ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ | BJP Leader MLC Ashwath Narayan and Chalavadi Narayanaswamy Responds to Allegations Pertaining to Bitcoin


ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ

ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಅಶ್ವತ್ಥನಾರಾಯಣ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದಾಗ ಡ್ರಗ್ಸ್ ವಿರುದ್ಧ ದಿಟ್ಟ ನಿಲುವು ತೆಗೆದುಕೊಂಡಿದ್ದರು. ಡ್ರಗ್ಸ್​ ತನಿಖೆ ಕಾಂಗ್ರೆಸ್​ನತ್ತ ತಿರುಗುತ್ತಿದೆ. ಇದನ್ನು ದಾರಿ ತಪ್ಪಿಸಲೆಂದೇ ಕಾಂಗ್ರೆಸ್ ನಾಯಕರು ಬಿಟ್​ ಕಾಯಿನ್ ವಿಚಾರವನ್ನು ದೊಡ್ಡದನಿಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್​ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ) ತನಗೆ ಯಾರ ಜೊತೆಗೆ ಸಂಬಂಧ ಇತ್ತು ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ನಲಪಾಡ್ ಮತ್ತು ಲಮಾಣಿ ಮಗನ ಬಗ್ಗೆ ಕಾಂಗ್ರೆಸ್ ನಾಯಕ ಸುರ್ಜೇವಾಲ ಈವರೆಗೆ ಮಾತನಾಡಿಲ್ಲ. ಬಿಟ್ ಕಾಯಿನ್ ಕಂಪನಿಗಳು ಕಳ್ಳತನ ಮತ್ತು ವರ್ಗಾವಣೆ ಬಗ್ಗೆ ಈವರೆಗೂ ಎಲ್ಲಿಯೂ ಅಧಿಕೃತವಾಗಿ ದೂರು ದಾಖಲಿಸಿಲ್ಲ. ದಾಖಲೆ ಇಲ್ಲದೆ ಆರೋಪ ಮಾಡುವುದು ಕಾಂಗ್ರೆಸ್ ಚಾಳಿಯಾಗಿದೆ. ಡ್ರಗ್ಸ್ ಮಾಫಿಯಾ ಜತೆ ಕಾಂಗ್ರೆಸ್​ ನಾಯಕರ ಮಕ್ಕಳ ಸಂಪರ್ಕ ಬೆಳಕಿಗೆ ಬರುತ್ತಿರುವುದರ ಹಿನ್ನೆಲೆಯಲ್ಲಿ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಣ ಒಳಜಗಳ ಪರಿಹರಿಸಲು ಕಾಂಗ್ರೆಸ್​ಗೆ ಸಾಧ್ಯವಾಗುತ್ತಿಲ್ಲ. ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲೂ ಕಾಂಗ್ರೆಸ್​ಗೆ ಆಗುತ್ತಿಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ಸುದ್ದಿಗೋಷ್ಠಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಸರ್ಕಾರ ನೂರು ದಿನ ಪೂರೈಸಿ ಒಳ್ಳೆಯ ಕಾರ್ಯಕ್ರಮ ನೀಡುತ್ತಿದೆ. ಈ ಸಂದರ್ಭದಲ್ಲಿ ವಿಪಕ್ಷ ಕಾಂಗ್ರೆಸ್ ರಚನಾತ್ಮಕ ಸಹಕಾರ ಕೊಡಬೇಕಿತ್ತು. ಅದು ಬಿಟ್ಟು, ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಜನರನ್ನು ದಾರಿತಪ್ಪಿಸುತ್ತಿದೆ. ರಫೆಲ್ ಹಗರಣದ ಕಮಿಷನ್ ಬಗ್ಗೆ ಸುರ್ಜೆವಾಲಾ ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಸುರ್ಜೆವಾಲಾ ಈವರೆಗೆ ಕೊಟ್ಟಿರುವ ಹೇಳಿಕೆಗಳಲ್ಲಿ ಆಧಾರ ಇಲ್ಲ. ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ ಎಂದು ನುಡಿದರು.

ನಲಪಾಡ್‌ ಮತ್ತು ದರ್ಶನ್‌ ಲಮಾಣಿಯನ್ನು ಬಂಧಿಸಬೇಕೆಂದು ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ಕಾಂಗ್ರೆಸ್‌ನವರೇ ಬಿಟ್‌ಕಾಯಿನ್‌ ಕೇಸ್‌ನಲ್ಲಿ ಶಾಮೀಲಾಗಿದ್ದಾರೆ. ಇವರೇ ಬಿಟ್‌ಕಾಯಿನ್‌ ಕಳೆದುಕೊಂಡಿರುವ ಅನುಮಾನವಿದೆ. ಬಿಟ್‌ಕಾಯಿನ್‌ನಲ್ಲಿ ಅವರ ಕಪ್ಪುಹಣ ಕೂಡಿಟ್ಟಿರುವ ಶಂಕೆಯಿದೆ. ಹೀಗಾಗಿಯೇ ಪೂರ್ಣ ಪ್ರಮಾಣದ ತನಿಖೆಗೆ ಅವಕಾಶ ಕೊಡದೆ ಹಾದಿ ತಪ್ಪಿಸಲಾಗುತ್ತಿದೆ ಎಂದು ಆರೋಪ ಮಾಡಿದರು.

ಬಿಜೆಪಿ ಅಧ್ಯಕ್ಷರು ಎಲ್ಲಿಯೂ ತಪ್ಪಿಸಿಕೊಂಡು ಓಡಾಡುತ್ತಿಲ್ಲ. ಬಿಟ್ ಕಾಯಿನ್ ಬಗ್ಗೆ ಅವರೂ ಉತ್ತರ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಹಗರಣದಲ್ಲಿ ಮಂಗಳೂರಿನವರು ಭಾಗಿಯಾಗಿದ್ದಾರೆ ಅಂದ್ರೆ ಅದು ನಳಿನ್​ ಕುಮಾರ್ ಕಟೀಲ್ ಅವರೇ ಆಗಬೇಕೆಂದಿಲ್ಲ. ಖಾದರ್ ಕೂಡ ಮಂಗಳೂರಿನವರು. ಹಾಗಂತ ಪ್ರಕರಣದಲ್ಲಿ ಖಾದರ್ ಇದ್ದಾರೆ ಎಂದು ಅರ್ಥವೇ ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆಗೆ ಮೊದಲೇ ಗೊತ್ತಿತ್ತು: ಛಲವಾದಿ ನಾರಾಯಣಸ್ವಾಮಿ
ಬಿಜೆಪಿಯ ಮತ್ತೋರ್ವ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಐಟಿಬಿಟಿ ಸಚಿವರಾಗಿದ್ದಾಗಲೇ ಈ ಬಗ್ಗೆ ಮಾಹಿತಿ ಇತ್ತು. ಆದರೆ ಅವರು ಅದೆಲ್ಲವನ್ನೂ ಮುಚ್ಚಿಟ್ಟಿದ್ದರು. ಸಿದ್ದರಾಮಯ್ಯ ಕುರ್ಚಿಯ ಕೆಳಗೇ ಇದೆಲ್ಲ ನಡೆದಿತ್ತು. ಇಬ್ಬರ ಹೆಸರು ಇದೆ ಎಂದು ಕಾಂಗ್ರೆಸ್‌ನವರು ಹೇಳ್ತಾರೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಅವರ ಹೆಸರು ಹೇಳಲಿ ಎಂದು ಸವಾಲು ಹಾಕಿದರು.

ಪ್ರಿಯಾಂಕ್ ಖರ್ಗೆ, ಸುರ್ಜೇವಾಲ ಪುರಾಣ ಪಠಿಸುತ್ತಿದ್ದಾರೆ. ಕೋರ್ಟ್‌ಗೆ ಪೊಲೀಸರು ಸಲ್ಲಿಸಿದ್ದ ದಾಖಲೆ ಬಗ್ಗೆ ಹೇಳಿದ್ದಾರೆ. ಎಲ್ಲಿ ಹಗರಣ ಆಗಿದೆ ಅನ್ನೋದು ಸುರ್ಜೆವಾಲಗೂ ಗೊತ್ತಿಲ್ಲ. ಹಗರಣದ ವೀರರಿಗೆ ಯಾವಾಗಲೂ ಅದೇ ಮನಸ್ಸಲ್ಲಿರುತ್ತದೆ. ಇದು ರಾಜಕೀಯ ಪುರಾಣವೇ ಹೊರತು ಪುರಾವೆ ಅಲ್ಲ. ಈಗ ತನಿಖೆ ನಡೆಯುತ್ತಿದೆ ಎಲ್ಲವೂ ಬಹಿರಂಗವಾಗುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: ಬಿಟ್​ಕಾಯಿನ್​ ಪ್ರಕರಣ 2018ರಿಂದಲೂ ಇದೆ ಅಂತಾರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಸುರ್ಜೇವಾಲ ಕೇಳಲಿ; ಸಿಎಂ ಬೊಮ್ಮಾಯಿ
ಇದನ್ನೂ ಓದಿ: Bitcoin Case: ಡ್ರಗ್​ ಅಡಿಕ್ಟ್​​​ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಬಿಟ್​ಕಾಯಿನ್ ಪ್ರಕರಣದ ಬಗ್ಗೆ ಡಾ. ಸುಧಾಕರ್ ಸುದ್ದಿಗೋಷ್ಠಿ

TV9 Kannada


Leave a Reply

Your email address will not be published. Required fields are marked *