ಜತೆಗೂಡಿದ ನಾಯಕ ರಿಷಭ್‌ ಪಂತ್‌ ಮತ್ತು ಆಲ್‌ರೌಂಡರ್‌ ಲಲಿತ್‌ ಯಾದವ್‌ ತಂಡದ ಕುಸಿತಕ್ಕೆ ತಡೆಯೊಡ್ಡುವ ಕೆಲಸದಲ್ಲಿ ತೊಡಗಿದರು. ಅಬ್ಬರಿಸತೊಡಗಿದ ಪಂತ್‌, ತೇವಟಿಯಾ ಓವರಿನಲ್ಲಿ 4 ಬೌಂಡರಿ ಸೇರಿದಂತೆ 20 ರನ್‌ ಸೂರೆಗೈದರು. ಪಂದ್ಯದ ಕುತೂಹಲ ಹೆಚ್ಚತೊಡಗಿತು. ಆದರೆ ಅರ್ಧ ಶತಕ ಪೂರೈಸಿದ ಬೆನ್ನಲ್ಲೇ ಪಂತ್‌ ರನೌಟ್‌ ಆಗುವುದರೊಂದಿಗೆ ಡೆಲ್ಲಿಯ ದೊಡ್ಡ ಮೊತ್ತದ ನಿರೀಕ್ಷೆ ಹುಸಿಯಾಯಿತು. ಆಗಿನ್ನೂ 7 ಓವರ್‌ಗಳ ಆಟ ಬಾಕಿ ಇತ್ತು.

ಎರಡು ಬದಲಾವಣೆ
ಈ ಪಂದ್ಯಕ್ಕಾಗಿ ಎರಡೂ ತಂಡಗಳಲ್ಲಿ ಎರಡು ಬದಲಾವಣೆ ಕಂಡುಬಂತು. ಗಾಯಾಳಾಗಿ ಕೂಟದಿಂದಲೇ ಹೊರಬಿದ್ದ ರಾಜಸ್ಥಾನ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಬದಲು ಡೇವಿಡ್‌ ಮಿಲ್ಲರ್‌ ಆಡಲಿಳಿದರು. ಶ್ರೇಯಸ್‌ ಗೋಪಾಲ್‌ ಸ್ಥಾನಕ್ಕೆ ಜೈದೇವ್‌ ಉನಾದ್ಕತ್‌ ಬಂದರು.

ಇತ್ತ ಡೆಲ್ಲಿ ತಂಡ ಸಿಮ್ರನ್‌ ಹೆಟ್‌ಮೈರ್‌ ಮತ್ತು ಅಮಿತ್‌ ಮಿಶ್ರಾ ಅವರನ್ನು ಕೈಬಿಟ್ಟಿತು. ಇವರ ಬದಲು ಕಾಗಿಸೊ ರಬಾಡ ಮತ್ತು ಲಲಿತ್‌ ಯಾದವ್‌ ಅವರಿಗೆ ಅವಕಾಶ ನೀಡಿತು. ದಿಲ್ಲಿಯವರೇ ಆದ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಯಾದವ್‌ ಅವರಿಗೆ ಇದು ಪದಾರ್ಪಣ ಐಪಿಎಲ್‌ ಪಂದ್ಯವಾಗಿತ್ತು.

ಸಂಕ್ಷಿಪ್ತ ಸ್ಕೋರ್‌
ಡೆಲ್ಲಿ ಕ್ಯಾಪಿ ಟಲ್ಸ್‌: 147/8, 20 ಓವರ್‌
ರಿಷಭ್‌ ಪಂತ್‌ 51(32), ಟಾಮ್‌ ಕರ ನ್‌  21(16), ಲಲಿತ್‌ ಯಾದವ್‌ 20(24), ಜೈದೇವ್‌ ಉನಾ ದ್ಕತ್‌ 15ಕ್ಕೆ 3 ವಿಕೆಟ್‌, ಮುಝ ಫಿರ್‌ ರೆಹ ಮಾನ್‌ 29ಕ್ಕೆ 2 ವಿಕೆಟ್‌

ರಾಜಸ್ಥಾನ ರಾಯಲ್ಸ್‌ 150/7, 19.4 ಓವರ್‌
ಡೇವಿಡ್‌ ಮಿಲ್ಲರ್ಸ್‌ 62(43), ಕ್ರಿಸ್‌ ಮೋರಿಸ್‌ 36(18), ರಾಹುಲ್‌ ತಿವಾ ಟಿಯಾ 19(17), ಆವೇಶ್‌ ಖಾನ್‌ 32ಕ್ಕೆ 3, ಕ್ರಿಸ್‌ ವೋಕ್ಸ್‌ 22ಕ್ಕೆ 2 ವಿಕೆಟ್‌.

ಕ್ರೀಡೆ – Udayavani – ಉದಯವಾಣಿ
Read More