ತಪ್ಪು ಮಾಹಿತಿ ಹರಡುವಿಕೆ ವಿರುದ್ಧ ಹೊಸ ಐಟಿ ಕಾನೂನು ಪರಿಣಾಮಕಾರಿ: ರಾಜೀವ್ ಚಂದ್ರಶೇಖರ್ – Rajeev Chandrasekhar said New IT rules to put greater obligations on social media platforms to act against unlawful content misinformation


ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಪ್ಪು ಮಾಹಿತಿ ಹರಡುವುದರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಮಾಡಿರುವ ಇತ್ತೀಚಿನ ತಿದ್ದುಪಡಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ತಪ್ಪು ಮಾಹಿತಿ ಹರಡುವಿಕೆ ವಿರುದ್ಧ ಹೊಸ ಐಟಿ ಕಾನೂನು ಪರಿಣಾಮಕಾರಿ: ರಾಜೀವ್ ಚಂದ್ರಶೇಖರ್

ರಾಜೀವ್ ಚಂದ್ರಶೇಖರ್

Image Credit source: PTI

ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳ (Social Media) ಮೂಲಕ ಕಾನೂನುಬಾಹಿರ ಚಟುವಟಿಕೆ ನಡೆಸುವುದು ಹಾಗೂ ತಪ್ಪು ಮಾಹಿತಿ ಹರಡುವುದರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಮಾಡಿರುವ ಇತ್ತೀಚಿನ ತಿದ್ದುಪಡಿಗಳು (IT rules) ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಟ್ವಿಟರ್ (Twitter), ಫೇಸ್​ಬುಕ್ (Facebook) ಸೇರಿದಂತೆ ಸಾಮಾಜಿಕ ಮಾಧ್ಯಮ (Social Media) ವೇದಿಕೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಮೇಲ್ಮನವಿ ವಿಚಾರಣೆಗೆ ಶೀಘ್ರದಲ್ಲೇ ‘ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ’ಗಳನ್ನು ರಚಿಸುವ ಬಗ್ಗೆ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿತ್ತು. ಈ ವಿಚಾರವಾಗಿ ಸಚಿವರು ಮಾತನಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾಗರಿಕರ ಲಕ್ಷಾಂತರ ಸಂದೇಶಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ದೂರು ನೀಡಿದ ಹೊರತಾಗಿಯೂ ಸಾಮಾಜಿಕ ಮಾಧ್ಯಮ ಕಂಪನಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇದನ್ನು ಸಹಿಸಲಾಗದು. ಈ ಕಾರಣಕ್ಕಾಗಿಯೇ ಮೂವರು ಸದಸ್ಯರ ಮೇಲ್ಮನವಿ ಸಮಿತಿ ರಚಿಸುವುದು ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

‘ನಾಗರಿಕರ ಹಿತಾಸಕ್ತಿ ಕಾಪಾಡಬೇಕಿದೆ’

‘ಡಿಜಿಟಲ್ ನಾಗರಿಕರ’ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಕಾರ್ಯನಿರ್ವಹಿಸಬೇಕು ಎಂದು ಸರ್ಕಾರ ಬಯಸುತ್ತದೆ. ಈ ಹಿಂದೆ ನಿಯಮಗಳ ಬಗ್ಗೆ ಬಳಕೆದಾರರಿಗೆ ತಿಳಿಸುವದಕ್ಕಷ್ಟೇ ಮಧ್ಯವರ್ತಿಗಳ ಕೆಲಸ ಸೀಮಿತವಾಗಿತ್ತು. ಆದರೆ, ಇನ್ನು ಮುಂದೆ ಅವರಿಗೆ ಸಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೆಚ್ಚು ಖಚಿತವಾದ ಹೊಣೆಗಾರಿಕೆ ಇರುತ್ತದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

‘ಕಂಪನಿ ಎಲ್ಲಿಯದ್ದೇ ಆಗಿರಲಿ, ಭಾರತದ ಕಾನೂನು ಪಾಲಿಸಬೇಕು’

ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರಧಾನ ಕಚೇರಿ ಅಮೆರಿಕದಲ್ಲೋ ಯುರೋಪ್​ನಲ್ಲೋ ಇರಬಹುದು. ಹಾಗೆಂದ ಮಾತ್ರಕ್ಕೆ ಅವರು ಭಾರತದಲ್ಲಿ ಕಾರ್ಯಾಚರಿಸುವಾಗ ಇಲ್ಲಿನ ಕಾನೂನುಗಳನ್ನು ಗೌರವಿಸದೇ ಇರುವಂತಿಲ್ಲ. ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಎಂದು ಸಚಿವರು ಹೇಳಿದ್ದಾರೆ.

ತಪ್ಪು ಮಾಹಿತಿ ತೆಗೆದುಹಾಕಲು 72 ಗಂಟೆ ಗಡುವು

ತಪ್ಪು ಮಾಹಿತಿ, ಅಕ್ರಮ ಒಳಗೊಂಡ, ಜಾತಿ, ಧರ್ಮ ಅಥವಾ ಇತರ ಯಾವುದೇ ಆಧಾರದಲ್ಲಿ ದ್ವೇಷ ಹರಡುವಂಥ ಕಂಟೆಂಟ್​ಗಳನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು 72 ಗಂಟೆಗಳ ಒಳಗಾಗಿ ತೆಗೆದುಹಾಕಬೇಕು. ವೈಯಕ್ತಿಕ ಅಭಿಪ್ರಾಯದ ನೆಲೆಯಲ್ಲಿ ಹೇಳುವುದಾದರೆ ಈ ಅವಧಿ ತುಸು ಹೆಚ್ಚೇ ಆಯಿತು. ಆದರೂ ಕಂಪನಿಗಳು ಎಚ್ಚೆತ್ತುಕೊಂಡು ಅಂಥ ಕಂಟೆಂಟ್​ಗಳನ್ನು ಬೇಗನೇ ತೆರವು ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.

TV9 Kannada


Leave a Reply

Your email address will not be published.