Bipin Rawat Death: ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್ನಲ್ಲಿ ಪ್ರಯಾಣ
ಊಟಿ: ಅತ್ಯಂತ ಕೆಟ್ಟ ದುರ್ವಿಧಿಯಲ್ಲಿ ದೇಶ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 12 ಮಂದಿಯನ್ನು ಕಳೆದುಕೊಂಡಿದೆ. ತಮಿಳುನಾಡಿನ ಕುನೂರ್ನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್ ರಾವತ್ (Bipin Rawat) ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಪವಾಡಸದೃಶ ರೀತಿಯಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಆದರೆ ಅಪಘಾತದ ವೇಳೆ ಏನಾಯಿತು ಎಂಬ ಮಾಹಿತಿ ಕಲೆ ಹಾಕಿದಾಗ… ರಾವತ್ ಸಂಚಾರದ ಬಗ್ಗೆ ತಮಿಳುನಾಡು ಪೊಲೀಸರಿಗೂ ಮಾಹಿತಿಯಿತ್ತು. ಬಿಪಿನ್ ರಾವತ್ ತಂಡಕ್ಕೆ ತಮಿಳುನಾಡು ಪೊಲೀಸರು ಜಡ್ ಪ್ಲಸ್ ಭದ್ರತೆ ನೀಡಿದ್ದರು. ಬಿಪಿನ್ ರಾವತ್ ತಂಡಕ್ಕೆ ಕೊಯಮತ್ತೂರಿನಿಂದ ರಸ್ತೆ ಮಾರ್ಗವಾಗಿ ಹೋಗಲು ತಮಿಳುನಾಡು ಪೊಲೀಸರಿಂದ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡಿದರು.
ಇನ್ನು, ಅಪಘಾತಕ್ಕೀಡಾದಾಗ ಮಂಜು ಕವಿದ ವಾತಾವರಣ ಇರಲಿಲ್ಲ. ಹೆಲಿಕಾಪ್ಟರ್ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿದೆ. ಪ್ರತ್ಯಕ್ಷದರ್ಶಿಗಳಿಂದ ಹೆಲಿಕಾಪ್ಟರ್ ದುರಂತದ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಲಿಕಾಪ್ಟರ್ ಟರ್ನ್ ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದು ಕಾಪ್ಟರ್ ಪತನವಾಗಿದೆ.
ಈ ಮಧ್ಯೆ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಪೈಲಟ್ ವರುಣ್ ಸಿಂಗ್ ಅವರಿಗೆ ಶೇ. 80ರಷ್ಟು ಸುಟ್ಟು ಗಾಯಗಳಾಗಿವೆ.
ತಮಿಳುನಾಡಿನ ಕೂನೂರು ಬಳಿ ನಡೆದಿದ್ದ ಹೆಲಿಕಾಪ್ಟರ್ ದುರಂತ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಏರ್ ಚೀಫ್ ಮಾರ್ಷಲ್ V.R.ಚೌಧರಿ ಸಹ ಇಲ್ಲಿಗೆ ಭೇಟಿ ನೀಡಲಿದ್ದು, ದುರಂತದ ತನಿಖೆಯ ನೇತೃತ್ವ ವಹಿಸಲಿದ್ದಾರೆ. Mi-17 ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ಗಾಗಿ ಹುಡುಕಾಟ ನಡೆದಿದೆ.
ಕೊಯಮತ್ತೂರು ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ದೆಹಲಿಗೆ:
ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಪಾರ್ಥಿವ ಶರೀರಗಳನ್ನು ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಇಂದು ಗೌರವ ಸಲ್ಲಿಕೆಯಾಗಲಿದೆ. ಬೆಳಗ್ಗೆ 11.30ಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೌರವ ಸಲ್ಲಿಸಲಿದ್ದಾರೆ. ಗೌರವ ಸಲ್ಲಿಕೆ ನಂತರ 13 ಪಾರ್ಥಿವ ಶರೀರಗಳನ್ನು ಸೇನಾ ಆಸ್ಪತ್ರೆಯಿಂದ ಕೊಯಮತ್ತೂರು ಏರ್ಪೋರ್ಟ್ಗೆ, ಅಲ್ಲಿಂದ ದೆಹಲಿಗೆ ರವಾನಿಸಲಾಗುವುದು.
Also Read:
CDS Bipin Rawat Death: ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ; ವಿವರ ಇಲ್ಲಿದೆ