ದೇಶದ ರಕ್ಷಣಾ ವಲಯಕ್ಕೆ ಮತ್ತೊಂದು ಸವಾಲು ಎದುರಾಗಿದೆ ಎಂಬ ಚರ್ಚೆ ಶುರುವಾದ ಬೆನ್ನಲ್ಲೇ ಅದಕ್ಕೆ ಉತ್ತರವೂ ಸಿಕ್ಕಿ ಬಿಟ್ಟಿದೆ. ಯಾವಾಗ ಜಮ್ಮುವಿನ ವಾಯು ನೆಲೆ ಮೇಲೆ ಡ್ರೋನ್ ದಾಳಿ ಮಾಡಿತ್ತೋ ಆಗಲೇ ಇಂಡಿಯಾದಲ್ಲಿ ಇಂತದ್ದೊಂದು ದಾಳಿ ಎದುರಿಸೋದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದ್ರೆ, ಇದಕ್ಕೆಲ್ಲ ಇಂಡಿಯಾ ಅಂಜಲ್ಲ ಎಂಬ ಸಂದೇಶ ರವಾನೆಯಾಗಿದೆ. ಯಾವುದು ಅಂತಹ ಸಂದೇಶ ಹೇಳ್ತೀವಿ.

ಹೀಗೆ ಹಾರಾಡುವ ಡ್ರೋಣ್ ಗಳು ತಂದಿಡುವ ಅನಾಹುತ ಅಷ್ಟಿಷ್ಟಲ್ಲ. ಮೊನ್ನೆ ಮೊನ್ನೆ ಜಮ್ಮುವಿನ ವಾಯುನೆಲೆ ಮೇಲೆ ಎರಡು ಡ್ರೋನ್ ಗಳ ಮೂಲಕ ನಡೆಸಲಾದ ದಾಳಿ ಬಳಿಕ ರಕ್ಷಣಾ ವಲಯದಲ್ಲಿ ಇದೇ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಡ್ರೋನ್ ದಾಳಿಯಿಂದ ಗಡಿಯಾಚೆಯಿಂದ ಮತ್ತಷ್ಟು ರಕ್ಷಣಾ ಸವಾಲುಗಳನ್ನು ಎದುರಿಸಬೇಕಾಗಬಹುದು ಅಂತ ವಿಶ್ಲೇಷಿಸಲಾಗಿತ್ತು. ಹೌದು. ಇಷ್ಟು ದಿನ ಯುದ್ಧ ನಡೆದರೆ, ಅದು ನೇರವಾಗಿ ಗುಂಡಿನ ಚಕಮಕಿ, ಇಲ್ಲವೇ ಯುದ್ಧ ವಿಮಾನಗಳ ಹಾರಾಟ, ಅದರಿಂದ ಸುರಿಮಳೆಯಾಗುವ ಬಾಂಬ್ ಗಳು, ಸಾವಿರಾರು ಕಿಲೋ ಮೀಟರ್ ದೂರದಿಂದ ಅಪ್ಪಳಿಸುವ ಖಂಡಾಂತರ ಕ್ಷಿಪಣಿಗಳು ಅಂತೆಲ್ಲ ಭಾವಿಸಲಾಗ್ತಾ ಇತ್ತು. ಆದರೆ, ಈಗ ವಿಶ್ವದಲ್ಲಿ ಮತ್ತೊಂದು ರೀತಿಯ ಅಗೋಚರ ವಾರ್ ಗೆ ಡ್ರೋನ್ ಹಲವು ಕಡೆ ಮುನ್ನುಡಿ ಬರೆಯುತ್ತಿದೆ. ಅಲ್ಲೆಲ್ಲೋ ಕುಳಿತು ರಿಮೋಟ್ ಮೂಲಕ ಡ್ರೋನ್ ಗಳನ್ನು ಗಡಿಯಾಚೆಗೆ ರವಾನಿಸಿ ಸ್ಫೋಟಕ್ಕೆ ಸಂಚು ರೂಪಿಸುವ ತಂತ್ರಗಳು ಹೊಸದಾಗಿ ಹುಟ್ಟಿಕೊಳ್ತಾ ಇವೆ. ಅದು ಭಾರತದ ಗಡಿಯೊಳಗೂ ಸಂಭವಿಸಿರೋದು ಈಗ ಆತಂಕಕ್ಕೆ ಕಾರಣವಾಗಿದೆ.

ಡ್ರೋನ್ ದಾಳಿ ನಿಗ್ರಹಿಸಲು ಭಾರತ ಶಕ್ತವಾಗಿದ್ಯಾ?
ಜಮ್ಮುವಿನಲ್ಲಿ ನಡೆದ ಘಟನೆ ಮರುಕಳಿಸುವುದಿಲ್ವಾ?
ಗಡಿಯಲ್ಲಿ ಡ್ರೋನ್​ಗಳನ್ನು ಪತ್ತೆ ಹಚ್ಚೋದು ಹೇಗೆ?

ಜಮ್ಮು ನೆಲೆಯ ಮೇಲಾದ ದಾಳಿ ಬಹುದೊಡ್ಡ ಎಚ್ಚರಿಕೆ. ಭವಿಷ್ಯದ ದಿನಗಳಲ್ಲಿ ಯಾವ್ಯಾವ ರೀತಿ ದಾಳಿ ನಡೆಯಬಹುದು ಅನ್ನೋದಕ್ಕೆ ಒಂದು ಸ್ಯಾಂಪಲ್ ಅಷ್ಟೇ. ಅಲ್ಲೇ ಗಡಿಯಾಚೆಗೆ ಅಡಗಿರುವ ಉಗ್ರರು, ನೆರೆಯ ರಾಷ್ಟ್ರಗಳ ಶತ್ರುಗಳು ಡ್ರೋನ್ ತಂತ್ರಜ್ಞಾನದ ಮೂಲಕವೇ ಇಲ್ಲಿ ಆತಂಕಕಾರಿ ಘಟನೆಗಳು ನಡೆಯುವಂತೆೆ ಸಂಚು ರೂಪಿಸಬಹುದು. ಮೊನ್ನೆ ಜಮ್ಮುವಿನಲ್ಲಿ ಆಗಿದ್ದು ಕೂಡ ಅದೇ. ಅದೆಷ್ಟು ಕಿಲೋ ಮೀಟರ್ ದೂರದಿಂದ ಅಗೋಚರವಾಗಿ ಹಾರಿ ಬಂದಿತ್ತೋ ಏನೋ ಆ ಡ್ರೋನ್. ಭಯಂಕರ ಸ್ಫೋಟವನ್ನೇ ಮಾಡಿಬಿಟ್ಟಿತ್ತು. ಡ್ರೋನ್ ಅಂದರೇನೇ ಹೀಗೆ. ಅದು ಕಣ್ಣಿಗೆ ಕಾಣಿಸದ ಹಾಗೆ ಅಗೋಚರವಾಗಿ ಎಲ್ಲವನ್ನೂ ತನ್ನ ಹೆಗಲ ಮೇಲೆ ಹೊತ್ತು ತಂದು ಇಳಿಸಿ ಬಿಡುತ್ತೆ. ಅದರ ಹೆಗಲಿಗೆ ಸ್ಫೋಟಕಗಳನ್ನು ಕಟ್ಟಿ ಹಾರಿಸಿಬಿಟ್ಟರೆ ಅದು ನಿಖರ ಗುರಿ ತಲುಪಿ ತನ್ನ ಕೆಲಸ ಮುಗಿಸಿ ಬಿಡುತ್ತೆ.

ಮೊನ್ನೆ ಜಮ್ಮುವಿನಲ್ಲಿ ಅಗಿದ್ದು ಇದೇ ರೀತಿ. ಇದು ಜಮ್ಮುವಿನಲ್ಲೇ ಆಗಿದೆ ಅಂದ್ರೆ ಇನ್ನು ಗಡಿಯ ಬಳಿ ಈ ಡ್ರೋನ್ ಮೂಲಕ ದಾಳಿ ಮಾಡೋದು ಇನ್ನಷ್ಟು ಸುಲಭ. ಶತ್ರುಗಳ ಕೈಗೆ ಇದೊಂದು ಹೊಸ ಅಸ್ತ್ರ ಸಿಕ್ಕಂತೆಯೇ ಆಗಿ ಹೋಗಿದೆ. ಹೀಗಿದ್ದಾಗ ಭಾರತ ಭವಿಷ್ಯದಲ್ಲಿ ಹೆಚ್ಚಬಹದಾದ ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಶಕ್ತವಾಗಿದ್ಯಾ, ಜಮ್ಮುವಿನಲ್ಲಿ ನಡೆದ ಘಟನೆ ಮರುಕಳಿಸುವುದಿಲ್ವಾ, ಗಡಿಯಲ್ಲಿ ಡ್ರೋನ್​ಗಳನ್ನು ಪತ್ತೆ ಹಚ್ಚೋದಾದ್ರೂ ಹೇಗೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸಮುದ್ರದ ಮೇಲಾದರೂ ಸರಿ, ಗಡಿಯ ಬೆಲೆಯನ್ನು ದಾಟಿಯಾದರೂ ಸರಿ ಹೇಗಾದರೆ ಹಾಗೆ ಒಳನುಗ್ಗಬಲ್ಲ ಈ ಡ್ರೋನ್ ಗಳನ್ನು ಹೊಡೆದುರುಳಿಸುವುದು ಹೇಗೆ ಎಂಬುದೇ ಈಗ ಎಲ್ಲರಿಗೂ ಇರುವ ಆತಂಕ. ಅದಕ್ಕೆ ಈಗ ಸ್ಪಷ್ಟ ಉತ್ತರ ಕೊಟ್ಟಿದೆ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ. ಹಾಗಾದರೆ ಸಂಸ್ಥೆ ಡ್ರೋನ್ ದಾಳಿ ನಿಗ್ರಹದ ಬಗ್ಗೆ ಏನು ಹೇಳಿದೆ ನೋಡೋಣ.

ಡ್ರೋನ್ ದಾಳಿ ಸಮರ್ಥವಾಗಿ ಹಿಮ್ಮೆಟ್ಟಿಸಲು ತಂತ್ರಜ್ಞಾನ
ಡ್ರೋನ್ ದಾಳಿ ನಿಗ್ರಹಕ್ಕೆ ಡಿಆರ್ ಡಿಒದ ಡಿ-4 ಸಿಸ್ಟಮ್ ಬಲ
ಏನಿದು ಡಿ-4 ಸಿಸ್ಟಮ್-ಡ್ರೋನ್ ದಾಳಿಯನ್ನು ತಡೆಯುತ್ತಾ?

ದೇಶದ ಭದ್ರತೆಗೆ ಬೆದರಿಕೆ ತರುತ್ತಿರುವ ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಭಾರತ ಈಗಾಗಲೇ ಶಕ್ತವಾಗಿದೆ. ಇಂತದ್ದೊಂದು ಸಂದೇಶವನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ರವಾನಿಸಿದೆ. ಈ ಹಿಂದೆ ಅಮೆರಿಕಾ, ಜಪಾನ್, ಇಸ್ರೇಲ್ ಮತ್ತಿತರೆ ದೇಶಗಳಲ್ಲಿ ಡ್ರೋನ್ ದಾಳಿ ತಡೆಯುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿತ್ತು. ಇದನ್ನು ಅಭಿವೃದ್ಧಿಪಡಿಸಲು ಈಗ ಬಹುತೇಕ ದೇಶಗಳು ಮುಂದಾಗ್ತಾ ಇವೆ. ಅದರಲ್ಲಿ ಭಾರತವೂ ಕೂಡ ಮುಂಚೂಣಿಯಲ್ಲಿದೆ. ಭಾರತದ ಡಿಆರ್ ಡಿಒ ಅಭಿವೃದ್ಧಿ ಪಡಿಸಿರುವ ಡಿ -4 ಡ್ರೋನ್ ವ್ಯವಸ್ಥೆ ಡ್ರೋನ್ ಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಲ್ಲದು. ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವ್ಯವಸ್ಥೆ. ಈ ವ್ಯವಸ್ಥೆಯನ್ನು ಈಗ ದೇಶದ ಅನೇಕ ಕಡೆ ಅಳವಡಿಸಿಕೊಳ್ಳುವ ಅನಿವಾರ್ಯತೆ ಕಂಡು ಬರ್ತಾ ಇದೆ. ಗಡಿಯ ಬಳಿ, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ, ಮತ್ತು ಸೇನಾ ನೆಲೆಗಳಲ್ಲಿ ಡ್ರೋನ್ ಅಟ್ಯಾಕ್ ತಡೆಯುವ ವ್ಯವಸ್ಥೆಯನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬೇಕಾಗಿದೆ. ಬಹುತೇಕ ಕಡೆ ಇದರ ಪ್ರಯೋಗಾರ್ಥ ಅಳವಡಿಕೆ ನಡೆದಿದೆ. ಇದು ಖಂಡಿತವಾಗಿ ಡ್ರೋನ್ ದಾಳಿಯನ್ನು ತಡೆಯುತ್ತದೆ ಅಂತಿದಾರೆ ರಕ್ಷಣಾ ತಜ್ಞರು.

4 ಕಿಲೋ ಮೀಟರ್ ವರೆಗೂ ಕಣ್ಗಾವಲು ಇಡುವ ವ್ಯವಸ್ಥೆ
ಎಲ್ಲಿಯೇ ಅಡಗಿ ಕುಳಿತಿದ್ದರು ಹೊಡೆದುರುಳಿಸುವ ಸಿಸ್ಟಮ್
ಸೆನ್ಸಾರ್ ಮೂಲಕ ಪತ್ತೆಯಾದ ತಕ್ಷಣ ಡ್ರೋನ್ ನಿಷ್ಕ್ರಿಯ

ಭಾರತದಲ್ಲಿ ಈಗಾಗಲೇ ಇಂತಹ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಡ್ರೋನ್​ಗಳು ಎಲ್ಲಿಯೇ ಅಡಗಿ ಕುಳಿತಿದ್ದರೂ ಅದನ್ನು ಪತ್ತೆ ಹಚ್ಚಿ ಬಿಡುತ್ತೆ ಡಿ-4 ಸಿಸ್ಟಮ್. ಬರೋಬ್ಬರಿ 4 ಕಿಲೋ ಮೀಟರ್ ದೂರ ಇರುವಾಗಲೇ ಶತ್ರುಗಳ ಡ್ರೋನ್ ಗಳನ್ನು ಪತ್ತೆ ಹಚ್ಚುತ್ತೆ ಈ ವ್ಯವಸ್ಥೆ. ಇದನ್ನು ಅಳವಡಿಸಿದರೆ ಇದರಲ್ಲಿರುವ ಸ್ಕ್ಯಾನರ್ ಕಿಲೋ ಮೀಟರ್​ಗಟ್ಟಲೇ ದೂರದಿಂದ ಬಂದು ಎರಗುವ ಶತ್ರುಗಳ ಡ್ರೋನ್ ಗಳನ್ನು ಪತ್ತೆ ಹಚ್ಚಬಲ್ಲದು. ಸ್ಕ್ಯಾನರ್ ಮೂಲಕ ಪತ್ತೆ ಹಚ್ಚಿ ಅದರ ಸಂದೇಶವನ್ನು ಕಂಟ್ರೋಲ್ ರೂಮ್ ಗೆ ತಿಳಿಸುತ್ತದೆ. ಆಗ ತಕ್ಷಣ ಕಂಟ್ರೋಲ್ ರೂಮ್ ನಿಂದ ಡಿ-4 ಸಿಸ್ಟಮ್ ಮೂಲಕ ಆಪರೇಷನ್ ನಡೆಸಿದರೆ ಶತ್ರುಗಳ ಡ್ರೋನ್ ಫಿನಿಷ್. ಶತ್ರುಗಳ ಡ್ರೋನ್ ಗಳಲ್ಲಿರುವ ಹಾರ್ಡ್​ವೇರ್​ಗಳನ್ನೇ ನಿಷ್ಕ್ರಿಯಗೊಳಿಸಿಬಿಡುತ್ತೆ ಈ ಹೊಸ ತಂತ್ರಜ್ಞಾನ. ಇದರ ಬಗ್ಗೆ ರಕ್ಷಣಾ ಸಂಶೋಧನಾ ಸಂಸ್ಥೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ನೂತನ ತಂತ್ರಜ್ಞಾನ ಡಿ-4 ವ್ಯವಸ್ಥೆಯು 4 ಕಿಲೋ ಮೀಟರ್ ಮೇಲೆ ಅಥವಾ ದೂರ ಹಾರಾಡುವ ಡ್ರೋನ್ ಗಳನ್ನು ಪತ್ತೆ ಹಚ್ಚುತ್ತದೆ. ಅಲ್ಲದೇ ಅದನ್ನು ಹೊಡೆದುರುಳಿಸುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗಿದೆ. ಸೆನ್ಸಾರ್ ಗಳ ಮೂಲಕ ಶತ್ರುಗಳ ಡ್ರೋನ್ ಗಳನ್ನು ಪತ್ತೆ ಹಚ್ಚಿ ಅದರ ಹಾರ್ಡ್ ವೇರ್ ಗಳನ್ನು ಕೂಡ ನಿಷ್ಕ್ರೀಯಗೊಳಿಸುವ ತಂತ್ರಜ್ಞಾನ ನಮ್ಮಲ್ಲಿ ಈಗಾಗಲೇ ಲಭ್ಯವಿದೆ. ಹಗಲು-ರಾತ್ರಿ ಈ ತಂತ್ರಜ್ಞಾನವನ್ನು ಬಳಸಿ ಶತ್ರುಗಳ ಡ್ರೋನ್ ಗಳ ಮೇಲೆ ನಿಗಾ ಇಡಬಹುದು -ಜಿಲ್ಲೆಲಾಮುದಿ ಮುಂಜುಳಾ, ಮಹಾನಿರ್ದೇಶಕಿ ಡಿಆರ್ ಡಿಒ(ಇಸಿಎಸ್)

ನೋಡಿದ್ರಲ್ಲಾ ಹೀಗೆ ಭಾರತದಲ್ಲಿ ಈಗಾಗಲೇ ಡ್ರೋನ್ ದಾಳಿಗಳನ್ನು ಹಿಮ್ಮೆಟ್ಟಿಸುವ ತಂತ್ರಜ್ಞಾನ ಲಭ್ಯವಿದೆ.ಆದ್ರೆ ಇದನ್ನು ಈಗ ಎಲ್ಲಾ ಕಡೆ ಹೆಚ್ಚೆಚ್ಚು ಅಳವಡಿಸಿಕೊಳ್ಳಬೇಕಾಗಿದೆ. ಕಳೆದ ವರ್ಷದ ಗಣರಾಜ್ಯೋತ್ಸವ ಪರೇಡ್ ವೇಳೆ ಭದ್ರತೆಗೂ ಇದೇ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ಈ ತಂತ್ರಜ್ಞಾನ ಬಳಕೆ ಮಾಡಿಕೊಂಡಿದ್ದರಿಂದ ಯಾವುದೇ ರೀತಿಯ ಆತಂಕವೂ ಇರಲಿಲ್ಲ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಣಿಗೆ ಕಾಣಿಸದಂತೆ ಈ ಡಿ-4 ಸಿಸ್ಟಮ್ ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಿದರೆ ಶತ್ರುಗಳ ದಾಳಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು ಅಂತಿದಾರೆ ರಕ್ಷಣಾ ತಜ್ಞರು.

ಸ್ಫೋಟಕಗಳು ಮಾತ್ರವಲ್ಲ ಮಾದಕ ವಸ್ತುಗಳ ರವಾನೆ!
ಗಡಿಯಲ್ಲಂತೂ ಡ್ರೋನ್ ಗಳ ಹಾವಳಿಯದ್ದೇ ಆತಂಕ

ಡ್ರೋನ್​ಗಳ ವಿಚಾರದಲ್ಲಿ ಮತ್ತೊಂದು ಆಘಾತಕಾಗಿ ವಿಚಾರ ಬೆಳಕಿಗೆ ಬರ್ತಾ ಇದೆ. ಅದೇನು ಅಂದ್ರೆ ಡ್ರೋನ್ ಗಳು ಸ್ಫೋಟಕಗಳನ್ನು ಮಾತ್ರ ಹೊತ್ತು ತರುತ್ತಿಲ್ಲವಂತೆ. ಬದಲಿಗೆ ಮಾದಕ ವಸ್ತುಗಳನ್ನು ಸಾಗಿಸಲು ಕೂಡ ಬಳಕೆ ಮಾಡಲಾಗ್ತ ಇದ್ಯಂತೆ. ಇದರ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರೇ ಮಾಹಿತಿ ನೀಡಿದ್ದಾರೆ. ಡ್ರಗ್ಸ್ ದಂಧೆ ಮಾಡೋರು ಕೂಡ ಈ ಡ್ರೋನ್ ಬಳಸಿಕೊಂಡು ಕುಳಿತಲ್ಲೇ ವ್ಯವಹಾರ ನಡೆಸ್ತಾ ಇದಾರೆ,ಇದನ್ನು ಕೂಡ ತಡೆಯಬೇಕಾಗಿದೆ ಎಂದಿದ್ದಾರೆ. ಗಡಿ ಬಳಿ ಇಷ್ಟು ದಿನ ಒಳ ನುಸುಳಿ ಬರುವ ಉಗ್ರರು, ಎದುರಾಳಿಗಳಾಗಿ ನಿಂತಿರುವ ಶತ್ರು ಸೈನಿಕರ ಚಲನ ವಲನಗಳ ಮೇಲೆ ಮಾತ್ರ ನಿಗಾ ಇಡಬೇಕಾಗಿತ್ತು. ಆದ್ರೆ ಈಗ ಅಗೋಚರವಾಗಿ ಆಕಾಶದಲ್ಲಿ ಹಾರಿ ಬರುವ ಡ್ರೋನ್ ಗಳ ಮೇಲೆಯೂ ಹದ್ದಿನ ಕಣ್ಣು ಇಡಬೇಕಾಗಿದೆ. ಇದು ಸೇನೆಗೆ ಮತ್ತೊಂದು ಸವಾಲಾಗಿದೆ. ಈಗಾಗಲೇ ಸೇನಾ ಪಡೆ ಗಡಿ ಬಳಿ ಇಂತಹ ಹಲವು ಡ್ರೋನ್ ಗಳನ್ನು ಹೊಡೆದುರುಳಿಸಿರುವ ಮಾಹಿತಿ ಇದೆ. ಆದರೆ, ಶತ್ರುಗಳು ಈ ಸುಲಭ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಬಳಸುವ ಆತಂಕವಂತೂ ಇದ್ದೇ ಇದೆ.

ದೇಶದಲ್ಲಿ ಈಗಾಗಲೇ ಡ್ರೋನ್ ಹಾರಾಟಕ್ಕೆ ನಿರ್ಬಂಧ
ನೋಂದಣಿ ಮಾಡಿಕೊಂಡವರಿಗಷ್ಟೇ ಇನ್ಮುಂದೆ ಅವಕಾಶ

ಯಾವಾಗ ಶತ್ರುಗಳು, ದಂಧೆ ಕೋರರು ಡ್ರೋನ್ ಗಳನ್ನು ಬಳಸಲು ಆರಂಭಿಸಿದ್ರೋ ಅದಾಗಲೇ ದೇಶದಲ್ಲಿ ಡ್ರೋನ್ ಗಳ ಹಾರಾಟಕ್ಕೆ ಎಲ್ಲಾ ಕಡೆ ನಿರ್ಬಂಧ ಹೇರಲಾಗ್ತಾ ಇದೆ. ರಾಜ್ಯ ಸರ್ಕಾರಗಳು ಕೂಡ ಡ್ರೋನ್ ಗಳ ಹಾರಾಟಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಈಗಂತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಗಡಿ ರಾಜ್ಯಗಳಲ್ಲಿ ಡ್ರೋನ್ ಗಳ ಹಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ದೇಶದಲ್ಲಿನ ಸೂಕ್ಷ್ಮ ಪ್ರದೇಶಗಳು, ಜಲಾಶಯಗಳು, ಪ್ರಮುಖ ಕಟ್ಟಡಗಳ ಹತ್ತಿರದಲ್ಲಂತೂ ಡ್ರೋನ್ ಗಳನ್ನು ಹಾರಿಸವಂತೆಯೇ ಇಲ್ಲ. ಮೊದಲು ಡ್ರೋನ್ ಬಂದಾಗ ಇದು ಇಷ್ಟೊಂದು ಅಪಾಯವನ್ನು ತಂದೊಡ್ಡಬಲ್ಲದು, ಈ ತಂತ್ರಜ್ಞಾನವನ್ನು ಉಗ್ರರು,ದಂಧೆ ಕೋರರು ಬಳಸಿಕೊಳ್ಳಬಹುದು ಅಂತ ಊಹಿಸಿರಲಿಲ್ಲ. ಆದ್ರೆ,ಯಾವಾಗ ಇದನ್ನೇ ಅಟ್ಯಾಕ್ ಮಾಡಲು ಕೂಡ ಬಳಸಲು ಆರಂಭಿಸಿದ್ದಾರೋ ಆಗ ನಿರ್ಭಂದಿಸೋದು ಕೂಡ ಅನಿವಾರ್ಯವಾಗಿದೆ.

ಡ್ರೋನ್​ಗಳನ್ನು ವ್ಯಾಕ್ಸಿನ್ ಪೂರೈಕೆಗೆ, ಮೆಡಿಸಿನ್ ಪೂರೈಕೆಗೆ, ತುರ್ತು ಸಂದರ್ಭದಲ್ಲಿ ಬಳಕೆ ಮಾಡೋದಕ್ಕೆ ಚಿಂತನೆ ಮಾಡ್ತಾ ಇದ್ರೆ ಇನ್ನೊಂದು ಕಡೆ ಉಗ್ರರು ಇದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಳ್ತಾ ಇರೋದು ಆತಂಕಕಾರಿ. ಆದ್ರೆ, ಇಂತಹ ಡ್ರೋನ್ ದಾಳಿಯನ್ನು ಹಿಮ್ಮೆಟಿಸೋದಕ್ಕೆ ಭಾರತ ಕೂಡ ಸಮರ್ಥವಾಗಿದೆ ಅನ್ನೋದು ಕೂಡ ಸಂತಸ ತರುವ ವಿಚಾರ.

The post ಡ್ರೋಣ್ ದಾಳಿ ಕಣ್ಗಾವಲಿಗೆ DRDO ಹೊಸ ತಂತ್ರ.. ಪತ್ತೆಯಾದ ಕ್ಷಣದಲ್ಲೇ ‘ಆ’ ಡ್ರೋಣ್ ಢಮಾರ್ appeared first on News First Kannada.

Source: newsfirstlive.com

Source link