ತಜ್ಞರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿ ರೈತರಿಗೆ ಸಂಕಷ್ಟ ತಂದ ಕಾಡಾನೆ ಹಿಂಡು

ತಜ್ಞರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿ ರೈತರಿಗೆ ಸಂಕಷ್ಟ ತಂದ ಕಾಡಾನೆ ಹಿಂಡು

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಲಕ್ಕಿನಕೊಪ್ಪ ಸುತ್ತಮುತ್ತ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಗುರುವಾರ ಗೋಣಿಬೀಡಿನಲ್ಲಿ ನಾಲ್ಕು ಕಾಡಾನೆಗಳು ಕಾಣಿಸಿಕೊಂಡಿದ್ದವು. ರಸ್ತೆಯ ಅಂಚಿಗೆ ಬಂದಿದ್ದ ಕಾಡಾನೆಗಳನ್ನು ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಹಿಮ್ಮೆಟ್ಟಿಸಿದ್ದಾರೆ.

ಆದರೆ ಕಾಡಿಗೆ ವಾಪಸ್ ತೆರಳದ ಕಾಡಾನೆಗಳು ಪುನಃ ನಿನ್ನೆ ರಾತ್ರಿ ಲಕ್ಕಿನ ಕೊಪ್ಪ ಗ್ರಾಮದ ಅರುಣಾ ಎಂಬವರ ತೋಟಕ್ಕೆ ನುಗ್ಗಿವೆ. ಒಟ್ಟು ನಾಲ್ಕು ಎಕೆರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ, ಬಾಳೆ, ಪೇರಲೆ, ಮಾವು, ಹಲಸನ್ನು ನಾಶಪಡಿಸಿವೆ.

ಭದ್ರಾ ಅಭಯಾರಣ್ಯದಿಂದ ಬರುವ ಆನೆಗಳು ಮಾರಿದಿಬ್ಬ, ಉಂಬ್ಳೆಬೈಲು, ಯರಗನಾಳು ಮೂಲಕ ಪ್ರವೇಶಿಸಿ ಲಕ್ಕಿನಕೊಪ್ಪ, ಕಾಚಿನಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ತೊಂದರೆ ನೀಡುತ್ತಿವೆ. ಈ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಸಕ್ರೆಬೈಲ್ನ ಆನೆಗಳನ್ನು ತಂದು, ಕಾಡಾನೆಗಳನ್ನು ಯರಗನಾಳ್ ಮೂಲಕ ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದರು. ಬಳಿಕ ಆ ಆನೆಗಳು ಮತ್ತೆ ರೈತರಿಗೆ ತೊಂದರೆ ನೀಡಲಾರವು, ವಾಪಸ್ ಇದೆ ದಾರಿಯಲ್ಲಿ ಬರಲಾರವು ಎಂದು ವನ್ಯಜೀವಿ ತಜ್ಞರು ತಿಳಿಸಿದ್ದರು.

ಆದರೆ ಕೆಲವೇ ದಿನಗಳಲ್ಲಿ ಕಾಡಾನೆಗಳು ಮತ್ತೆ ಈ ಭಾಗದ ಸುತ್ತಮುತ್ತ ಕಾಣಿಸಿಕೊಂಡು ಉಪದ್ರ ನೀಡಲು ಆರಂಭಿಸಿವೆ. ಈಗಾಗಲೇ ಸುಮಾರು ನೂರು ಎಕೆರೆಗೂ ಅಧಿಕ ಪ್ರದೇಶದಲ್ಲಿ ಬೆಳೆಗಳನ್ನು ಹಾಳು ಮಾಡಿರುವ ಕಾಡಾನೆಗಳು, ದಿನಕ್ಕೊಬ್ಬರ ತೋಟಕ್ಕೆ ನುಗ್ಗಿ ಭರ್ಜರಿ ಭೋಜನ ನಡೆಸುತ್ತಿವೆ. ಕಳೆದ ಮೂರು ತಿಂಗಳಿನಿಂದಲೂ ಈ ಭಾಗದಲ್ಲಿ ವಿಪರೀತ ತೊಂದರೆ ನೀಡುತ್ತಿರುವ ಕಾಡಾನೆಗಳ ಬಗ್ಗೆ, ಅರಣ್ಯ ಇಲಾಖೆ ದಿಟ್ಟ ಕ್ರಮವನ್ನು ಕೈಗೊಳ್ಳುತ್ತಿಲ್ಲ.

ಜನರನ್ನೇ ಸಮಾಧಾನ ಮಾಡುವ ಕೆಲಸವನ್ನು ಮಾಡುತ್ತಿರುವ ಅರಣ್ಯ ಇಲಾಖೆ ಕಾಡಾನೆಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎನ್ನಲಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ರೈತರ ಬೆಳೆ ನಾಶವಾದರೆ ನಾವೇನು ಮಾಡುವುದಕ್ಕೆ ಆಗುತ್ತೆ. ಕಾಡಂಚಲ್ಲಿ ಹೊಲ, ತೋಟ ಮಾಡಿರುವುದು ನೀವು. ಈಗ ತೊಂದರೆ ಅನುಭವಿಸಬೇಕಾದವರೂ ನೀವೇ ಎನ್ನುವಂತಹ ಮಾತು ಸಿಬ್ಬಂದಿ ಬಾಯಲ್ಲಿ ಬರುತ್ತಿವೆ ಎಂದು ಆರೋಪಿಸಲಾಗಿದೆ.

ಇನ್ನು ಅರಣ್ಯ ಇಲಾಖೆಯ ಹೆಸರನ್ನು ಹೇಳಲು ಇಚ್ಚಿಸದ ಸಿಬ್ಬಂದಿಯೊಬ್ಬರ ಪ್ರಕಾರ, ಕಾಡಂಚಿನಲ್ಲಿ ಕಾಡಾನೆಗಳು ಬರದಂತೆ ಟ್ರಂಚ್ ನಿರ್ಮಿಸಲಾಗಿದೆ. ಈ ಟ್ರಂಚ್ ಹಾಕುವ ಮೊದಲೇ ಕಾಡಾನೆಗಳು ಈ ಭಾಗಕ್ಕೆ ಬಂದಿದ್ದು, ಈಗ ಅವುಗಳಿಗೆ ವಾಪಸ್ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತ ಕಾಡಿನಿಂದ ಬಂದು ಉಪಟಳ ನೀಡುತ್ತಿರುವ ಕಾಡಾನೆಗಳು ಎಷ್ಟಿವೆ ಎನ್ನುವುದು ಸಹ ಅಸ್ಪಷ್ಟವಾಗಿದ್ದು, ಗ್ರಾಮಸ್ಥರು ನಾಲ್ಕು ಕಾಡಾನೆಗಳು ಇವೆ ಎಂದರೆ, ಅರಣ್ಯ ಸಿಬ್ಬಂದಿ ಇಲ್ಲ ಕೇವಲ 2 ಆನೆಗಳಿವೆ ಎನ್ನುತ್ತಿದ್ದಾರೆ. ಇದೇನೆ ಇದ್ದರೂ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದರಿಂದ ಏನೂ ಪ್ರಯೋಜನವಾಗುತ್ತಿಲ್ಲ.

ಅವುಗಳು ಮತ್ತೆ ಬಂದು ತೊಂದರೆ ನೀಡುತ್ತವೆ. ವ್ಯರ್ಥ ಅರಣ್ಯ ಇಲಾಖೆಯ ಖರ್ಚಿಗೆ ಬದಲಾಗಿ, ಆನೆಗಳನ್ನು ಹಿಡಿದು ಅವುಗಳನ್ನು ಸಕ್ರೆಬೈಲ್ ಬಿಡಾರಕ್ಕೆ ಕಳುಹಿಸಿ, ಈ ಮೂಲಕ ಕಾಡಾನೆಗಳ ಕಾಟದಿಂದ ಮುಕ್ತಿ ನೀಡಿ ಎಂದು ಲಕ್ಕಿನಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

The post ತಜ್ಞರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿ ರೈತರಿಗೆ ಸಂಕಷ್ಟ ತಂದ ಕಾಡಾನೆ ಹಿಂಡು appeared first on News First Kannada.

Source: newsfirstlive.com

Source link