ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ವಿಭೂತಿ ಧರಿಸಿದ ವಿದ್ಯಾರ್ಥಿನಿಗೆ ಕಿರುಕುಳ; ಬಲವಂತವಾಗಿ ಮತಾಂತರಕ್ಕೆ ಯತ್ನ | Tamil Nadu conversion row Teacher called me donkey with vibhuti says Student


ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ವಿಭೂತಿ ಧರಿಸಿದ ವಿದ್ಯಾರ್ಥಿನಿಗೆ ಕಿರುಕುಳ; ಬಲವಂತವಾಗಿ ಮತಾಂತರಕ್ಕೆ ಯತ್ನ

ಮತಾಂತರದ ಆರೋಪ ಮಾಡಿದ ಬಾಲಕಿ

ಚೆನ್ನೈ: ತಮಿಳುನಾಡಿನ (Tamil Nadu) ತಿರುಪ್ಪೂರ್‌ನ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಧರ್ಮದ ಕಾರಣಕ್ಕೆ ಇಬ್ಬರು ಶಿಕ್ಷಕರು ಹಲ್ಲೆ ನಡೆಸಿ, ಬಲವಂತವಾಗಿ ಮತಾಂತರ (Conversion) ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ನನ್ನ ಶಿಕ್ಷಕರು ನನಗೆ ವಿಭೂತಿ ಧರಿಸಿರುವ ಕತ್ತೆ ಎಂದು ಜರಿದಿದ್ದಾರೆ. ವಿಭೂತಿ ಧರಿಸಿದ್ದಕ್ಕೆ ನನಗೆ ಕಿರುಕುಳ ನೀಡಿದ್ದಾರೆ. ಒಮ್ಮೆ ಆ ಶಿಕ್ಷಕಿ ತನ್ನ ಕೈಯನ್ನು ನೀರಿನಲ್ಲಿ ಇಟ್ಟು ಯೇಸುವಿನ ಬಗ್ಗೆ ಹೇಳಿದರು. ನಂತರ, ತನ್ನ ಕೈಯಲ್ಲಿ ನೀರಿನಿಂದ ಹಿಂದೂವಾದ (Hindu) ನನ್ನ ಹೊಟ್ಟೆಯನ್ನು ಮೂರು ಬಾರಿ ಮುಟ್ಟಿದರು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಶಿಕ್ಷಕಿ ತನ್ನ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕ್ರೈಸ್ತರ ಸಂಪ್ರದಾಯದಂತೆ ಪ್ರಾರ್ಥನೆ ಮಾಡುವಂತೆ ಹೇಳಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಒಂದು ದಿನ ಆ ಶಿಕ್ಷಕಿ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ತಮ್ಮ ಪ್ರಾಣವನ್ನು ಕೊಟ್ಟು ನಮ್ಮನ್ನು ರಕ್ಷಿಸಿದವರು ಯಾರು? ಎಂದು ಕೇಳಿದರು. ನಾವು ಬೇರೆ ಬೇರೆ ಹೆಸರುಗಳನ್ನು ಹೇಳಿದೆವು. ಆದರೆ, ನಾವು ಯೇಸುವಿನ ಹೆಸರನ್ನು ಏಕೆ ಹೇಳಲಿಲ್ಲ? ಎಂದು ಅವರು ನಮ್ಮನ್ನು ಗದರಿಸಿದರು ಎಂದು ಆಕೆ ಹೇಳಿದ್ದಾಳೆ.

ಇನ್ನೋರ್ವ ಶಿಕ್ಷಕನು ದೇವರಲ್ಲಿ ಬಲಶಾಲಿ ಯಾರು? ಎಂದು ಕೇಳಿದಾಗ ನಾನು ಶಿವ ಎಂದು ಉತ್ತರಿಸಿದೆ. ಅದಕ್ಕೆ ಅವರು, ಶಿವನಲ್ಲ, ಎಲ್ಲ ದೇವರುಗಳಲ್ಲಿ ಬಲಶಾಲಿ ಜೀಸಸ್ ಎಂದು ಹೇಳಿದರು ಎಂದು ಬಾಲಕಿ ವಿವರಿಸಿದ್ದಾಳೆ. ಈ ಕುರಿತು ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.

ಬಿಜೆಪಿಯಿಂದ ಕ್ರಮಕ್ಕೆ ಆಗ್ರಹ:
ಈ ಘಟನೆ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ನಾರಾಯಣ ತ್ರಿಪಾಠಿ, ಆಡಳಿತಾರೂಢ ಡಿಎಂಕೆ ಸರ್ಕಾರ ಬಲವಂತದ ಮತಾಂತರದ ಘಟನೆಗಳಿಗೆ ಮೂಕಪ್ರೇಕ್ಷಕವಾಗಿದೆ ಎಂದು ಆರೋಪಿಸಿದ್ದಾರೆ ಪೊಲೀಸರು ಹಾಗೂ ಸರಕಾರ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಮತಾಂತರವು ಅತ್ಯಂತ ಅಪಾಯಕಾರಿ ವಿಷಯವಾಗಿದ್ದು, ತಮಿಳುನಾಡಿನಲ್ಲಿ ತಕ್ಷಣದಿಂದಲೇ ಮತಾಂತರ ವಿರೋಧಿ ಕಾನೂನು ಜಾರಿಗೆ ತರಬೇಕು ಎಂದಿದ್ದಾರೆ.

ಈ ಹಿಂದೆ ಕನ್ಯಾಕುಮಾರಿಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯೊಳಗೆ ಕ್ರೈಸ್ತ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಗಿತ್ತು. ಜನವರಿಯಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

TV9 Kannada


Leave a Reply

Your email address will not be published. Required fields are marked *