ಯುದ್ಧದಿಂದ ಬೇಸತ್ತಿದ್ದ, ನಲುಗಿದ, ಸುಸ್ತಾಗಿದ್ದ ಆ ಪುಟ್ಟ ರಾಷ್ಟ್ರದಲ್ಲಿ ತುತ್ತು ಅನ್ನಕ್ಕೂ ಹಾಹಾಕಾರ. ಅಲ್ಲಿಯ ಬಡತನ ಬೇಗುದಿ ಹೇಳತೀರದು. ಈ ನಡುವೆ ಮೀನುಗಾರಿಕೆ ಕಾಯಕ ಮಾಡ್ತಿದ್ದ 35 ಬಡಪಾಯಿಗಳು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿದ್ದಾರೆ.

ಅದೃಷ್ಟ ಖುಲಾಯಿಸಿದ್ರೆ ಯಾರು ಏನು ಬೇಕಾದ್ರೂ ಆಗಬಹುದು. ಅಷ್ಟೇ ಅಲ್ಲ ಲಕ್ಷ್ಮಿ ಮನೆ ಬಾಗಿಲಿಗೆ ಯಾವಾಗ ಬೇಕಾದರೂ ಬರಬಹುದು. ಆದರೆ ಯಾರಿಗೇ ಆದರೂ ಕಾಯಕ ನಿಷ್ಠೆ ಬೇಕೇ ಬೇಕು. ಇಲ್ಲಿ ನಡೆದಿದ್ದು ಇದೇ ಕಥೆ. ಆದ್ರೆ ಸುಮ್ಮನೇ ಈ ಬಡವರು ರಾತ್ರೋ ರಾತ್ರಿ ಶ್ರೀಮಂತರಾಗಿಲ್ಲ. ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿಕೊಂಡಿದ್ದವರಿಗೆ ಅದೃಷ್ಟ ಒದ್ದುಕೊಂಡು ಬಂದಿದೆ.

ಇದು ಪುಟ್ಟ ರಾಷ್ಟ್ರ ಯೆಮನ್. ಇಲ್ಲಿ ಮದ್ದು ಗುಂಡುಗಳ ಸದ್ದೇ ಹೆಚ್ಚು. ಕಾರಣ ಇಲ್ಲಿಯ ಬಂಡುಕೋರರು ಸರ್ಕಾರವನ್ನು ಕೆಡವಿ ತಮ್ಮದೇ ಸರ್ಕಾರ ರಚಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಬಂಡುಕೋರರ ನಡೆ ಅಕ್ಕಪಕ್ಕದ ಅರಬ್‌ ರಾಷ್ಟ್ರಗಳ ನಿದ್ದೆಗೆಡಿಸಿದೆ. ಹೇಗಾದ್ರೂ ಮಾಡಿ ಬಂಡುಕೋರರನ್ನ ಸದೆಬಡಿಯಲೇಬೇಕು ಅನ್ನುವುದು ಸೌದಿ ಅರೇಬಿಯಾ ಸೇರಿದಂತೆ ಇತರೆ ಅರಬ್‌ ರಾಷ್ಟ್ರಗಳ ತೀರ್ಮಾನ. ಇದರ ಪರಿಣಾಮವೇ.. ದಿನ ಬೆಳಗಾದರೆ ಯೆಮನ್‌ನಲ್ಲಿ ಮದ್ದುಗುಂಡುಗಳ ಸದ್ದು. ವಿಮಾನ ಹಾರಾಟದ ಸದ್ದು ಕೇಳಿದ್ರೂ ಸಾಕು ಎಲ್ಲಿ ವೈಮಾನಿಕ ದಾಳಿ ಆಯ್ತೋ ತಮ್ಮ ಪ್ರಾಣ ಹೋಯ್ತೋ ಅಂತ ಭಯ ಬೀಳ್ತಾರೆ. ಕೆಲಸ ಇಲ್ಲದೇ ಹೊಟ್ಟೆಗೆ ಹಿಟ್ಟಿಲ್ಲದೇ ನರಳುವ ಸ್ಥಿತಿ ಅಲ್ಲಿಯ ಜನರದ್ದು. ಇತ್ತೀಚಿನ ವರ್ಷದಲ್ಲಿ ಸುಮಾರು 85 ಸಾವಿರ ಮಕ್ಕಳು ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದಾರೆ ಅಂದ್ರೆ ಆ ರಾಷ್ಟ್ರದ ಬಡತನ, ನರಳಾಟ ಎಂತಹದ್ದು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಈ ರಾಷ್ಟ್ರದಲ್ಲಿ ಕಂಡುಬಂದಿದ್ದೇ ಫಿಷರ್‌ ಮ್ಯಾನ್‌ ಜಾಕ್‌ಪಟ್‌ ಸ್ಟೋರಿ.

ಮೀನುಗಾರಿಕೆಗೆ ಹೋಗಿದ್ದು 35 ಜನ ಮೀನುಗಾರರ ತಂಡ
ಸಾಗರದ ಮಧ್ಯೆ ಖುಲಾಯಿಸಿತ್ತು ಈ ಮೀನುಗಾರರ ಅದೃಷ್ಟ

ಅವರ ಕಾಯಕವೇ ಮೀನುಗಾರಿಕೆ. ತುತ್ತು ಅನ್ನ ಸಿಗಬೇಕು, ಹೊಟ್ಟೆ ತುಂಬಬೇಕು ಅಂದ್ರೆ ಸಮುದ್ರಕ್ಕೆ ಇಳಿಯಲೇ ಬೇಕು, ಮೀನುಗಾರಿಕೆ ಮಾಡಲೇಬೇಕು. ಅಂದು ಕೂಡ ತುತ್ತು ಅನ್ನದ ದುಡಿಮೆಗಾಗಿಯೇ 35 ಜನರ ತಂಡ ಯೆಮನ್‌ನ ದಕ್ಷಿಣ ತೀರದಲ್ಲಿ ಮೀನುಗಾರಿಕೆಗೆ ಇಳಿದಿತ್ತು. ಮೀನು ಸಿಗುತ್ತವೋ ಇಲ್ಲವೋ, ಮೀನು ಸಿಗದಿದ್ದರೇ ತಮ್ಮ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸುವುದು ಹೇಗೆ ಅನ್ನೋ ಚಿಂತೆ ಅವರನ್ನು ಕಾಡ್ತಾ ಇತ್ತು. ಅವರ ಅದೃಷ್ಟಕ್ಕೆ ಕಡಲಿಗೆ ಇಳಿದ ಸ್ವಲ್ಪ ಸಮಯದಲ್ಲಿಯೇ ಅಲ್ಪ ಸ್ವಲ್ಪ ಮೀನು ಬಲೆಗೆ ಬಿದ್ದಾಗಿತ್ತು. ಆದ್ರೆ, ಬೋಟ್‌ನಲ್ಲಿ ಇದ್ದ ಒಬ್ಬ ಮೀನುಗಾರನಿಗೆ ದೂರದಲ್ಲಿ ಒಂದು ದೊಡ್ಡ ಗಾತ್ರದ ಮೀನು ಕಾಣಿಸುತ್ತೆ.

ಹತ್ತಿರ ಹೋದ್ರೆ ಗಬ್ಬು ವಾಸನೆ ಬೀರ್ತಿದ್ದ ತಿಮಿಂಗಿಲ
ದೊಡ್ಡ ಗಾತ್ರದ ಮೀನು ಕಂಡ ತಕ್ಷಣವೇ 35 ಜನರ ತಂಡ ಭಯ ಬೀಳಲಿಲ್ಲ. ಎಲ್ಲಿ ತಮ್ಮ ಬೋಟ್‌ ಪಲ್ಟಿ ಮಾಡಿಸುತ್ತೋ, ತಮ್ಮನ್ನು ತಿಂದು ಬಿಡುತ್ತೋ ಅನ್ನೋ ಯೋಚನೆ ಸುಳಿಯಲಿಲ್ಲ. ಸ್ವಲ್ಪ ಸಮಯ ಅದು ಯಾವ ಮೀನಿರಬಹುದು ಅಂತ ಅಲ್ಲೇ ಇದ್ದು ಗಮನಿಸಿದ್ದಾರೆ. ನಿಧಾನಕ್ಕೆ ಆ ಮೀನಿನ ಹತ್ತಿರ ಹತ್ತಿರ ಹೋಗುತ್ತಾರೆ. ಆದ್ರೆ ಅದು ಬದುಕಿರುವ ಮೀನಾಗಿರಲಿಲ್ಲ, ದೈತ್ಯಾಕಾರದ ತಿಮಿಂಗಿಲ ಸತ್ತು ತೇಲುತ್ತಿತ್ತು. ಇದು ತಿನ್ನಲು ಬರಲ್ಲ, ಸಮುದ್ರ ತೀರಕ್ಕೆ ಎಳೆದೊಯ್ದರೆ ಮಾರಾಟ ಮಾಡಲು ಆಗಲ್ಲ ಅಂತ ಸುಮ್ಮನಾಗಿದ್ದರು. ಆದ್ರೆ, ಸತ್ತ ತಿಮಿಂಗಿಲದಿಂದ ವಿಪರೀತ ಗಬ್ಬು ವಾಸನೆ ಬರುತ್ತಿತ್ತು. ಆ ವಾಸನೆಯಲ್ಲಿಯೇ ಅದೃಷ್ಟ ಇತ್ತು. ನಿಧಿಯೊಂದು ಅವರನ್ನು ಕೈ ಬೀಸಿ ಕರೆಯುತ್ತಿತ್ತು.

ಅನುಮಾನ ಹುಟ್ಟಿಸಿದ ಗಬ್ಬು ವಾಸನೆ
ಅಲ್ಲಿಯೇ ಕೈ ಬೀಸಿ ಕರೆದ ಅದೃಷ್ಟ ಲಕ್ಷ್ಮಿ

ಸತ್ತ ದೊಡ್ಡ ಗಾತ್ರದ ತಿಮಿಂಗಿಲ ಮೀನಿಂದ ಹೊರಬರುತ್ತಿದ್ದ ವಿಪರೀತ ಗಬ್ಬು ವಾಸನೆ ಮೀನುಗಾರರಲ್ಲಿ ಅನುಮಾನ ಹುಟ್ಟಿಸಿತ್ತು. ಇಲ್ಲಿಯವರೆಗೆ ಅದೆಷ್ಟೋ ತಿಮಿಂಗಿಲ ಮೀನು ಸಮುದ್ರದಲ್ಲಿ ಸತ್ತು ತೆಲುವುದನ್ನು ನೋಡಿದ್ರು. ಆದ್ರೆ, ಇಷ್ಟೊಂದು ಗಬ್ಬು ವಾಸನೆ ಅವರ ಜೀವಮಾನದಲ್ಲಿಯೇ ನೋಡಿರಲಿಲ್ಲ. ಹಾಗಾದ್ರೆ ಏನಿರಬಹುದು, ಯಾವುದಾದ್ರೂ ಸಮುದ್ರ ಜೀವಿಯನ್ನು ತಿಮಿಂಗಿಲ ತಿಂದಿರಬಹುದೆ. ಅದೇ ಸಮಯಕ್ಕೆ ತಿಮಿಂಗಿಲ ಸತ್ತಿರಬಹುದೆ, ಆ ಸಮುದ್ರ ಜೀವಿ ತಿಮಿಂಗಿಲದ ಹೊಟ್ಟೆಯೊಳಗೆ ಜೀರ್ಣವಾಗದೇ ಈ ರೀತಿ ವಾಸನೆ ಬರುತ್ತಿರಬಹುದೆ.. ಹೀಗೆ ನಾನಾ ರೀತಿಯ ಅನುಮಾನ 35 ಜನ ಮೀನುಗಾರರಲ್ಲಿ ಹುಟ್ಟಿಸಿತ್ತು. ಅದೇನದು ಅಂತ ನೋಡೇ ಬಿಡೋಣ ಅಂತ ಆ ಮೀನನ್ನು ಸಮುದ್ರದ ದಡಕ್ಕೆ ಎಳೆದೊಯ್ಯುತ್ತಾರೆ.

ತಿಮಿಂಗಿಲ ಕತ್ತರಿಸಿದ್ದಾಗ ಸಿಕ್ಕಿದ್ದೇ ಸಮುದ್ರ ಚಿನ್ನ
ಸಮುದ್ರದ ದಡಕ್ಕೆ ಮೀನನ್ನು ಎಳೆತಂದ 35 ಜನರ ತಂಡ, ಅದನ್ನ ಕತ್ತರಿಸಲು ಆರಂಭಿಸುತ್ತಾರೆ. ಅಲ್ಲಿರುವ ಅಕ್ಕಪಕ್ಕದ ಜನ ಇವರಿಗೆ ಮಾಡಲು ಬೇರೆ ಕೆಲಸ ಇಲ್ಲವೇ ಅಂತ ಆ ಗಬ್ಬು ವಾಸನೆ ಸಹಿಸಲಾಗದೇ ದೂರ ಓಡೋಡಿ ಹೋಗ್ತಾರೆ. ಇತ್ತ ಮೀನುಗಾರರು ವಾಸನೆ ಸಹಿಸಿಕೊಳ್ಳುತ್ತಾ ತಿಮಿಂಗಿಲ ಕತ್ತರಿಸುತ್ತಾ ಸಾಗುತ್ತಾರೆ. ಆರಂಭದಲ್ಲಿ ಏನೂ ಕಂಡುಬರಲ್ಲ. ಆದ್ರೆ, ಅವರ ಕುತೂಹಲ ಅಷ್ಟಕ್ಕೆ ನಿಂತಿಲ್ಲ. ನೋಡೇ ಬಿಡೋಣ ಅಂತ ಮತ್ತಷ್ಟು ಕತ್ತರಿಸಿದ್ದಾರೆ. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಸಮುದ್ರ ಚಿನ್ನ.

ಮೀನುಗಾರರಿಗೆ ಸಿಕ್ಕಿದ್ದು ತಿಮಿಂಗಿಲದೊಳಗಿನ ತ್ಯಾಜ್ಯ
ಈ ತಿಮಿಂಗಿಲದ ತ್ಯಾಜ್ಯದ ತೂಕವೇ ಬರೋಬ್ಬರಿ 127 ಕೆಜಿ

ಹೌದು, ತಿಮಿಂಗಿಲ ಕತ್ತರಿಸಿದಾಗ ಮೀನುಗಾರರಿಗೆ ಸಿಕ್ಕಿದ್ದೇ ಸಮುದ್ರ ಚಿನ್ನ ಎಂದೇ ಗುರುತಿಸಿಕೊಳ್ಳುತ್ತಿರುವ ತಿಮಿಂಗಿಲ ವಾಂತಿ. ಅದನ್ನು ಅಂಬರ್ಗ್ರಿಸ್‌ ಅಂತ ಕರೆಯಲಾಗುತ್ತದೆ. ಅದನ್ನು ಒಮ್ಮೆ ನೋಡಿದ ಮೀನುಗಾರರು ಹೌಹಾರಿ ಬಿಟ್ಟಿದ್ದಾರೆ. ತಮ್ಮ ಅದೃಷ್ಟ ಖುಲಾಯಿಸಿದ್ದು ಅವರಿಗೆ ಅದಾಗಲೇ ಅರ್ಥವಾಗಿ ಬಿಡುತ್ತೆ. ಅದಕ್ಕೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬೆಲೆ ಇದೆ ಅನ್ನೋದು ಅವರಿಗೆ ತಿಳಿಯುತ್ತೆ. ಅದನ್ನು ಹೊರತೆಗೆದು ತೂಕ ಹಾಕಿದಾಗ ಬಂದಿದ್ದು ಬರೋಬ್ಬರಿ 127 ಕೆಜಿ. ಅಬ್ಬಾ! ಅದೇನು ಅದೃಷ್ಟ ನೋಡಿ. ತಾವಾಯಿತು ತಮ್ಮ ಕೆಲಸ ಆಯಿತು ಅಂತ ಇದ್ದವರಿಗೆ ಅದೃಷ್ಟ ಲಕ್ಷ್ಮೀ ಹುಡಿಕೊಂಡು ಮನೆ ಬಾಗಿಲಿಗೆ ಹೇಗೆ ಬಂದೇ ಬಿಟ್ಲು ಅಂಥ.

ಅರಬ್‌ ವ್ಯಾಪಾರಿಯೊಬ್ಬರಿಗೆ ಮಾರಾಟ
ಅದರಿಂದ ಸಿಕ್ಕಿದ್ದು ನೂರಾರು ಕೋಟಿ ಹಣ

ಯೆಮನ್‌ ಮೀನುಗಾರಿಗೆ ತಿಮಿಂಗಿಲ ವಾಂತಿ ಸಿಕ್ಕಿದೆ ಅನ್ನೋದು ದೊಡ್ಡ ದೊಡ್ಡ ವ್ಯಾಪಾರಿಗಳಿಗೂ ಗೊತ್ತಾಗಿ ಬಿಡುತ್ತೆ. ಪ್ರಸಿದ್ಧ ಅರಬ್‌ ವ್ಯಾಪಾರಿಯೊಬ್ಬರು ಅದನ್ನು ಖರೀದಿಸುತ್ತಾರೆ. ಒಂದೊಂದು ಕೆ.ಜಿ ತಿಂಗಿಲ ವಾಂತಿಗೆ ಕೋಟಿಗಟ್ಟಲೇ ಹಣ ಇದೆ. ಅಂಥದ್ರಲ್ಲಿ ಇವರಿಗೆ ಸಿಕ್ಕಿದ್ದು ಬರೊಬ್ಬರಿ 127 ಕೆ.ಜಿ. ಅದೆಷ್ಟು ಕೋಟಿ ಕೋಟಿ ಹಣ ಮೀನಿಗಾರರ ಪಾಲಿಗೆ ಸಿಕ್ಕಿರಬಹುದು ಅನ್ನೋದನ್ನು ಉಹಿಸಿನೋಡಿ. ಜೀವಮಾನದಲ್ಲಿ ಇಂತಹವೊಂದು ಜಾಕ್‌ಪಟ್‌ ಹೊಡೆಯುತ್ತೆ, ತಮ್ಮ ಜೀವನವೇ ಬದಲಾಗುತ್ತೆ ಅಂತ ಯಾವತ್ತೂ ಇವರು ಕನಸು ಮನಸಿನಲ್ಲಿಯೂ ಯೋಚಿಸಿದವರಲ್ಲ. ಆದ್ರೆ ದಿಢೀರ್‌ ಶ್ರೀಮಂತಿಕೆ ಅವರನ್ನು ಬದಲಿಸಿಲ್ಲ.

ತಿಮಿಂಗಿಲ ವಾಂತಿಗೆ ಏಕೆ ಅಷ್ಟೊಂದು ಬೆಲೆ
ಅದರಿಂದಾಗುವ ಉಪಯೋಗ ಆದ್ರೂ ಏನು?

ಒಂದು ಕೆ.ಜಿ ತಿಮಿಂಗಿಲ ವಾಂತಿಯ ಬೆಲೆಯೇ ಕೋಟಿ ಕೋಟಿ ರೂಪಾಯಿ ಅಂದ್ರೆ ಅದಕ್ಕೇಕೆ ಅಷ್ಟೊಂದು ಬೆಲೆ, ಅದರ ಉಪಯೋಗ ಆದ್ರೂ ಏನು ಅನ್ನೋದು ಅನುಮಾನ ಬರುತ್ತೆ. ಅಷ್ಟಕ್ಕೊ ಅದರ ಉಪಯೋಗ ಏನು ಅನ್ನೊದನ್ನು ಜಾಲಾಡುತ್ತಾ ಹೋದರೆ ಸಿಗುವುದು ದುಬಾರಿ ಬೆಲೆಯ ಸುಗಂಧ ದ್ರವ್ಯ. ಹೌದು, ದುಬಾರಿ ಬೆಲೆಯ ಸುಗಂಧ ದ್ರವ್ಯಕ್ಕೆ ತಿಮಿಂಗಿಲ ವಾಂತಿ ಬಳಸಲಾಗುತ್ತೆ. ಅದು ದೀರ್ಘಕಾಲದ ವರೆಗೆ ದ್ರವ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತೆ ಎನ್ನಲಾಗಿದೆ. ಅದೇ ರೀತಿ ಮಾದಕ ವಸ್ತುಗಳ ಬಳಕೆಗೂ ಹೋಗುತ್ತೆ ಎನ್ನಲಾಗಿದೆ. ಆದ್ರೆ, ಆ ಬಗ್ಗೆ ಖಚಿತತೆ ಇಲ್ಲ.

ಇತ್ತೀಚೆಗೆ ರಾಜ್ಯದಲ್ಲೂ ಸಿಕ್ಕಿತ್ತು ಬೆಲೆ ಬಾಳುವ ತ್ಯಾಜ್ಯ
ಹೌದು, ಸಮುದ್ರದ ಚಿನ್ನ ಅಂತಲೇ ಕರೆಯಿಸಿಕೊಳ್ಳುವ ತಿಮಿಂಗಿಲದ ವಾಂತಿ ಇತ್ತೀಚೆಗೆ ರಾಜ್ಯದಲ್ಲಿಯೂ ಸದ್ದು ಮಾಡಿತ್ತು. ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದಲ್ಲಿ ಮೀನುಗಾರರಿಗೆ ಸುಮಾರು 1 ಕೆ.ಜಿ ತೂಕದ ತಿಮಿಂಗಿಲ ವಾಂತಿ ಸಿಕ್ಕಿತ್ತು. ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಅದೇ ರೀತಿ ಇತ್ತೀಚೆಗೆ 6.7 ಕೆ.ಜಿ ತೂಕದ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಬೆಂಗಳೂರಿನ ಕೆಜಿ ಹಳ್ಳಿಯ ಪೊಲೀಸರು ಬಂಧಿಸಿದ್ದರು. ಅದರ ಮೊತ್ತ ಬರೊಬ್ಬರಿ 8 ಕೋಟಿ ರೂಪಾಯಿ ಆಗಿತ್ತು.

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೀನುಗಾರರು ಕೋಟಿ ಕೋಟಿ ಒಡೆಯರಾಗಿದ್ದಾರೆ. ಅದೆಷ್ಟೇ ಕೋಟಿ ಹಣ ಬಂದ್ರೂ ಅವನ ಜೀವನ ಶೈಲಿ ಬದಲಾಗುತ್ತಿಲ್ಲ, ಬಡತನ ಕಲಿಸಿದ ಪಾಠ ಮರೆಯಲಿಲ್ಲ ಅನ್ನೋದೆ ಹೆಮ್ಮೆಯ ವಿಷಯ.

The post ತಿಮಿಂಗಿಲದ ತ್ಯಾಜ್ಯದಿಂದ ಕೋಟ್ಯಾಧಿಪತಿಗಳಾದ ಮೀನುಗಾರರು.. ಇದಕ್ಕೆ ಯಾಕೆ ಅಷ್ಟೊಂದು ಬೆಲೆ? appeared first on News First Kannada.

Source: newsfirstlive.com

Source link