ಚಿಕ್ಕಬಳ್ಳಾಪುರ: ಸಂಭವನೀಯ ಕೋವಿಡ್ ಮೂರನೇ ಅಲೆ ತಡೆಯಲು ಸರ್ಕಾರ ಸರ್ವ ಸಿದ್ಧತೆಗಳನ್ನ ಮಾಡಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸಧ್ಯ ಬ್ಲ್ಯಾಕ್ ಫಂಗಸ್ ಗೆ ಔಷಧಿ ಕೊರತೆ ಇಲ್ಲ. ನಿನ್ನೆ 8,700 ವಯಲ್ಸ್ ಲೈಫೋಜೋಮಲ್ ಅಂಪಿಟೆರಿಸನ್ ರಾಜ್ಯಕ್ಕೆ ಬಂದಿದೆ. ಇದುವರೆಗೂ 18,000 ವಯಲ್ಸ್ ರಾಜ್ಯಕ್ಕೆ ಬಂದಿದೆ. 2-3 ದಿನದಿಂದ ಔಷಧಿ ಸರಬರಾಜು, ಪೂರೈಕೆ ಚೆನ್ನಾಗಿ ಆಗುತ್ತಿದೆ. ಈ ವಾರದಲ್ಲಿ ಸಹ ಹೆಚ್ಚು ಔಷಧ ಸರಬರಾಜು ಆಗಲಿದೆ. ರೆಮ್‍ಡಿಸಿವಿರ್ ನ ಸಮಸ್ಯೆ ಬಗೆಹರಿದಂತೆ ಈ ಸಮಸ್ಯೆ ಸಹ ಬಗೆಹರಿದು ಔಷಧಿ ಸಿಗಲಿದೆ. ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ- ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತಿದೆ ಎಂದರು.

ಮತ್ತೊಂದೆಡೆ ಮೂರನೇ ಅಲೆ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮತಿ ರಚನೆ ಮಾಡಲಾಗಿದೆ. 12-13 ಮಂದಿ ಹೆಸರಾಂತ ವೈದ್ಯರು, ಮಕ್ಕಳ ಮಾನಸಿಕ ತಜ್ಞರು ಸಮತಿಯಲ್ಲಿ ಇದ್ದಾರೆ. 0-12-18 ವರ್ಷದವರಗೆ ಯಾವ ರೀತಿ ಕೊರೊನಾ ಭಾಧಿಸಲಿದೆ? ಯಾವ ರೀತಿ ಚಿಕಿತ್ಸೆ ಕೊಡಬೇಕು ಎಂದು ಎಲ್ಲಾ ಆಯಾಮಗಳಲ್ಲಿ ಅಧ್ಯಯನ ಮಾಡಿ ಶೀಘ್ರವೇ ವರದಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕ್ರಮ, ಸಿದ್ಧತೆಗಳನ್ನ ಮಾಡಿಕೊಳ್ಳಲಿದೆ ಎಂದರು.

The post ತಜ್ಞರ ವರದಿ ಆಧರಿಸಿ ಕೋವಿಡ್ ಮೂರನೇ ಅಲೆ ತಡೆಯಲು ಕ್ರಮ: ಸುಧಾಕರ್ appeared first on Public TV.

Source: publictv.in

Source link