ಇವತ್ತು ಲಸಿಕೆ ಕೇಂದ್ರಗಳ ಮುಂದೆ ಕಂಡು ಬರುತ್ತಿರೋದು ಒಂದೇ. ಅದುವೇ ಲಸಿಕೆ ನೋ ಸ್ಟಾಕ್ ಅನ್ನೋ ಬೋರ್ಡ್​​​. ಸದ್ಯ ಭಾರತದಲ್ಲಿ ಭಾರತ್ ಬಯೋಟೆಕ್​​ನ ಕೋವಿಶೀಲ್ಡ್​ ಹಾಗು ಸೀರಂ ಸಂಸ್ಥೆ ಅಭಿವೃದ್ದಿಪಡಿಸಿರೋ ಕೋವ್ಯಾಕ್ಸಿನ್​ ನೀಡಲಾಗುತ್ತಿದೆ. ಆದರೆ ಕೋವ್ಯಾಕ್ಸಿನ್​ ಬಹುತೇಕ ಕಡೆ ಸಿಗದೆ ಜನಸಾಮಾನ್ಯರು ಪರದಾಡುವಂತಾಗಿದೆ. ಅದಕ್ಕೆ ಬಹಳ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಒಂದು ಕಡೆ ಕೋವಿಶೀಲ್ಡ್ ಲಸಿಕೆ ಮಾತ್ರ ಬಹುತೇಕ ಕಡೆ ಲಭ್ಯ ಇದೆ ಅನ್ನೋ ಮಾತಿದೆ. ಈ ನಡುವೆ ಲಸಿಕೆ ಪಡೆಯುವಾಗ ಪ್ರತಿಯೊಬ್ಬರು ಕೆಲ ಪ್ರೋಟೋಕಾಲ್ ಫಾಲೋ ಮಾಡಲೇಬೇಕು. ಮೊದಲಿಗೆ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದವರು 28ನೇ ದಿನಕ್ಕೆ ತಪ್ಪದೇ ಎರಡನೇ ಡೋಸ್​  ತೆಗೆದುಕೊಳ್ಳಬೇಕು. ಕೋವಿಶೀಲ್ಡ್​​ ಮೊದಲ ಡೋಸ್ ಪಡೆದ ಬಳಿಕ 48ನೇ ದಿನಕ್ಕೆ ಎರಡನೇ ಡೋಸ್ ಪಡೆದುಕೊಳ್ಳಬೇಕು ಎಂದು ಹೇಳಲಾಗಿತ್ತು. ಈಗ ಆ ಅವಧಿಯನ್ನ ವಿಸ್ತರಣೆ ಮಾಡಲಾಗಿದೆ.

ಇವತ್ತಿನ ಪರಿಸ್ಥಿತಿಯಲ್ಲಿ ಮೊದಲ ಡೋಸ್​​​​ಗಳನ್ನ ಪಡೆದವರಿಗೆ ಎರಡನೇ ಡೋಸ್​ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಬಹುತೇಕ ಲಸಿಕಾ ಕೇಂದ್ರಗಳ ಮುಂಭಾಗ ಬೆಳಗ್ಗೆ 6 ಗಂಟೆಗೆ ಬಂದು ಕ್ಯೂ ನಲ್ಲಿ ನಿಂತು ಸಂಜೆವರೆಗೂ ಕಾದರೂ ಲಸಿಕೆ ಸಿಗದೇ ಬೇಸರಗೊಂಡು ಮನೆಕಡೆ ಮುಖ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಒಂದು ಆದೇಶವನ್ನ ಹೊರಡಿಸಿದೆ. ಕೋವಿಶೀಲ್ಡ್​​ ಮೊದಲ ಡೋಸ್​ ಪಡೆದವರು 8 ವಾರ ಅಲ್ಲ, 12 ರಿಂದ 16 ವಾರಗಳ ಬಳಿಕ ಎರಡನೇ ಡೋಸ್​​ ಪಡೆದುಕೊಳ್ಳಬಹುದು ಅಂತಾ ಘೋಷಣೆ ಮಾಡಿದೆ.

ಯಾವಾಗ ಹೀಗೆ ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿತ್ತೋ ಜನ ಅಸಮಾಧಾನಗೊಂಡಿದ್ರು. ಕೇಂದ್ರ ಸರ್ಕಾರ ಲಸಿಕೆ ನೀಡುವಲ್ಲಿ ವಿಫಲವಾಗಿದೆ ಅದಕ್ಕಾಗಿ ಹೀಗೆ ಘೋಷಣೆ ಮಾಡುತ್ತಿದೆ, ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಹೀಗೆ ಏಕಾಏಕಿ ಅನೌನ್ಸ್​ ಮಾಡಿಬಿಟ್ಟಿದೆ ಅಂತಾ ಮಾತಾಡಿಕೊಳ್ಳುತ್ತಿದ್ದಾರೆ. ಆದ್ರೆ ನಿಜ ಸಂಗತಿ ಏನಂದ್ರೆ ಇದು ಕೇಂದ್ರ ಸರ್ಕಾರ ತೆಗೆದುಕೊಂಡಿರೋ ನಿರ್ಧಾರ ಅಲ್ಲ, ಬದಲಾಗಿ ಹಿರಿಯ ವಿಜ್ಞಾನಿಗಳ ತಂಡವೇ ಕೇಂದ್ರ ಸರ್ಕಾರಕ್ಕೆ ಈ ಸೂಚನೆ ಕೊಟ್ಟಿದೆ. ಹಾಗಾಗಿ ಕೇಂದ್ರ ಸರ್ಕಾರ ಹೀಗೆ ಘೋಷಣೆ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇನ್ನು ಜನ ಸಾಮಾನ್ಯರಲ್ಲಿ ಒಂದು ಆತಂಕ ಇದ್ದೇ ಇದೆ. ನಾವು ಮೊದಲ ಡೋಸ್ ಪಡೆದುಕೊಂಡ ಬಳಿಕ ಎರಡನೇ ಡೋಸ್  ಸೂಕ್ತ ಸಮಯಕ್ಕೆ ತೆಗೆದುಕೊಳ್ಳದಿದ್ದರೆ ಏನಪ್ಪ ಗತಿ. ಮೊದಲ ಡೋಸ್ ಪಡೆದುಕೊಂಡಿರೋದು ವೇಸ್ಟ್ ಆಗೋಗುತ್ತೆ. ಮತ್ತೆ ಮೊದಲಿನಿಂದ ಲಸಿಕೆ ಪಡೆಯಬೇಕಾ. ಅಥವಾ ಎರಡನೇ ಡೋಸ್​ ತಡವಾಗಿ ಪಡೆದುಕೊಳ್ಳೋದ್ರಿಂದ ಏನಾದ್ರು ಅಡ್ಡ ಪರಿಣಾಮ ಉಂಟಾಗುತ್ತಾ? ಅಥವಾ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿ ಆಗೋದೇ ಇಲ್ಲವಾ ಅನ್ನೋ ಹಲವು ಪ್ರಶ್ನೆಗಳನ್ನ ತಮ್ಮಷ್ಟಕ್ಕೆ ತಾವೇ ಹಾಕಿಕೊಳ್ಳೋಕೆ ಶುರು ಮಾಡಿದ್ದರು.

ಈಗ ಲಸಿಕೆ ವಿಚಾರದಲ್ಲಿ ಒಂದು ಗೂಡ್ ನ್ಯೂಸ್ ಲಭ್ಯವಾಗಿದೆ. ಅದು ಖುದ್ದು ವಿಜ್ಞಾನಿಗಳೇ ಸಂಶೋಧನೆ ನಡೆಸಿ ತಿಳಿಸಿದ್ದಾರೆ. ಅದನ್ನ ಕೇಳಿದ ಮೇಲೆ ನಿಮ್ಮಲ್ಲಿ ಸ್ವಲ್ಪ ಸಮಾಧಾನ ತರಬಹುದು.

ತಡವಾಗಿ  2ನೇ ಡೋಸ್ ಲಸಿಕೆ ಪಡೆಯೋದ್ರಿಂದ ಹೆಚ್ಚು ಪರಿಣಾಮ
“ಎರಡನೇ ಡೋಸ್ ತಡವಾಗಿ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿರೋ ನಿರ್ಧಾರ ತೆಗೆದುಕೊಂಡಿರೋದು ಜನಸಾಮಾನ್ಯರ ಹಿತ ದೃಷ್ಟಿಯಿಂದ. ತಡವಾಗಿ ತೆಗೆದುಕೊಳ್ಳೋದ್ರಿಂದ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚೆಚ್ಚು ಅಭಿವೃದ್ಧಿ ಆಗುತ್ತೆ. ಅಲ್ಲದೇ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಈಗ ವೈಜ್ಞಾನಿಕವಾಗಿ ಅದು ಸಾಬೀತು ಕೂಡ ಆಗಿದೆ. ಕಳೆದ ಒಂದು ವರ್ಷ ಆರು ತಿಂಗಳಿನಿಂದ ವಿಜ್ಞಾನಿಗಳು ನಿರಂತರವಾಗಿ ಕೊರೊನಾ ವಿರುದ್ಧವಾದ ಹಲವು ಸಂಶೋಧನೆಗಳನ್ನ ನಡೆಸುತ್ತಲೆ ಇದ್ದಾರೆ.ಲಸಿಕೆ ಎರಡನೇ ಡೋಸ್ ಹೆಚ್ಚು ಅಂತರವಿದ್ದರೇನೇ ಹೆಚ್ಚು ಪರಿಣಾಮಕಾರಿಯಾಗಿರುತ್ತೆ. ಹಾಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನ ತಪ್ಪಾಗಿ ಭಾವಿಸೋದು ಬೇಡ. ಅದನ್ನ ನೀವು ಒಪ್ಪಿಕೊಳ್ಳಿ ಅದರಿಂದ ನಿಮಗೆ ಉಪಯೋಗ”
ಡಾ.ವಿ.ಕೆ.ಪೌಲ್​​, ಹಿರಿಯ ಸದಸ್ಯ, ನೀತಿ ಆಯೋಗ

ಹೌದು ಖುದ್ದು ವಿ.ಕೆ.ಪೌಲ್ ಅವರು ಈ ಮಾತನ್ನ ಹೇಳಿದ್ದಾರೆ. ಹಾಗಾಗಿಯೇ ಭಾರತದಲ್ಲಿ ಮೊದಲ ಡೋಸ್ ಹಾಗು ಎರಡನೇ ಡೋಸ್​ನ ಅಂತರವನ್ನ ಹೆಚ್ಚಿಸಿದೆ. ಆರಂಭದಲ್ಲಿ ಇದ್ದ ಅಂತರ.. ಈಗಿರೋ ಅಂತರ ಹೇಗಿದೆ ಅನ್ನೋ ಅಂಕಿ ಅಂಶಗಳ ಸಮೇತ ನೋಡೋದಾದ್ರೆ;

ಸರ್ಕಾರದ ಮಾರ್ಗಸೂಚಿ

  • ಜನವರಿ 16 ರಂದು ಹೇಳಿದ್ದು 4 ರಿಂದ 6 ವಾರಗಳ ಅಂತರ
  • ಮಾರ್ಚ್​​​ 23 ರಂದು ಹೇಳಿದ್ದು 4 ರಿಂದ 8 ವಾರಗಳ ಅಂತರ
  • ಮೇ 13 ರಂದು ಹೇಳಿದ್ದು 12 ರಿಂದ 16 ವಾರಗಳ ಅಂತರ

ಹೆಚ್ಚು ಪರಿಣಾಮಕಾರಿ

  • 4 – 6 ವಾರಗಳ ಅಂತರವಿದ್ದಾಗ ಶೇ 55.1 ರಷ್ಟು ಪರಿಣಾಮಕಾರಿ
  • 4 – 8 ವಾರಗಳ ಅಂತರವಿದ್ದಾಗ ಶೇ.70 ರಷ್ಟು ಪರಿಣಾಮಕಾರಿ
  • 12-16 ವಾರಗಳ ಅಂತರವಿದ್ದಾಗ ಶೇ. 81.3 ರಷ್ಟು ಪರಿಣಾಮಕಾರಿ

ಯಾವ ದೇಶದಲ್ಲಿ ಎಷ್ಟು ಅಂತರ

  • ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ 12 ವಾರ
  • ಸ್ಪೇನ್ ದೇಶದಲ್ಲಿ 16 ವಾರಗಳ ಅಂತರದಲ್ಲಿ ನೀಡ್ತಿದೆ
  • ಯುನೈಟೆಡ್ ಕಿಂಗಡಮ್​ನಲ್ಲಿ 8 ವಾರ ಅಂತರ

ಈಗಾಗಲೆ ಯುಕೆ, ಸ್ಪೇನ್​, ಯುರೋಪ್​​ ರಾಷ್ಟ್ರಗಳಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಹಾಗಂತ ಬೇರೆ ದೇಶಗಳಿಗೆ ಹೋಲಿಕೆ ಮಾಡಿಕೊಂಡು ನಮ್ಮ ದೇಶದಲ್ಲಿ ಲಸಿಕೆ ನೀಡುವ ಅಂತರವನ್ನ ಹೆಚ್ಚಿಸಿಲ್ಲ. ಆದ್ರೆ ವೈದ್ಯರ ತಂಡ ಹಾಗು ಹಿರಿಯ ವಿಜ್ಞಾನಿಗಳು ಸತತವಾಗಿ ಸಂಶೋಧನೆ ನಡೆಸಿ ಇದರ ಬಗ್ಗೆ ವರದಿಯನ್ನ ಕೆಂದ್ರ ಸರ್ಕಾರದ ಮುಂದಿಟ್ಟಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

The post ತಡವಾಗಿ 2ನೇ ಡೋಸ್ ಲಸಿಕೆ ಪಡೆಯೋದ್ರಿಂದ ಹೆಚ್ಚು ಪರಿಣಾಮಕಾರಿ -ವಿ.ಕೆ ಪೌಲ್ appeared first on News First Kannada.

Source: newsfirstlive.com

Source link