ತಂದೆ ಆಫ್ರಿಕಾದಲ್ಲಿ ಖ್ಯಾತ ಉದ್ಯಮಿ, ಮಾಸ್ಟರ್ ಡಿಗ್ರಿ ಮಾಡಲು ಬೆಂಗ್ಳೂರಿಗೆ ಬಂದ ಮಗ ಅಕ್ರಮ ಮದ್ಯ ವ್ಯಾಪಾರಿ

ತಂದೆ ಆಫ್ರಿಕಾದಲ್ಲಿ ಖ್ಯಾತ ಉದ್ಯಮಿ, ಮಾಸ್ಟರ್ ಡಿಗ್ರಿ ಮಾಡಲು ಬೆಂಗ್ಳೂರಿಗೆ ಬಂದ ಮಗ ಅಕ್ರಮ ಮದ್ಯ ವ್ಯಾಪಾರಿ

ಈ ಸಿಲಿಕಾನ್ ಸಿಟಿ ಬೆಂಗಳೂರು ಎನ್ನುವುದೇ ಒಂದು ದೊಡ್ಡ ಸಾಗರ. ಜಗತ್ತಿನ ಮೂಲೆ ಮೂಲೆಯ ಜನರು ಇಲ್ಲಿ ಕಾಣಸಿಗ್ತಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದವರನ್ನು ಈ ಬೆಂಗಳೂರು ಯಾವತ್ತೂ ಕೈ ಬಿಟ್ಟಿಲ್ಲ. ಬೆಂಗಳೂರಿಗೆ ಬಂದು ಬದುಕಿಗೆ ಭದ್ರ ಬುನಾದಿ ಹಾಕಿದವರು ಅದೆಷ್ಟೋ.
ಸಾಗರ ಎಂದ್ಮೇಲೆ ಇಲ್ಲಿ ಒಳ್ಳೆಯದು-ಕೆಟ್ಟದು ಇದೆ. ನಾವು ಯಾವುದನ್ನು ಆಯ್ಕೆ ಮಾಡ್ತೀವಿ ಎನ್ನುವುದು ನಮ್ಮ ಮೇಲೆ ನಿಂತಿದೆ. ಶೋಕಿ ಜೀವನಕ್ಕೆ ಬಹುಬೇಗ ಬಲಿ ಬೀಳುವ ಕೆಲವರು ಬೇಗನೇ ಅಡ್ಡದಾರಿ ಹಿಡಿತಾರೆ. ಅಂತಹದ್ದೇ ಘಟನೆಯೊಂದು ಇದೀಗ ನಗರದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಗಳೇ ಸಂಖ್ಯೆ ಅಳತೆಗೆ ನಿಲುಕದ್ದು. ವಿವಿಧ ಕಾರಣ ಹೇಳಿ ಬೆಂಗಳೂರು ಸೇರುವ ಕೆಲವರು ಮುಂದೆ ಇಲ್ಲೇ ಬಿಡಾರ ಹೂಡಿ ಮಾಡಬಾರದ ಕೆಲ್ಸ ಮಾಡಿ ಸಿಕ್ಕಿ ಬೀಳ್ತಾರೆ. ಇತ್ತೀಚಿಗಷ್ಟೇ ಬಾಂಗ್ಲಾ ಯುವತಿಯ ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಾಗ್ಲೆ ಗೊತ್ತಾಗಿದ್ದು ಇವರು ಅಕ್ರಮ ನೆಲೆಸಿಗರೆಂದು. ಹೀಗೆ ಹಲವು ವಿದೇಶಿ ಪ್ರಜೆಗಳು ಇಲ್ಲಿ ನೆಲೆಸಿದ್ದು, ಅವರ ಕೃತ್ಯ ಹೊರಬಂದಾಗ್ಲೆ ಅವರು ಅಕ್ರಮವಾಗಿ ನೆಲೆಸಿದ್ದಾರೆನ್ನುವುದು ಗೊತ್ತಾಗುತ್ತೆ.

ಜಗತಿಕವಾಗಿ ಪ್ರಖ್ಯಾತವಾದ ಬೆಂಗಳೂರು, ವಿದ್ಯಾಭ್ಯಾಸ ವಲಯದಲ್ಲೂ ಸದಾ ಮುಂದೆ ಇದೆ. ಉತ್ತಮ ಗುಣಮಟ್ಟದ ಕಾಲೇಜುಗಳು ಇಲ್ಲಿವೆ. ಉತ್ತಮ ಸೌಕರ್ಯ ಹೊಂದಿರುವ ಇಲ್ಲಿಯ ಕಾಲೇಜುಗಳು ದೇಶ ಮಾತ್ರವಲ್ಲದೇ ವಿದೇಶಗಳ ಪ್ರಜೆಗಳನ್ನು ಸೆಳೆಯುತ್ತದೆ. ಆದ್ದರಿಂದ ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡ್ಕೊಂಡು ಉತ್ತಮ ಬದುಕು ಕಂಡ್ಕೊಂಡಿದ್ದಾರೆ.

ಅದರಂತೆ ಅವನೊಬ್ಬ ಸಾವಿರಾರು ಕಿಲೋ ಮೀಟರ್ ಆಚೆಯ ಆಫ್ರಿಕಾದಿಂದ ಇಲ್ಲಿಗೆ ಮಾಸ್ಟರ್ ಡಿಗ್ರಿಗೆಂದು ಬಂದಿದ್ದ. ಇಲ್ಲಿ ಬಂದು ಉತ್ತಮ ವಿದ್ಯಾಭ್ಯಾಸ ಪಡೆದು ಮುಂದಿನ ಬದುಕಿಗೊಂದು ಅಡಿಪಾಯ ಹಾಕಿಕೊಳ್ಳಬೇಕಿತ್ತು. ಆದ್ರೆ ಆತ ಬದುಕಿಗೆ ಅಡಿಪಾಯ ಹಾಕೋ ಬದಲು ಬೇರೊಂದು ಲೋಕಕ್ಕೆ ಎಂಟ್ರಿ ಕೊಟ್ಟಿದ್ದ.

ಸ್ಟೂಡೆಂಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಅಲೆಕ್ಸಾಂಡರ್
ಕಾಲೇಜಿಗೆ ಚಕ್ಕರ್ ಮದ್ಯ ಮಾರಾಟಕ್ಕೆ ಹಾಜರಾಗ್ತಿದ್ದ ಭೂಪ

ಲಾಕ್ ಡೌನ್ ವೇಳೇ ತಣ್ಣಾಗಾಗಿದ್ದ ಕ್ರೈಂ ಜಗತ್ತು ಇದೀಗ ಅನ್ಲಾಕ್ ಆಗುತ್ತಿದ್ದಂತೆಯೆ ಮತ್ತೆ ಚಿಗುರಿಕೊಳ್ತಿದೆ. ಅದರಲ್ಲೂ ಅಕ್ರಮವಾಗಿ ಇಲ್ಲಿ ಬಂದು ನೆಲೆಸಿದವರ ಹಾವಳಿ ಕೂಡ ಹೆಚ್ಚಾಗ್ತಿದೆ.  ಅದೇ ರೀತಿ ಆಫ್ರಿಕಾ ಮೂಲದ ಅಲೆಕ್ಸಾಂಡರ್ ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕೆಂದು ಸ್ಟೂಡೆಂಟ್ ಮೀಸಾದಡಿ ಬೆಂಗಳೂರಿಗೆ ಬಂದು ನೆಲೆಸಿದ್ದ.ಮಾಸ್ಟರ್ ಡಿಗ್ರಿ ಓದಲು ಬಂದಿದ್ದ ಅಲೆಕ್ಸಾಂಡರ್​ಗೆ ಇಲ್ಲಿಯ ಮಾದಕ ಲೋಕದ ಲಿಂಕ್ ಸಿಕ್ಕಿತ್ತು. ಸಹವಾಸ ದೋಷನೋ ಅಥವಾ ಇವ್ನ ಕೆಟ್ಟ ಚಾಳಿಯೋ ಗೊತ್ತಿಲ್ಲ.. ವಿದ್ಯೆ ಮಾತ್ರ ಇವ್ನಿಗೆ ತಲೆಗೆ ಹತ್ಲಿಲ್ಲ. ಮುಂದೆ ಇವನು ಇದೇ ಮದ್ಯಲೋಕದಲ್ಲಿ ಮುಳುಗಿದ್ದ. ಎಲ್ಲಿಯವರೆಗಂದ್ರೆ, ತಾನು ಯಾವ್ ಕಾರಣಕ್ಕೆ ದೂರದ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದೇನೆ ಎಂಬುದನ್ನು ಕೂಡ ಅವನು ಮರೆತುಹೋದಿದ್ದ. ಮಾಸ್ಟರ್ ಡಿಗ್ರಿಗೆಂದು ಬಂದವನು ಮಾಡಿದ್ದು ಮಾತ್ರ ಮದ್ಯ ಮಾರಾಟ.

ಮಾಸ್ಟರ್ ಡಿಗ್ರಿ ಮಾಡಲು ಬಂದವನಿಂದ ಮದ್ಯ ಮಾರಾಟ
ವೀಸಾ ಅವಧಿ ಮುಗಿದ್ರೂ ಸ್ವದೇಶಕ್ಕೆ ಹಿಂದಿರುಗದ ಆರೋಪಿ

ಬೆಂಗಳೂರಿಗೆ ಬಂದ ಅಲೆಕ್ಸಾಂಡರ್ ಕಾಲೇಜಿನಲ್ಲಿ ಅಡ್ಮಿಶನ್ ಏನೋ ಆಗಿದ್ದ. ಆದ್ರೆ ಕ್ಲಾಸ್​​ಗೂ ಹೋಗಿಲ್ಲ, ಎಕ್ಸಾಂ ಕೂಡ ಬರೆದಿಲ್ಲ. ಮದ್ಯ ಮಾರಾಟದಲ್ಲಿಯೇ ಸಂಪೂರ್ಣವಾಗಿ ಮುಳುಗಿ ಹೋಗಿದ್ದ. ಎಕ್ಸಾಂ ಬರೆಯದ ಪರಿಣಾಮ ಫೇಲ್ ಆಗಿದ್ದ. ಇಲ್ಲಿಯ ನಶೆಯ ಲೋಕ ಆತನನ್ನು ತನ್ನ ಬಲೆಗೆ ಬೀಳಿಸಿತ್ತೋ ,ಇಲ್ಲಾ ಅವನಾಗಿಯೇ ಅದರ ಜಾಡು ಹಿಡಿದು ಹೊರಟನೋ ಗೊತ್ತಿಲ್ಲ. ಆದ್ರೆ ಆತ ಮಾತ್ರ ಕಾಲೇಜಿಗಿಂತ ಹೆಚ್ಚಾಗಿ ಬಾರ್​​ನಲ್ಲಿಯೇ ಇರ್ತಿದ್ದ.

ಇನ್ನೇನು ಬಂದ ಸ್ಟೂಡೆಂಟ್ಸ್ ವೀಸಾ ಕೂಡ ಮುಗಿಯುತ್ತಿದ್ಧಂತೆಯೇ ಕುಟುಂಬಸ್ಥರು ಕೂಡ ಮನೆಗೆ ಬಾ ಎಂದು ಕರೆದಿದ್ದಾರೆ. ಕೋರ್ಸ್ ಮುಗಿಸದೇ ದೇಶಕ್ಕೆ ತೆರಳಿದ್ರೆ ತಗ್ಲಾಕೊಳ್ತೀನಿ ಅನ್ಕೊಂಡಿದ್ದ ಅವನು ವೀಸಾ ಮುಗಿದ್ರು ಸ್ವಂತ ದೇಶಕ್ಕೆ ತೆರಳದೇ ನಗರದ ಬಾಬುಸಪಾಳ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ. ಇಲ್ಲೇ ಕೆಲ್ಸ ಆಗಿದೆ, ಸ್ವಲ್ಪ ತಿಂಗಳು ಬಿಟ್ಟು ಬರ್ತಿನೆಂದು ಮನೆಯವರಿಗೆ ಸುಳ್ಳು ಹೇಳಿ ಕಾಗೆ ಹಾರಿಸಿದ್ದ. ಮುಂದೆ ಎಂದಿನಂತೆ ತನ್ನ ಚಾಳಿಯವನ್ನು ಮುಂದುವರೆಸಿದ ಈ ಭೂಪ ಆಫ್ರಿಕನ್ ಪ್ರಜೆಗಳ ಜೊತೆ ಸೇರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕೆಲ್ಸ ಮುಂದುವರೆಸಿದ್ದ

ತಂದೆ ಖ್ಯಾತ ಉದ್ಯಮಿ, ಮಗ ಅಕ್ರಮ ಮದ್ಯದ ವ್ಯಾಪರಿ
ಆಫ್ರಿಕನ್ ಕಿಚನ್ ಹೆಸರಲ್ಲಿ ಪಾರ್ಟಿ ಆರ್ಗನೈಸ್ ಮಾಡ್ತಿದ್ದ ಭೂಪ

ಅಲೆಕ್ಸಾಂಡರ್ ಸ್ಥಿತಿವಂತ ಕುಟುಂಬದಿಂದ ಬಂದವನು. ಈತನ ತಂದೆ ಐವೊರಿ ದೇಶದ ಖ್ಯಾತ ಉದ್ಯಮಿ. ಮಗನ ಓದಿಗೆಂದು ಹಣವನ್ನ ಕಳಿಸ್ತಿದ್ರು. ಆದ್ರೆ ದಾರಿ ತಪ್ಪಿದ ಮಗ ಮಾತ್ರ ಅಕ್ರಮ ಮದ್ಯ ಮಾರಾಟದಲ್ಲಿ ಬ್ಯೂಸಿ ಆಗಿದ್ದ. ಕತ್ತಲಾಗುತ್ತಿದ್ದಂತೆಯೇ ತಾನು ಮಾತ್ರವಲ್ಲದೇ ಇತರನ್ನು ನಶೆಯ ಲೋಕದಲ್ಲಿ ಮುಳುಗುವಂತೆ ಮಾಡ್ತಿದ್ದ. ಪಾರ್ಟಿ ಅರೇಂಜ್ ಮಾಡಿ ಮೋಜು ಮಸ್ತಿಯೆಂದು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡ್ತಿದ್ದ. ಆಫ್ರಿಕನ್ ಕಿಚನ್ ಹೆಸರಲ್ಲಿ ಪಾರ್ಟಿ ಆರ್ಗನೈಸ್ ಮಾಡಿ ಬಿಂದಾಸ್ ಜೀವನ ನಡೆಸುತ್ತಿದ್ದ.

ಬಾಬುಸಪಾಳ್ಯದ ಆರೋಪಿ ನಿವಾಸದ ಮೇಲೆ ಪೊಲೀಸರ ದಾಳಿ
ಕಡೆಗೂ ಖಾಕಿ ಕೈಯಲ್ಲಿ ಲಾಕ್ ಆದ ವಿದೇಶಿ ಪ್ರಜೆ

ಯಾವುದಕ್ಕೂ ಒಂದು ಅಂತ್ಯ ಎನ್ನುವುದು ಇರುತ್ತಲ್ವಾ..? ಎಷ್ಟು ದಿನ ಎಂದು ಜಾತ್ರೆ ಮಾಡೋಕಾಗುತ್ತೆ ಹೇಳಿ. ಅವನ ನಸೀಬು ಕೆಟ್ಟಿತ್ತೋ ಏನೋ..? ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದು ಮಾತ್ರವಲ್ಲದೆ ಅಕ್ರಮ ಮದ್ಯ ಮಾರಾಟ ಮಾಡ್ತಿದ್ದಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇನ್ಫರ್ಮೇಷನ್ ಸಿಗ್ತಿದ್ದಂಗೆ ಫೀಲ್ಡ್​​ಗಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಾಬುಸಪಾಳ್ಯದಲ್ಲಿರುವ ಆರೋಪಿಯ ಅಡಗುತಾಣವನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಕೈಗೆ ಕೋಳ ತೊಡಿಸಿದ್ದಾರೆ.

ಪೊಲೀಸರು ದಾಳಿಯ ವೇಳೆ, ಅಕ್ರಮವಾಗಿ ಸಂಗ್ರಹಿಸಿದ್ದ 4 ವಿಧದ 237 ಬಿಯರ್ ಬಾಟಲ್​​ಗಳನ್ನ ವಶಪಡಿಸಿಕೊಂಡಿದ್ದಾರೆ. ಇದ್ರಿಂದ ಶೋಕಿ ಜೀವನಕ್ಕೆ ಮಾರು ಹೋಗಿದ್ದ ಆಸಾಮಿ ಇದೀಗ ಕಬ್ಬಿಣದ ಸರಳುಗಳ ಹಿಂದೆ ಕಾಲ ಕಳೆಯುವಂತಾಗಿದೆ.

ಲಾಕ್​ಡೌನ್ ವೇಳೆ ಮುದುಡಿ ಕೂತ್ತಿದ್ದ ಕಿರಾತಕರು ಅನ್ ಲಾಕ್ ಆಗುತ್ತಿದ್ದಂತೆಯೇ ಚಿಗುರಿಕೊಂಡಿದ್ದಾರೆ. ನಗರದಲ್ಲಿ ವಿದೇಶಿ ಪ್ರಜೆಗಳ ಕುಕೃತ್ಯ ಕೂಡ ಹೆಚ್ಚಾಗುತ್ತಿತ್ತು ಕಡಿವಾಣ ಹಾಕಬೇಕಾದ ಅನಿವಾರ್ಯತೆ ಪೊಲೀಸರ ಹೆಗಲ ಮೇಲಿದೆ.

 

The post ತಂದೆ ಆಫ್ರಿಕಾದಲ್ಲಿ ಖ್ಯಾತ ಉದ್ಯಮಿ, ಮಾಸ್ಟರ್ ಡಿಗ್ರಿ ಮಾಡಲು ಬೆಂಗ್ಳೂರಿಗೆ ಬಂದ ಮಗ ಅಕ್ರಮ ಮದ್ಯ ವ್ಯಾಪಾರಿ appeared first on News First Kannada.

Source: newsfirstlive.com

Source link