ಬಾಗಲಕೋಟೆ: ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿದಿದ್ದ ಉರಗ ರಕ್ಷರೊಬ್ಬರು ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.

30 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿ. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಟ್ಟಿಗೆಯಲ್ಲಿ ಅವಿತುಕೊಂಡಿದ್ದ ವಿಷ ಸರ್ಪ – ಉರಗ ಕಂಡು ಆತಂಕಗೊಂಡ ಜನ

ಸದಾಶಿವ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಕೆಲಸದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾಶಿವ ಅವರ ತಂದೆಯೂ ಹಾವು ಹಿಡಿಯುದರಲ್ಲಿ ನಿಸ್ಸಿಮರಾಗಿದ್ದರು. ಹೀಗಾಗಿ ತಂದೆಯಂತೆ ಮಗ ಸದಾಶಿವ ಅವರು ಕೂಡ ಊರಿಗೆ, ಕೆಲ ಮನೆಗಳಿಗೆ ಆಗಮಿಸುತ್ತಿದ್ದ ನಾನಾ ರೀತಿಯ ಹಾವುಗಳನ್ನು ಹಿಡಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗ ರಕ್ಷಕ ಸಾವು appeared first on Public TV.

Source: publictv.in

Source link