ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಗೆ ಬದಲು ಪ್ರಮೋಷನ್: ಅಬಕಾರಿ ಇಲಾಖೆಯಲ್ಲಿ ಎಲ್ಲಾ ಮಾಫಿ!

– ಅಬಕಾರಿ ಆಯುಕ್ತರ ಶೋಕಾಸ್ ನೋಟೀಸ್‍ಗೆ ಬೆಲೆ ಇಲ್ವಾ?

ರಾಯಚೂರು: ಅಧಿಕಾರಿಗಳು ತಪ್ಪು ಮಾಡಿದರೆ ಮೇಲಾಧಿಕಾರಿಗಳು ಶಿಕ್ಷೆ ಕೊಡುವುದನ್ನ ನೋಡಿದ್ದೀರಿ. ಆದ್ರೆ ರಾಯಚೂರಿನ ಅಬಕಾರಿ ಇಲಾಖೆಯಲ್ಲಿ ತಪ್ಪು ಮಾಡಿದ್ರೆ ಪ್ರಮೋಷನ್ ಕೊಡ್ತಾರೆ. ತಪ್ಪಿತಸ್ಥ ಅನ್ನೋದು ಸಾಬೀತಾದರೂ ಅಬಕಾರಿ ನೀರಿಕ್ಷಕನಿಗೆ ಉಪ-ಅಧೀಕ್ಷಕ ಜವಾಬ್ದಾರಿ ನೀಡಲಾಗಿದೆ.

ಜಿಲ್ಲೆಯಲ್ಲಿ ಲಾಕ್‍ಡೌನ್ ಸಮಯದಲ್ಲೂ ಮದ್ಯದ ವ್ಯಾಪಾರ ಜೋರಾಗಿ ನಡೆದಿದೆ. ಇದರ ಜೊತೆಗೆ ಅಧಿಕಾರಿಗಳ ಸಹಾಯದಿಂದ ಅಕ್ರಮ ಮದ್ಯ ಮಾರಾಟವೂ ಇನ್ನೂ ಜೋರಾಗಿಯೆ ನಡೆದಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟ ಆರೋಪದಲ್ಲಿ ಅಬಕಾರಿ ನಿರೀಕ್ಷಕ ಮೋನಪ್ಪನ ವಿರುದ್ಧ ಇಲಾಖೆ ಕ್ರಮಕೈಗೊಂಡಿದೆ. ಆದ್ರೆ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆ ನೀಡುವ ಬದಲು ಪ್ರಮೋಷನ್ ನೀಡಿದೆ. ಇದರಿಂದ ಅಬಕಾರಿ ಇಲಾಖೆಯಲ್ಲಿ ಅಕ್ರಮ ಎಸಗಿದವರಿಗೆ ಮೇಲಾಧಿಕಾರಿಗಳೇ ಬೆನ್ನಿಗೆ ನಿಲ್ಲುತ್ತಾರೆ ಅನ್ನೋದು ಸಾಬೀತಾಗಿದೆ.

ಕಠಿಣ ಲಾಕ್ ಡೌನ್ ಜಾರಿಯಿದ್ದರೂ ಮೇ 31 ರಂದು ರಾತ್ರಿ ರಾಯಚೂರಿನ ಕೆ.ಎಸ್.ಐ.ಬಿ.ಸಿ.ಎಲ್ ಡಿಪೋವನ್ನ ಅವಧಿ ಮೀರಿ ತೆರೆದಿರುವುದಲ್ಲದೇ, ಮದ್ಯ ತುಂಬಿದ ಲಾರಿಗಳನ್ನ ಡಿಪೋ ಮುಂದೆಯೇ ನಿಲ್ಲಿಸಿ ಅಕ್ರಮಕ್ಕೆ ಅನುವು ಮಾಡಿಕೊಟ್ಟ ಅಬಕಾರಿ ನೀರಿಕ್ಷಕ ಮೋನಪ್ಪ ಭ್ರಷ್ಟಾಚಾರದ ಬಣ್ಣವನ್ನ ಅಬಕಾರಿ ಆಯುಕ್ತೆ ಲಕ್ಷ್ಮೀ ನಾಯಕ್ ತಡರಾತ್ರಿಯ ದಾಳಿಯಲ್ಲಿ ಬಯಲಿಗೆಳೆದಿದ್ದರು. ಅಲ್ಲದೆ ಸುಮಾರು 5 ಲಕ್ಷ ಮೌಲ್ಯದ ಮದ್ಯವನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ವಾಹನಗಳ ಜಪ್ತಿ ಮಾಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿದ್ದರು. ಅಧಿಕಾರಿ ಮೋನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿದ್ದರು. ಆದ್ರೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ತಡರಾತ್ರಿವರೆಗೆ ಅಕ್ರಮವಾಗಿ ಮದ್ಯ ಹಂಚಿಕೆ ನಡೆಸಿದ್ದ ಅಧಿಕಾರಿಗೆ ಶಿಕ್ಷೆ ನೀಡುವ ಬದಲು ಅಬಕಾರಿ ಜಂಟಿ ಆಯುಕ್ತರು ಮೋನಪ್ಪನನ್ನ ಬೇರೆಡೆ ಪ್ರತಿನಿಯೋಜನೆ ಮಾಡಿ ಜೊತೆಗೆ ಉಪ- ಅಧಿಕ್ಷಕ ಹುದ್ದೆಯನ್ನೂ ಪ್ರಭಾರಿಯಾಗಿ ನಿರ್ವಹಿಸಲು ಜವಾಬ್ದಾರಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಸಂಪೂರ್ಣ ಲಾಕ್‍ಡೌನ್ ಸಮಯದಲ್ಲಿ ವಾರಕ್ಕೆ ಎರಡು ದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ಮದ್ಯದ ಅಂಗಡಿ ಹಾಗೂ ಮದ್ಯದ ಗೋದಾಮು ಕೆ.ಎಸ್.ಐ.ಬಿ.ಸಿ.ಎಲ್ ಡಿಪೋವನ್ನ ತೆರೆಯಲು ಅವಕಾಶ ನೀಡಿತ್ತು. ಆದ್ರೆ ಡಿಪೋ ವ್ಯವಸ್ಥಾಪಕ ಶಿವಪ್ಪ ಹಾಗೂ ಅಬಕಾರಿ ನಿರೀಕ್ಷಕ ಮೋನಪ್ಪ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೆ ಮದ್ಯದ ಅಂಗಡಿ ಮಾಲೀಕರಿಗೆ ಮನಬಂದಂತೆ ಮದ್ಯ ಹಂಚಿಕೆ ಮಾಡಿದ್ದರು. ಅಧಿಕಾರಿಗಳ ಅಕ್ರಮ ಅಬಕಾರಿ ಡಿ ಸಿ ದಾಳಿಯಲ್ಲಿ ಬಯಲಾದರೂ ಮೇಲಾಧಿಕಾರಿಗಳಿಗು ಮೋನಪ್ಪನನ್ನ ರಕ್ಷಿಸಿದ್ದಾರೆ ಅಂತ ಮದ್ಯ ಸಿಗದೆ ವಂಚಿತರಾದ ಮದ್ಯದಂಗಡಿ ಮಾಲೀಕರು ಆರೋಪಿಸಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಸಹ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಅಬಕಾರಿ ಇಲಾಖೆಯಲ್ಲಿ ಅಕ್ರಮ ಮಾಡಿದರೂ ,ಕರ್ತವ್ಯ ಲೋಪ ಎಸಗಿದರು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಶೋಕಾಸ್ ನೋಟಿಸ್ ಜಾರಿಯಾದರೂ ಶಿಕ್ಷೆ ಮಾತ್ರ ಆಗುವುದಿಲ್ಲ ಅನ್ನೋದು ಸಾಬೀತಾಗಿದೆ. ರಾತ್ರೋರಾತ್ರಿ ನಿಯಮ ಉಲ್ಲಂಘಿಸಿ ಹಂಚಿಕೆಯಾದ ಮದ್ಯದ ಲೆಕ್ಕಪತ್ರವೂ ಸರಿಯಾಗಿ ಇಲ್ಲದೆ ಇದ್ದರೂ ತಪ್ಪಿತಸ್ಥ ಅಧಿಕಾರಿ ಸುಲಭವಾಗಿ ಬಚಾವಾಗಿದ್ದಾನೆ. ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ತಪ್ಪಿತಸ್ಥ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಮದ್ಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

The post ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಗೆ ಬದಲು ಪ್ರಮೋಷನ್: ಅಬಕಾರಿ ಇಲಾಖೆಯಲ್ಲಿ ಎಲ್ಲಾ ಮಾಫಿ! appeared first on Public TV.

Source: publictv.in

Source link