ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದು, ಇತ್ತೀಚೆಗೆ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಹೀಗೆ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆ ಆಗುವ ಆಸೆಯನ್ನು ಹೊರ ಹಾಕಿದ್ದಾರೆ.

ಹೌದು ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕುರಿತು ಮನಬಿಚ್ಚಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆಯಾಗುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. ತಮಿಳಿನಲ್ಲಿ ರಶ್ಮಿಕಾ ಅಭಿನಯಿಸಿರುವ ಮೊದಲ ಚಿತ್ರ ಇತ್ತೀಚೆಗೆ ತೆರೆ ಕಂಡು ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇದರ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ ತಮಿಳು ಸೊಸೆಯಾಗುವ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಅಂದರೆ ತುಂಬಾ ಇಷ್ಟ. ವಿಶೇಷವಾಗಿ ತಮಿಳರ ಊಟ, ಆಹಾರ ಪದಾರ್ಥಗಳು ಬಹಳ ಇಷ್ಟವಾಗುತ್ತದೆ. ಹೀಗಾಗಿ ತಮಿಳರ ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ತಮಿಳು ಸಿನಿಮಾ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಇದೀಗ ಮದುವೆ ವಿಚಾರ ಮಾತನಾಡಿರುವುದು, ಅದರಲ್ಲೂ ತಮಿಳರ ಮನೆಯ ಸೊಸೆ ಆಗುತ್ತೇನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಪ್ರಸ್ತುತ ರಶ್ಮಿಕಾ ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸುತ್ತಿದ್ದು, ಇತ್ತೀಚೆಗೆ ಅವರೊಂದಿಗೆ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‍ನಲ್ಲೂ ಮಿಂಚುತ್ತಿದ್ದಾರೆ.

The post ತಮಿಳು ಮನೆಯ ಸೊಸೆಯಾಗುವಾಸೆ ಎಂದ ಚೆಶ್ಮಾ ಚೆಲುವೆ appeared first on Public TV.

Source: publictv.in

Source link