ತಮಿಳುನಾಡಲ್ಲಿ ವರುಣನ ಆರ್ಭಟ.. ಈವರೆಗೂ 14ಮಂದಿ ಬಲಿ, 530 ಮನೆಗಳಿಗೆ ಹಾನಿ


ನವದೆಹಲಿ: ಅದ್ಯಾಕೋ ದ್ರಾವಿಡ ನಾಡಲ್ಲಿ ಮಳೆಯ ರೌದ್ರ ನರ್ತನ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. ದಿನ ಕಳೆದಂತೆಲ್ಲಾ ವರುಣರಾಯನ ಆರ್ಭಟ ಹೆಚ್ಚಾಗುತ್ತಲೇ ಸಾಗ್ತಿದೆ. ಇವತ್ತು ಕೂಡ ತಮಿಳುನಾಡಲ್ಲಿ ಮಳೆರಾಯ ಆರ್ಭಟಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ರಣಭೀಕರ ಮಳೆಗೆ ತತ್ತರಿಸಿದ ದ್ರಾವಿಡರ ನಾಡು
ಬಿಟ್ಟುಬಿಡದೇ ಸುರೀತಿರೋ ರಣ ಭೀಕರ ಮಳೆ.. ಊರಿಗೆ ಊರೇ ಜಲಾವೃತ.. ವರುಣನ ಆರ್ಭಟಕ್ಕೆ ತತ್ತರಿಸುತ್ತಿರುವ ಮಂದಿ.. ಎಲ್ಲೆಲ್ಲೂ ಅಸಹಾಯಕತೆ.. ದ್ರಾವಿಡನಾಡಲ್ಲಿ ಮತ್ತೊಮ್ಮೆ ಮರುಕಳಿಸಿದ ಅರ್ಧ ದಶಕದ ಹಿಂದಿನ ದುರಂತ..

ಒಂದಲ್ಲ, ಎರಡಲ್ಲ.. ಕಳೆದೊಂದು ವಾರದಿಂದ ತಮಿಳುನಾಡಲ್ಲಿ ವರುಣರಾಯ ಆರ್ಭಟಿಸ್ತಿದ್ದಾನೆ. ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನ ದುಪ್ಪಟ್ಟಾಗಿಸಿಕೊಳ್ತಿದ್ದಾನೆ. ಸದ್ಯ ತಣ್ಣಗಾಗುವ ಯಾವುದೇ ಸೂಚನೆಯಿಲ್ಲದೆ ಅಬ್ಬರಿಸುತ್ತಿರುವ ವರುಣರಾಯ ಇವತ್ತು ಕೂಡ ತಮಿಳುನಾಡಿನಲ್ಲಿ ತನ್ನ ರೌದ್ರ ನರ್ತನ ತೋರಿಸಿದ್ದಾನೆ.

ವರುಣಾರ್ಭಟಕ್ಕೆ ಈವರೆಗೂ 14ಮಂದಿ ಬಲಿ
ನಿನ್ನೆ ಕೂಡ ತಮಿಳುನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಗೆ ಜನ ನಲುಗಿ ಹೋಗಿದ್ದಾರೆ. ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟುಮತ್ತು ಕಾಂಚೀಪುರಂ ಸೇರಿದಂತೆ ತಮಿಳುನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಭಾರೀ ಮಳೆಗೆ ನಗರದ ಹಲವೆಡೆ ಮನೆಗಳೆಲ್ಲ ಜಲಾವೃತವಾಗಿದೆ. ಇತ್ತ ವಿದ್ಯೂತ್ ಸಂಪರ್ಕ ಇಲ್ಲದೆ, ಊಟವೂ ಇಲ್ಲದೇ ಜನ ನಲುಗಿಹೋಗಿದ್ದಾರೆ. ಅಲ್ಲದೆ ಮುಂದಿನ ಎರಡು ದಿನಗಳ ಕಾಲ ರಾಜ್ಯದ್ಯಂತ ಮಳೆಯಾಗುವ ಸಾಧ್ಯತೆಗಳಿವೆ. ಸದ್ಯ ರಣ ಭೀಕರ ಮಳೆಗೆ ಈವರೆಗೂ ಮೃತಪಟ್ಟಿರುವವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇನ್ನು ಮಳೆಯ ಅವಾಂತರಕ್ಕೆ 530 ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಅದೆಷ್ಟೋ ಗುಡಿಸಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಸದ್ಯ ದ್ರಾವಿಡ ನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಸಾರ್ವಜನಿಕರ ರಕ್ಷಣಾ ಕಾರ್ಯ ಭರದಿಂದ ಸಾಗ್ತಿದೆ. ಪೊಲೀಸರು, ಎನ್ಡಿಆರ್ಎಫ್ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರನ್ನ ರಕ್ಷಿಸ್ತಿದ್ದಾರೆ. ಇವತ್ತು ಮಹಿಳಾ ಇನ್ಸ್ಪೆಕ್ಟರ್ ಒಬ್ಬರ ಸಾಹಸ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಮಳೆಯ ಆರ್ಭಟದ ನಡುವೆ ಯುವಕನೊಬ್ಬ ತೀರಾ ಅಸ್ವಸ್ಥರಾಗಿದ್ದರು. ಈ ವೇಳೆ ಯುವಕನ ರಕ್ಷಣೆಗೆ ಮಹಿಳಾ ಇನ್ಸ್ಪೆಕ್ಟರ್ ಪಣತೊಟ್ಟು ನಿಂತಿದ್ದಾರೆ. ಅಸ್ವಸ್ಥನಾಗಿದ್ದ ಯುವಕನನ್ನ ಸಮೀಪದ ಆಸ್ಪತ್ರೆಗೆ ಸಾಗಿಸಲು ಮಹಿಳಾ ಇನ್ಸ್ಪೆಕ್ಟರ್ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಆಟೋ ಸಿಗುವ ವರೆಗೂ ಹೆಗಲ ಮೇಲೆ ಹೊತ್ತೊಯ್ದು ಮಾನವೀಯತೆ ಮೆರೆದ ಇನ್ಸ್ಪೆಕ್ಟರ್ ರಾಜೇಶ್ವರಿ ಅವ್ರ ಸಾಹಸ ಕಾರ್ಯಕ್ಕೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಸದ್ಯ ವರುಣನ ಅಬ್ಬರಕ್ಕೆ ನೆರೆಯ ತಮಿಳುನಾಡು ಜಲದಿಗ್ಬಂಧನಕ್ಕೆ ಒಳಗಾಗಿದೆ. ರಣ ಭೀಕರ ಮಳೆಗೆ ದ್ರಾವಿಡ ನಾಡಿನ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ. ಹಳೆಯ 2015ರ ಗಾಯ ಮಾಸುವ ಮುನ್ನವೇ ತಮಿಳುನಾಡಿಗೆ ವರುಣರಾಯ ಬರೆ ಎಳೆದಿರೋದು ಮಾತ್ರ ದುರಂತ.

News First Live Kannada


Leave a Reply

Your email address will not be published. Required fields are marked *