‘ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ; ಮತ್ತೆ ದೇವರು ಯಾಕೆ ನೋವು ಕೊಡ್ತಾನೋ ಗೊತ್ತಿಲ್ಲ’: ಶಿವರಾಂ ಬಗ್ಗೆ ಶಿವಣ್ಣನ ಮಾತು | Shivarajkumar talks about senior actor Shivaram health after visiting hospital


‘ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ; ಮತ್ತೆ ದೇವರು ಯಾಕೆ ನೋವು ಕೊಡ್ತಾನೋ ಗೊತ್ತಿಲ್ಲ’: ಶಿವರಾಂ ಬಗ್ಗೆ ಶಿವಣ್ಣನ ಮಾತು

ಶಿವರಾಜ್​ಕುಮಾರ್​, ಶಿವರಾಂ

ನಟ ಶಿವರಾಜ್​ಕುಮಾರ್ (Shivarajkumar)​ ಅವರು ಕಳೆದ ಕೆಲವು ದಿನಗಳಿಂದ ತೀವ್ರ ನೋವಿನಲ್ಲಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ನಿಧನದಿಂದ ಇಡೀ ರಾಜ್​ ಕುಟುಂಬ ಕಣ್ಣೀರು ಸುರಿಸುತ್ತಿದೆ. ಅಪ್ಪು ಇಹಲೋಕ ತ್ಯಜಿಸಿ ಒಂದು ತಿಂಗಳು ಕಳೆದಿದೆ. ಅಷ್ಟರೊಳಗೆ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. ಡಾ. ರಾಜ್​ಕುಮಾರ್​ ಕುಟುಂಬಕ್ಕೆ ತುಂಬ ಆಪ್ತರಾಗಿದ್ದ ಹಿರಿಯ ನಟ ಶಿವರಾಂ (Senior Actor Shivaram) ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವುದು ಶಿವರಾಜ್​ಕುಮಾರ್​ ಅವರಿಗೆ ನೋವುಂಟು ಮಾಡಿದೆ. ಬೆಂಗಳೂರಿನ ಬ್ಯಾಂಕ್​ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಶಿವಣ್ಣ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ಶಿವರಾಂ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಡಾ. ರಾಜ್​ಕುಮಾರ್ ಕುಟುಂಬ​ದ ಜತೆ ಶಿವರಾಂ ಅವರಿಗೆ ಆಪ್ತ ಒಡನಾಟ ಇದೆ. ಆ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ಅವರ ಫ್ಯಾಮಿಲಿಗೆ ಧೈರ್ಯ ಹೇಳುತ್ತೇನೆ. ನಾನು ಕೂಡ ಅವರ ಕುಟುಂಬದ ಸದಸ್ಯ ಆಗಿರುವುದರಿಂದ ನಮಗೂ ಎಲ್ಲರೂ ಧೈರ್ಯ ಹೇಳಬೇಕು. ಒಂದು ತಿಂಗಳ ಹಿಂದಷ್ಟೇ ತಮ್ಮನನ್ನು ಕಳೆದುಕೊಂಡಿದ್ದೇನೆ. ದೇವರು ಪದೇಪದೇ ಯಾಕೆ ಈ ರೀತಿ ನೋವು ಕೊಡುತ್ತಾನೆ ಅಂತ ನಮಗೂ ಅರ್ಥ ಆಗುವುದಿಲ್ಲ’ ಎಂದಿದ್ದಾರೆ ಶಿವಣ್ಣ.

ಶಿವರಾಜ್​ಕುಮಾರ್​ ಮತ್ತು ಶಿವರಾಂ ಅವರು ಅನೇಕ ಬಾರಿ ಒಟ್ಟಾಗಿ ಶಬರಿಮಲೆಗೆ ಹೋಗಿ ಬಂದಿದ್ದುಂಟು. ಅದನ್ನು ಶಿವಣ್ಣ ಮೆಲುಕು ಹಾಕಿದ್ದಾರೆ. ‘ಒಂದು ವರ್ಷದಲ್ಲಿ ಮೂರು-ನಾಲ್ಕು ಬಾರಿ ಶಿವರಾಂ ಅವರು ಶಬರಿಮಲೆ ಅಪ್ಪಯ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮ ಜೊತೆಯೂ ಹೋಗಿ ಬರುತ್ತಿದ್ದರು. ಸ್ನೇಹಿತರು ಯಾರಾದರೂ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿದಾಗಲೂ ಹೋಗುತ್ತಾರೆ. ಅಯ್ಯಪ್ಪ ಸ್ವಾಮಿ ಎಂದರೆ ಶಿವರಾಂ ಅವರಿಗೆ ಏನೋ ವಿಶೇಷ ಪ್ರೀತಿ. ಮೂರು ವರ್ಷದ ಹಿಂದೆ ಶಬರಿಮಲೆಗೆ ಹೋಗಿದ್ವಿ. ಕೋವಿಡ್​ ಬಂದ ನಂತರ ಹೋಗಲು ಸಾಧ್ಯವಾಗಿರಲಿಲ್ಲ. ಆಗ ಅವರಿಗೆ 81 ವರ್ಷ. ಆ ವಯಸ್ಸಿನಲ್ಲೂ ಅವರು ಬೆಟ್ಟ ಹತ್ತುತ್ತಿದ್ದರು. ಅವರಲ್ಲಿ ಇರುವ ಆ ಮನೋಬಲವೇ ಅವರನ್ನು ಕಾಪಾಡುತ್ತದೆ ಎಂದುಕೊಂಡಿದ್ದೇನೆ. ಆ ದೇವರು ಅವರನ್ನು ಕಾಪಾಡಬೇಕು ಎಂಬುದೇ ನಮ್ಮ ಆಸೆ. ಕರ್ನಾಟಕದ ಜನತೆಯ ಪ್ರೀತಿ-ಅಭಿಮಾನದಿಂದ ಅವರು ಗುಣಮುಖರಾಗುತ್ತಾರೆ’ ಎಂದು ಶಿವಣ್ಣ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *