ಔಷಧ ಇಲ್ಲದೇ ಒಂದು ಪ್ರಾಣ ವಿಲವಿಲ ಒದ್ದಾಡುತ್ತಿರುತ್ತೆ. ತುರ್ತಾಗಿ ಔಷಧ ತಲುಪಿಸಲೇಬೇಕು. ಇಲ್ಲಾ ಅಂದರೆ ಪ್ರಾಣಪಕ್ಷಿಯೇ ಹಾರಿಹೋಗುತ್ತೆ. ಅಂತಹ ಸಂದರ್ಭದಲ್ಲಿ ಏನು ಮಾಡೋದು? ಡೋಂಟ್‌ ವರಿ, ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ರಕ್ಕೆ ಬಿಚ್ಚಿ ಹಾರಿ ಬರಲಿದೆ ಡ್ರೋನ್. ಏನು ಇದರ ವಿಶೇಷ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ..

ಇಲ್ಲಿಯವರೆಗೆ ನೀವು, ನಾವು ಮದುವೆ ಸಮಾರಂಭಗಳಲ್ಲಿ, ಫ್ರೀ ವೆಡ್ಡಿಂಗ್‌ ಫೋಟೋಶೂಟ್‌ಗಳಲ್ಲಿ, ರಾಜಕೀಯ ಸಮಾರಂಭಗಳಲ್ಲಿ, ಹೊಲ ಗದ್ದೆಗಳ ಸರ್ವೇಗಳಲ್ಲಿ, ಸಿನಿಮಾ ಚಿತ್ರೀಕರಣಗಳಲ್ಲಿ, ದೇಶದ ಗಡಿ ಪ್ರದೇಶಗಳಲ್ಲಿ ಡ್ರೋನ್‌ ಹಾರಾಟವನ್ನು ನೋಡಿದ್ದೇವೆ. ಆದರೆ, ಇದೀಗ ಬೆಂಗಳೂರಿನ ಡ್ರೋನ್‌ ತಯಾರಕ ಕಂಪನಿಯೊಂದು ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಬೇರೆ ಬೇರೆ ಕೇತ್ರದಲ್ಲಿ ಕಂಡುಬಂದ ಡ್ರೋನ್‌ ಇನ್ನು ಮುಂದೆ ವೈದ್ಯಕೀಯ ಕ್ಷೇತ್ರದಲ್ಲೂ ಕಾಣಿಸಲಿದೆ.

ಕೊರೊನಾದಂಥ ಮಹಾಮಾರಿ ಇಡೀ ವಿಶ್ವಕ್ಕೆ ಕಲಿಸಿದ ಪಾಠ ಒಂದಾ ಎರಡಾ? ನಮ್ಮ ತಂತ್ರಜ್ಞಾನಿಗಳ, ವಿಜ್ಞಾನಿಗಳ ಸಂಶೋಧನೆಗೆ ನಿಜವಾದ ಸವಾಲು ಒಡ್ಡಿದ್ದೇ ಕೊರೊನಾ. ಅದೊಂದು ಕಣ್ಣಿಗೆ ಕಾಣದ ಚಿಕ್ಕ ವೈರಸ್ ಇಡೀ ವಿಶ್ವಕುಲವನ್ನೇ ಬೆಚ್ಚಿ ಬೀಳಿಸಿ ಬಿಡ್ತು. ತಾನಾಯಿತು ತನ್ನಪಾಡಾಯಿತು ಅಂತ ಬೆಚ್ಚಗೆ ಇದ್ದವರೆಲ್ಲ ಚಳಿ ಬಿಟ್ಟು ಎದ್ದೇಳುವಂತೆ ಮಾಡಿ ಬಿಡ್ತು. ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ಇನ್ನಷ್ಟು ಸಂಶೋಧನೆಗೆ ಪ್ರೇರೇಪಿಸಿ ಬಿಡ್ತು. ಅಂತಹ ಒಂದು ಪ್ರೇರಣ ಸಂಶೋಧನೆಯಲ್ಲಿ ಡ್ರೋನ್‌ ಮೂಲಕ ಔಷಧ ಸಾಗಾಟವೂ ಒಂದು.

ಆಸ್ಪತ್ರೆಗೆ ಡ್ರೋನ್‌ ಮೂಲಕ ಔಷಧ ಸಾಗಾಟ
ಹೌದು, ಇಂತಹ ಒಂದು ಕೆಲಸ ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ, ಚೀನಾದಲ್ಲಿ ಇದೆ. ತುರ್ತು ಸಂದರ್ಭದಲ್ಲಿ ಅಲ್ಲಿ ಆಸ್ಪತ್ರೆ ಇಂದ ಆಸ್ಪತ್ರೆ ಔಷಧ ಸೇರಿದಂತೆ ವೈದ್ಯಕೀಯ ಉಪಕರಣಗಳ ಸಾಗಾಟ ನಡೆಯುತ್ತಿದೆ. ಗುಡ್ಡಗಾಡು, ಕಣಿವೆ ಅಂತಹ ಪ್ರದೇಶದಲ್ಲಿ ಸಂಚಾರ ಅಸಾಧ್ಯ ಅನ್ನುವ ಹಂತದಲ್ಲಿ ಡ್ರೋನ್‌ ಉಪಯೋಗಿಸಿ ಔಷಧ ಸಾಗಾಟ ಮಾಡಲಾಗುತ್ತಿದೆ. ಆಗಾಗ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ನಮ್ಮ ದೇಶದಲ್ಲಿಯೂ ಇಂತಹ ಸಂಶೋಧನೆಯ ಅಗತ್ಯ ಇತ್ತು. ಈಗ ಆಗ್ತಾ ಇರೋದು ಅದೇ ಕೆಲಸ. ಅದರಲ್ಲಿಯೂ ನಮ್ಮ ರಾಜ್ಯದಲ್ಲಿಯೇ ಪ್ರಯೋಗ ನಡೆಯುತ್ತಿದೆ ಅನ್ನೋದು ಹೆಮ್ಮೆಯ ವಿಚಾರ.

ಗೌರಿಬಿದನೂರಿನಲ್ಲಿ ಔಷಧ ಸಾಗಾಟ ಪ್ರಯೋಗ
ಇಂಥ ಒಂದು ಮಹತ್ವದ ಪ್ರಯೋಗಕ್ಕೆ ಮುಂದಾಗಿರುವುದು ಟಿಎಎಸ್‌ ಕಂಪನಿ. ಬೆಂಗಳೂರಿನಲ್ಲಿರುವ ಈ ಕಂಪನಿ ಕಾರ್ಯವೇ ಡ್ರೋನ್‌ ಉತ್ಪಾದಿಸುವಂತಹದ್ದು. 2018 ರಿಂದ ಡ್ರೋನ್‌ ಕ್ಷೇತ್ರದಲ್ಲಿ ನಾನಾ ಪ್ರಯೋಗವನ್ನು ಮಾಡುತ್ತಲೇ ಬಂದಿರುವ ಹೆಗ್ಗಳಿಕೆ ಈ ಕಂಪನಿಗಿದೆ. 2020ರಲ್ಲಿಯೇ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಔಷಧ ಸಾಗಾಟದ ಪ್ರಯೋಗಕ್ಕೆ ಅನುಮತಿ ಪಡೆದಿತ್ತು. ಹಾಗಾದ್ರೆ ಇಷ್ಟೇಕೆ ತಡ ಮಾಡಿದ್ರು ಅಂಥ ನಿಮಗೆ ಪ್ರಶ್ನೆ ಮೂಡಬಹುದು. ಅದಕ್ಕೆ ಸಿಗುವ ಉತ್ತರ ಕೊರೊನಾ ಮಹಾಮಾರಿ. ಆದ್ರೆ, ಇದೀಗ ಕಂಪನಿ ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಯೋಗಕ್ಕೆ ಸಜ್ಜಾಗಿದೆ. ಅದಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆ ಗೌರಬಿದನೂರು. ನಮ್ಮ ಐಟಿ ನಗರ ಬೆಂಗಳೂರಿನಿಂದ ಸುಮಾರು 80 ಕಿಲೋ ಮೀಟರ್‌ ದೂರ. ಖ್ಯಾತ ವೈದ್ಯ ಡಾ.ದೇವಿ ಶೆಟ್ಟಿ ಅವರ ಆಸ್ಪತ್ರೆಯ ಸಹಯೋಗ ಇದಕ್ಕೆ ಇದೆ.

ಜೂ.18ರಿಂದ ಔಷಧ ಸಾಗಾಟದ ಪ್ರಯೋಗ ಶುರು
35 ರಿಂದ 45 ದಿನ ನಡೆಯಲಿದೆ ಸತತ ಪ್ರಯತ್ನ
ಚೀನಾ, ಅಮೆರಿಕದಲ್ಲಿ ಡ್ರೋನ್‌ ಮೂಲಕ ಔಷಧ ಸಾಗಾಟದ ವರದಿ ಕೇಳಿದವರಿಗೆ ನಮ್ಮ ದೇಶದಲ್ಲಿಯೂ ಆರಂಭವಾಗಬೇಕಿತ್ತು. ಟ್ರಾಫಿಕ್‌ ಕಿರಿಕಿರಿಯಲ್ಲಿರುವ ದೊಡ್ಡ ದೊಡ್ಡ ಮಹಾನಗರ, ಗುಡ್ಡಗಾಡು ಪ್ರದೇಶಗಳಿಗೆ ಅನುಕೂಲ ಆಗುತ್ತಿತ್ತು. ಸಾವು ನೋವು ಕಡಿಮೆ ಮಾಡಬಹುದಾಗಿತ್ತು ಅಂಥ ಅಂದುಕೊಂಡವರು ಅದೆಷ್ಟೋ ಮಂದಿ. ಅಂತೂ ಈಗ ಅದಕ್ಕೆ ಮೂಹೂರ್ತ ಬಂದಾಗಿದೆ. ಜೂನ್‌ 18 ರಿಂದಲೇ ಗೌರಿಬಿದನೂರಿನಲ್ಲಿ ಇಂಥ ಒಂದು ಪ್ರಯೋಗಕ್ಕೆ ಡ್ರೋನ್‌ ಕಂಪನಿ ಸಜ್ಜಾಗಿದೆ. ಸುಮಾರು 35 ರಿಂದ 45 ದಿನಗಳ ಕಾಲ ಡ್ರೋನ್‌ನಳು ಔಷಧ ಹೊತ್ತು ಸಾಗಲಿವೆ.

1 ಕೆಜಿ ಭಾರ ಹೊತ್ತು 15 ಕಿಲೋ ಮೀಟರ್‌ ಹಾರಾಟ
2 ಕೆಜಿ ಭಾರ ಹೊತ್ತು 12 ಕಿಲೋ ಮೀಟರ್‌ ಹಾರಾಟ
ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದಾಗಿರೋ ಈ ಪ್ರಯೋಗದ ಜವಾಬ್ದಾರಿ ಹೊತ್ತಿರೋ ಟಿಎಎಸ್‌ ಕಂಪನಿ ಎರಡು ಡ್ರೋನ್‌ನಲ್ಲಿ ಪ್ರಯೋಗ ನಡೆಸಲಿದೆ. ಒಂದು ಸಣ್ಣ ಡ್ರೋನ್ 1 ಕೆಜಿ ಭಾರದ ಔಷಧ ಹೊತ್ತು ಸುಮಾರು 15 ಕಿಲೋ ಮೀಟರ್‌ ಹಾರಾಟ ನಡೆಸಲಿದೆ. ಮತ್ತೊಂದು ಡ್ರೋನ್ 2 ಕೆಜಿ ಭಾರವನ್ನು ಹೊತ್ತು 12 ಕಿಲೋ ಮೀಟರ್‌ ಹಾರಾಟ ಮಾಡಲಿದೆ. 35 ರಿಂದ 45 ದಿನಗಳ ಕಾಲ ಈ ಪ್ರಯೋಗ ನಡೆಯಲಿದೆ. ಇದಕ್ಕೆ ಪ್ರತಿ ದಿನ 8 ಗಂಟೆ ಮೀಸಲಿಡಲಾಗಿದೆ. ಡ್ರೋನ್‌ ಹಾರಾಟದ ಸಂದರ್ಭದಲ್ಲಿ ಎದುರಾಗಲಿರುವ ಸವಾಲುಗಳನ್ನು ಪರಿಗಣಿಸಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತೆ.

ಎದುರಾಗುವ ಸವಾಲುಗಳು ಏನು?
ವಿಜ್ಞಾನಿಗಳು ಸಂಶೋಧಿಸಿದ ರಾಕೆಟ್‌ನಿಂದ ಹಿಡಿದು, ಆಟ ಆಡುವ ಮಗುವೊಂದು ನಿರ್ಮಿಸಿದ ಪೇಪರ್‌ ಫ್ಲೈಟ್‌ ಹಾರಾಟದವರೆಗೂ ಅಡ್ಡಿ ಆತಂಕಗಳು ಇದ್ದೇ ಇರುತ್ತವೆ. ಇದಕ್ಕೆ ಇದೀಗ ಡ್ರೋನ್‌ ಮೂಲಕ ಔಷಧ ಸಾಗಾಟ ಮಾಡುವ ಪ್ರಯೋಗ ಹೊರತಲ್ಲ. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಡ್ರೋನ್‌ ಹಾರಿಸಲಾಗುತ್ತಿತ್ತು. ಆದ್ರೆ ಈಗ ಕನಿಷ್ಠ 15ರಿಂದ 20 ಕಿಲೋ ಮೀಟರ್‌ ದೂರದವರೆಗೂ ಹಾರಿಸಬೇಕು. ಅಂತಹ ಸಂದರ್ಭದಲ್ಲಿ ಎತ್ತರದ ಮರಗಳು, ಎತ್ತರದ ಬಿಲ್ಡಿಂಗ್‌ಗಳು, ವಿದ್ಯುತ್‌ ಲೈನ್‌ಗಳು, ಕೇಬಲ್‌ ವೈರ್‌ಗಳನ್ನು ತಪ್ಪಿಸಿಕೊಂಡು ಹೇಗೆ ಸಾಗುತ್ತದೆ ಅನ್ನವುದನ್ನು ನೋಡಬೇಕಿದೆ. ಸದ್ದು ಮಾಡುತ್ತಾ ಡ್ರೋನ್‌ ಸಾಗುವುದರಿಂದ ಪಕ್ಷಿಗಳು ಹತ್ತಿರ ಬರಲಾರವು ಎನ್ನಲಾಗುತ್ತಿದೆ.

ಔಷಧ ಸಾಗಾಟದ ಕಾರ್ಯಾಚರಣೆ ಹೇಗೆ ನಡೆಯುತ್ತೆ?
ವೈದ್ಯರಾದವರು ಅಥವಾ ರೋಗಿಯ ಸಂಬಂಧಿಕ ಅಥವಾ ರೋಗಿಯಾದವನ್ನು ಬೇಕಾದಂತಹ ಔಷಧದ ಮಾಹಿತಿಯನ್ನು ಔಷಧ ಸರಬರಾಜು ಸಾಫ್ಟ್‌ವೇರ್‌ಗೆ ರವಾನಿಸಬೇಕು. ತಕ್ಷಣ ಆ ಕಂಪನಿಯ ಸಿಬ್ಬಂದಿ ಡ್ರೋನ್‌ಗೆ ಲೋಡ್‌ ಮಾಡುತ್ತಾನೆ. 4ಜಿ ತಂತ್ರಜ್ಞಾನ, ಔಷಧ ತಲುಪಿಸಬೇಕಾದ ಲೋಕೇಶ್‌ ಆಧಾರದ ಮೇಲೆ ಡ್ರೋನ್‌ ಹಾರಾಟ ನಡೆಸಲಿದೆ. ನಿಗದಿತ ಸ್ಥಳ ತಲುಪಿದ ಮೇಲೆ ಒಂದು ನೆಲಕ್ಕೆ ಇಳಿದು ಔಷಧ ವಿತರಿಸುವಂಥದ್ದು, ಇನ್ನೊಂದು ಸುಮಾರು 5 ಮೀಟರ್‌ ಎತ್ತರದಿಂದ ಹಗ್ಗದ ಮೂಲಕ ಔಷಧ ಇಳಿಸುವಂತಹದ್ದು. ಈ ಎರಡೂ ರೀತಿಯ ಪ್ರಯೋಗ ನಡೆಸಲಾಗುತ್ತೆ.

ಶೀಘ್ರದಲ್ಲೇ ಔಷಧ ಹೊರಲಿದೆ ಡ್ರೋನ್‌
ಟಿಎಎಸ್‌ 45 ದಿನಗಳ ಕಾಲ ನಡೆಸಲಿರುವ ಪ್ರಯೋಗದಲ್ಲಿ ಎದುರಾಗಲಿರುವ ತಾಂತ್ರಿಕ ಸವಾಲುಗಳ ಬಗ್ಗೆ ಸ್ಟಡಿ ಮಾಡಲಿದೆ. ಅದನ್ನು ಯಾವ ರೀತಿ ಎದುರಿಸಬೇಕು, ಪರಿಹಾರ ಮಾರ್ಗ ಏನು ಅನ್ನುವುದನ್ನೆಲ್ಲ ಜಾಲಾಡಲಿದೆ. ಅದಕ್ಕೆ ಬೇಕಾದಂತಹ ಪರಿಹಾರವನ್ನು ಇದೇ ಸಮಯದಲ್ಲಿ ಕಂಡುಕೊಳ್ಳಲಿದೆ. ಎಲ್ಲವೂ ಯಶಸ್ವಿಯಾದ ಬಳಕ ಕೇಂದ್ರ ಸರ್ಕಾರಕ್ಕೆ ವರದಿ ರವಾನೆಯಗಲಿದೆ. ವರದಿ ನೋಡಿದ ಬಳಿಕ ಸರ್ಕಾರ ಡ್ರೋನ್‌ನಲ್ಲಿ ಔಷಧ ಸಾಗಾಟಕ್ಕೆ ಅನುಮತಿ ನೀಡಲಿದೆ. ಈ ಎಲ್ಲಾ ಕಾರ್ಯವೂ ಶೀಘ್ರವೇ ಮುಗಿಯುವ ವಿಶ್ವಾಸವನ್ನು ಟಿಎಎಸ್‌ ಕಂಪನಿಯ ಡೈರೆಕ್ಟರ್‌ ಗಿರೀಶ್‌ ರೆಡ್ಡಿ ತಿಳಿಸುತ್ತಾರೆ.

20 ನಿಮಿಷದಲ್ಲಯೇ 15 ಕಿಲೋ ಮೀಟರ್‌ ಹಾರಾಟ
ಬೆಂಗಳೂರಿನಂತಹ ನಗರದಲ್ಲಿ ಟ್ರಾಫಿಕ್‌ನದ್ದೆ ಕಿರಿಕಿರಿ. ಇಲ್ಲಿ ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ನಗದಿತ ಅವಧಿಯಲ್ಲಿ ಆಸ್ಪತ್ರೆಗೆ ಸಾಗಿಸುವುದೇ ಕಷ್ಟ. ಇರುವುದು ಒಂದೇ ಮಾರ್ಗ ಅದುವೇ ಜೀರೋ ಟ್ರಾಫಿಕ್‌. ಇದನ್ನು ಹೊರತುಪಡಿಸಿ ಅನ್ಯ ಮಾರ್ಗಗಳೇ ಇಲ್ಲದಂತಾಗಿ ಬಿಟ್ಟಿದೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ನಿಗದಿತ ಅವಧಿಯೊಳಗೆ ವಾಹನ ಸಂಚಾರದ ಮೂಲಕ ತಲುಪುವುದು ಅಸಾಧ್ಯದ ಮಾತು. ಆದ್ರೆ, ಇದಕ್ಕೆಲ್ಲ ಪರಿಹಾರ ಮಾರ್ಗ ಅಂದರೆ ಡ್ರೋನ್‌ ಮೂಲಕ ಔಷಧ ಸಾಗಾಟ. ಹೌದು, ಔಷಧ ಹೊತ್ತ ಡ್ರೋನ್‌ 15 ಕಿಲೋ ಮೀಟರ್‌ ದೂರವನ್ನು ಕೇವಲ 20 ನಿಮಿಷದಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ.

ಇಲ್ಲಿಯವರೆಗೂ ತಂತ್ರಜ್ಞಾನದಲ್ಲಿ ನಾವು ಎಷ್ಟೇ ಪ್ರಗತಿ ಸಾಧಿಸಿದರೂ ಕಮ್ಮಿನೆ. ಅಂತೂ ಡ್ರೋನ್‌ನಲ್ಲಿ ಔಷಧ ಸಾಗಾಟಕ್ಕೆ ದೇಶ ಸಜ್ಜಾಗುತ್ತಿದೆ. ಪ್ರಯೋಗ ಯಶಸ್ವಿಯಾಗಲಿ, ಶೀಘ್ರವೇ ಔಷಧ ಹೊತ್ತು ಡ್ರೋನ್‌ ಹಾರಾಡಲಿ ಅನ್ನುವುದೇ ನಮ್ಮ ಆಶಯ.

The post ಡ್ರೋನ್​ ಮೂಲಕ ಮನೆ ಬಾಗಿಲಿಗೇ ಬರುತ್ತೆ ಔಷಧಿ -ಗೌರಿಬಿದನೂರಿನಲ್ಲಿ ಶುರುವಾಯ್ತು ಪ್ರಯೋಗ appeared first on News First Kannada.

Source: newsfirstlive.com

Source link