ಕೊರೊನಾ ಎಷ್ಟೋ ಜನ್ರಿಂದ ತಮ್ಮವರನ್ನ ಕಿತ್ಕೊಂಡಿದೆ. ಮನೆಯನ್ನ ಸ್ಮಶಾನ ಮಾಡಿದೆ. ಕಣ್ಣೀರು ಧಾರೆಯಾಗಿ ಹರಿಯೋ ಹಾಗ್‌ ಮಾಡಿದೆ. ಈ ಕುಟುಂಬದ್ದೂ ಅದೇ ಕತೆ. 4 ಜನರ ಕುಟುಂಬ. ಅಪ್ಪ, ಅಮ್ಮ.. ಆರತಿಗೊಬ್ಬಳು, ಕೀರುತಿಗೊಬ್ಬ ಅನ್ನುವಂತೆ ಇಬ್ಬರು ಮಕ್ಕಳು. ಆದ್ರೆ ಮಾರಿ ಹೊಡೆತಕ್ಕೆ ಮಕ್ಕಳು ಅನಾಥರಾಗಿದ್ದಾರೆ. ಹೆತ್ತವರನ್ನ ಕಳೆದುಕೊಂಡು ದಿಕ್ಕಿಲ್ಲದೆ ಕೂತ ಮಕ್ಕಳಿಬ್ಬರ ಕರುಣಾಜನಕ ಕತೆ ಇದು.

ತಂಗಿಯ ಕಣ್ಣುಗಳಲ್ಲಿ ಓದುವ ಕನಸು.. ತಾನು ಟೀಚರ್‌ ಆಗ್ಬೇಕು ಅನ್ನೋ ಆಸೆ.. ಆದ್ರೆ ಮಗಳೇ ನಿನ್ನ ಆಸೆ ನಿಜ ಮಾಡ್ತೀನಿ ಅಂತ ಹೇಳಿದ್ದ ಅಪ್ಪ-ಅಮ್ಮ ಈಗಿಲ್ಲ.. ಮಗನ ಕತೆಯೂ ಅಷ್ಟೇ.. ಈಗಷ್ಟೇ ಗ್ಯಾರೇಜ್‌ನಲ್ಲಿ ಕೆಲಸ ಮಾಡೋಕೆ ಶುರು ಮಾಡಿದ್ದ.. ಕುಟುಂಬದ ಭಾರ ಹೊರುವ ಶಕ್ತಿಯಿಲ್ಲ.. ಇಷ್ಟುದಿನ ಮಾಡು ಮಗನೇ ನಾವಿದ್ದೀವಿ ಅಂತ ಹೇಳ್ತಿದ್ದ ಅಪ್ಪ-ಅಮ್ಮ ಈಗಿಲ್ಲ.. ತಂಗಿಗೆ ಅಣ್ಣ.. ಅಣ್ಣನಿಗೆ ತಂಗಿಯೇ ಈಗ ಆಧಾರ..

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಇಂದಿರಾ ನಗರದ ಈ ಅಣ್ಣ-ತಂಗಿಗೆ ಕೊರೊನಾ ಬದುಕಿನ ಆಧಾರವನ್ನೇ ಕಿತ್ಕೊಂಡ್‌ ಬಿಟ್ಟಿದೆ. ಈ ಇಬ್ಬರೂ ಮಕ್ಕಳು ಒಂದೇ ದಿನದ ಅಂತರದಲ್ಲಿ ಅಪ್ಪ-ಅಮ್ಮನನ್ನ ಕಳೆದುಕೊಂಡು ಬಿಟ್ಟಿದ್ದಾರೆ. ಆಕ್ಸಿಜನ್, ವೆಂಟಿಲೇಟರ್‌ ಬೆಡ್ ಸಿಗದೆ ಮೇ 30 ರಂದು ತಂದೆ ಮಾರೆಪ್ಪ ಮೃತಪಟ್ರೆ, ಮಾರನೇ ದಿನ 31 ರಂದು ತಾಯಿ ‌ಉಕ್ಕಮ್ಮ ಉಸಿರು ಚೆಲ್ಲಿದ್ರು. ಅಲ್ಲಿಗೆ ಈ ಮಕ್ಕಳು ಬದುಕು, ಕನಸು ಎಲ್ಲವೂ ಹೆತ್ತವರ ಜೊತೆಯೇ ಸಮಾಧಿ ಸೇರಿದೆ.

ಈ ದಂಪತಿಗೆ ಮಗಳನ್ನ ಶಿಕ್ಷಕಿ ವೃತ್ತಿಗೆ ಸೇರಿಸ್ಬೇಕು ಅನ್ನೋ ಕನಸಿತ್ತಂತೆ. ಆದ್ರೀಗ ಆಧಾರ ಸ್ತಂಭವೇ ಕುಸಿದು ಬಿದ್ದಿದೆ. ಸಣ್ಣ ವಯಸ್ಸಿನಲ್ಲಿ ಕುಟುಂಬ ಜವಾಬ್ದಾರಿ ಹೊತ್ತ ರಮೇಶ್, ಎಷ್ಟೇ ಕಷ್ಟ ಬಂದ್ರೂ ತಂಗಿ ರಾಶಿಯನ್ನ ಶಿಕ್ಷಕಿಯಾಗಿ ಮಾಡ್ತೀನಿ ಅಂತಿದ್ದಾನೆ. ಆದ್ರೆ ಗ್ಯಾರೇಜಿನಲ್ಲಿ ಕೊಡೋ 5 ಸಾವಿರದಿಂದ ಇಬ್ಬರ ಜೀವನ ನಡೀಬೇಕು. ಹೀಗಾಗಿ ಯಾರಾದ್ರೂ ಸಹೃದಯಿಗಳು ನೆರವು ನೀಡ್ತಾರಾ ಅನ್ನೋ ನಿರೀಕ್ಷೆಯಲಿದ್ದಾರೆ ರಮೇಶ್‌.

ಇನ್ನು ಮೃತ ಉಮ್ಮಕ್ಕ ಅವ್ರ ತಂಗಿ ಕಂಪ್ಲಿ ಪಟ್ಟಣಕ್ಕೆ ಬಂದು ಇಬ್ಬರು ಮಕ್ಕಳನ್ನ ನೋಡ್ಕೊಳ್ತಿದ್ದಾರೆ. ವಿಪರ್ಯಾಸ ಅಂದ್ರೆ ಅವ್ರ ಪತಿ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಇವ್ರೂ ಕೂಡ ಯಾರಾದ್ರೂ ನೆರವು ನೀಡಿ ಈ ಅನಾಥ ಮಕ್ಕಳ ಕೈಹಿಡೀಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

ಒಟ್ನಲ್ಲಿ ಕ್ರೂರಿ ಕೊರೊನಾ ಈ ಕುಟುಂಬದ ನಗುವನ್ನೇ ಕಿತ್ಕೊಂಡಿದೆ. ಮನೆಯ ಆಧಾರ ಸ್ತಂಭವನ್ನ ಕಿತ್ಕೊಂಡಿದೆ. ಕನಸಿಗೆ ಕೊಳ್ಳಿಯಿಟ್ಟಿದೆ. ಸದ್ಯಕ್ಕೆ ಈ ಮಕ್ಕಳಿಗೆ ಬೇಕಿರೋದು ಧೈರ್ಯ, ಸ್ಥೈರ್ಯದ ಮಾತು. ನೆರವು ನೀಡೋ ಕೈಗಳು. ಸಾಂತ್ವನ ಹೇಳೋ ಮನಸ್ಸುಗಳು.

The post ತಂದೆ-ತಾಯಿಯ ಜೊತೆಗೆ ಮಕ್ಕಳ ಬದುಕಿನ ಕನಸನ್ನೇ ನುಂಗಿತು ಕೊರೊನಾ appeared first on News First Kannada.

Source: newsfirstlive.com

Source link