ತಮಿಳುನಾಡಿಗೆ ಮತ್ತೊಂದು ಆತಂಕದ ಸುದ್ದಿ -ಮಳೆ ಮತ್ತಷ್ಟು ಭೀಕರಗೊಳ್ಳುವ ಮುನ್ಸೂಚನೆ


ಚೆನ್ನೈ: ತಮಿಳುನಾಡು ಜನತೆಯನ್ನ ವರುಣದೇವ ಬಿಟ್ಟು ಬಿಡದೆ ಕಾಡುತ್ತಲೇ ಇದ್ದಾನೆ. ನಿರಂತರ ಸುರಿಯುತ್ತಿರೋ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಹವಾಮಾನ ಇಲಾಖೆ ಮಳೆಯ ಭೀಕರತೆ ಮತ್ತಷ್ಟು ಹೆಚ್ಚಾಗೋ ಮುನ್ಸೂಚನೆ ಕೊಟ್ಟಿದ್ದು, ಜನರಲ್ಲಿ ಆತಂಕ ಕಾರ್ಮೋಡ ಆವರಿಸಿದೆ.

ದ್ರಾವಿಡ ನಾಡಿಗೆ ಮತ್ತೊಂದು ಆತಂಕದ ಸುದ್ದಿ
ವರುಣ ತಮಿಳುನಾಡನ್ನು ಇನ್ನಿಲ್ಲದಂತೆ ಕಾಡುತ್ತಲೇ ಇದ್ದಾನೆ. ರಣಭೀಕರ ಮಳೆಗೆ ಕಳೆದ 24 ಗಂಟೆಗಳಲ್ಲಿ ಒಟ್ಟು ಐದು ಜನರು ಮತ್ತು 152 ಜಾನುವಾರುಗಳು ಉಸಿರು ನಿಲ್ಲಿಸಿದ್ದಾರೆ. ತಿರುವಣ್ಣಾಮಲೈನಲ್ಲಿ ಇಬ್ಬರು ಮತ್ತು ಅರಿಯಲೂರ್, ದಿಂಡಿಗಲ್ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ನಿರಂತರ ಮಳೆಯಿಂದಾಗಿ 681 ಗುಡಿಸಲುಗಳು ಮತ್ತು 120 ಮನೆಗಳಿಗೆ ಹಾನಿಯಾಗಿದೆ. ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ತಮಿಳುನಾಡಿನ 9 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ತಮಿಳುನಾಡಿನ 9 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಚೆನ್ನೈ, ತಿರುನಲ್ವೇಲಿ, ತೂತುಕುಡಿ, ತೆಂಕಾಸಿ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಅದರಂತೆ ಕನ್ಯಾಕುಮಾರಿ, ರಾಮನಾಥಪುರಂ, ತಿರುಚಿರಾಪಳ್ಳಿ, ಕರೂರ್, ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿoದೆ. ಇದಲ್ಲದೆ ಪುದುಚೇರಿ ಮತ್ತು ಕಾರೈಕಲ್ ಸ್ಥಳಗಳಲ್ಲಿಯೂ ಸಾಧಾರಣ ಮಳೆಯಾಗಲಿದೆ. ಒಟ್ಟಾರೆ ನ. 26 ರಿಂದ 29 ರವರೆಗೆ ಮಳೆ ಸಾಧ್ಯತೆ ಬಗ್ಗೆ IMD ಮಾಹಿತಿ ಕೊಟ್ಟಿದೆ.

ಇನ್ನು ತಮಿಳುನಾಡಲ್ಲಿ ವರಣ ಉಗ್ರರೂಪ ತಾಳಿದ್ದು, ತೂತುಕುಡಿ ವೀಕ್ಷಣಾಲಯವೊಂದರಲ್ಲೇ 25 ಸೆಂ.ಮೀ.ನಷ್ಟು ಭಾರಿ ಮಳೆ ದಾಖಲಾಗಿದೆ. ಮಳೆಯಿಂದ ತೊಂದರೆಗೆ ಸಿಲುಕಿದ್ದ 10,503 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುಂಜಾಗೃತ ಕ್ರಮವಾಗಿ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಒಟ್ಟಾರೆ ಮಳೆರಾಯ ದ್ರಾವಿಡ ನಾಡಿನ ಜನರನ್ನು ಕಂಗೆಡಿಸಿದ್ದಾನೆ. ವರುಣ ಸೃಷ್ಟಿಸಿದ ಅವಾಂತರಕ್ಕೆ ಸಂಪೂರ್ಣ ಜನಜೀವನ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದೀಗ ಮತ್ತಷ್ಟೂ ಮಳೆ ಹೆಚ್ಚಳವಾಗುವ ಮುನ್ಸೂಚನೆ ಬಂದಿರೋದು ದಿಕ್ಕೆ ತೊಚದ ಪರಿಸ್ಥಿತಿಗೆ ದೂಡಿದೆ. ವರುಣ ಅದ್ಯಾವಾಗ ತಣ್ಣಗಾಗ್ತಾನೋ ಅಂತಾ ತಮಿಳುನಾಡು ಜನ ಆತಂಕದಲ್ಲೆ ಜೀವನ ನಡೆಸಬೇಕಾಗಿದೆ.

News First Live Kannada


Leave a Reply

Your email address will not be published. Required fields are marked *