ತಾಯಿಗೆ ಕೊಟ್ಟ ಮಾತನ್ನು ಈಡೇರಿಸಿ, ತಂಗಿನ ಆಸೆ ಪೂರೈಸಿದ ವಿಂಡೀಸ್ ದಾಂಡಿಗ | West Indies Players Rovman powell buy his new car


Rovman Powell: ಐಪಿಎಲ್-2022ರಲ್ಲಿ ಪೊವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2.80 ಕೋಟಿ ರೂ.ಗೆ ಖರೀದಿಸಿತ್ತು. ಲಾಂಗ್ ಶಾಟ್‌ಗಳನ್ನು ಆಡುವುದಕ್ಕೆ ಹೆಸರುವಾಸಿಯಾಗಿರುವ ಪೊವೆಲ್​ 14 ಪಂದ್ಯಗಳಲ್ಲಿ 25 ಸರಾಸರಿಯಲ್ಲಿ 250 ರನ್ ಗಳಿಸಿದ್ದರು.

ವೆಸ್ಟ್ ಇಂಡೀಸ್‌ನ ಉದಯೋನ್ಮುಖ ಯುವ ಆಟಗಾರ ರೋವ್‌ಮನ್ ಪೊವೆಲ್ (Rovman powell) ತುಂಬಾ ಸಂತೋಷವಾಗಿದ್ದಾರೆ. ಅವರ ಈ ಖುಷಿಗೆ ಕಾರಣ ಮೈದಾನದಲ್ಲಿನ ಅವರ ಪ್ರದರ್ಶನವಲ್ಲ. ಬದಲಾಗಿ ಅವರು ಖರೀದಿಸಿದ ಕಾರು. ಒಂದು ಕಾಲದಲ್ಲಿ ಬಡತನದ ಬೇಗೆಯಲ್ಲಿ ಬೆಂದಿದ್ದ ಪೊವೆಲ್ ಕುಟುಂಬವು ಇದೀಗ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತಿರುವುದು ವಿಶೇಷ. ಅದರಂತೆ ಇದೀಗ ರೋವ್​ಮನ್ ಪೊವೆಲ್ ತನ್ನ ನೆಚ್ಚಿನ ಮರ್ಸಿಡಿಸ್‌ನ 2022 AMG GLE 53 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡಕ್ಕೆ ಪೊವೆಲ್ ಹಾದಿ ಸುಲಭವಾಗಿರಲಿಲ್ಲ. ಬಡ ಕುಟುಂಬದಲ್ಲಿ ಜನಿಸಿದ ಪೊವೆಲ್ ಬಾಲ್ಯದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡಿದ್ದರು. ಆದರೆ ಕ್ರಿಕೆಟ್ ಹಿಂದೆ ಓಡಿದ್ದ ಪೊವೆಲ್ ಇದೇ ಆಟದ ಮೂಲಕ ಬಡತನ ನೀಗಿಸುತ್ತೇನೆ ಎಂದು ತಾಯಿಗೆ ಮಾತು ಕೊಟ್ಟಿದ್ದರು.

“ಕ್ರಿಕೆಟ್ ಮೈದಾನದಲ್ಲಿ ನಾನು ಕಷ್ಟಕರ ಸಂದರ್ಭಗಳನ್ನು ಎದುರಿಸಿದಾಗ, ನಾನು ಇದನ್ನೆಲ್ಲ ನನ್ನ ತಾಯಿಗಾಗಿ ಮಾಡುತ್ತಿದ್ದೇನೆ. ನನಗಾಗಿ ಅಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅಲ್ಲದೆ ಎಲ್ಲವೂ ನನ್ನ ತಂಗಿಗಾಗಿ ಎಂದು ದೈರ್ಯ ಮಾಡಿಕೊಳ್ಳುತ್ತಿದ್ದೆ. ನನಗಾಗಿ ಇಷ್ಟೆಲ್ಲಾ ಮಾಡಿದ್ದರೆ ಇದೆಲ್ಲ ಯಾವಾಗಲೋ ಮುಗಿಯುತ್ತಿತ್ತು. ನನಗೆ ಇಷ್ಟು ಪ್ರೀತಿ ನೀಡಿದವರಿಗಾಗಿ ನಾನು ಇದೆಲ್ಲವನ್ನೂ ಮಾಡುತ್ತಿದ್ದೇನೆ. ಹೀಗಾಗಿ ಇಂದು ಪ್ರಮುಖ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ರೋವ್​ಮನ್ ಪೊವೆಲ್ ಹೇಳಿದ್ದಾರೆ.

ಅದರಂತೆ ಇದೀಗ ತಾಯಿ ಕೊಟ್ಟ ಮಾತಿನಂತೆ ಪೊವೆಲ್ ಹೊಸ ಮನೆ ಮಾಡಿದ್ದಾರೆ. ಜೊತೆಗೆ ತಂಗಿಯ ಆಸೆಯಂತೆ ನೆಚ್ಚಿನ ಕಾರನ್ನೂ ಕೂಡ ಖರೀದಿಸಿದ್ದಾರೆ. ಈ ಮೂಲಕ ಬಾಲ್ಯದಲ್ಲಿ ತಾಯಿ ಹಾಗೂ ತಂಗಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ವೆಸ್ಟ್ ಇಂಡೀಸ್ ಆಟಗಾರ ಮುಂದಡಿಯಿಡುತ್ತಿದ್ದಾರೆ.

ಇನ್ನು ಐಪಿಎಲ್-2022ರಲ್ಲಿ ಪೊವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2.80 ಕೋಟಿ ರೂ.ಗೆ ಖರೀದಿಸಿತ್ತು. ಲಾಂಗ್ ಶಾಟ್‌ಗಳನ್ನು ಆಡುವುದಕ್ಕೆ ಹೆಸರುವಾಸಿಯಾಗಿರುವ ಪೊವೆಲ್​ 14 ಪಂದ್ಯಗಳಲ್ಲಿ 25 ಸರಾಸರಿಯಲ್ಲಿ 250 ರನ್ ಗಳಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ತಂಡದ ಖಾಯಂ ಸದಸ್ಯರಾಗಿರುವ ರೋವ್​ಮನ್ ಪೊವೆಲ್ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ.

TV9 Kannada


Leave a Reply

Your email address will not be published. Required fields are marked *