ತಮಿಳುನಾಡಿನಲ್ಲಿ 15-18ವರ್ಷದವರಿಗೆ ಕೊರೊನಾ ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100 ಪೂರ್ಣ | Covid 19 Vaccination for 15 18 age group is Completed in Tamil Nadu in 2 weeks


ತಮಿಳುನಾಡಿನಲ್ಲಿ 15-18ವರ್ಷದವರಿಗೆ ಕೊರೊನಾ ಲಸಿಕೆ ಮೊದಲ ಡೋಸ್​ ನೀಡಿಕೆ ಶೇ.100 ಪೂರ್ಣ

ಪ್ರಾತಿನಿಧಿಕ ಚಿತ್ರ

ತಮಿಳುನಾಡಿನಲ್ಲಿ 15-18 ವರ್ಷದ ಎಲ್ಲ ಫಲಾನುಭವಿಗಳಿಗೂ ಕೊರೊನಾ ಲಸಿಕೆ ಮೊದಲ ಡೋಸ್ ನೀಡಿಕೆ ಪೂರ್ಣಗೊಂಡಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಮಾ. ಸುಬ್ರಹ್ಮಣಿಯನ್​ ತಿಳಿಸಿದ್ದಾರೆ. ಜನವರಿ 3ರಿಂದ ಶುರುವಾರ 15-18ವರ್ಷದವರಿಗೆ ಕೊರೊನಾ ಲಸಿಕೆ ಅಭಿಯಾನದಲ್ಲಿ ಶೇ.100ರಷ್ಟು ಮೊದಲ ಡೋಸ್ ನೀಡಿಕೆಯಾಗಿದೆ.  ಹೀಗೆ ಮೊದಲ ಡೋಸ್​ ಪಡೆದವರು 28 ದಿನಗಳ ಬಳಿಕ ಲಸಿಕೆಯ ಇನ್ನೊಂದು ಡೋಸ್​ ಪಡೆಯಲಿದ್ದಾರೆ. ತಮಿಳುನಾಡಿನಲ್ಲಿ 15-18ವರ್ಷದ 33,46,000 ಫಲಾನುಭವಿ ಮಕ್ಕಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಜನವರಿ 3ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ಈ ವಯಸ್ಸಿನವರಿಗೆ ಲಸಿಕೆ ಹಾಕುವ ಅಭಿಯಾನಕ್ಕೆ, ಪೊರುರ್​ನ ಹೆಣ್ಣುಮಕ್ಕಳ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ಚಾಲನೆ ನೀಡಿದ್ದರು. 

ದೇಶದಲ್ಲಿ ಒಮಿಕ್ರಾನ್​ ಏರಿಕೆಯಾಗಲು ಶುರುವಾದ ಬೆನ್ನಲ್ಲೇ 15-18ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡಲು ಶುರು ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಹಾಗೇ, ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಮತ್ತು 60ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್​ ಡೋಸ್​ ನೀಡುವ ಅಭಿಯಾನವೂ ಶುರುವಾಗಿದೆ. 15-18 ವಯಸ್ಸಿನವರ ವಿಭಾಗದಲ್ಲಿ ಯಾರೆಲ್ಲ 2007 ಮತ್ತು ಅದರ ಮೊದಲಿನ ಇಸ್ವಿಗಳಲ್ಲಿ ಜನಿಸಿದ್ದಾರೋ, ಅವರಿಗೆಲ್ಲ ಕೊರೊನಾ ಲಸಿಕೆ ನೀಡಲಾಗುತ್ತಿದೆ.  ಶಾಲೆಗಳಿಗೇ ಬಂದು ಮಕ್ಕಳಿಗೆ ಕೊವ್ಯಾಖ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಈ ಹಂತದ ಅಭಿಯಾನ ವೇಗವಾಗಿ ಸಾಗುತ್ತಿದೆ.

ಇನ್ನೊಂದೆಡೆ ತಮಿಳುನಾಡಿನಲ್ಲಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನವರಿ 31ರವರೆಗೂ ಶಾಲೆಗಳಿಗೆ ರಜೆ ಘೋಷಿಸಿ, ಆದೇಶ ಹೊರಡಿಸಿದೆ. ಹಾಗೇ, ಜನವರಿ 31ರವರೆಗೂ ನೈಟ್ ಕರ್ಫ್ಯೂ ಕೂಡ ಮುಂದುವರಿಸಲಾಗುವುದು ಎಂದೂ ಹೇಳಿದೆ. ಅದರ ಅನ್ವಯ ತಮಿಳುನಾಡಿನಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಮುಂಜಾನೆ 5ಗಂಟೆವರೆಗೆ ನೈಟ್​ಕರ್ಫ್ಯೂ ಇರಲಿದ್ದು, ಭಾನುವಾರ ಸಂಪೂರ್ಣ ಲಾಕ್​ಡೌನ್​ ಇರಲಿದೆ.

TV9 Kannada


Leave a Reply

Your email address will not be published. Required fields are marked *