ತಮಿಳು ನಾಮಫಲಕ ತೆರವಿಗೆ ಆಗ್ರಹಿಸಿ ಡಿಸಿ ಕಚೇರಿಗೆ ವಾಟಾಳ್ ಮುತ್ತಿಗೆ, ಬಂಧನ

– ಕೆಜಿಎಫ್ ನಗರಸಭೆ ವಿಸರ್ಜನೆ, ನಾಮಫಲಕ ತೆರವಿಗೆ ಒತ್ತಾಯ

ಕೋಲಾರ: ತಮಿಳು ನಾಮಫಲಕ ಅಳವಡಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕೆಜಿಎಫ್ ನಗರಸಭೆ ರದ್ದು ಮಾಡಿ, ತಮಿಳು ನಾಮಫಲಕ ತೆಗೆಯುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಚಳವಳಿ ಆರಂಭಿಸಿದ್ದು, ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಅವರನ್ನು ಬಂಧಿಸಲಾಯಿತು.

ಇತ್ತೀಚೆಗೆ ಕನ್ನಡ ಚಳುವಳಿ ವಾಟಾಳ್ ಪಕ್ಷ ಬಸ್ ನಿಲ್ದಾಣದ ಮಹಾದ್ವಾರದ ಮೇಲೆ ಇದ್ದ ತಮಿಳು ಬರಹಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಈ ಮೂಲಕ ಕನ್ನಡ ಉಳಿಸಿ ಅಭಿಯಾನವನ್ನು ವಾಟಾಳ್ ಆರಂಭಿಸಿದ್ದು, ರಾಜ್ಯದಲ್ಲಿ ಕನ್ನಡ ಫಲಕಗಳಿಗೆ ಆದ್ಯತೆ ನೀಡುವ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಆದರೆ ಈ ಮಧ್ಯೆ ತಮಿಳು ಭಾಷಿಕರ ಒತ್ತಾಯದ ಮೇರೆಗೆ ನಗರಸಭೆಯವರು ಮತ್ತೆ ತಮಿಳು ಬರಹದ ಬೋರ್ಡ್ ಹಾಕಿದ್ದಾರೆ. ಪರಿಣಾಮ ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ವಾಟಾಳ್ ಮುತ್ತಿಗೆ ಹಾಕುವ ಮೂಲಕ ತಮಿಳು ನಾಮಫಲಕ ತೆಗೆಯುವಂತೆ ಹಾಗೂ ನಗರಸಭೆ ರದ್ದು ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಇಲ್ಲಿನ ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಮಿಳು ನಾಮಫಲಕ ತೆಗೆಯದಿದ್ದರೆ ಜುಲೈ 26 ರಂದು ರಾಜಭವನ ಮುತ್ತಿಗೆ ಹಾಕಲಾಗುವುದು. ಜೊತೆಗೆ ಆಗಸ್ಟ್ 7ರಂದು ರಾಜ್ಯದ ನಾನಾ ಮೂಲೆಗಳಿಂದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಕೆಜಿಎಫ್ ನಗರಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ವಾಟಾಳ್ ನೀಡಿದ್ದಾರೆ.

ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್ ಸೇರಿದಂತೆ 50ಕ್ಕೂ ಹೆಚ್ಚು ಜನ ಹೋರಾಟಗಾರರನ್ನು ಕೋಲಾರ ಪೊಲೀಸರು ಬಂಧಿಸಿದರು. ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಸೆಲ್ವಮಣಿ, ನಗರಸಭೆಯಲ್ಲಾಗಿರುವ ಆದೇಶ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೆ ಕೆಜಿಎಫ್ ನಗರದಲ್ಲಿ ಭಾಷಾ ಸಾಮರಸ್ಯಕ್ಕೆ ಧಕ್ಕೆಯುಂಟಾಗುವಂತೆ ಮಾತನಾಡಿರುವ ಇಬ್ಬರ ವಿರುದ್ಧ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೋಲಾರ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಗಡಿಗಳೊಂದಿಗೆ ಹೊಂದಿಕೊಂಡಿರುವ ಜಿಲ್ಲೆ, ಇಲ್ಲಿ ತಮಿಳು-ತೆಲುಗು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅದರಲ್ಲೂ ಕೆಜಿಎಫ್ ತಮಿಳು ಭಾಷಿಕರೇ ಹೆಚ್ಚು ಮಂದಿ ಇದ್ದಾರೆ. ಪರಿಣಾಮ ಇಲ್ಲಿನ ನಗರಸಭೆ ಸಂಪೂರ್ಣ ತಮಿಳುಮಯವಾಗಿದೆ. ಚಿನ್ನದ ಗಣಿಗಳಲ್ಲಿ ಕಾರ್ಯನಿರ್ವಹಿಸುತಿದ್ದ ಗಣಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿ ತಮಿಳುನಾಡಿನಿಂದ ಬಂದವರೇ ಆಗಿದ್ದು, ತಮಿಳು ಭಾಷಿಕರೆ ಹೆಚ್ಚಾಗಿದ್ದಾರೆ.

The post ತಮಿಳು ನಾಮಫಲಕ ತೆರವಿಗೆ ಆಗ್ರಹಿಸಿ ಡಿಸಿ ಕಚೇರಿಗೆ ವಾಟಾಳ್ ಮುತ್ತಿಗೆ, ಬಂಧನ appeared first on Public TV.

Source: publictv.in

Source link